ಆನ್‌ಲೈನ್ ವ್ಯವಹಾರ ಮಾಡುತ್ತಿರಾ? ಹಾಗಿದ್ದರೆ ತಪ್ಪದೇ ಇಲ್ಲಿ ನೋಡಿ..

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಭಾರತದ ಇ-ಕಾಮರ್ಸ್ ವಲಯ ನಿರಂತರವಾಗಿ ಬೆಳವಣಿಗೆ ಹೊಂದುತ್ತಿದ್ದು, ಹಲವಾರು ಸ್ವಾಧೀನತೆಗಳಿಗೆ (acquisitions) ಸಾಕ್ಷಿಯಾಗುತ್ತಿದೆ. ಇಂಥ ಬದಲಾವಣೆಯ ಪರ್ವ ಕಾಲದಲ್ಲಿ ಮತ್ತಷ್ಟು ಸಂಖ್ಯೆಯ ಗ್ರಾಹಕರು ತಮ್ಮೂರಿನ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸುವುದರಿಂದ ದೂರಾಗುತ್ತಿದ್ದು, ಆನ್‌ಲೈನ್ ಖರೀದಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ.

  ಡಿಮಾನೆಟೈಸೇಶನ್ ಹಾಗೂ ಸರಕಾರದ ಡಿಜಿಟಲ್ ಪಾವತಿ ಉತ್ತೇಜನಾ ಕ್ರಮಗಳಿಂದ ಕಳೆದ ವರ್ಷದಿಂದೀಚೆಗೆ ಆನ್‌ಲೈನ್ ಪೇಮೆಂಟ್‌ಗಳ ಸಂಖ್ಯೆಯಲ್ಲಿ ಅಗಾಧ ಪ್ರಮಾಣದ ಹೆಚ್ಚಳವಾಗಿದೆ. ಡೆಬಿಟ್/ಕ್ರೆಡಿಟ್ ಕಾರ್ಡಗಳು, ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್ಸ್, ಯುಪಿಐ ಮುಂತಾದ ವಿಧಾನಗಳ ಮೂಲಕ ಹೆಚ್ಚೆಚ್ಚು ಜನತೆ ಪೇಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಹೀಗೆ ಒಂದೆಡೆ ಆನ್‌ಲೈನ್ ಪೇಮೆಂಟ್‌ಗಳ ಸಂಖ್ಯೆ ಹೆಚ್ಚಾಗುತ್ತಿರುವಂತೆ ಪೇಮೆಂಟ್ ಪ್ರಕ್ರಿಯೆ ಸಂಪೂರ್ಣ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುವುದು ಸಹ ಅತಿ ಅಗತ್ಯವಾಗಿದೆ.
  ಆನ್‌ಲೈನ್ ಪೇಮೆಂಟ್ ಮಾಡುವಾಗ ನಮ್ಮ ವೈಯಕ್ತಿಕ ಗುರುತು ಹಾಗೂ ಬ್ಯಾಂಕಿಂಗ್ ಮಾಹಿತಿ ಸೋರಿಕೆ, ಹಣಕಾಸು ವಂಚನೆ, ಫಿಶಿಂಗ್ ಮುಂತಾದ ಅಪಾಯಗಳನ್ನು ಎದುರಿಸಬೇಕಾಗುತ್ತದೆ. ಆದರೆ ಹಾಗಂತ ಆನ್‌ಲೈನ್ ಪಾವತಿ ವ್ಯವಸ್ಥೆಯಿಂದ ದೂರವಿರುತ್ತೇನೆ ಎಂಬುದು ಇಂದಿನ ಡಿಜಿಟಲ್ ವ್ಯವಸ್ಥೆಯಲ್ಲಿ ಸಾಧ್ಯವಾಗದ ಮಾತು. ಆನ್‌ಲೈನ್ ಪೇಮೆಂಟ್ ದಿನದಿಂದ ದಿನಕ್ಕೆ ಅನಿವಾರ್ಯವಾಗುತ್ತ ನಡೆದಿದೆ. ಹೀಗಿರುವಾಗ ಡಿಜಿಟಲ್ ಪೇಮೆಂಟ್ ಸಂದರ್ಭದಲ್ಲಿ ಆದಷ್ಟು ಹೆಚ್ಚು ಸುರಕ್ಷತಾ ಕ್ರಮಗಳನ್ನು ಅನುಸರಿಸಿ ನಮ್ಮ ಹಣದ ರಕ್ಷಣೆ ಮಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಮನೆಯಿಂದ ಕೆಲಸ ಮಾಡಲು ಬಯಸುವಿರಾ? ಈ 17 ಕಂಪನಿಗಳು ನೇಮಕಾತಿ ಮಾಡುತ್ತವೆ..

