2018ರ ಅತ್ಯುತ್ತಮ ಪ್ರಯಾಣ ಮತ್ತು ಪ್ರವಾಸೋದ್ಯಮ ಬಿಸಿನೆಸ್ ಐಡಿಯಾಗಳು

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಜಾಗತಿಕವಾಗಿ ಬಹು ಮನ್ನಣೆ ಪಡೆದಿರುವ ಪ್ರಯಾಣ ಹಾಗೂ ಪ್ರವಾಸೋದ್ಯಮ ವ್ಯವಹಾರ ಕೋಟ್ಯಂತರ ಜನರ ಪ್ರಮುಖ ಆದಾಯ ಮೂಲವಾಗಿ ಹೊರಹೊಮ್ಮುತ್ತಿದೆ. ನೇರವಾಗಿ ಅಥವಾ ಪರೋಕ್ಷವಾಗಿ ಲಕ್ಷಾಂತರ ನವೋದ್ಯಮಿಗಳು ಈ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ. ಅನೇಕ ರಾಷ್ಟ್ರಗಳಲ್ಲಿ ಪ್ರವಾಸೋದ್ಯಮ ದೇಶದ ಅತಿ ಮುಖ್ಯ ಆದಾಯ ನೀಡುವ ವ್ಯವಹಾರವಾಗಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ. ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವಿವಿಧ ಸೇವೆಗಳು, ವಸ್ತುಗಳ ಮಾರಾಟ ಸೇರಿದಂತೆ ಇನ್ನೂ ಅನೇಕ ರೀತಿಯ ವ್ಯಾಪಾರ ಅವಕಾಶಗಳು ದಿನೇ ದಿನೇ ಹೆಚ್ಚಾಗುತ್ತಿವೆ.

  ದೊಡ್ಡ ಮೊತ್ತದ ಬಂಡವಾಳ ಹೂಡುವವರಾಗಿರಲಿ ಅಥವಾ ಚಿಕ್ಕ ಬಂಡವಾಳದೊಂದಿಗೆ ಸಣ್ಣ ವ್ಯಾಪಾರ ಆರಂಭಿಸಬೇಕೆನ್ನುವವರಿಗೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಪುಲ ಅವಕಾಶಗಳಿವೆ. ಬಂಡವಾಳ ಹೂಡುವ ಸಾಮರ್ಥ್ಯ ಇರುವವರು ವಿಮಾನಯಾನ ಸೇವೆಗಳಂಥ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬಹುದು. ಇನ್ನು ಸಣ್ಣ ವ್ಯವಹಾರಸ್ಥರು, ಪ್ರವಾಸಕ್ಕೆ ಬರುವ ಪ್ರಯಾಣಿಕರಿಗಾಗಿ ಭಾಷಾಂತರ ಕೆಲಸ, ಲೋಕಲ್ ಗೈಡ್ ಅಥವಾ ಇನ್ನುಳಿದ ಹೋಟೆಲ್, ತಿಂಡಿ-ತಿನಿಸುಗಳ ಸೇವೆ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಉತ್ತಮ ಆದಾಯ ಗಳಿಸಬಹುದಾಗಿದೆ. ಕಾಲೇಜು ವಿದ್ಯಾರ್ಥಿ/ಯುವಕರಿಗಾಗಿ ಟಾಪ್ 20 ಕಡಿಮೆ ವೆಚ್ಚದ ಸ್ಟಾರ್ಟ್ಅಪ್ ಐಡಿಯಾಗಳು

   

  ಪ್ರಯಾಣ ಹಾಗೂ ಪ್ರವಾಸೋದ್ಯಮ ವ್ಯವಹಾರ ಕ್ಷೇತ್ರದಲ್ಲಿ ಲಭ್ಯವಿರುವ ಆದಾಯ ತರಬಲ್ಲ ಪ್ರಮುಖ ಮಾರ್ಗಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಪ್ರಸ್ತುತ ಈ ವಲಯದಲ್ಲಿ ತೊಡಗಿಸಿಕೊಳ್ಳಬಹುದಾದ ಅತಿ ಮುಖ್ಯ ಮಾರಾಟ ಅಥವಾ ಸೇವಾ ಕ್ಷೇತ್ರಗಳು ಹೀಗಿವೆ:

  2018ರಲ್ಲಿ ಪ್ರಯಾಣ ಹಾಗೂ ಪ್ರವಾಸೋದ್ಯಮ ವ್ಯವಹಾರದಲ್ಲಿ ತೊಡಗಿಸಿಕೊಳ್ಳಬಹುದಾದ 27 ಬೆಸ್ಟ್ ಐಡಿಯಾಗಳು ನಿಮಗಾಗಿ..

  1. ಟೂರಿಸ್ಟ್ ಗೈಡ್

  ಹೆಸರೇ ಹೇಳುವಂತೆ ಇದು ಪ್ರಯಾಣಿಕರಿಗೆ ಗೈಡ್ ಸೇವೆ ಒದಗಿಸುವ ಕೆಲಸವಾಗಿದೆ. ಆರಂಭದಲ್ಲಿ ದೊಡ್ಡ ಮೊತ್ತದ ಬಂಡವಾಳ ಇಲ್ಲದೆ, ಯಶಸ್ವಿ ಉದ್ಯಮ ಆರಂಭಕ್ಕೆ ಟೂರಿಸ್ಟ್ ಗೈಡ್ ಕೆಲಸ ಸೂಕ್ತ ಆಯ್ಕೆಯಾಗಿದೆ. ಹೊಸದಾಗಿ ಈ ಕ್ಷೇತ್ರದಲ್ಲಿ ನೆಲೆ ಕಂಡುಕೊಳ್ಳಬೇಕೆನ್ನುವವರಿಗೆ ಸ್ಥಳೀಯ ಭಾಷೆಯೊಂದಿಗೆ ಒಂದೆರಡು ವಿದೇಶಿ ಭಾಷೆಯ ಬಗ್ಗೆ ಜ್ಞಾನವಿದ್ದರೆ ಸಾಕು. ಇಂಗ್ಲಿಷ್, ಸ್ಪ್ಯಾನಿಷ್, ಜರ್ಮನ್, ಫ್ರೆಂಚ್, ಚೈನೀಸ್, ಪೋರ್ಚುಗೀಸ್ ಹೀಗೆ ಕೆಲ ವಿದೇಶಿ ಭಾಷೆಗಳ ಮೇಲೆ ಪ್ರಭುತ್ವ ಇರಬೇಕಾಗುತ್ತದೆ. ಹೊರಗಿನಿಂದ ಬರುವ ಪ್ರವಾಸಿಗರಿಗೆ ಅವರದೇ ಭಾಷೆಯಲ್ಲಿ ಸ್ಥಳೀಯ ಮಹತ್ವದ ಬಗ್ಗೆ ವಿವರಿಸುವುದು ಗೈಡ್ ಗಳ ಮುಖ್ಯ ಕೆಲಸ. ಜೊತೆಗೆ ಸ್ಥಳೀಯ ಪ್ರದೇಶದ ಇತಿಹಾಸ ಹಾಗೂ ಇನ್ನಿತರ ವಿಷಯಗಳ ಬಗ್ಗೆಯೂ ಅಧ್ಯಯನ ಮಾಡಿಟ್ಟುಕೊಂಡಿರುವುದು ಅಗತ್ಯ.

