For Quick Alerts
ALLOW NOTIFICATIONS  
For Daily Alerts

ಕಡಿಮೆ ಬೆಲೆಗೆ ಎನ್‌ಡಿಟಿವಿ ಷೇರು ಕೊಳ್ಳಲು ಮುಂದಾದ ಅದಾನಿಗೆ ಷೇರು ಮಾರುವವರು ಯಾರು?

|

ಮುಂಬೈ, ನ. 22: ಎನ್‌ಡಿಟಿವಿಯಲ್ಲಿ ಪರೋಕ್ಷವಾಗಿ ಶೇ. 29.18ರಷ್ಟು ಷೇರುಗಳ ಮಾಲಿಕತ್ವ ಹೊಂದಿರುವ ಅದಾನಿ ಗ್ರೂಪ್ ಇದೀಗ ಹೆಚ್ಚುವರಿ ಶೇ. 26ರಷ್ಟು ಪಾಲು ಕೊಳ್ಳಲು ಮರಳಿ ಯತ್ನ ಆರಂಭಿಸಿದೆ. ಎನ್‌ಡಿಟಿವಿಯ ಷೇರುದಾರರಿಂದ ಶೇ. 26ರಷ್ಟು ಷೇರುಗಳನ್ನು ಕೊಳ್ಳಲು ಅದಾನಿ ಗ್ರೂಪ್ ಕೊಟ್ಟಿರುವ ಓಪನ್ ಆಫರ್ ಇಂದು ನವೆಂಬರ್ 22ರಂದು ಆರಂಭವಾಗಿದೆ. ಈ ಆಫರ್ ಡಿಸೆಂಬರ್ 5ರವರೆಗೂ ಇದೆ.

 

ಕುತೂಹಲವೆಂದರೆ ಎನ್‌ಡಿಟಿವಿಯ ಈಗಿನ ಷೇರು ಬೆಲೆ ಸುಮಾರು 382 ರೂಪಾಯಿ ಇದೆ. ಆದರೆ, ಅದಾನಿ ಗ್ರೂಪ್ ಕೊಟ್ಟಿರುವ ಆಫರ್ ಬೆಲೆ 294 ರೂಪಾಯಿ ಮಾತ್ರ. ಹೆಚ್ಚೂಕಡಿಮೆ 88 ರೂ ಕಡಿಮೆ ಬೆಲೆಗೆ ಎನ್‌ಡಿಟಿವಿಯ ಷೇರುಗಳನ್ನು ಖರೀದಿಸಲು ಅದಾನಿಯ ಕಂಪನಿ ಪ್ರಯತ್ನಿಸುತ್ತಿದೆ. ಆದರೆ, ಇಷ್ಟು ಕಡಿಮೆ ಬೆಲೆಗೆ ಯಾವ ಷೇರುದಾರರು ಮಾರುತ್ತಾರೆ ಎಂಬುದು ಪ್ರಶ್ನೆ ಮತ್ತು ಕುತೂಹಲ.