   

  ಆನ್‌ಲೈನ್ ವ್ಯವಹಾರ ನಡೆಸುವಾಗ ಯಾವೆಲ್ಲ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ವಂಚನೆ, ಫಿಶಿಂಗ್ ಮುಂತಾದ ಅಪಾಯಗಳನ್ನು ತಡೆಗಟ್ಟಬಹುದು ಎಂಬುದನ್ನು ಈ ಅಂಕಣದಲ್ಲಿ ಅರಿತುಕೊಳ್ಳೋಣ.
  ಡಿಜಿಟಲ್ ಪೇಮೆಂಟ್ ಸುರಕ್ಷತೆಗಾಗಿ ಹನ್ನೆರಡು ಸೂತ್ರಗಳು:

  ಆನ್‌ಲೈನ್ ಪೇಮೆಂಟ್‌ಗೂ ಮುನ್ನ ಎಚ್‌ಟಿಟಿಪಿಎಸ್ (HTTPS) ಪರಿಶೀಲಿಸಿ

  ಮನೆಯ ಹೊರಗೆ ಬೀಗ ಹಾಕದೆ ಬಿಟ್ಟ ಅಂಚೆ ಡಬ್ಬಿಯಲ್ಲಿ ಯಾರು ಬೇಕಾದರೂ ಕೈಯಾಡಿಸಿ ನಿಮಗೆ ಬಂದಿರುವ ಪತ್ರ ಹಾಗೂ ದಾಖಲೆಗಳನ್ನು ಕದ್ದು ನೋಡಬಹುದಾಗಿದೆ. ಅದೇ ರೀತಿ ಅಸುರಕ್ಷಿತ ವೆಬ್‌ಸೈಟ್‌ಗೆ ಲಾಗ್ ಮಾಡಿದಾಗ ನಿಮ್ಮ ಇಂಟರ್‌ನೆಟ್ ಸಂಪರ್ಕದ ಮೇಲೆ ಹೊರಗಿನವರು ಹಿಡಿತ ಸಾಧಿಸಬಹುದಾಗಿದೆ. ಬಹುಕಾಲದವರೆಗೆ ಇಂಟರನೆಟ್ ಬಳಕೆಯನ್ನು ಗಮನಿಸಿದಲ್ಲಿ ಆ ವೆಬ್‌ಸೈಟ್‌ನಲ್ಲಿ ಶೇಖರವಾಗುವ ನಿಮ್ಮ ವೈಯಕ್ತಿಕ ಮಾಹಿತಿಯನ್ನು ವಂಚಕರು ಪಡೆದುಕೊಳ್ಳಬಹುದು.
  ಈ ರೀತಿಯ ಸುರಕ್ಷತಾ ಅಪಾಯವನ್ನು ತಡೆಗಟ್ಟಲು ಬಹುತೇಕ ಇಮೇಲ್ ಸರ್ವಿಸ್, ಸೋಶಿಯಲ್ ಮೀಡಿಯಾ, ಬ್ಲಾಗಿಂಗ್ ಸೈಟ್ ಮುಂತಾದುವುಗಳು ಎಚ್‌ಟಿಟಿಪಿಎಸ್ ಎಂಬ ಸುಭದ್ರ ಹಾಗೂ ಸುರಕ್ಷಿತ ಪ್ರೊಟೊಕಾಲ್ ಅನ್ನು ಬಳಸುತ್ತವೆ. ಹೈಪರ್ ಟೆಕ್ಸ್ಟ್ ಟ್ರಾನ್ಸಫರ್ ಪ್ರೊಟೊಕಾಲ್ ಓವರ್ ಟ್ರಾನ್ಸಪೋರ್ಟ್ ಲೇಯರ್ ಸೆಕ್ಯುರಿಟಿ (Hyper-Text Transfer Protocol over Transport Layer Security - HTTPS) ಮೂಲಕ ಇಂಟರ್‌ನೆಟ್ ಸಂಪರ್ಕದ ಸುರಕ್ಷತೆಯನ್ನು ಖಾತರಿಪಡಿಸಲಾಗುತ್ತದೆ. ಎರಡು ಸಂಪರ್ಕ ಕೊಂಡಿಗಳ ಕೊನೆಯಲ್ಲಿ ವಿನಿಮಯವಾಗುವ ಮಾಹಿತಿಯನ್ನು ಸಂಪೂರ್ಣವಾಗಿ ಎನಕ್ರಿಪ್ಷನ್ ಮಾಡುವುದೇ ಎಚ್‌ಟಿಟಿಪಿಎಸ್ ಸುರಕ್ಷತೆಯಾಗಿದೆ.