  2. ಬಾರ್ ಮತ್ತು ರೆಸ್ಟೋರೆಂಟ್

  ಊಟ, ಪಾನೀಯಗಳ ಆತಿಥ್ಯವಿಲ್ಲದ ಪ್ರವಾಸೋದ್ಯಮ ಇರಲು ಸಾಧ್ಯವಿಲ್ಲ. ಬಾರ್ ಮತ್ತು ರೆಸ್ಟೋರೆಂಟ್ ಗಳು ಪ್ರವಾಸೋದ್ಯಮದ ಅವಿಭಾಜ್ಯ ಅಂಗವಾಗಿವೆ. ಸಾಮಾನ್ಯವಾಗಿ ಪ್ರವಾಸಿಗರು ತಮಗಿಷ್ಟದ, ಅಭ್ಯಾಸವಾಗಿರುವ ಊಟವನ್ನು ಸವಿಯಲು ಬಯಸುತ್ತಾರೆ. ಹಾಗೆಯೇ ಭೇಟಿ ನೀಡಿದ ಸ್ಥಳದ ತಿಂಡಿ, ತಿನಿಸುಗಳ ಬಗ್ಗೆಯೂ ಪ್ರವಾಸಿಗರಿಗೆ ಯಾವಾಗಲೂ ಕುತೂಹಲವಿರುತ್ತದೆ. ಸ್ಥಳೀಯವಾಗಿ ವಿಶೇಷತೆ ಪಡೆದ ರುಚಿಯಾದ ಆಹಾರವನ್ನು ಹಲವಾರು ಪ್ರವಾಸಿಗರು ಕಡ್ಡಾಯವಾಗಿ ರುಚಿ ನೋಡಲು ಬಯಸುತ್ತಾರೆ. ಹೀಗಾಗಿ ಪ್ರವಾಸಿ ತಾಣದಲ್ಲಿ ನೀವು ಹೋಟೆಲ್ ಆರಂಭಿಸಿದ್ದರೆ, ಅಲ್ಲಿ ಸ್ಥಳೀಯ ಆಹಾರವನ್ನು ಮೆನುವಿನಲ್ಲಿ ಸೇರಿಸಬೇಕು. ಜೊತೆಗೆ ಪ್ರವಾಸಿಗರಿಗೆ ಸ್ಥಳೀಯ ಪ್ರಸಿದ್ಧ ತಿಂಡಿ, ತಿನಿಸುಗಳ ಬಗ್ಗೆ ತಿಳಿಸಿಕೊಡುವುದರಲ್ಲಿ ತಪ್ಪೇನೂ ಇಲ್ಲ. ಇದರಿಂದ ಹೋಟೆಲ್ ವ್ಯವಹಾರ ಮತ್ತಷ್ಟು ಲಾಭದಾಯಕವಾಗುತ್ತದೆ.

  3. ಹೋಟೆಲ್ ಹಾಗೂ ಲಾಡ್ಜಿಂಗ್

  ಯಾವುದೇ ಸ್ಥಳಕ್ಕೆ ಭೇಟಿ ನೀಡುವ ಪ್ರವಾಸಿಗರು ಮೊಟ್ಟ ಮೊದಲು ಗಮನಹರಿಸುವುದೇ ಆ ಊರಿನಲ್ಲಿ ಇರುವ ಒಳ್ಳೆಯ ಲಾಡ್ಜಿಂಗ್ ವ್ಯವಸ್ಥೆಯ ಬಗ್ಗೆ. ಎಷ್ಟು ದಿನ ಆ ಊರಿನಲ್ಲಿ ಅವರು ಇರಬಯಸುತ್ತಾರೆಯೋ ಅಷ್ಟು ಅವಧಿಗೆ ಗುಣಮಟ್ಟದ ಲಾಡ್ಜಿಂಗ್ ಹಾಗೂ ಬೋರ್ಡಿಂಗ್ ವ್ಯವಸ್ಥೆ ಅವಶ್ಯಕ. ಹೀಗಾಗಿ ಪ್ರವಾಸಿ ತಾಣಗಳಲ್ಲಿ ಲಾಡ್ಜಿಂಗ್ ವ್ಯವಹಾರ ಅತ್ಯಂತ ಲಾಭದಾಯಕವಾಗಿದೆ.

  4. ಟ್ಯಾಕ್ಸಿ ಹಾಗೂ ಇತರ ಸಾರಿಗೆ ಸೇವೆ

  ಪ್ರವಾಸೋದ್ಯಮದಲ್ಲಿ ಇನ್ನೊಂದು ಅತಿ ಪ್ರಮುಖ ಅವಶ್ಯಕ ಹಾಗೂ ಲಾಭದಾಯಕ ಸೇವೆ ಎಂದರೆ ಟ್ಯಾಕ್ಸಿ ಹಾಗೂ ಇನ್ನಿತರ ಸಾರಿಗೆ ಸೇವೆ. ಇದರಲ್ಲಿ ಸಾಂದರ್ಭಿಕ ಕರಾರಿನ ಮೇಲೆ ವಾಹನ ಸೇವೆ ಒದಗಿಸುವುದು ಪ್ರಮುಖವಾಗಿದೆ. ಏರ್ ಪೋರ್ಟ್‌ಗೆ ಆಗಮಿಸುವ ಪ್ರವಾಸಿಗರನ್ನು ಹೋಟೆಲ್ ವರೆಗೆ, ನಂತರ ಪ್ರವಾಸಿ ಸ್ಥಳಗಳಿಗೆ ಹಾಗೂ ಮತ್ತೆ ಹೊರಡುವ ಸಮಯದಲ್ಲಿ ಏರ್ ಪೋರ್ಟ್ ವರೆಗೂ ಕರೆದೊಯ್ಯುವ ಒಪ್ಪಂದದೊಂದಿಗೆ ವಾಹನ ಸೇವೆ ನೀಡಬಹುದು. ಅದೇ ರೀತಿ ಪ್ರವಾಸಿಗರು ಬಯಸಿದಲ್ಲಿ ಅವರು ಹೋಗಬಯಸುವ ಕಡೆ ಪ್ರತ್ಯೇಕವಾಗಿ ಟ್ಯಾಕ್ಸಿ ವ್ಯವಸ್ಥೆ ಮಾಡಿಕೊಡಬಹುದು.

  5. ಬಾಡಿಗೆ ಆಧಾರದಲ್ಲಿ ವಾಹನ ಸೇವೆ

  ವಿವಿಧ ವಾಹನ ಹಾಗೂ ಇನ್ನಿತರ ವಸ್ತುಗಳನ್ನು ಪ್ರವಾಸಿಗರಿಗೆ ಬಾಡಿಗೆ ನೀಡುವುದು ಮತ್ತೊಂದು ಲಾಭದಾಯಕ ವ್ಯವಹಾರವಾಗಿದೆ. ಪ್ರವಾಸಿ ತಾಣದಲ್ಲಿ ಪ್ರವಾಸಿಗರು ಸ್ವಚ್ಛಂದವಾಗಿ ವಿಹರಿಸಲು ಅನುಕೂಲವಾಗುವಂತೆ ಅವರು ಬಯಸಿದ ಸೇವೆಯನ್ನು ಬಾಡಿಗೆ ನೀಡಬಹುದು. ಕಾರು, ಬೈಕ್, ಮೋಟರ್ ಬೋಟ್ ಗಳನ್ನು ಹಲವಾರು ಪ್ರವಾಸಿಗರು ಅಲ್ಪಾವಧಿಗೆ ಬಾಡಿಗೆ ಪಡೆದು ತಮ್ಮಿಷ್ಟದಂತೆ ಸುತ್ತಾಡಲು ಬಯಸುತ್ತಾರೆ. ಇನ್ನು ಕೆಲ ಬೆಟ್ಟ, ಗುಡ್ಡಗಳ ಪ್ರದೇಶದಲ್ಲಿ ಕುದುರೆ, ಕತ್ತೆ ಮುಂತಾದುವುಗಳು ಸಹ ಪ್ರವಾಸಿಗರಿಗೆ ಸುತ್ತಾಡಲು ಆಕರ್ಷಣೀಯವಾಗಿರುತ್ತವೆ.
  ಆದರೆ ಈ ವ್ಯವಹಾರ ಆರಂಭಕ್ಕೂ ಮುನ್ನ ಆಯಾ ಪ್ರವಾಸಿ ತಾಣದಲ್ಲಿ ಯಾವ ಬಗೆಯ ಸಾರಿಗೆಗೆ ಹೆಚ್ಚು ಬೇಡಿಕೆ ಇದೆ ಎಂಬುದನ್ನು ಅಧ್ಯಯನ ನಡೆಸುವುದು ಸೂಕ್ತ. ಒಮ್ಮೆ ಸರಿಯಾಗಿ ವಿಷಯ ತಿಳಿದುಕೊಂಡು ಅದಕ್ಕೆ ತಕ್ಕಷ್ಟು ಸಂಖ್ಯೆಯ ವಾಹನಗಳನ್ನು ಸೇವೆಗೆ ರೆಡಿ ಮಾಡಿಟ್ಟುಕೊಳ್ಳಬಹುದು. ಜೊತೆಗೆ ಸಾರಿಗೆ ಸೌಲಭ್ಯ ಸಿಗುವ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ತಿಳಿಯುವಂತೆ ಮಾಡುವುದು ಸಹ ಅಗತ್ಯವಾಗಿದೆ.

