For Quick Alerts
ALLOW NOTIFICATIONS  
For Daily Alerts

ಅಮೆರಿಕ ಡಾಲರ್ ಗೆ ಮೊದಲಿನ ಹವಾ ಇಲ್ಲ; ಆಕಾಶದಿಂದ ಕಳಚಿ ಬೀಳುತ್ತಾ ಸ್ಟಾರ್ ಕರೆನ್ಸಿ?

|

ಅಮೆರಿಕದ ಡಾಲರ್ ಗೆ ಕರೆನ್ಸಿಗಳ ಪೈಕಿ 'ರಾಜ'ನ ಪಟ್ಟ ಇದೆ. ಆದರೆ ಆ ಸಿಂಹಾಸನದಿಂದ ಕೆಳಗೆ ಬೀಳುವ ಅಪಾಯದಲ್ಲಿದೆ ಅಮೆರಿಕ ಡಾಲರ್ ಎಂದು ಎಚ್ಚರಿಸಿದೆ ಗೋಲ್ಡ್ ಮ್ಯಾನ್ ಸ್ಯಾಚ್ಸ್ ಗ್ರೂಪ್ ಕಂಪೆನಿ. ಯು.ಎಸ್.ನಲ್ಲಿ ಹಣದುಬ್ಬರ ಹೆಚ್ಚಾಗಿದೆ. ಡಾಲರ್ ಗೆ ಖರೀದಿ ಸಾಮರ್ಥ್ಯವು ಕಡಿಮೆ ಆಗುತ್ತಿದೆ. ಆ ಕಾರಣಕ್ಕೆ ಈಗ "ವಿಶ್ವದ ಮೀಸಲು ಕರೆನ್ಸಿ" (World's Reserve Currency) ಎಂಬ ಶ್ರೇಯ ಹೊಂದಿರುವ ಡಾಲರ್ ಗೆ ಆ ಸ್ಥಾನಕ್ಕೆ ಕುತ್ತು ಬರಬಹುದು ಎಂಬ ಎಚ್ಚರಿಕೆ ನೀಡಲಾಗಿದೆ.

 

ಕೊರೊನಾ ಬಿಕ್ಕಟ್ಟು ಅಮೆರಿಕ ಆರ್ಥಿಕತೆಯನ್ನು ಸುಸ್ತೆಬ್ಬಿಸಿದೆ. ಅಲ್ಲಿನ ಕಾಂಗ್ರೆಸ್ ಈಗಾಗಲೇ ಇನ್ನೊಂದು ಸುತ್ತಿನ ಆರ್ಥಿಕ ಉತ್ತೇಜನ ಕ್ರಮಗಳನ್ನು ಮುಗಿಸಿದೆ. ಫೆಡರಲ್ ರಿಸರ್ವ್ ಆಯ- ವ್ಯಯ ಪಟ್ಟಿಯಲ್ಲಿ ಈ ವರ್ಷದ ಬಾಬ್ತು 2.8 ಲಕ್ಷ ಕೋಟಿ ಅಮೆರಿಕನ್ ಡಾಲರ್ ಕೈ ಮೀರಿಯಾಗಿದೆ. ಆದ್ದರಿಂದಲೇ ಗೋಲ್ಡ್ ಮ್ಯಾನ್ ಸ್ಯಾಚ್ಸ್ ಅಮೆರಿಕದ ನೀತಿಯ ಬಗ್ಗೆ ಎಚ್ಚರಿಕೆಯ ಮಾತನಾಡಿದೆ.