  ಅನುಮಾನಾಸ್ಪದ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ಇರಲಿ

  ಇಂಟರನೆಟ್ ಅಥವಾ ಅದರಲ್ಲಿನ ಸರ್ಚ್ ಎಂಜಿನ್‌ಗಳ ಮೂಲಕ ಯಾವುದೋ ಮಾಹಿತಿಯನ್ನು ಹುಡುಕಾಡುವಾಗ ಕೆಲ ಬಾರಿ ಅಪಾಯಕಾರಿ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿಬಿಡುವ ಸಾಧ್ಯತೆಯಿರುತ್ತದೆ. ಈ ಲಿಂಕ್‌ಗಳು ನಮ್ಮ ಮಾಹಿತಿಯನ್ನು ಕದಿಯಬಲ್ಲ ವಂಚಕ ವೆಬ್‌ಸೈಟ್‌ಗೆ ಸಂಪರ್ಕ ಕಲ್ಪಿಸಬಲ್ಲವು. ನೀವು ಹುಡುಕುತ್ತಿರುವ ವೆಬ್‌ಸೈಟ್ ಹೆಸರನ್ನೇ ಹೋಲುವ ಹಾಗೂ ಅದೇ ರೀತಿ ವಿನ್ಯಾಸ ಮಾಡಿರುವ ಈ ಸೈಟ್‌ಗಳನ್ನು ವಂಚಿಸಲೆಂದೇ ಸೃಷ್ಟಿಸಲಾಗಿರುತ್ತದೆ. ಸರ್ಚ್ ಎಂಜಿನ್ ಆಪ್ಟಿಮೈಸೇಷನ್ ಟ್ರಿಕ್‌ಗಳಲ್ಲಿ ಪಳಗಿರುವ ಸೈಬರ್ ಕ್ರಿಮಿನಲ್‌ಗಳು ಇಂಥ ವೆಬ್‌ಸೈಟ್‌ಗಳನ್ನು ತಯಾರಿಸುತ್ತಾರೆ. ಇಂಥ ವಂಚನೆಯನ್ನು ಬ್ಲ್ಯಾಕ್ ಎಸ್‌ಇಓ ಎಂದು ಕರೆಯಲಾಗುತ್ತದೆ.

  ಹಣಕಾಸು ವ್ಯವಹಾರಕ್ಕಾಗಿ ಪ್ರತ್ಯೇಕ ಕಂಪ್ಯೂಟರ್ ಇಟ್ಟುಕೊಳ್ಳಿ

  ನೀವು ಅತಿ ಹೆಚ್ಚಿನ ಪ್ರಮಾಣದಲ್ಲಿ ಆನ್‌ಲೈನ್ ಹಣಕಾಸು ವ್ಯವಹಾರ ನಡೆಸುವವರಾಗಿದ್ದರೆ ಇದಕ್ಕಾಗಿಯೇ ಪ್ರತ್ಯೇಕ ಕಂಪ್ಯೂಟರ್ ವ್ಯವಸ್ಥೆ ಮಾಡಿಕೊಳ್ಳುವುದು ಒಳಿತು. ಇದರಲ್ಲಿ ಎಚ್‌ಟಿಟಿಪಿಎಸ್ ಸುರಕ್ಷಿತ ವೆಬ್‌ಸೈಟ್‌ಗಳು ಮಾತ್ರ ತೆರೆದುಕೊಳ್ಳುವ ಹಾಗೆ ಆಂಟಿ ವೈರಸ್ ಸೆಟಿಂಗ್ ಮಾಡಿಕೊಳ್ಳಿ. ದಿನನಿತ್ಯದ ಸೋಶಿಯಲ್ ಮೀಡಿಯಾ ಅಥವಾ ಇನ್ನಿತರ ಮಾಹಿತಿ ಹುಡುಕಾಡಲು ಈ ಸಿಸ್ಟಂ ಬಳಸಲೇಬೇಡಿ.