  6. ಫೋಟೊಗ್ರಫಿ

  ಪ್ರವಾಸೋದ್ಯಮದಲ್ಲಿ ಬೇಡಿಕೆ ಇರುವ ಸೇವೆಗಳಲ್ಲಿ ಫೋಟೊಗ್ರಫಿಯೂ ಒಂದಾಗಿದೆ. ಇತ್ತೀಚೆಗೆ ಪ್ರವಾಸಿಗರು ತಮ್ಮದೇ ಆದ ಕ್ಯಾಮೆರಾಗಳೊಂದಿಗೆ ಆಗಮಿಸಿ, ತಮಗೆ ಬೇಕಾದ ಹಾಗೆ ಸುಂದರವಾಗಿ ಫೋಟೊಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಆದರೂ ವಿಶಿಷ್ಟ ಸಂದರ್ಭಗಳಲ್ಲಿ ವೃತ್ತಿಪರ ಛಾಯಾಗ್ರಾಹಕರ ಸೇವೆ ದೊರಕುವುದಾದರೆ ಪ್ರವಾಸಿಗರು ಫೋಟೊಗ್ರಫಿ ಸೇವೆ ಪಡೆಯಲು ಮುಂದಾಗುತ್ತಾರೆ. ಒಂದು ವೇಳೆ ನೀವು ನುರಿತ ಫೋಟೊಗ್ರಾಫರ್ ಆಗಿದ್ದರೆ ಪ್ರವಾಸಿ ತಾಣಗಳಲ್ಲಿ ನಿಮ್ಮ ಬಿಸಿನೆಸ್ ಆರಂಭಿಸಬಹುದು. ನೀವು ಖ್ಯಾತ ಪ್ರವಾಸಿ ತಾಣದಲ್ಲಿಯೇ ವಾಸ ಮಾಡುತ್ತಿದ್ದರೆ, ಅಲ್ಲಿ ಇರುವ ಟೂರ್ ಮತ್ತು ಟ್ರಾವೆಲ್ಸ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ಫೋಟೊಗ್ರಫಿ ಸೇವೆ ಒದಗಿಸುವ ಮೂಲಕ ಹಣ ಸಂಪಾದಿಸಬಹುದು.

  7. ವಿಶಿಷ್ಟ ವಸ್ತುಗಳ ಮಾರಾಟ ಮಳಿಗೆ

  ಪ್ರವಾಸಿ ತಾಣದಲ್ಲಿ ಸ್ಥಳೀಯವಾಗಿ ತಯಾರಾಗುವ ವಿಶಿಷ್ಟ ವಸ್ತುಗಳು ಹಾಗೂ ಇನ್ನಿತರ ಕರಕುಶಲ ವಸ್ತುಗಳ ಮಾರಾಟ ಮಳಿಗೆ ಆರಂಭಿಸುವುದು ಲಾಭದಾಯಕ ಉದ್ಯಮವಾಗಿದೆ. ಪ್ರವಾಸಿ ತಾಣಕ್ಕೆ ಆಗಮಿಸುವ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಿದ ನೆನಪಿಗಾಗಿ ಯಾವುದಾದರೂ ವಿಶಿಷ್ಟ ವಸ್ತುಗಳನ್ನು ಖರೀದಿಸಿ ತಮ್ಮೊಂದಿಗೆ ಒಯ್ಯಲು ಬಯಸುತ್ತಾರೆ. ಹೀಗಾಗಿ ಸ್ಥಳೀಯವಾಗಿ ಮಹಿಳೆಯರು ತಯಾರಿಸುವ ಕರಕುಶಲ ವಸ್ತುಗಳು, ಸಂಸ್ಕೃತಿ ಬಿಂಬಿಸುವ ಪೋಷಾಕುಗಳು ಸೇರಿದಂತೆ ಇನ್ನಿತರ ವಿಶಿಷ್ಟ ವಸ್ತುಗಳು ಪ್ರವಾಸಿಗರಿಗೆ ದೊರಕುವಂತಾಗಲು ವ್ಯಾಪಾರ ಆರಂಭಿಸಬಹುದು. ಪ್ರವಾಸಿ ತಾಣಗಳಲ್ಲಿ ಆಕರ್ಷಣೀಯ ಕೇಂದ್ರಗಳ ಸುತ್ತಮುತ್ತ ಇಂಥ ಅಂಗಡಿ ಆರಂಭಿಸಿ ಒಳ್ಳೆಯ ವ್ಯಾಪಾರ ಮಾಡಬಹುದು.

  8. ನೈಟ್ ಕ್ಲಬ್

  ವ್ಯವಹಾರ ಆರಂಭಿಸಲು ಬಯಸುವ ನವೋದ್ಯಮಿಗಳು ಪ್ರವಾಸಿ ತಾಣಗಳಲ್ಲಿ ನೈಟ್ ಕ್ಲಬ್ ಗಳ ಸ್ಥಾಪನೆಗೆ ಗಮನ ಹರಿಸಬಹುದು. ಆಧುನಿಕ ಜಗತ್ತಿನಲ್ಲಿ ಜನ ನೈಟ್ ಕ್ಲಬ್ ಗಳಿಗೆ ಹೋಗುವುದನ್ನು ಇಷ್ಟ ಪಡುತ್ತಾರೆ. ಅದರಲ್ಲೂ ಮೋಜು, ಮಸ್ತಿಗಾಗಿಯೇ ಪ್ರವಾಸಕ್ಕೆ ಬಂದ ಜನ ನೈಟ್ ಕ್ಲಬ್ ಗಳಲ್ಲಿ ಎಂಜಾಯ್ ಮಾಡಲು ಬಯಸುವುದು ಸಹಜ. ಇದೊಂದು ಲಾಭದಾಯಕ ಉದ್ಯಮವೇ ಆದರೂ, ಎಲ್ಲ ಪ್ರವಾಸಿ ತಾಣಗಳಲ್ಲಿ ನೈಟ್ ಕ್ಲಬ್ ಆರಂಭಿಸುವುದು ಸಾಧ್ಯವಿಲ್ಲ. ಅದರಲ್ಲೂ ಚಿಕ್ಕ ಹಾಗೂ ಪ್ರಶಾಂತವಾಗಿರುವ ತಾಣಗಳಲ್ಲಿ ನೈಟ್ ಕ್ಲಬ್ ಸ್ಥಾಪನೆ ಕಷ್ಟ. ಹೀಗಾಗಿ ಈ ಉದ್ಯಮಕ್ಕೆ ಕಾಲಿಡುವ ಮುನ್ನ ಆಯಾ ಪ್ರವಾಸಿ ತಾಣಗಳ ಪರಿಸರದ ಬಗ್ಗೆ ಹಾಗೂ ಲಾಭದಾಯಕವಾಗಿ ವ್ಯವಹಾರ ನಡೆಸುವ ಕುರಿತು ಸರಿಯಾಗಿ ಅಧ್ಯಯನ ಮಾಡಿಕೊಳ್ಳಬೇಕು.