ಜರ್ಜರಿತವಾದ ಅಮೆರಿಕದ ಆರ್ಥಿಕತೆ: ಮತ್ತಷ್ಟು ಹದಗೆಡುವ ಮುನ್ಸೂಚನೆ

ಇದರಿಂದ ಕರೆನ್ಸಿ ಮೌಲ್ಯ ಕುಸಿಯಬಹುದು ಎಂಬ ಆತಂಕ ವ್ಯಕ್ತಪಡಿಸಿದೆ. ಹೀಗೆ ಮೌಲ್ಯ ಕುಸಿದರೆ ಜಾಗತಿಕ ವಿದೇಶಿ ವಿನಿಮಯ ಮಾರ್ಕೆಟ್ ನಲ್ಲಿ ಪ್ರಮುಖ ಶಕ್ತಿ ಆಗಿರುವ ಡಾಲರ್ ಪಾರಮ್ಯ ಮುಗಿಯಬಹುದು. ಆದರೆ ಈ ಸನ್ನಿವೇಶ ಸೃಷ್ಟಿ ಆಗೇ ಆಗುತ್ತದೆ ಎಂದೇನೂ ಗೋಲ್ಡ್ ಮ್ಯಾನ್ ಹೇಳಿಲ್ಲ. ಹೀಗೆ ಆಗಬಹುದು ಎಂದಷ್ಟೇ ಎಚ್ಚರಿಸಿದೆ.

ನೋಟು ಮುದ್ರಣ ಮಾಡಬೇಕಾದಲ್ಲಿ ಕಷ್ಟದ ಪರಿಸ್ಥಿತಿ

ನೋಟು ಮುದ್ರಣ ಮಾಡಬೇಕಾದಲ್ಲಿ ಕಷ್ಟದ ಪರಿಸ್ಥಿತಿ

ಈ ತಿಂಗಳು ಮಾರುಕಟ್ಟೆಯಲ್ಲಿ ಎದ್ದಿರುವ ಆತಂಕದ ಮಾರುತಗಳ ಬಗ್ಗೆ ಗಮನ ಸೆಳೆಯಲಾಗಿದ್ದು, ಒಂದು ವೇಳೆ ಆರ್ಥಿಕ ಸ್ಥಿತಿ ಉತ್ತೇಜನಕ್ಕಾಗಿ ಅಮೆರಿಕ ನೋಟು ಮುದ್ರಣ ಮಾಡುವಂತಾದರೆ ಅದು ಹೇಗೆ ಮುಂಬರುವ ವರ್ಷಗಳಲ್ಲಿ ಹಣದುಬ್ಬರಕ್ಕೆ ದಾರಿ ಮಾಡುಕೊಡುತ್ತದೆ ಮತ್ತು ಚಿನ್ನದ ಮೇಲೆ ಅವಲಂಬನೆ ಹೇಗೆ ಹೆಚ್ಚಾಗುತ್ತದೆ ಎಂದು ಎಳೆ ಎಳೆಯಾಗಿ ತೆರೆದಿಡಲಾಗಿದೆ. ಈಗಿನ ಸನ್ನಿವೇಶದಲ್ಲಿ ಸರ್ಕಾರಗಳು ಕರೆನ್ಸಿ ಮೌಲ್ಯವನ್ನು ಕಡಿಮೆ ಮಾಡುತ್ತಿವೆ. ಬಡ್ಡಿ ದರವನ್ನು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿಸಿವೆ. ಇಂಥ ಸನ್ನಿವೇಶದಲ್ಲಿ ಚಿನ್ನವೇ ಕರೆನ್ಸಿ ಆಗಿ, ಆರ್ಥಿಕ ಸ್ಥಿತಿಯನ್ನು ಕಾಪಾಡುವ ಕೊನೆ ಆಯ್ಕೆಯಾಗುತ್ತದೆ ಎಂದು ಗೋಲ್ಡ್ ಮ್ಯಾನ್ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಸದ್ಯಕ್ಕೆ ಆತಂಕ ಆಗಿರುವುದೇನೆಂದರೆ, ಇನ್ನು ದೀರ್ಘ ಕಾಲ ಯು.ಎಸ್. ಡಾಲರ್ ಮೀಸಲು ಕರೆನ್ಸಿ (ರಿಸರ್ವ್ ಕರೆನ್ಸಿ) ಆಗಿ ಉಳಿಯುತ್ತದೆಯೇ ಎಂಬ ಬಗ್ಗೆ. ಈಗಿನ ಸನ್ನಿವೇಶಕ್ಕೆ ಅಮೆರಿಕ ಷೇರುಪೇಟೆ ವರ್ತಿಸುತ್ತಿರುವ ರೀತಿ ಗೋಲ್ಡ್ ಮ್ಯಾನ್ ವರದಿಗೆ ತಾಳೆ ಆಗುತ್ತಿದೆ. ಯಾವಾಗ ಹಣದುಬ್ಬರದ ಎಚ್ಚರಿಕೆ ಶಬ್ದ ಕೇಳಲಾರಂಭಿಸಿತೋ ಚೇತರಿಕೆ ಉತ್ಸಾಹವು ಆರಂಭದಲ್ಲಿ ಇದ್ದಂತೆ ಈಗಿಲ್ಲ.