  ಇ-ಕಾಮರ್ಸ್ ವೆಬ್‌ಸೈಟ್‌ಗಳಿಗಾಗಿ ಪ್ರತ್ಯೇಕ ಮೇಲ್ ಐಡಿ ಇರಲಿ

  ಆನ್‌ಲೈನ್ ಮೂಲಕ ಆಗಾಗ ಖರೀದಿ ಮಾಡುವವರು ನೀವಾಗಿದ್ದರೆ ಇದಕ್ಕಾಗಿಯೇ ಪ್ರತ್ಯೇಕ ಇಮೇಲ್ ಐಡಿ ಇಟ್ಟುಕೊಳ್ಳುವುದು ಸರಿಯಾದ ಕ್ರಮವಾಗಿದೆ. ಬೇರೆ ಯಾವುದೇ ವೆಬ್‌ಸೈಟ್‌ಗಳಿಗೆ ಈ ಮೇಲ್ ಐಡಿ ನೀಡದಿರಿ. ಮೇಲ್ ಬಾಕ್ಸ್‌ನಲ್ಲಿ ತಿಳಿದಿರುವ ಮೇಲ್‌ಗಳು ಮಾತ್ರ ಇರುವಂತೆ ನೋಡಿಕೊಂಡರೆ ವಂಚಕ ಮೇಲ್‌ಗಳು, ಲಿಂಕ್‌ಗಳನ್ನು ಸುಲಭವಾಗಿ ಗುರುತಿಸಬಹುದು.

  ಆನ್‌ಲೈನ್ ಶಾಪಿಂಗ್‌ ವಂಚನೆಯ ಬಲೆಗೆ ಬೀಳದಿರಿ

  ಆನ್‌ಲೈನ್ ಖರೀದಿ ವ್ಯವಹಾರಗಳಲ್ಲಿ ಹಣಕಾಸು ವಂಚನೆ ಅಷ್ಟೇ ಅಲ್ಲದೆ ಅನೇಕ ಬಾರಿ ಸರಕುಗಳನ್ನು ನೀಡುವಲ್ಲಿ ಸಹ ಮೋಸ ಮಾಡಲಾಗುತ್ತದೆ. ಯಾವುದೋ ವಸ್ತುವಿನ ಖರೀದಿಗೆ ನೀವು ಪೂರ್ಣ ಹಣವನ್ನು ಸಂದಾಯ ಮಾಡಿದಾಗ ಬೇಕಾದ ವಸ್ತುವನ್ನು ಕಳುಹಿಸದಿರಬಹುದು ಅಥವಾ ನಕಲಿ ಸರಕನ್ನು ಕಳಿಸಿ ಮೋಸ ಮಾಡಬಹುದು. ಅಸಲಿ ಹಾಗೂ ನಕಲಿ ಇ-ಕಾಮರ್ಸ್ ವೆಬ್‌ಸೈಟ್‌ಗಳ ಬಗ್ಗೆ ಅರಿತುಕೊಳ್ಳುವುದರಿಂದ ಈ ರೀತಿಯ ವಂಚನೆಗಳಿಂದ ಪಾರಾಗಬಹುದು.