  9. ಲಗೇಜ್ ಡೆಲಿವರಿ ಸರ್ವಿಸ್

  ಪ್ರವಾಸಿ ತಾಣಗಳಲ್ಲಿ ಪ್ರಯಾಣಿಕರ ಲಗೇಜ್ ಸಾಗಿಸುವ ಸರ್ವಿಸ್ ಆರಂಭಿಸುವ ಬಗ್ಗೆ ಉತ್ಸಾಹಿ ನವೋದ್ಯಮಿಗಳು ಗಮನಹರಿಸಬಹುದು. ದೀರ್ಘ ಪ್ರವಾಸ ಕೈಗೊಳ್ಳುವ ಪ್ರವಾಸಿಗರು ಹಲವಾರು ಬಾರಿ ಹೆಚ್ಚಿನ ಲಗೇಜ್ ಅನ್ನು ತಂದಿರುತ್ತಾರೆ. ಏರ್ ಪೋರ್ಟ್ ಗಳಲ್ಲಿ ಲಗೇಜ್ ಗಳ ಸುರಕ್ಷತಾ ತಪಾಸಣೆ ಸೇರಿದಂತೆ ಅವುಗಳನ್ನು ಹೊತ್ತೊಯ್ಯುವುದು ಪ್ರಯಾಣಿಕರಿಗೆ ತ್ರಾಸದಾಯಕವಾಗಿರುತ್ತದೆ. ಜೊತೆಗೆ ಸುತ್ತಾಟದ ಸಮಯದಲ್ಲಿ ಲಗೇಜ್ ಗಳ ಸುರಕ್ಷತೆ ಸಹ ಸವಾಲಿನ ವಿಷಯವಾಗಿರುತ್ತದೆ. ಇಂಥ ಸಂದರ್ಭದಲ್ಲಿ ಲಗೇಜ್ ಡೆಲಿವರಿ ಸರ್ವಿಸ್ ನಿಜವಾಗಿಯೂ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವುದಲ್ಲದೆ, ಸೇವೆ ಒದಗಿಸುವವರಿಗೆ ಸಾಕಷ್ಟು ಆದಾಯವನ್ನು ಸಹ ನೀಡಬಲ್ಲದು.

  ಪ್ರವಾಸಿಗರ ಸಂಪೂರ್ಣ ಲಗೇಜ್ ಅನ್ನು ಸುರಕ್ಷಿತವಾಗಿ ಇಟ್ಟುಕೊಂಡು, ಯಾವುದೇ ಹಾನಿಯಾಗದಂತೆ ಮತ್ತೆ ಅವರಿಗೆ ಮರಳಿಸುವುದು ಈ ಉದ್ಯಮದ ಯಶಸ್ಸಿನ ಗುಟ್ಟಾಗಿದೆ.

  10. ಕಾಫಿ ಶಾಪ್

  ಪ್ರವಾಸಿ ತಾಣಗಳಲ್ಲಿ ಕಾಫಿ ಶಾಪ್ ಆರಂಭಿಸುವುದು ಸಹ ಒಂದು ಉತ್ತಮ ಬಿಸಿನೆಸ್ ಐಡಿಯಾ ಆಗಿದೆ. ಆಧುನಿಕ ರೀತಿಯಲ್ಲಿ ಹಾಗೂ ಗುಣಮಟ್ಟದ ಕಾಫಿ, ತಿಂಡಿ ಪೂರೈಸುವುದು ಕಾಫಿ ಶಾಪ್ ಯಶಸ್ಸಿಗೆ ಕಾರಣವಾಗಬಲ್ಲದು. ಏರ್ ಪೋರ್ಟ್ ಬಳಿ, ಬಸ್ ಹಾಗೂ ರೈಲ್ವೆ ನಿಲ್ದಾಣಗಳ ಹತ್ತಿರ ಒಂದಾದರೂ ಕಾಫಿ ಶಾಪ್ ಇರಲೇಬೇಕು. ದಣಿದ ಪ್ರಯಾಣಿಕರು ಮೊದಲು ರಿಲ್ಯಾಕ್ಸ್ ಆಗಲು ಹುಡುಕುವುದೇ ಕಾಫಿ ಶಾಪ್ ಗಳನ್ನು. ಹೀಗಾಗಿ ಕಾಫಿ ಶಾಪ್ ಇರದ ಪ್ರವಾಸಿ ತಾಣದಲ್ಲಿನ ಸ್ಥಳಗಳನ್ನು ಗುರುತಿಸುವುದು ಮುಖ್ಯ. ನಂತರ ಸಾರ್ವಜನಿಕವಾಗಿ ಎಲ್ಲರಿಗೂ ಕಾಣುವಂತಿರುವ ಜಾಗದಲ್ಲಿ ಶಾಪ್ ಆರಂಭಿಸಬಹುದು. ಅದೇ ರೀತಿ ಮೊಬೈಲ್ ಕಾಫಿ ಶಾಪ್ ಐಡಿಯಾ ಸಹ ಉತ್ತಮವಾಗಿದೆ.

  11. ಭಾಷಾಂತರಕಾರರ ಸೇವೆ

  ಪ್ರವಾಸೋದ್ಯಮದಲ್ಲಿ ಭಾಷಾಂತರಕಾರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ವಿದೇಶ ಹಾಗೂ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಪ್ರಯಾಣಿಕರಿಗೆ ಸ್ಥಳೀಯ ಭಾಷೆ ಹಾಗೂ ಸಂಸ್ಕೃತಿಯ ಪರಿಚಯ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಸೂಕ್ತ ಸಂವಹನ ಸಾಧ್ಯವಾಗದೆ ಪ್ರವಾಸಿಗರು ಪರದಾಡುತ್ತಾರೆ. ಹೀಗಾಗಿ ಹಲವಾರು ಭಾಷೆಗಳನ್ನು ತಿಳಿದುಕೊಂಡಿರುವವರು ಪ್ರವಾಸಿಗರಿಗೆ ಭಾಷಾಂತರಕಾರರಾಗಿ ಕೆಲಸ ಮಾಡಿ, ಈ ಕ್ಷೇತ್ರದಲ್ಲಿ ತಮ್ಮ ಜೀವನೋಪಾಯ ಕಟ್ಟಿಕೊಳ್ಳಬಹುದು.

  12. ಲಾಂಡ್ರಿ ಸರ್ವಿಸ್

  ಲಾಂಡ್ರಿ ಸರ್ವಿಸ್ ಅಥವಾ ಬಟ್ಟೆ ಒಗೆದು ಇಸ್ತ್ರಿ ಮಾಡುವ ಸೇವೆ ಅಗತ್ಯ ಸೇವೆಗಳಲ್ಲೊಂದಾಗಿದೆ. ಪ್ರವಾಸಕ್ಕೆ ಬರುವ ಜನರಿಗೆ ತುರ್ತಾಗಿ ಅವರ ಬಟ್ಟೆಗಳನ್ನು ಒಗೆದು, ಇಸ್ತ್ರಿ ಮಾಡಿ ಕೊಡಬೇಕಾಗುತ್ತದೆ. ಎಲ್ಲ ಲಾಜಿಂಗ್ ಗಳಲ್ಲಿ ಬಟ್ಟೆ ಒಗೆದು ಕೊಡುವ ಸೇವೆ ಲಭ್ಯವಿರುವುದಿಲ್ಲ. ಇಂಥ ಸ್ಥಳಗಳನ್ನು ಗುರುತಿಸಿ, ಪ್ರವಾಸಿಗರಿಗೆ ಲಾಂಡ್ರಿ ಸರ್ವಿಸ್ ಆರಂಭಿಸಬಹುದು. ಅಲ್ಲದೆ ಹೋಟೆಲ್ ಹಾಗೂ ಲಾಜಿಂಗ್ ಗಳು ಹೆಚ್ಚಾಗಿರುವ ಸ್ಥಳಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಲಾಂಡ್ರಿ ಶಾಪ್ ಆರಂಭಿಸಿದರೆ ಸಾಕಷ್ಟು ಲಾಭದಾಯಕವಾಗಿರುತ್ತದೆ.