ಹೆಚ್ಚಿನ ಹಣಕಾಸು ಹರಿವಿನಿಂದ ಡಾಲರ್ ಮೌಲ್ಯ ಕುಸಿತ
 

ಹೆಚ್ಚಿನ ಹಣಕಾಸು ಹರಿವಿನಿಂದ ಡಾಲರ್ ಮೌಲ್ಯ ಕುಸಿತ

ಆರ್ಥಿಕ ಕುಸಿತದ ಕಮರಿಯೊಳಗೆ ಸಾಗುತ್ತಿರುವಾಗ ಮತ್ತೆ ಮತ್ತೆ 2008ರ ಆರ್ಥಿಕ ಸ್ಥಿತಿಯನ್ನು ನೆನಪಿಸಿಕೊಳ್ಳಲು ಹಲವು ವಿಶ್ಲೇಷಕರು ಬಯಸುತ್ತಿಲ್ಲ. ಆದರೆ ಪ್ರತಿ ದಿನ ಚಿನ್ನದ ಬೆಲೆ ಹೊಸ ಎತ್ತರಕ್ಕೆ ಏರುತ್ತಿದೆ. ಬಾಂಡ್ ಹೂಡಿಕೆದಾರರ ಹಣದುಬ್ಬರ ನಿರೀಕ್ಷೆ ಕೂಡ ನಿತ್ಯವೂ ಹೆಚ್ಚುತ್ತಿದೆ. ಫೆಡ್ ನಿಂದ ಶೀಘ್ರದಲ್ಲೇ ಪಾಲಿಸಿ ದರ ಹಾಗೂ ಬೆಲೆಗಳ ಮಧ್ಯ ಜೋಡಣೆ ಮಾಡುವ ಮಾರ್ಗದರ್ಶನವನ್ನು ನೀಡಲಿದೆ. ಇದರಿಂದ ಹಣದುಬ್ಬರಕ್ಕೆ ಅಲ್ಲಿನ ಕೇಂದ್ರ ಬ್ಯಾಂಕ್ ಹಾಕಿಕೊಂಡಿರುವ 2% ಗುರಿಯಿಂದ ಸ್ವಲ್ಪ ಹೆಚ್ಚಾದಂತೆ ಆಗುತ್ತದೆ. ಇದರಿಂದ ಆಯ- ವ್ಯಯ ಪತ್ರದಲ್ಲಿ (ಬ್ಯಾಲೆನ್ಸ್ ಶೀಟ್) ವಿಸ್ತರಣೆ ಆಗುತ್ತದೆ ಮತ್ತು ಹೆಚ್ಚಿನ ಹಣಕಾಸು ಹರಿವಿನಿಂದ ಕರೆನ್ಸಿ ಮೌಲ್ಯ ಕುಸಿಯುವ ಆತಂಕ ಎದುರಾಗುತ್ತದೆ. ಆರ್ಥಿಕ ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದ ಮೇಲೆ ಆಗ ಕೇಂದ್ರ ಬ್ಯಾಂಕ್ ಮತ್ತು ಸರ್ಕಾರಕ್ಕೆ ಹಣದುಬ್ಬರ ಸ್ವಲ್ಪ ಹೆಚ್ಚಿಸುವುದಕ್ಕೆ ಅವಕಾಶ ನೀಡಿ, ಸಾಲವನ್ನು ಕಡಿಮೆ ಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ.

