ಸೆಪ್ಟೆಂಬರ್‌ನಲ್ಲಿ 26 ಲಕ್ಷ ವಾಟ್ಸಾಪ್ ಖಾತೆಗಳು ನಿಷೇಧ
ನವದೆಹಲಿ, ನ. 2: ಫೇಸ್ಬುಕ್ ಮಾಲಕತ್ವದ ವಾಟ್ಸಾಪ್ ಭಾರತದಲ್ಲಿ 26 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ನಿಷೇಧಿಸಿರುವುದು ತಿಳಿದುಬಂದಿದೆ. ವಾಟ್ಸಾಪ್ ಬಳಕೆದಾರರು ನೀಡಿದ ದೂರಿನ ಆಧಾರದ ಮೇಲೆಯೇ ಬಹುತೇಕ ಖಾತೆಗಳು ಬ್ಯಾನ್ ಆಗಿವೆ ಎನ್ನಲಾಗಿದೆ.
8.75 ಲಕ್ಷ ವಾಟ್ಸಾಪ್ ಖಾತೆಗಳಿಂದ ದುರ್ಬಳಕೆ ಆಗುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸ್ವಯಂ ಆಗಿ ಅವುಗಳನ್ನು ನಿಷೇಧಿಸಲಾಗಿದೆ. ಇನ್ನುಳಿದ 18 ಲಕ್ಷ ಖಾತೆಗಳ ವಿರುದ್ಧ ವಿವಿಧ ಬಳಕೆದಾರರಿಂದ ದೂರು ಬಂದ ಹಿನ್ನೆಲೆಯಲ್ಲಿ ನಿಷೇಧಿಸಲಾಗಿದೆ.
"...ವಾಟ್ಸಾಪ್ ಪ್ಲಾಟ್‌ಫಾರ್ಮ್‌ನಲ್ಲಿ ಕೆಟ್ಟ ನಡವಳಿಕೆಯನ್ನು ನಿಯಂತ್ರಿಸಲು ಸಾಧನಗಳು ಮತ್ತು ಸಂಪನ್ಮೂಲಗಳನ್ನು ನಿಯೋಜಿಸಲಾಗಿದೆ. ಹಾನಿಕಾರಕ ಚಟುವಟಿಕೆ ನಡೆದು ಹಾನಿಯಾದ ಮೇಲೆ ಕ್ರಮ ತೆಗೆದುಕೊಳ್ಳುವುದಕ್ಕಿಂತ, ಅಂಥ ಘಟನೆ ನಡೆಯುವುದನ್ನೇ ನಿಯಂತ್ರಿಸುವುದು ಉತ್ತಮ ಎಂಬುದು ನಮ್ಮ ಭಾವನೆ" ಎಂದು ವಾಟ್ಸಾಪ್ ಸಂಸ್ಥೆ ಹೇಳಿದೆ.

ಭಾರತೀಯ ವಾಟ್ಸಾಪ್ ಬಳಕೆದಾರರಿಂದ ಸೆಪ್ಟೆಂಬರ್ ತಿಂಗಳಲ್ಲಿ 666 ದೂರುಗಳು ಹೋಗಿವೆ. ಇವರ ಪೈಕಿ 496 ದೂರುಗಳಲ್ಲಿ ನಿಷೇಧಕ್ಕೆ ಮನವಿಗಳಿದ್ದವು. ಅಕೌಂಟ್ ಸಪೋರ್ಟ್‌ಗೆ 100, ಪ್ರಾಡಕ್ಟ್ ಸಪೋರ್ಟ್‌ಗೆ 30, ಸುರಕ್ಷತೆಗೆ 8 ಮತ್ತು ಇತರ ಬೆಂಬಲಕ್ಕೆ 32 ದೂರು ಅರ್ಜಿಗಳು ಸಂದಾಯವಾಗಿದ್ದವು.
ಆಗಸ್ಟ್ ತಿಂಗಳಲ್ಲಿ 18 ಲಕ್ಷ ವಾಟ್ಸಾಪ್ ಖಾತೆಗಳು ಬ್ಯಾನ್ ಆಗಿದ್ದರೆ ಸೆಪ್ಟೆಂಬರ್‌ನಲ್ಲಿ 23 ಲಕ್ಷ ಖಾತೆಗಳನ್ನು ನಿಷೇಧಿಸಲಾಗಿತ್ತು.
ಇತರ ಸೋಷಿಯಲ್ ಮೀಡಿಯಾಗಳಲ್ಲಿ...