  13. ಬಾಡಿಗೆ ಕಾರ್ ಸರ್ವಿಸ್

  ಪ್ರವಾಸಿಗರಿಗೆ ಕಡಿಮೆ ಅವಧಿಗಾಗಿ ಕಾರ್ ಬಾಡಿಗೆ ನೀಡುವ ವ್ಯವಹಾರ ಅತಿ ಸುಲಭ ಹಾಗೂ ಲಾಭದಾಯಕವಾಗಿದೆ. ಪ್ರವಾಸಕ್ಕೆ ಬರುವ ಸಾಕಷ್ಟು ಜನ ತಾವಾಗಿಯೇ ಕಾರು ಬಾಡಿಗೆ ಪಡೆದು ಸುತ್ತಲಿನ ಸ್ಥಳಗಳನ್ನು ನೋಡಲು ಬಯಸುತ್ತಾರೆ. ಆದರೆ ದೂರದ ಊರುಗಳಿಗೆ ಬಂದವರು ತಮ್ಮ ಕಾರು ತರಲು ಸಾಧ್ಯವಾಗಿರುವುದಿಲ್ಲ. ಇಂಥವರಿಗಾಗಿ ಬಾಡಿಗೆಗೆ ಕಾರು ನೀಡುವ ಸರ್ವಿಸ್ ಆರಂಭಿಸಬಹುದು. ನೂತನ ಮಾಡೆಲ್ ಗಳ ಕೆಲ ಕಾರುಗಳನ್ನು ಇಟ್ಟುಕೊಂಡು ಈ ಸೇವೆ ನೀಡಬಹುದಾಗಿದೆ. ಆದರೆ ಬಾಡಿಗೆ ನೀಡುವ ಕಾರುಗಳನ್ನು ಸುಸಜ್ಜಿತ ಕಂಡೀಷನ್ ನಲ್ಲಿ ಇಡುವುದು ಸೂಕ್ತ. ಜೊತೆಗೆ ಅವಶ್ಯಕ ಎಲ್ಲ ದಾಖಲೆಗಳನ್ನು ಸಹ ಇಟ್ಟುಕೊಂಡಿರಬೇಕು.

  14. ರೇಡಿಯೋ ಮೂಲಕ ಪ್ರವಾಸಿ ತಾಣಗಳ ಪ್ರಚಾರ

  ಟಿವಿಗಳಲ್ಲಿ ಪ್ರವಾಸೋದ್ಯಮದ ಬಗ್ಗೆ ಟಾಕ್ ಶೋ ಮಾಡುವುದು ತುಸು ದುಬಾರಿಯ ಕೆಲಸ. ಆದ್ದರಿಂದ ಕಡಿಮೆ ಖರ್ಚಿನಲ್ಲಿ ರೇಡಿಯೋ ಮೂಲಕ ಟಾಕ್ ಶೋ ನಡೆಸಬಹುದು. ನಿರ್ದಿಷ್ಟ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ಇರುವ ಸಂಪನ್ಮೂಲ ವ್ಯಕ್ತಿಗಳಿಂದ ಟಾಕ್ ಶೋ ಏರ್ಪಡಿಸಬಹುದು. ಇದರಿಂದ ಪ್ರವಾಸ ಪ್ಲ್ಯಾನ್ ಮಾಡಿಕೊಳ್ಳುವ ಜನರಿಗೆ ಸಾಕಷ್ಟು ಪ್ರಯೋಜನವಾಗುತ್ತದೆ. ಟಾಕ್ ಶೋ ಗುಣಮಟ್ಟದಿಂದ ಕೂಡಿದ್ದರೆ ಕಡಿಮೆ ಅವಧಿಯಲ್ಲಿಯೇ ಹೆಚ್ಚಿನ ಸಂಖ್ಯೆಯ ಕೇಳುಗರನ್ನು ಆಕರ್ಷಿಸಬಹುದು. ಇದರಿಂದ ಟಾಕ್ ಶೋ ಗಳಿಗೆ ದೊಡ್ಡ ಕಂಪನಿಗಳ ಪ್ರಾಯೋಜಕತ್ವ ದೊರೆತು ಲಾಭ ಮಾಡಿಕೊಳ್ಳಬಹುದು. ಆದರೆ ಪ್ರವಾಸಿ ತಾಣಗಳ ಬಗ್ಗೆ ನಿರಂತರವಾಗಿ ಅಪ್ ಡೇಟ್ ಗಳನ್ನು ಈ ಟಾಕ್ ಶೋ ಗಳ ಮೂಲಕ ನೀಡುತ್ತಿರಬೇಕಾಗುತ್ತದೆ.

  15. ಪ್ರವಾಸ ಹಾಗೂ ಪ್ರವಾಸೋದ್ಯಮ ಕುರಿತು ಬ್ಲಾಗಿಂಗ್

  ಹೆಚ್ಚಿನ ಬಂಡವಾಳವಿಲ್ಲದೆ ಕೇವಲ ಜ್ಞಾನಾಧಾರಿತವಾಗಿ ಪ್ರವಾಸೋದ್ಯಮದಲ್ಲಿ ಕೆಲಸ ಮಾಡಿ ಲಾಭ ಗಳಿಸಬಹುದಾದ ಮತ್ತೊಂದು ಮಾರ್ಗವೆಂದರೆ ಬ್ಲಾಗಿಂಗ್. ಈಗ ಎಲ್ಲರ ಕೈಯಲ್ಲೂ ಇಂಟರ್ನೆಟ್ ಚಾಲಿತ ಮೊಬೈಲ್ ಗಳಿವೆ. ಬಹುತೇಕ ಜನ ಪ್ರವಾಸ ಕೈಗೊಳ್ಳುವ ಮೊದಲು ಪ್ರವಾಸಿ ತಾಣಗಳ ಮಾಹಿತಿಯ ಬಗ್ಗೆ ಇಂಟರ್ ನೆಟ್ ನಲ್ಲಿ ಸಾಕಷ್ಟು ಜಾಲಾಡುತ್ತಾರೆ. ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಆದಾಯ ಗಳಿಸಬಹುದಾಗಿದೆ. ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿ ಹಾಗೂ ಫೋಟೊಗಳನ್ನು ಒಳಗೊಂಡ ಬ್ಲಾಗ್ ಆರಂಭಿಸಬಹುದು. ಪ್ರವಾಸಿ ಸ್ಥಳದಲ್ಲಿ ಇರುವ ಸೌಲಭ್ಯಗಳು. ಅಲ್ಲಿಗೆ ಆಗಮಿಸಲು ಇರುವ ಸಾರಿಗೆ ವ್ಯವಸ್ಥೆ, ಹೋಟೆಲ್, ಪ್ರೇಕ್ಷಣೀಯ ಸ್ಥಳಗಳು, ಅಂದಾಜು ಖರ್ಚು ಮುಂತಾದುವುಗಳ ಬಗ್ಗೆ ಬ್ಲಾಗ್ ನಲ್ಲಿ ಬರೆಯಬಹುದು. ಈಗಾಗಲೇ ಜಗತ್ತಿನಲ್ಲಿ ಬ್ಲಾಗಿಂಗ್ ಮೂಲಕ ಅನೇಕರು ಸಾಕಷ್ಟು ಹಣ ಗಳಿಸುತ್ತಿದ್ದಾರೆ. ಹೀಗಾಗಿ ನಿರಂತರವಾಗಿ ಬ್ಲಾಗ್ ನಲ್ಲಿ ಮಾಹಿತಿ ಅಳವಡಿಸುತ್ತ ಹೋದರೆ, ಜಾಲತಾಣಕ್ಕೆ ಭೇಟಿ ನೀಡುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಬ್ಲಾಗ್ ಗಳಲ್ಲಿ ಜಾಹೀರಾತು ಪ್ರಕಟಿಸಲು ಕಂಪನಿಗಳು ಮುಂದೆ ಬರುತ್ತವೆ. ಇದು ಖರ್ಚಿಲ್ಲದೆ ಆದಾಯ ಗಳಿಸುವ ಸೂಕ್ತ ಮಾರ್ಗವಾಗಿದೆ.