ವಿಶ್ವದ ಎರಡನೇ ಅತಿದೊಡ್ಡ ಶ್ರೀಮಂತ ಗೌತಮ್ ಅದಾನಿಗೆ ಸೇರಿದ ಅದಾನಿ ಗ್ರೂಪ್ ಪರವಾಗಿ ಜೆಎಂ ಫೈನಾನ್ಷಿಯಲ್ ಸಂಸ್ಥೆ ಈ ವ್ಯವಹಾರ ನಡೆಸುತ್ತಿದೆ. ಸೆಬಿಯ ನಿಯಮಾವಳಿ ಪ್ರಕಾರವಾಗಿ ಆಫರ್ ಪ್ರೈಸ್ ನಿಗದಿ ಮಾಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಆದರೂ ಕೂಡ ಷೇರುದಾರರು ಇಚ್ಛಿಸಿದಲ್ಲಿ ಮಾತ್ರ ಆ ಷೇರುಗಳನ್ನು ಖರೀದಿಸಲು ಸಾಧ್ಯ. ಯಾವ ಷೇರುದಾರರು ಸುಖಾಸುಮ್ಮನೆ ನಷ್ಟಕ್ಕೆ ಷೇರು ಮಾರಾಟ ಮಾಡುವುದಿಲ್ಲ. ಎನ್‌ಡಿಟಿವಿಯ ಈಗಿನ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಆಫರ್ ಕೊಟ್ಟರೆ ಯಾರಾದರೂ ಷೇರು ಮಾರಲು ಮುಂದೆ ಬಂದಾರು ಎಂಬುದು ಸಹಜ ಅನಿಸಿಕೆ. ಈ ಹಿನ್ನೆಲೆಯಲ್ಲಿ ಅದಾನಿ ಗ್ರೂಪ್‌ನ ಈ ಪ್ರಯತ್ನ ನಿಜಕ್ಕೂ ಸಫಲವಾಗುತ್ತಾ ಎಂಬ ಅನುಮಾನ ಇದೆ.

ಅಕ್ಟೋಬರ್‌ನಲ್ಲೂ ಇತ್ತು ಆಫರ್

ಅಕ್ಟೋಬರ್‌ನಲ್ಲೂ ಇತ್ತು ಆಫರ್

ಎನ್‌ಡಿಟಿವಿಯ ಹೆಚ್ಚು 26% ಪಾಲನ್ನು ಖರೀದಿಸಲು ಅದಾನಿ ಗ್ರೂಪ್ ಕಳೆದ ತಿಂಗಳೂ ಪ್ರಯತ್ನಿಸಿತ್ತು. ಅಕ್ಟೋಬರ್ 17ರಿಂದ ನವೆಂಬರ್ 1ರವರೆಗೆಗೆ ಅದಾನಿ ಗ್ರೂಪ್ ಓಪನ್ ಆಫರ್ ಕೊಟ್ಟಿತ್ತು. ಆದರೆ, ಸೆಬಿಯಿಂದ ಅನುಮೋದನೆ ಇಲ್ಲದ ಹಿನ್ನೆಲೆಯಲ್ಲಿ ಇದು ನೆರವೇರಲಿಲ್ಲ. ನವೆಂಬರ್ 7ರಂದು ಸೆಬಿ ಅನುಮತಿಸಿದ ಹಿನ್ನೆಲೆಯಲ್ಲಿ ನವೆಂಬರ್ 22, ಇಂದಿನಿಂದ ಎನ್‌ಡಿಟಿವಿಯ ವೈಯಕ್ತಿಕ ಷೇರುದಾರರಿಂದ ಷೇರು ಖರೀದಿಸಲು ಅದಾನಿ ಗ್ರೂಪ್ ಪ್ರಯತ್ನ ಆರಂಭಿಸಿದೆ.

ಒಟ್ಟು 1.67 ಕೋಟಿ ಈಕ್ವಿಟಿ ಷೇರುಗಳನ್ನು 294 ರೂ ಬೆಲೆಗೆ ಕೊಳ್ಳಬಯಸುವುದಾಗಿ ಅದಾನಿ ಗ್ರೂಪ್ ಆಫರ್ ಕೊಟ್ಟಿದೆ. ಇದು ಒಂದು ವೇಳೆ ನೆರವೇರಿದಲ್ಲಿ ಎನ್‌ಡಿಟಿವಿಯ ಶೇ. 26ರಷ್ಟು ಪಾಲನ್ನು ಕೊಳ್ಳಲು ಅದಾನಿ ಗ್ರೂಪ್ 492.81 ಕೋಟಿ ರೂ ವ್ಯಯಿಸಿದಂತಾಗುತ್ತದೆ.

