ಇತಿಹಾಸದಲ್ಲೇ ಅತಿ ಹೆಚ್ಚು ನಷ್ಟ ಅನುಭವಿಸಿದ ವೊಡಾಫೋನ್ ಐಡಿಯಾ
ಬೆಂಗಳೂರು: ಕೊರೊನಾ ಲಾಕ್‌ಡೌನ್ ಪರಿಣಾಮ ಹಲವು ಕಂಪನಿಗಳು ನಷ್ಟ ಅನುಭವಿಸುತ್ತಿದ್ದವು. ಆದರೆ ಟೆಲಿಕಾಂ ಕ್ಷೇತ್ರ ಭಾರೀ ಆದಾಯ ಮಾಡಿಕೊಂಡಿರುವ ಕೆಲ ವರದಿಗಳು ಬಂದಿದ್ದವು. ಆದರೆ ಇದಕ್ಕೆ ವೊಡಾಫೋನ್ ಐಡಿಯಾ ಸಂಸ್ಥೆಯ ಸದ್ಯದ ಪರಿಸ್ಥಿತಿ ವ್ಯತಿರಿಕ್ತವಾಗಿದೆ.
ಹೌದು, ದೇಶದ ಮೂರನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ವೊಡಾಫೋನ್ ಐಡಿಯಾ, ಮಾರ್ಚ್ 2020 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ 73,878 ಕೋಟಿ ರೂ.ಗಳ ನಿವ್ವಳ ನಷ್ಟವನ್ನು ಅನುಭವಿಸಿದೆ ಎಂಬ ವರದಿಗಳು ಬಂದಿವೆ.
ಲಾಕ್‌ಡೌನ್ ಸಡಿಲಿಕೆಯಾದ ಖುಷಿಗೆ ಚಿನ್ನದ ಕತ್ತರಿ ಬಳಸುತ್ತಿರುವ ಕ್ಷೌರಿಕ
ಇದು ಇದುವರೆಗೆ ಭಾರತೀಯ ಟೆಲಿಕಾಂ ಕಂಪನಿಯೊಂದು ಅನುಭವಿಸಿದ ಅತ್ಯಧಿಕ ನಿವ್ವಳ ನಷ್ಟವಾಗಿದೆ ಎನ್ನಲಾಗಿದೆ. ವೊಡಾಫೋನ್ ಇಂಡಿಯಾ ಮತ್ತು ಐಡಿಯಾ ಕಂಪನಿ ನಡುವಿನ ವಿಲೀನವು ಆಗಸ್ಟ್ 2018 ರಲ್ಲಿ ಜಾರಿಗೆ ಬಂದಿದೆ.

ಒಂದೇ ತ್ರೈಮಾಸಿಕದಲ್ಲಿ 11,643.5 ಕೋಟಿ ರು ನಷ್ಟ
ವೊಡಾಫೋನ್ ಐಡಿಯಾ 11,643.5 ಕೋಟಿ ರು ಮಾರ್ಚ್ ತ್ರೈಮಾಸಿಕದ ನಿವ್ವಳ ನಷ್ಟವನ್ನು ಅನುಭವಿಸಿದೆ. ಈ ನಷ್ಟವು ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ 4,881.9 ಕೋಟಿ ರುಪಾಯಿ ಇತ್ತು ಮತ್ತು ಹಿಂದಿನ ಅಕ್ಟೋಬರ್-ಡಿಸೆಂಬರ್ ತ್ರೈಮಾಸಿಕದಲ್ಲಿ 6,438.8 ಕೋಟಿ ರು ನಿವ್ವಳ ನಷ್ಟ ಇತ್ತು. 2020 ರ ಮಾರ್ಚ್ 31 ಕ್ಕೆ ಕೊನೆಗೊಂಡ ವರ್ಷದ ಆರ್ಥಿಕ ಫಲಿತಾಂಶಗಳನ್ನು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಲಾಗುವುದಿಲ್ಲ ಎಂದು ಕಂಪನಿ ಹೇಳಿದೆ.

304 ಮಿಲಿಯನ್‌ನಿಂದ 291 ಮಿಲಿಯನ್‌ಗೆ ಇಳಿಕೆ
ಡಿಸೆಂಬರ್ ತ್ರೈಮಾಸಿಕದಿಂದ ಮಾರ್ಚ್ ತ್ರೈಮಾಸಿಕದವರೆಗೆ ವೊಡಾಫೋನ್ ಐಡಿಯಾ ಚಂದಾದಾರರ ಸಂಖ್ಯೆ 304 ಮಿಲಿಯನ್‌ನಿಂದ 291 ಮಿಲಿಯನ್‌ಗೆ ಇಳಿಕೆ ಆಗಿದೆ. ಕ್ಯೂ 4 ನಲ್ಲಿ ಪ್ರತಿ ಬಳಕೆದಾರರ ಸರಾಸರಿ ಆದಾಯ ಕ್ಯೂ 3 ಗಿಂತ ಸುಧಾರಿಸಿದೆ. ಪ್ರಿಪೇಯ್ಡ್ ಸುಂಕ ಹೆಚ್ಚಳದಿಂದ ಇದು ಸಾಧ್ಯವಾಗಿದೆ ಎಂದು ಕಂಪನಿ ತಿಳಿಸಿದೆ.

ಎಜಿಆರ್ ಬಾಕಿ
ಟೆಲಿಕಾಂ ಇಲಾಖೆ (ಡಿಒಟಿ) 2016-17ನೇ ಹಣಕಾಸು ವರ್ಷದವರೆಗೆ ಈ ಸಂಸ್ಥೆಯ ಎಜಿಆರ್ 58,254 ಕೋಟಿ ರೂ ಬಾಕಿ ಎಂದು ಅಂದಾಜಿಸಿದೆ. ಆದರೆ, ಕಂಪನಿಯು 46,000 ಕೋಟಿ ರುಪಾಯಿ ಎಂದು ಹೇಳಿದೆ. ಎಜಿಆರ್ ವಿಷಯದ ಕುರಿತು ಮುಂದಿನ ಸುಪ್ರೀಂ ಕೋರ್ಟ್ ವಿಚಾರಣೆ ಜುಲೈ ಮೂರನೇ ವಾರದಲ್ಲಿ ನಡೆಯಲಿದೆ.

ಸವಾಲುಗಳನ್ನು ಎದುರಿಸುತ್ತಿರುವ ಕಂಪನಿ
ವೊಡಾಫೋನ್ ಐಡಿಯಾದ ಎಂಡಿ ಮತ್ತು ಸಿಇಒ ರವೀಂದರ್ ತಕ್ಕರ್ ಅವರು, ತ್ವರಿತ ನೆಟ್‌ವರ್ಕ್ ಸೌಲಭ್ಯ, 4 ಜಿ ವ್ಯಾಪ್ತಿ ಮತ್ತು ಸಾಮರ್ಥ್ಯ ವಿಸ್ತರಣೆಯತ್ತ ನಮ್ಮ ಗಮನವು ಗ್ರಾಹಕರ ಸೆಳೆಯುತ್ತಿದೆ. ಏತನ್ಮಧ್ಯೆ, ನಿರ್ಣಾಯಕ ಸವಾಲುಗಳನ್ನು ಎದುರಿಸುತ್ತಿರುವ ಕಂಪನಿಗಾಗಿ ಸಮಗ್ರ ಪರಿಹಾರ ಪ್ಯಾಕೇಜ್ ಕೋರಿ ನಾವು ಸರ್ಕಾರದೊಂದಿಗೆ ಸಕ್ರಿಯವಾಗಿ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.