  16. ಟೂರಿಸ್ಟ್ ಮಾಹಿತಿಯ ಕೈಪಿಡಿ ಪ್ರಕಟಣೆ

  ಪ್ರವಾಸಿ ತಾಣಗಳ ಬಗ್ಗೆ ಮಾಹಿತಿಯನ್ನೊಳಗೊಂಡ ಕೈಪಿಡಿ ಅಥವಾ ಮ್ಯಾಗಜಿನ್ ಪ್ರಕಟಿಸುವುದು ಪ್ರವಾಸೋದ್ಯಮದಲ್ಲಿನ ಮತ್ತೊಂದು ಆದಾಯ ತಂದು ಕೊಡುವ ಕೆಲಸವಾಗಿದೆ. ಯಾವುದೇ ವಿಷಯದ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ಪ್ರಕಟಿಸುವುದು ಅವಶ್ಯಕವಾಗಿರುತ್ತದೆ. ಅದೇ ರೀತಿ ಪ್ರವಾಸಿ ತಾಣಗಳ ಬಗ್ಗೆ ನಿಖರವಾದ ಹಾಗೂ ಪ್ರಸ್ತುತ ಮಾಹಿತಿಯನ್ನು ಕೈಪಿಡಿ ಅಥವಾ ಮ್ಯಾಗಜಿನ್ ಗಳ ಮೂಲಕ ಜನರಿಗೆ ತಲುಪಿಸಬಹುದು. ದೇಶ, ವಿದೇಶಗಳಿಂದ ಆಗಮಿಸುವ ಜನರಿಗೆ ಇವು ಬಹು ಉಪಯೋಗಕಾರಿಯಾಗಿರುತ್ತವೆ. ವಿಮಾನ, ಬಸ್ ಅಥವಾ ರೈಲ್ವೆ ಪ್ರಯಾಣ ದರ, ಹೋಟೆಲ್ ಗಳ ವಿವರ, ಪ್ರೇಕ್ಷಣೀಯ ಸ್ಥಳಗಳು ಹಾಗೂ ನಕ್ಷೆಗಳನ್ನು ಕೈಪಿಡಿಯಲ್ಲಿ ಪ್ರಕಟಿಸಬಹುದು. ಜೊತೆಗೆ ಹೊಸದಾಗಿ ಉದ್ದಿಮೆ ಆರಂಭಿಸಬಯಸುವವರಿಗೆ ಅಗತ್ಯವಾದ ಪ್ರವಾಸೋದ್ಯಮದಲ್ಲಿನ ಅವಕಾಶಗಳ ಬಗ್ಗೆಯೂ ಬರೆಯಬಹುದು. ಅಂದರೆ ಕೇವಲ ಪ್ರವಾಸಿಗರಷ್ಟೇ ಅಲ್ಲದೆ ನವೋದ್ಯಮಿಗಳಿಗೂ ಉಪಯುಕ್ತವಾಗುವಂತೆ ಮ್ಯಾಗಜಿನ್ ರೂಪಿಸಬಹುದು.

  17. ಖಾಸಗಿ ಎಸ್ಕಾರ್ಟ್ ಸೇವೆ

  ಎಸ್ಕಾರ್ಟ್ ಸೇವೆ ಎಂಬುದು ಪ್ರಯಾಣಿಕರಿಗೆ ಸುರಕ್ಷಿತವಾಗಿ ಸಂಚರಿಸಲು ಅನುಕೂಲ ಕಲ್ಪಿಸುವ ವ್ಯವಸ್ಥೆಯಾಗಿದೆ. ವಿಐಪಿಗಳನ್ನು ಹೊರತು ಪಡಿಸಿದರೆ ಎಲ್ಲರಿಗೂ ಸುರಕ್ಷತೆಯ ವ್ಯವಸ್ಥೆ ಇರುವುದಿಲ್ಲ. ಇಂಥ ಸಂದರ್ಭಗಳಲ್ಲಿ ಖ್ಯಾತ ಪ್ರವಾಸಿ ತಾಣಗಳಲ್ಲಿ ಖಾಸಗಿ ಎಸ್ಕಾರ್ಟ್ ಸೇವೆ ಆರಂಭಿಸಬಹುದು. ಬೆಲೆಬಾಳುವ ವಸ್ತುಗಳು ಹಾಗೂ ಹೆಚ್ಚಿನ ಪ್ರಮಾಣದ ಹಣ ಇಟ್ಟುಕೊಂಡಿರುವ ಪ್ರಯಾಣಿಕರು ಸಹಜವಾಗಿಯೇ ಸುರಕ್ಷತೆಯನ್ನು ಬಯಸುತ್ತಾರೆ. ಗೊತ್ತಿಲ್ಲದ ಜಾಗದಲ್ಲಿ ಸಂಚರಿಸುವಾಗ ಸುರಕ್ಷತೆ ಎಂಬುದು ಅತಿ ಮಹತ್ವದ್ದಾಗಿರುತ್ತದೆ. ಹೀಗಾಗಿ ಈ ವರ್ಗದ ಜನರಿಗೆ ಸುರಕ್ಷತೆ ಕಲ್ಪಿಸಲು ಖಾಸಗಿ ಎಸ್ಕಾರ್ಟ್ ಸೇವೆ ಕಂಪನಿಯನ್ನು ಹುಟ್ಟು ಹಾಕಬಹುದು. ಇದಕ್ಕೆ ಸರಕಾರದಿಂದ ಅಗತ್ಯವಾದ ಲೈಸೆನ್ಸ್ ಪಡೆಯಬೇಕಾಗುತ್ತದೆ. ಜೊತೆಗೆ ನುರಿತ ಭದ್ರತಾ ಸಿಬ್ಬಂದಿ ಹಾಗೂ ವಾಹನಗಳನ್ನು ವ್ಯವಸ್ಥೆ ಮಾಡಿಕೊಂಡು ಸೇವೆ ಆರಂಭಿಸಬಹುದು. ಒಟ್ಟಾರೆಯಾಗಿ ಪ್ರವಾಸೋದ್ಯಮದಲ್ಲಿ ನವೀನವಾಗಿ ಏನಾದರೂ ಮಾಡಿ ಲಾಭ ಗಳಿಸಬೇಕೆನ್ನುವವರು ಖಾಸಗಿ ಎಸ್ಕಾರ್ಟ್ ಸೇವೆ ಬಗ್ಗೆ ಗಮನಹರಿಸಬಹುದಾಗಿದೆ.

  18. ಭದ್ರತಾ ಸಿಬ್ಬಂದಿ ಪೂರೈಕೆ

  ಪ್ರವಾಸಿ ತಾಣಗಳಿಗೆ ಆಗಮಿಸುವ ಸೆಲೆಬ್ರಿಟಿಗಳು ಹಾಗೂ ಇನ್ನಿತರ ಹೆಸರಾಂತ ಜನರಿಗೆ ಭದ್ರತೆ ತೀರಾ ಅಗತ್ಯವಾಗಿರುತ್ತದೆ. ತಾರಾ ವರ್ಚಸ್ಸಿನ ಜನರನ್ನು ನೋಡಲು ಜನ ಮುಗಿ ಬೀಳುವುದು ಸಹಜ. ಇಂಥ ಸಂದರ್ಭದಲ್ಲಿ ಅವರಿಗೆ ಸುರಕ್ಷತೆ ನೀಡಲು ಭದ್ರತಾ ಸಿಬ್ಬಂದಿಯ ಅಗತ್ಯತೆ ಇರುತ್ತದೆ. ಹೀಗಾಗಿ ಅವರಿಗೆ ಖಾಸಗಿ ಭದ್ರತಾ ಸಿಬ್ಬಂದಿಯ ಸೇವೆ ನೀಡುವ ವ್ಯವಹಾರ ಆರಂಭಿಸಬಹುದು. ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಈ ವ್ಯವಹಾರ ಲಾಭದಾಯಕವಾಗಿದೆ.