ಚಿನ್ನದ ಬೆಲೆ ಏರಿಕೆಯಿಂದ ಜಾಗತಿಕ ಪರಿಣಾಮ

ಚಿನ್ನದ ಬೆಲೆ ಏರಿಕೆಯಿಂದ ಜಾಗತಿಕ ಪರಿಣಾಮ

ಚಿನ್ನದ ಬೆಲೆ ಏರುತ್ತಿದೆ ಎಂದು ಕೆಲವರು ಖುಷಿ ಪಡಬಹುದು. ಆದರೆ ಇದು ಜಾಗತಿಕ ಆರ್ಥಿಕತೆಯ ಸಮಸ್ಯೆಯನ್ನು ತೋರಿಸುತ್ತದೆ. ಮುಂದಿನ ಒಂದು ವರ್ಷದಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 2300 USD ಆಗಬಹುದು ಎಂದು ಗೋಲ್ಡ್ ಮ್ಯಾನ್ ಅಂದಾಜು ಮಾಡಿದೆ. ಈ ಹಿಂದೆ 2000 USD ಎಂದು ಅಂದಾಜಿಸಿತ್ತು. ಸದ್ಯದ ದರ $ 1950ರ ಸಮೀಪದ ಜತೆ ಹೋಲಿಸಲಾಗಿದೆ. ಯು.ಎಸ್. ಬಡ್ಡಿ ದರ ಇನ್ನಷ್ಟು ಕಡಿಮೆ ಆಗುವ ಸಾಧ್ಯತೆ ಇದ್ದು, ಚಿನ್ನದ ಬೆಲೆ ಮತ್ತಷ್ಟು ಏರಿಕೆಗೆ ಕಾರಣ ಆಗಬಹುದು ಎಂದಿದೆ. ಬ್ಲೂಮ್ ಬರ್ಗ್ ಸ್ಪಾಟ್ ಸೂಚ್ಯಂಕದಲ್ಲಿ ಜುಲೈ ತಿಂಗಳಲ್ಲಿ ಅಮೆರಿಕದ ಡಾಲರ್ ಮೌಲ್ಯ ಕುಸಿದಿರುವ ಪರಿ ನೋಡಿದರೆ ಈ ದಶಕದಲ್ಲೇ ಕಂಡ ಅತ್ಯಂತ ಕೆಟ್ಟ ಕುಸಿತ ಇದು. ಯುರೋಪಿಯನ್ ಒಕ್ಕೂಟದ ಒಪ್ಪಂದ ಪ್ಯಾಕೇಜ್ ನಿಂದಾಗಿ ಆಟವೇ ಬದಲಾಗಿ ಹೋಗಿದೆ. ಡಾಲರ್ ಮೌಲ್ಯ ಹಳ್ಳದ ಹಾದಿ ಹಿಡಿದಿದೆ. ಈ ಹಿಂದೆ 2008ರಲ್ಲೂ ವಿಶ್ಲೇಷಕರು ಡಾಲರ್ ಅನ್ನು ಹಳ್ಳದ ಹಾದಿ ಹಿಡಿದಿದೆ ಎಂದಿದ್ದರು. ಆದರೆ ಅದು ತಪ್ಪು ಎಂಬ ರೀತಿಯಲ್ಲಿ ಫೆಡ್ ಕ್ರಮಗಳಿಂದ ಚೇತರಿಸಿಕೊಂಡಿತ್ತು.