  ಪಾಸ್‌ವರ್ಡ್ ಮ್ಯಾನೇಜರ್ ಉಪಯೋಗಿಸಿ

  ನೀವು ಹತ್ತಾರು ಆನ್‌ಲೈನ್ ಅಕೌಂಟ್‌ಗಳನ್ನು ಬಳಸುತ್ತಿದ್ದರೆ ಅವುಗಳ ಅನೇಕ ಪಾಸ್‌ವರ್ಡ್‌ಗಳನ್ನು ನೆನಪಿಟ್ಟುಕೊಳ್ಳುವ ಸಮಸ್ಯೆಯಿಂದ ಪಾರಾಗಬಯಸುವಿರಾದರೆ ಪಾಸ್‌ವರ್ಡ್ ಮ್ಯಾನೇಜರ್ ಉಪಯೋಗಿಸುವುದು ಸೂಕ್ತ. ಎಲ್ಲ ಪಾಸ್‌ವರ್ಡ್‌ಗಳನ್ನು ಒಂದೆಡೆ ಎನ್‌ಕ್ರಿಪ್ಷನ್ ಮಾಡಿ ನೆನಪಿಟ್ಟುಕೊಂಡು ಒಂದೇ ಪಾಸ್‌ವರ್ಡ್‌ನ ಅನುಕೂಲತೆಯನ್ನು ಈ ಪಾಸ್‌ವರ್ಡ್ ಮ್ಯಾನೇಜರ ಒದಗಿಸುತ್ತದೆ. ಜೊತೆಗೆ ಎಲ್ಲ ಅಕೌಂಟ್‌ಗಳಿಗೆ ಒಂದೇ ಪಾಸ್‌ವರ್ಡ್ ಇಡುವ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಬಹುತೇಕ ಆಂಟಿ ವೈರಸ್ ಹಾಗೂ ಇಂಟರನೆಟ್ ಸೆಕ್ಯುರಿಟಿ ಉತ್ಪನ್ನಗಳಲ್ಲಿ ಈ ಪಾಸ್‌ವರ್ಡ್ ಮ್ಯಾನೇಜರ್ ಸೌಲಭ್ಯವಿರುತ್ತದೆ. ಆಪಲ್‌ನ ಎಲ್ಲ ಉತ್ಪನ್ನಗಳಲ್ಲಿ 'ಕೀ ಚೇನ್ ಎಕ್ಸೆಸ್' ಎಂಬ ಹೆಸರಿನ ಪಾಸ್‌ವರ್ಡ್ ಭದ್ರತೆ ವ್ಯವಸ್ಥೆ ಇನ್ ಬಿಲ್ಟ್ ಆಗಿರುತ್ತದೆ.

  ಸಾರ್ವಜನಿಕ ಕಂಪ್ಯೂಟರ್, ವೈಫೈ ಬಳಕೆ ಬೇಡ

  ಪಬ್ಲಿಕ್ ವೈಫೈ ನೆಟ್‌ವರ್ಕ್‌ಗಳ ಮೂಲಕ ಹಣಕಾಸು ವ್ಯವಹಾರ ಮಾಡಲೇಬೇಡಿ. ಯಾವುದೇ ಕೀ ಅಥವಾ ಪಾಸ್‌ವರ್ಡ್ ಇಲ್ಲದೆ ಯಾರು ಬೇಕಾದರೂ ಈ ಅಸುರಕ್ಷಿತ ನೆಟ್‌ವರ್ಕ್‌ಗೆ ಪ್ರವೇಶ ಪಡೆಯಬಹುದಾಗಿದೆ. ನಿಮ್ಮ ಲಾಗಿನ್ ಮಾಹಿತಿಗಳನ್ನು ಹ್ಯಾಕರ್‌ಗಳು ಕದಿಯದಂತಿರಲು ಯಾವುದೇ ಸುರಕ್ಷತಾ ವ್ಯವಸ್ಥೆಗಳನ್ನು ಈ ಪಬ್ಲಿಕ್ ವೈಫೈ ನೆಟ್‌ವರ್ಕ್‌ಗಳಲ್ಲಿ ಅಳವಡಿಸಲಾಗಿರುವುದಿಲ್ಲ.