ಇಲ್ಲಿ ಕುತೂಹಲವೆನಿಸುವ ಸಂಗತಿ ಎಂದರೆ ಎನ್‌ಡಿಟಿವಿ ಅಂಗಳಕ್ಕೆ ಅದಾನಿ ಬರುವ ಮುನ್ನ ಆ ಕಂಪನಿಯ ಷೇರು ಬೆಲೆ 550 ರೂಗಿಂತ ಹೆಚ್ಚು ಇತ್ತು. ಅದಾದ ಬಳಿಕ ಷೇರು ಬೆಲೆ ಗಣನೀಯವಾಗಿ ಇಳಿಯಲಾರಂಭಿಸಿತು. 150ಕ್ಕೂ ಹೆಚ್ಚು ರೂಪಾಯಿಯಷ್ಟು ಇಳಿಕೆಯಾಗಿದೆ. ಈಗ ಅದಾನಿ ಇನ್ನೂ ಕಡಿಮೆ ಬೆಲೆಗೆ ಖರೀದಿಸುವಾಗಿ ಆಫರ್ ಕೊಟ್ಟಿದ್ದಾರೆ.

ಆರ್‌ಆರ್‌ಪಿಆರ್ ಮತ್ತು ವಿಸಿಪಿಎಲ್
 

ಆರ್‌ಆರ್‌ಪಿಆರ್ ಮತ್ತು ವಿಸಿಪಿಎಲ್

ಎನ್‌ಡಿಟಿವಿ ಭಾರತದ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ಒಂದು. ಟೆಲಿವಿಷನ್ ಮತ್ತು ಡಿಜಿಟಲ್‌ನಲ್ಲಿ ಜನಪ್ರಿಯವಾಗಿರುವ ಕಂಪನಿ. ಹಿರಿಯ ಪತ್ರಕರ್ತರಾದ ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಒಡೆತನದ ಕಂಪನಿ. ಇವರಿಬ್ಬರ ಹೆಸರಿನಲ್ಲಿ ಆರ್‌ಆರ್‌ಪಿಆರ್ ಹೋಲ್ಡಿಂಗ್ ಸಂಸ್ಥೆ ಎನ್‌ಡಿಟಿವಿಯ ಪ್ರೊಮೋಟರ್ ಆಗಿತ್ತು.

ಮಹೇಂದ್ರ ನಹತಾ ಎಂಬುವವರಿಗೆ ಸೇರಿದ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈ. ಲಿ (ವಿಸಿಪಿಎಲ್) ಸಂಸ್ಥೆ 2009-10ರ ವರ್ಷದಲ್ಲಿ ಆರ್‌ಆರ್‌ಪಿಆರ್‌ಗೆ 404 ಕೋಟಿ ರೂ ಸಾಲ ಕೊಟ್ಟಿತ್ತು. ಇದಕ್ಕೆ ಬದಲಾಗಿ ಪರಿವರ್ತಿಸಲು ಸಾಧ್ಯವಾಗಬಲ್ಲ ಸಾಲಪತ್ರಗಳನ್ನು (ಕನ್ವರ್ಟಿಬಲ್ ಡಿಬಂಚರ್ಸ್) ವಿಸಿಪಿಎಲ್‌ಗೆ ಕೊಡಲಾಗಿತ್ತು. ಅಂದರೆ, ಈ ಡಿಬಂಚರ್‌ಗಳನ್ನು ಯಾವಾಗ ಬೇಕಾದರೂ ಉಪಯೋಗಿಸಿ ಆರ್‌ಆರ್‌ಪಿಆರ್‌ನ ಮಾಲಕತ್ವ ಪಡೆಯಲು ವಿಸಿಪಿಎಲ್‌ಗೆ ಅವಕಾಶ ಇತ್ತು. ಎನ್‌ಡಿಟಿವಿಯಲ್ಲಿ ಆರ್‌ಆರ್‌ಪಿಆರ್ ಶೇ. 29.18ರಷ್ಟು ಪಾಲು ಹೊಂದಿದೆ.