  19. ಪ್ರವಾಸೋದ್ಯಮ ಕನ್ಸಲ್ಟಿಂಗ್ ಸರ್ವಿಸ್

  ಪ್ರವಾಸೋದ್ಯಮದ ಬಗ್ಗೆ ಸಲಹೆ ನೀಡುವ ಕುರಿತು ಕನ್ಸಲ್ಟಿಂಗ್ ವ್ಯವಹಾರ ಆರಂಭಿಸುವುದು ಮತ್ತೊಂದು ಆಕರ್ಷಕ ಹಾಗೂ ಲಾಭ ತರುವ ಬಿಸಿನೆಸ್ ಆಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸೂಕ್ತ ವಿದ್ಯಾಭ್ಯಾಸ ಮಾಡಿದ್ದು, ಪ್ರವಾಸಿ ತಾಣ ಹಾಗೂ ಉದ್ದಿಮೆಯ ಅವಶ್ಯಕತೆಗಳ ಬಗ್ಗೆ ಆಳವಾದ ಜ್ಞಾನ ನಿಮ್ಮಲ್ಲಿದ್ದರೆ ಕನ್ಸಲ್ಟಿಂಗ್ ಸರ್ವಿಸ್ ಆರಂಭಿಸುವ ಬಗ್ಗೆ ಗಮನಹರಿಸಬಹುದು. ದೊಡ್ಡ ಕಾರ್ಪೊರೇಟ್ ಕಂಪನಿಗಳು, ಇನ್ನಿತರ ಖಾಸಗಿ ಸಂಸ್ಥೆಗಳು ಹಾಗೂ ಸರಕಾರಿ ಸಂಸ್ಥೆಗಳಿಗೆ ಕನ್ಸಲ್ಟಿಂಗ್ ಸಂಸ್ಥೆಗಳ ಸೇವೆ ಅಗತ್ಯವಾಗಿರುತ್ತದೆ. ಹೀಗಾಗಿ ಈ ಕ್ಷೇತ್ರದಲ್ಲಿ ಸೂಕ್ತ ಅನುಭವದೊಂದಿಗೆ ಉದ್ದಿಮೆ ಆರಂಭಿಸಿದರೆ ದೊಡ್ಡ ಮಟ್ಟದ ಲಾಭ ಗಳಿಸಬಹುದು.

  20. ವಸ್ತು ಸಂಗ್ರಹಾಲಯ ಸ್ಥಾಪನೆ

  ನಿಮಗೆ ಕಲೆ ಹಾಗೂ ಸಂಸ್ಕೃತಿಯ ಬಗ್ಗೆ ಆಸಕ್ತಿ ಹಾಗೂ ಆಳವಾದ ಜ್ಞಾನ ಇದ್ದಲ್ಲಿ, ಪ್ರವಾಸಿ ತಾಣಗಳಲ್ಲಿ ವಸ್ತು ಸಂಗ್ರಹಾಲಯ ಆರಂಭಿಸುವ ಬಗ್ಗೆ ಯೋಜನೆ ಹಾಕಿಕೊಳ್ಳಬಹುದು. ಸ್ಥಳೀಯ ಇತಿಹಾಸ, ಜನರ ಸಂಸ್ಕೃತಿ, ಆಚಾರ-ವಿಚಾರಗಳನ್ನು ಬಿಂಬಿಸುವ ವಸ್ತುಗಳು ಹಾಗೂ ಇನ್ನಿತರ ಮಾಹಿತಿಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಬಹುದು. ಸ್ಥಳೀಯ ಸರಕಾರಿ ಸಂಸ್ಥೆಗಳು ಹಾಗೂ ಹತ್ತಿರದಲ್ಲಿ ಇರುವ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಗಳೊಂದಿಗೆ ಸಹಭಾಗಿತ್ವದಲ್ಲಿ ಇಂಥ ವಸ್ತು ಸಂಗ್ರಹಾಲಯ ಆರಂಭಿಸುವುದು ಸೂಕ್ತ. ಇದು ಆಯಾ ಪ್ರದೇಶದ ಸಮುದಾಯದ ಸಂಸ್ಕೃತಿ ಹಾಗೂ ಇತಿಹಾಸವನ್ನು ಸಂರಕ್ಷಿಸಿ, ಜ್ಞಾನವನ್ನು ಪಸರಿಸಲು ವೇದಿಕೆಯಾಗುತ್ತದೆ.

  21. ಆನ್ಲೈನ್ ಹೋಟೆಲ್ ಬುಕಿಂಗ್ ವೆಬ್ ಸೈಟ್

  ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಆನ್ಲೈನ್ ಮೂಲಕ ಹೋಟೆಲ್ ಬುಕಿಂಗ್ ವೆಬ್ಸೈಟ್ ಆರಂಭಿಸುವುದು ಇನ್ನೊಂದು ಲಾಭ ತರುವ ವ್ಯವಹಾರವಾಗಿದೆ. ದೇಶ ವಿದೇಶಗಳಲ್ಲಿನ ಹೋಟೆಲ್ ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಅವುಗಳನ್ನು ನಿಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಬಹುದು. ಇದರಲ್ಲಿ ಹೋಟೆಲ್ ಬುಕಿಂಗ್ ಗೆ ಅವಕಾಶ ಕಲ್ಪಿಸಬೇಕಾಗುತ್ತದೆ. ಯಾವುದೇ ಗ್ರಾಹಕ ನಿಮ್ಮ ವೆಬ್ ಸೈಟ್ ಮೂಲಕ ಹೋಟೆಲ್ ಬುಕ್ ಮಾಡಿದಾಗ ಆ ಹೋಟೆಲ್ ಮೂಲಕ ನಿರ್ದಿಷ್ಟ ಮೊತ್ತದ ಕಮೀಷನ್ ದೊರಕುವಂತೆ ಹೋಟೆಲ್ ಗಳೊಂದಿಗೆ ಒಪ್ಪಂದ ಮಾಡಿಕೊಂಡರೆ ಸಾಕಷ್ಟು ಲಾಭ ಗಳಿಸಬಹುದು.

  22. ಟ್ಯಾಕ್ಸಿ ಅಥವಾ ಕ್ಯಾಬ್ ಸರ್ವಿಸ್

  ಟ್ಯಾಕ್ಸಿ ಹಾಗೂ ಕ್ಯಾಬ್ ಸರ್ವಿಸ್ ಪ್ರವಾಸೋದ್ಯಮದಲ್ಲಿ ಲಾಭ ತರುವ ಪ್ರಮುಖ ಉದ್ಯಮವಾಗಿದೆ. ಆರಂಭದಲ್ಲಿ ಒಂದೇ ಕಾರು ಇದ್ದರೂ ಸಾಕು, ನೀವು ಸರ್ವಿಸ್ ಆರಂಭಿಸಬಹುದು. ಕಠಿಣ ಪರಿಶ್ರಮ ಹಾಗೂ ಪ್ರಮಾಣಿಕ ದುಡಿಮೆಯಿಂದ ಕಡಿಮೆ ಅವಧಿಯಲ್ಲಿ ವ್ಯವಹಾರ ವಿಸ್ತರಿಸಿಕೊಳ್ಳಬಹುದು. ಕೇವಲ ಒಂದು ಕಾರ್ ಅಥವಾ ಬಸ್ ನಿಂದ ವ್ಯವಹಾರ ಆರಂಭಿಸಿ ಇಂದು ಸಾವಿರಾರು ವಾಹನಗಳೊಂದಿಗೆ ದೊಡ್ಡ ಕಂಪನಿ ಮಾಡಿರುವ ಹಲವಾರು ಉದಾಹರಣೆಗಳು ನಮ್ಮ ಕಣ್ಣು ಮುಂದೆಯೇ ಇವೆ.