  ನಿಮ್ಮ ಮಾಹಿತಿ ನಿಮ್ಮ ಬಳಿಯೇ ಇರಲಿ

  ನಿಮ್ಮ ವೈಯಕ್ತಿಕ ಹಣಕಾಸು ದಾಖಲೆಗಳ ಮಾಹಿತಿಯನ್ನು ಕಳವು ಮಾಡಲು ವಂಚಕರು ಪ್ರಯತ್ನಿಸುತ್ತಲೇ ಇರುತ್ತಾರೆ. ನಕಲಿ ಸೈಟ್‌ಗಳ ಮೂಲಕ ಕಾರ್ಡ್‌ಗಳ ಡೇಟಾ ಕದಿಯುವುದು, ಕಾರ್ಡ್ ಮೂಲಕ ಪಾವತಿ ಸಂದರ್ಭದಲ್ಲಿ ಕಾರ್ಡ್ ಸ್ಕ್ಯಾನರ್ ಮೂಲಕ ಮಾಹಿತಿ ಕಾಪಿ ಮಾಡಿಕೊಳ್ಳುವುದು ಮುಂತಾದ ವಂಚನೆಯ ಯತ್ನಗಳನ್ನು ವಂಚಕರು ಮಾಡುತ್ತಲೇ ಇರುತ್ತಾರೆ. ಹಾಗಾಗಿ ಎಲ್ಲಿಯಾದರೂ ಹಣಕಾಸು ಮಾಹಿತಿ ತುಂಬುವಾಗ ಹುಷಾರಾಗಿರಬೇಕು.

  ನಂಬಿಕಾರ್ಹವಲ್ಲದ ಆಪ್ ಡೌನ್ಲೋಡ್ ಮಾಡಬೇಡಿ

  ಮಾಲವೇರ್ ಹೊಂದಿರುವ ಆಪ್‌ಗಳ ಮೂಲಕ ಸ್ಮಾರ್ಟ್ ಫೋನ್ ಮೇಲೆ ಸಂಪೂರ್ಣ ಹಿಡಿತ ಸಾಧಿಸುವ ತಂತ್ರಜ್ಞಾನವನ್ನು ಸೈಬರ್ ಕ್ರಿಮಿನಲ್‌ಗಳು ತಯಾರಿಸಿದ್ದಾರೆ. ಕಳೆದ ಕೆಲ ವರ್ಷಗಳಲ್ಲಿ ಆಂಡ್ರಾಯ್ಡ ಫೋನ್‌ಗಳು ಹ್ಯಾಕ್ ಆಗುವ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ. ಆದ್ದರಿಂದ ಗೊತ್ತಿರದ ಕಂಪನಿ ತಯಾರಿಸಿರುವ, ನಂಬಿಕಾರ್ಹವಲ್ಲದ ಆಪ್‌ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಡಿ.

  ಸಂಶಯಾಸ್ಪದ ವ್ಯವಹಾರಗಳ ಮೆಸೇಜ್ ಗಮನಿಸಿ

  ನಿಮ್ಮ ಬ್ಯಾಂಕ್ ಅಕೌಂಟ್ ಬಗ್ಗೆ ಎಸ್ಸೆಮ್ಮೆಸ್ ಅಲರ್ಟ್ ಸೌಲಭ್ಯವನ್ನು ಇನ್ನೂ ಪಡೆದುಕೊಳ್ಳದಿದ್ದಲ್ಲಿ, ಆದಷ್ಟು ಬೇಗ ಈ ಸೇವೆಯನ್ನು ಚಾಲನೆಗೊಳಿಸಿ. ನೀವು ನಡೆಸದ ಯಾವುದೇ ಹಣಕಾಸು ವ್ಯವಹಾರದ ಬಗ್ಗೆ ಸಂದೇಶ ಬಂದಲ್ಲಿ ತಕ್ಷಣ ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ ತಿಳಿಸಿ ಹಾಗೂ ಎಲ್ಲ ಕಾರ್ಡ್‌ಗಳನ್ನು ಕ್ಯಾನ್ಸಲ್ ಮಾಡಿ. ಸೂಕ್ತ ಸಮಯದಲ್ಲಿ ಬ್ಯಾಂಕಿಗೆ ತಿಳಿಸಿದಲ್ಲಿ ನಿಮ್ಮ ಹಣ ಸುರಕ್ಷಿತವಾಗಿರುತ್ತದೆ ಹಾಗೂ ಆರ್‌ಬಿಐ ನಿಯಮಾವಳಿಗಳ ಪ್ರಕಾರ ನಿಮ್ಮ ಹಣಕಾಸು ನಷ್ಟವನ್ನು ಭರಿಸಲು ಬ್ಯಾಂಕ್ ಬದ್ಧವಾಗಿರುತ್ತದೆ.