ಇದೇ ವೇಳೆ, ಈ ಸೆಪ್ಟೆಂಬರ್ ತಿಂಗಳಲ್ಲಿ ಫೇಸ್‌ಬುಕ್ ಮತ್ತು ಇನ್ಸ್‌ಟಾಗ್ರಾಮ್‌ಗಳು 3 ಕೋಟಿಗೂ ಹೆಚ್ಚು ಪೋಸ್ಟ್‌ಗಳ ಮೇಲೆ ಕ್ರಮ ಕೈಗೊಂಡಿರುವುದು ತಿಳಿದುಬಂದಿದೆ. ಫೇಸ್‌ಬುಕ್, ವಾಟ್ಸಾಪ್ ಮತ್ತು ಇನ್ಸ್‌ಟಾಗ್ರಾಮ್ ಈ ಮೂರೂ ಕೂಡ ಮೆಟಾ ಮಾಲಕತ್ವದಲ್ಲಿವೆ.
ಬೇರೆ ಸೋಷಿಯಲ್ ಮೀಡಿಯಾದಲ್ಲೂ ಈ ರೀತಿ ದುಷ್ಟ ಚಟುವಟಿಕೆಗಳು ಗಮನಕ್ಕೆ ಬಂದರೆ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆ ಜಾರಿಯಲ್ಲಿವೆ. ಆಗಸ್ಟ್ 26ರಿಂದ ಸೆಪ್ಟೆಂಬರ್ 25ರವರೆಗಿನ ತನ್ನ ವರದಿಯಲ್ಲಿ ಟ್ವಿಟ್ಟರ್ 54,123 ಖಾತೆಗಳನ್ನು ಅಳಿಸಿರುವುದಾಗಿ ಹೇಳಿದೆ. ಶಿಶು ಲೈಂಗಿಕ ದುರ್ಬಳಕೆ, ಅನುಮತಿ ಇಲ್ಲದೇ ಅಶ್ಲೀಲತೆ ಪ್ರದರ್ಶನ ಇತ್ಯಾದಿ ಕಂಟೆಂಟ್ ಅನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಟ್ವಿಟ್ಟರ್ ಪ್ಲಾಟ್‌ಫಾರ್ಮ್‌ನಲ್ಲಿ ಈ ಖಾತೆಗಳನ್ನು ಒಂದೇ ತಿಂಗಳಲ್ಲಿ ನಿಷೇಧಿಸಲಾಗಿದೆ.

ಇನ್ನು ಭಾರತದದ್ದೇ ಆದ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ಶೇರ್‌ಚ್ಯಾಟ್ ಸೆಪ್ಟೆಂಬರ್ ತಿಂಗಳಲ್ಲಿ ಬರೋಬ್ಬರಿ 46.8 ಲಕ್ಷ ದೂರುಗಳನ್ನು ಪಡೆದಿದೆಯಂತೆ.
ಭಾರತದ 2021ರ ಐಟಿ ನಿಯಮಗಳ ಪ್ರಕಾರ 50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಎಲ್ಲಾ ಸೋಷಿಯಲ್ ಮೀಡಿಯಾ ಸಂಸ್ಥೆಗಳು ಪ್ರತೀ ತಿಂಗಳೂ ಕಾಂಪ್ಲಿಯನ್ಸ್ ರಿಪೋರ್ಟ್ ಸಲ್ಲಿಸುವುದು ಕಡ್ಡಾಯ. ಅದರಂತೆ ಇತ್ತೀಚಿನ ಕೆಲ ತಿಂಗಳಿಂದ ಭಾರತದಲ್ಲಿ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ಪ್ರತೀ ತಿಂಗಳು ವರದಿ ನೀಡುತ್ತಾ ಬಂದಿವೆ.
ಭಾರತದಲ್ಲಿ ವಾಟ್ಸಾಪ್ ಬಳಕೆದಾರರ ಸಂಖ್ಯೆ ಬರೋಬ್ಬರಿ 48.75 ಕೋಟಿ ಇದೆ. ಫೇಸ್‌ಬುಕ್ ಬಳಕೆದಾರರು 32.65 ಕೋಟಿ ಇದ್ದರೆ, ಇನ್ಸ್‌ಟಾಗ್ರಾಮ್ ಬಳಸುವವರ ಸಂಖ್ಯೆ 25.34 ಕೋಟಿ ಇದೆ. ಶೇರ್‌ಚಾಟ್ ಯೂಸರ್‌ಗಳು 40 ಕೋಟಿ ಸಂಖ್ಯೆಯಲ್ಲಿದ್ದಾರೆನ್ನುವ ಮಾಹಿತಿ ಇದೆ.