ಜಾಗತಿಕ ವ್ಯವಹಾರಗಳಲ್ಲಿ ಅಮೆರಿಕ ಡಾಲರ್ ಪಾತ್ರ ದೊಡ್ಡದು

ಜಾಗತಿಕ ವ್ಯವಹಾರಗಳಲ್ಲಿ ಅಮೆರಿಕ ಡಾಲರ್ ಪಾತ್ರ ದೊಡ್ಡದು

ವಿಶ್ವದ ಕರೆನ್ಸಿ ವ್ಯವಹಾರದಲ್ಲಿ ಡಾಲರ್ ಗಳನ್ನು ಬಳಕೆ ಮಾಡುವುದು ಶೇಕಡಾ 88ರಷ್ಟು. ಈಗಲೂ ವಿಶ್ವದ ವಿದೇಶಿ ಕರೆನ್ಸಿ ಮೀಸಲಿನಲ್ಲಿ ಡಾಲರ್ ಪಾಲು ಶೇಕಡಾ 62ರ ಹತ್ತಿರಕ್ಕೆ ಇದೆ. ಆದರೆ 1970ರ ದಶಕದಲ್ಲಿ ಈ ಪ್ರಮಾಣ ಶೇಕಡಾ 85ರಷ್ಟಿತ್ತು. ಈ ಅಂಕಿ- ಅಂಶವನ್ನು IMF ಸ್ವತಃ ತೆರೆದಿಟ್ಟಿದೆ. "ಮೀಸಲು ಕರೆನ್ಸಿ ಪಟ್ಟ ಕಳೆದುಕೊಳ್ಳುವ ಸಮೀಪದಲ್ಲೂ ಅಮೆರಿಕ ಇಲ್ಲ. ಏಕೆಂದರೆ ಜಾಗತಿಕ ಮಟ್ಟದ ವ್ಯವಹಾರಗಳಲ್ಲಿ ಈಗಲೂ ಅಮೆರಿಕ ಡಾಲರ್ ಪ್ರಮಾಣ ದೊಡ್ಡದಾಗಿದೆ" ಎನ್ನುತ್ತಾರೆ ತಜ್ಞರು. ಆದರೆ ಗೋಲ್ಡ್ ಮ್ಯಾನ್ ಸ್ಯಾಚ್ಸ್ ತಿಳಿಸುವಂತೆ, ಅಮೆರಿಕದ ಸಾಲದ ಪ್ರಮಾಣ ಈಗ ಆ ದೇಶದ ಜಿಡಿಪಿಯ 80 ಪರ್ಸೆಂಟ್ ಗೂ ಹೆಚ್ಚಿದೆ. ಜತೆಗೆ ಕೇಂದ್ರ ಬ್ಯಾಂಕ್ ಹಾಗೂ ಸರ್ಕಾರವು ಅಲ್ಲಿ ಹಣದುಬ್ಬರ ಹೆಚ್ಚಲು ಅವಕಾಶ ಮಾಡಿಕೊಡುತ್ತವೆ. ಹಣದುಬ್ಬರ ಕುರಿತು ಫೆಡ್ ಅಭಿಪ್ರಾಯವನ್ನು ಬುಧವಾರದಂದು ಪ್ರಕಟಿಸಲಿದ್ದು, ಹೂಡಿಕೆದಾರರು ಆ ನಿರೀಕ್ಷೆಯಲ್ಲಿ ಇದ್ದಾರೆ. ಫೆಡ್ ನೀತಿ ಹೊರಬೀಳುವ ತನಕ ಹೂಡಿಕೆದಾರರು ಡಾಲರ್ ಮೇಲೆ ವಿಶ್ವಾಸ ಇರಿಸಿಕೊಂಡಿರುತ್ತಾರೆ.

English summary

US Dollar In Danger; May Lose The Status Of World's Most Reserve Currency

Goldman Sachs warned about US dollar may lose the status of world's most reserve currency.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X