  ಸ್ಕ್ರೀನ್ ಲಾಕ್ ಇಟ್ಟುಕೊಳ್ಳಿ

  ನಿಮ್ಮ ಸ್ಮಾರ್ಟ್ ಫೋನಿಗೆ ಸ್ಕ್ರೀನ್ ಲಾಕ್ ಸಕ್ರಿಯಗೊಳಿಸಿ ಹಾಗೂ ಲಭ್ಯವಿದ್ದರೆ ಎರಡು ಹಂತದ ವೆರಿಫೀಕೇಶನ್ ಚಾಲನೆಯಲ್ಲಿಡಿ. ಫೋನ್‌ನಲ್ಲಿನ ಯಾವುದೇ ಮಾಹಿತಿಯನ್ನು ನೀವು ಮುಚ್ಚಿಡುವ ಅವಶ್ಯಕತೆ ಇಲ್ಲದಿದ್ದಾಗಲೂ ಫೋನ್‌ನಲ್ಲಿ ಈ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಇತ್ತೀಚೆಗೆ ಬಹುತೇಕ ಡಿಜಿಟಲ್ ಪಾವತಿ ವ್ಯವಸ್ಥೆಗಳು ಆಪ್ ಆಧಾರಿತವಾಗಿವೆ. ಅಂದರೆ ನಿಮ್ಮ ಫೋನ್ ಕೈಗೆತ್ತಿಕೊಳ್ಳುವ ಯಾರು ಬೇಕಾದರೂ ಇ-ವ್ಯಾಲೆಟ್, ಬ್ಯಾಂಕಿಂಗ್ ಆಪ್‌ಗಳನ್ನು ತೆರೆದು ನೋಡಬಹುದಾಗಿದೆ.

  ಲಾಟರಿ, ಇಮೇಲ್ ಸ್ಕ್ಯಾಮ್‌ಗಳಿಗೆ ಬಲಿಯಾಗಬೇಡಿ

  ಆಫ್ರಿಕಾದ ಯಾವುದೋ ದೇಶದಲ್ಲಿ ಕುಳಿತು ನಿಮಗೆ ಲಾಟರಿ ಗೆದ್ದಿರುವ ವಂಚಕ ಇಮೇಲ್ ಕಳಿಸುವ ಬಹುದೊಡ್ಡ ಜಾಲ ಸಕ್ರಿಯವಾಗಿದೆ. ಯಾವುದೋ ಕಂಪನಿಯ ಲಕ್ಕಿ ಡ್ರಾ ನಲ್ಲಿ ನೀವು ಲಕ್ಷಾಂತರ ಡಾಲರ್ ಗೆದ್ದಿರುವುದಾಗಿಯೂ, ಆ ಹಣ ಪಡೆಯಲು ನೋಂದಣಿ ಶುಲ್ಕ ನೀಡುವಂತೆ ಹಾಗೂ ನಿಮ್ಮ ಅಕೌಂಟ್ ಡಿಟೇಲ್ಸ್ ನೀಡುವಂತೆ ಇವರು ಎಸ್ಸೆಮ್ಮೆಸ್ ಹಾಗೂ ಇಮೇಲ್ ಕಳಿಸುತ್ತಿರುತ್ತಾರೆ. ಅದೆಷ್ಟು ಬಾರಿ ಇಂಥ ವಂಚನೆಗಳ ಬಗ್ಗೆ ಪತ್ರಿಕೆಗಳಲ್ಲಿ ಬಂದರೂ ಮತ್ತೆ ಮತ್ತೆ ಜನ ಮೋಸ ಹೋಗುತ್ತಲೇ ಇರುವುದು ವಿಪರ್ಯಾಸವಾಗಿದೆ.

  Read more about: upi banking money finance news online
  English summary

  12 Golden Rules To Ensure Safe Online Payments

  These comprise of various forms of payments such as debit/credit cards, net banking, mobile wallets, UPI, etc.
  Story first published: Monday, September 17, 2018, 8:26 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more