  23. ಏರ್ಪೋರ್ಟ್ ಗಳಿಗೆ ಬಸ್ ಸಾರಿಗೆ ಸೇವೆ

  ಮಹಾನಗರಗಳಲ್ಲಿ ವಿವಿಧ ಭಾಗಗಳಿಂದ ಏರ್ ಪೋರ್ಟ್ ಗೆ ಬಸ್ ಸೇವೆ ನೀಡುವುದು ಸಹ ಪ್ರವಾಸೋದ್ಯಮದ ಭಾಗವಾಗಿದೆ. ಪ್ರಯಾಣಿಕರು ಉಳಿದುಕೊಂಡಿರುವ ಹೋಟೆಲ್ ಗಳಿಂದ ಅವರನ್ನು ಏರ್ ಪೋರ್ಟ್ ಗೆ ಕರೆದೊಯ್ಯುವುದು ಹಾಗೂ ಏರ್ ಪೋರ್ಟ್ ನಿಂದ ಮರಳಿ ಹೋಟೆಲ್ ಗೆ ತಲುಪಿಸುವುದು ಇಂದು ಬೇಡಿಕೆಯ ಸಾರಿಗೆ ಸೇವೆಯಾಗಿದೆ. ನೀವು ಹೂಡಬಹುದಾದ ಬಂಡವಾಳಕ್ಕೆ ತಕ್ಕಂತೆ ಈ ವ್ಯವಹಾರ ಪ್ರಾರಂಭಿಸಬಹುದಾಗಿದೆ.

  24. ವಿಮಾನಯಾನ ಸೇವೆ

  ಪ್ರವಾಸೋದ್ಯಮದಲ್ಲಿ ದೊಡ್ಡ ಮಟ್ಟದಲ್ಲಿ ಏನಾದರೂ ಬಿಸಿನೆಸ್ ಮಾಡಬೇಕೆನ್ನುವ ನವೋದ್ಯಮಿಗಳಿಗೆ ವಿಮಾನಯಾನ ಕಂಪನಿ ಆರಂಭಿಸುವುದು ಸೂಕ್ತ ಆಯ್ಕೆಯಾಗಿದೆ. ಆದರೆ ನೀವು ದೊಡ್ಡ ಮೊತ್ತದ ಬಂಡವಾಳ ಹಾಕಿ ದೀರ್ಘಾವಧಿಯವರೆಗೆ ಕಾಯುವ ಸಾಮರ್ಥ್ಯ ಇದ್ದರೆ ಮಾತ್ರ ಈ ವ್ಯವಹಾರ ಪ್ರವೇಶಿಸುವುದು ಸೂಕ್ತ. ಇದೊಂದು ಬೃಹತ್ ವ್ಯವಹಾರವಾಗಿರುವುದರಿಂದ, ಇದರ ಬಗ್ಗೆ ಆಳವಾದ ಜ್ಞಾನ ಅಗತ್ಯ. ಈ ವ್ಯವಹಾರಕ್ಕೆ ಬ್ಯಾಂಕ್ ಗಳು, ಹೂಡಿಕೆದಾರರು ಹಾಗೂ ಇನ್ನಿತರ ಸಂಸ್ಥೆಗಳಿಂದ ಬಂಡವಾಳ ಕ್ರೋಢೀಕರಿಸಬೇಕಾಗುತ್ತದೆ.

  25. ಟಿಕೆಟ್ ಹಾಗೂ ರಿಸರ್ವೇಶನ್ ಸರ್ವಿಸ್

  ಟಿಕೆಟ್ ಮಾರಾಟ ಹಾಗೂ ರಿಸರ್ವೇಶನ್ ಸೇವೆಯು ಪ್ರವಾಸೋದ್ಯಮದ ಅತಿ ಆಕರ್ಷಕ ವ್ಯವಹಾರಗಳಲ್ಲೊಂದಾಗಿದೆ. ವಿದೇಶಕ್ಕೆ ಪ್ರಯಾಣಿಸುವವರು ಕಷ್ಟಪಟ್ಟು ವೀಸಾ ಪಡೆದ ನಂತರ ಹುಡುಕಾಟ ಆರಂಭಿಸುವುದೇ ಟಿಕೆಟಿಂಗ್ ಹಾಗೂ ರಿಸರ್ವೇಶನ್ ಸರ್ವಿಸ್ ಬಗ್ಗೆ. ಹೀಗಾಗಿ ಈ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿದ್ದು, ಉತ್ಸಾಹಿ ನವೋದ್ಯಮಿಗಳು ವ್ಯವಹಾರ ಆರಂಭಿಸಲು ಮುಂದಾಗಬಹುದಾಗಿದೆ.

  26. ಹೆಲಿಕಾಪ್ಟರ್ ಸರ್ವಿಸ್

  ಹೆಲಿಕಾಪ್ಟರ್ ಸಾರಿಗೆ ಸೇವೆ ಇಂದಿನ ಜಗತ್ತಿನಲ್ಲಿ ಅತಿ ಜನಪ್ರಿಯವಾಗತೊಡಗಿದೆ. ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ದೂರ ಪ್ರಯಾಣಿಸಲು ಹೆಲಿಕಾಪ್ಟರ್ ಗಳು ಸಹಕಾರಿಯಾಗಿವೆ. ಜೊತೆಗೆ ಹೆಲಿಕಾಪ್ಟರ್ ಪ್ರಯಾಣ ಮೋಜಿನ ಪ್ರಯಾಣವೂ ಆಗಿದೆ. ಈ ಉದ್ಯಮವೂ ಸಹ ದೊಡ್ಡ ಮೊತ್ತದ ಬಂಡವಾಳವನ್ನು ಬಯಸುತ್ತದೆ. ಹೀಗಾಗಿ ಈ ಕ್ಷೇತ್ರಕ್ಕೆ ಕಾಲಿಡುವ ಮುಂಚೆ ಎಲ್ಲ ಸಾಧಕ-ಬಾಧಕಗಳ ಸಮರ್ಪಕ ಅಧ್ಯಯನ ಮಾಡುವುದು ಅವಶ್ಯ.

  27. ಟ್ರಾವೆಲ್ ಏಜೆನ್ಸಿ

  ಪ್ರವಾಸಿಗರಿಗೆ ಪ್ರವಾಸಕ್ಕೆ ಸಂಬಂಧಿಸಿದಂತೆ ಬಹುತೇಕ ಎಲ್ಲ ರೀತಿಯ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಟ್ರಾವೆಲ್ ಏಜೆನ್ಸಿ ನಡೆಸುವುದು ಮತ್ತೊಂದು ಲಾಭ ತರಬಲ್ಲ ವ್ಯವಹಾರವಾಗಿದೆ. ಗ್ರಾಹಕರಿಗೆ ವೀಸಾ ಪಡೆಯಲು ಸಹಾಯ ಮಾಡುವುದು, ವಿಮಾನ ಟಿಕೆಟ್ ಬುಕಿಂಗ್ ಮಾಡುವುದು, ಹೋಟೆಲ್ ಕಾಯ್ದಿರಿಸುವಿಕೆ ಸೇರಿದಂತೆ ಇದಕ್ಕೆ ಸಂಬಂಧಿಸಿದ ವಿವಿಧ ರೀತಿಯ ಸೇವೆಗಳನ್ನು ನೀಡುವ ಮೂಲಕ ಸಾಕಷ್ಟು ಆದಾಯ ಗಳಿಸುವ ಅವಕಾಶಗಳಿವೆ.

  English summary

  These are Best Travel & Tourism Business ideas for 2018

  The travels and tourism industry is a major source of income for most States in the United States of America and of course most countries of the world.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more