ಹಿಂಬಾಗಿಲಿಂದ ಬಂದ ಅದಾನಿ

ಹಿಂಬಾಗಿಲಿಂದ ಬಂದ ಅದಾನಿ

ಅದಾನಿ ಗ್ರೂಪ್ ಈಗ ಎನ್‌ಡಿಟಿವಿ ಅಂಗಳಕ್ಕೆ ಬರಲು ದಾರಿ ಮಾಡಿಕೊಟ್ಟಿದ್ದು ವಿಸಿಪಿಎಲ್. ಇತ್ತೀಚೆಗೆ ಅದಾನಿ ಗ್ರೂಪ್‌ಗೆ ಸೇರಿದ ಅದಾನಿ ಎಂಟರ್‌ಪ್ರೈಸಸ್ ಕಂಪನಿಯ ಮಾಲಿಕತ್ವದ ಅದಾನಿ ಮೀಡಿಯಾ ನೆಟ್ವರ್ಕ್ಸ್ ಸಂಸ್ಥೆಯು ವಿಸಿಪಿಎಲ್ ಅನ್ನು ಖರೀದಿಸಿತು. ಇದಾದ ಬಳಿಕ ವಿಸಿಪಿಎಲ್ ತನ್ನ ಬಳಿ ಇದ್ದ ಡಿಬಂಚರ್‌ಗಳನ್ನು ಉಪಯೋಗಿಸಿ ಆರ್‌ಆರ್‌ಪಿಆರ್‌ನ ಮಾಲೀಕತ್ವ ಪಡೆಯಿತು. ಆರ್‌ಆರ್‌ಪಿಆರ್ ಬಳಿ ಇದ್ದ ಎನ್‌ಡಿಟಿವಿಯ ಶೇ. 29.18ರಷ್ಟು ಷೇರುಗಳು ವಿಸಿಪಿಎಲ್‌ಗೆ ವರ್ಗವಾಯಿತು. ಈ ಮೂಲಕ ಅದಾನಿ ಗ್ರೂಪ್ ಸಂಸ್ಥೆ ಎನ್‌ಡಿಟಿವಿಯ ಶೇ. 29.18ರಷ್ಟು ಪಾಲನ್ನು ಪಡೆಯುವಲ್ಲಿ ಸಫಲವಾಯಿತು.

ತನ್ನ ಗಮನಕ್ಕೆ ಬಾರದೆಯೇ ವಿಸಿಪಿಎಲ್ ಅನ್ನು ಅದಾನಿ ಗ್ರೂಪ್‌ಗೆ ಮಾರಾಟ ಮಾಡಲಾಗಿದೆ ಎಂಬುದು ಎನ್‌ಡಿಟಿವಿ ಸಂಸ್ಥಾಪಕರಾದ ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಆಕ್ಷೇಪ.

ಎನ್‌ಡಿಟಿವಿ ಷೇರುಗಳು ಯಾರ‍್ಯಾರ ಬಳಿ ಇವೆ

ಎನ್‌ಡಿಟಿವಿ ಷೇರುಗಳು ಯಾರ‍್ಯಾರ ಬಳಿ ಇವೆ

ಎನ್‌ಡಿಟಿವಿಯಲ್ಲಿ ಈಗಲೂ ರಾಧಿಕಾ ರಾಯ್ ಮತ್ತು ಪ್ರಣಯ್ ರಾಯ್ ಅವರಿಬ್ಬರೇ ಅತಿದೊಡ್ಡ ಪಾಲುದಾರರು. ಈ ಮಾಧ್ಯಮ ಸಂಸ್ಥೆಯಲ್ಲಿ ಯಾರೆಷ್ಟು ಷೇರುಗಳನ್ನು ಹೊಂದಿದ್ದಾರೆ ಎಂಬ ವಿವರ ಇಲ್ಲಿದೆ:

ರಾಧಿಕಾ ಮತ್ತು ಪ್ರಣಯ್ ರಾಯ್: ಶೇ. 32.2
ವಿಸಿಪಿಎಲ್: ಶೇ. 29.18
ಸಾರ್ವಜನಿಕ ಷೇರುದಾರರು: ಶೇ. 38.55

ಇಲ್ಲಿ ಶೇ. 38.55ರಷ್ಟು ಪಾಲು ಹೊಂದಿರುವ ಸಾರ್ವಜನಿಕ ಷೇರುದಾರರಿಂದ ಶೇ. 26ರಷ್ಟು ಷೇರುಗಳನ್ನು ಕೊಳ್ಳಲು ಅದಾನಿ ಗ್ರೂಪ್ ಈಗ ಪ್ರಯತ್ನಿಸುತ್ತಿದೆ. ಸೆಬಿ ನಿಯಮದ ಪ್ರಕಾರ ಶೇ. 25ಕ್ಕಿಂತ ಹೆಚ್ಚು ಪಾಲನ್ನು ಹೊಂದಿರುವ ವ್ಯಕ್ತಿ ಅಥವಾ ಸಂಸ್ಥೆಯು ಶೇ. 26ರಷ್ಟು ಹೆಚ್ಚುವರಿ ಪಾಲನ್ನು ಖರೀದಿಸಬೇಕು ಎಂದಿದೆ. ಈ ಪ್ರಕಾರವಾಗಿ ಅದಾನಿ ಗ್ರೂಪ್ ಸಂಸ್ಥೆ ಈಗ ಈ ಹೆಜ್ಜೆ ಇಟ್ಟಿದೆ. ಆದರೆ, ಮಾರುಕಟ್ಟೆ ಬೆಲೆಗಿಂತ ತೀರಾ ಅಗ್ಗದ ದರದಲ್ಲಿ ಷೇರು ಖರೀದಿಸಲು ಮುಂದಾಗಿರುವ ಅದಾನಿಗೆ ಷೇರು ಯಾರು ಮಾರುತ್ತಾರೆ ಎಂಬುದು ಕೊನೆಯ ಪ್ರಶ್ನೆ. ಇದಕ್ಕೆ ಉತ್ತರ ಗೊತ್ತಾಗಬೇಕಾದರೆ ಡಿಸೆಂಬರ್ 5ರವರೆಗೂ ಕಾಯಬೇಕಾಗಬಹುದು. ಅಥವಾ ಮುಂದಿನ ಕೆಲ ದಿನಗಳಲ್ಲಿ ಅದಾನಿ ಗ್ರೂಪ್‌ಗೆ ಎನ್‌ಡಿಟಿವಿಯ ಹೆಚ್ಚುವರಿ ಷೇರುಗಳು ಎಷ್ಟು ಸಿಗುತ್ತವೆ ಎಂಬುದು ಸೂಚಕವಾಗಬಹುದು.

ಈಗ ವಿಸಿಪಿಎಲ್ ಮೂಲಕ ಶೇ. 26ರಷ್ಟು ಹೆಚ್ಚುವರಿ ಷೇರುಗಳನ್ನು ಕೊಳ್ಳುವಲ್ಲಿ ಅದಾನಿ ಗ್ರೂಪ್ ಯಶಸ್ವಿಯಾದಲ್ಲಿ ಒಟ್ಟು ಪಾಲು ಶೇ. 55.18ಕ್ಕೆ ಏರುತ್ತದೆ. ಎನ್‌ಡಿಟಿವಿಯ ಸಂಪೂರ್ಣ ಆಡಳಿತ ಅದಾನಿ ಕೈ ಸೇರುತ್ತದೆ.

English summary

Will Adani Group Get 26pc Additional Shares Of NDTV For The Lower Price It Offered

India's richest man Gautam Adani's group company has presented offer to purchase additional 26% shares from NDTV public shareholders. But the offer price is Rs. 294, which is much lower than market share price of Rs 382.
Story first published: Tuesday, November 22, 2022, 12:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X