For Quick Alerts
ALLOW NOTIFICATIONS  
For Daily Alerts

  ವರ್ಷಕ್ಕೊಮ್ಮೆ ಸಿಗುವ ಬೋನಸ್ ಹಣವನ್ನು ಬಳಸಿಕೊಳ್ಳುವ ಬಗೆ ಹೇಗೆ?

  |

  ಮಾಸಿಕ ಸಂಬಳ ಪಡೆದು ಜೀವನ ಸಾಗಿಸುವ ಉದ್ಯೋಗಿಗಳಿಗೆ ವರ್ಷಕ್ಕೊಮ್ಮೆ ಸಿಗುವ ಬೋನಸ್ ಸಮಯ ಆನಂದದ ಕ್ಷಣವಾಗಿರುತ್ತದೆ. ಆ ತಿಂಗಳು ಸಂಬಳದ ಜೊತೆಗೆ ಬ್ಯಾಂಕ್ ಖಾತೆಗೆ ಜಮೆಯಾಗುವ ಹೆಚ್ಚಿನ ಹಣ ಸಹಜವಾಗಿಯೇ ಖುಷಿಯನ್ನು ಇಮ್ಮಡಿಗೊಳಿಸುತ್ತದೆ. ಹೀಗೆ ಹೆಚ್ಚು ಹಣ ಖಾತೆಯಲ್ಲಿರುವಾಗ ದೂರದೂರಿಗೆ ಜಾಲಿ ಟ್ರಿಪ್ ಮಾಡುವ ಅಥವಾ ಬಹುಕಾಲದ ಕನಸಾದ ಐಫೋನ್ ಕೊಳ್ಳುವ ಆಸೆಗಳು ಗರಿಗೆದರಿ ನಿಲ್ಲುತ್ತವೆ. ಆದರೆ ಮುಂದಾಲೋಚನೆಯಿಲ್ಲದೆ ಮಾಡುವ ಒಂದೇ ಒಂದು ಖರ್ಚಿನಿಂದ ಸಂಪೂರ್ಣ ಬೋನಸ್ ಮೊತ್ತ ಶೂನ್ಯವಾಗಿ ನಂತರ ಪರಿತಪಿಸುವಂತಾಗಬಾರದು.

  ವರ್ಷಕ್ಕೊಮ್ಮೆ ಸಿಗುವ ಬೋನಸ್ ಹಣವನ್ನು ಸದುಪಯೋಗಪಡಿಸಿಕೊಳ್ಳಲು ಹಲವಾರು ಉತ್ತಮ ಮಾರ್ಗಗಳಿವೆ. ನಿಮಗಿರುವ ಕಾಲಾವಕಾಶ, ಹೂಡಿಕೆಯ ಅಗತ್ಯತೆ ಮತ್ತು ತೆರಿಗೆ ಬಾಧ್ಯತೆಗಳನ್ನು ನೋಡಿಕೊಂಡು ಸಂಪೂರ್ಣ ಅಥವಾ ಭಾಗಶಃ ಬೋನಸ್ ಹಣವನ್ನು ಮತ್ತೆ ನಿಮಗಾಗಿ ಹಣ ದುಡಿದು ಕೊಡುವ ರೀತಿಯಲ್ಲಿ ಹೂಡಿಕೆ ಮಾಡಬಹುದು. ಪ್ರಸ್ತುತ ಯಾವ ಹಣಕಾಸು ಅಗತ್ಯತೆಗೆ ಹೆಚ್ಚು ಗಮನ ಕೊಡಬೇಕಿದೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸಿ. ಇನ್ನೇನು ಡಿಸೆಂಬರ್ 31ನೇ ದಿನಾಂಕ ಹತ್ತಿರ ಬರುತ್ತಿದ್ದು, ಹಲವಾರು ಉದ್ಯೋಗಿಗಳು ವರ್ಷಾಂತ್ಯದ ಬೋನಸ್ ಪಡೆಯುವ ದಿನ ಸಮೀಪಿಸುತ್ತಿದೆ.
  ಹೊಸ ವರ್ಷದ ಆಗಮನದ ಸಂದರ್ಭದಲ್ಲಿ ಸಂಭ್ರಮಾಚರಣೆ ಮಾಡಲು ಮರೆಯಬೇಡಿ. ಆದರೆ ಹಾಗಂತ ವರ್ಷಾಂತ್ಯ ಸಿಗುವ ಬೋನಸ್ ಹಣವನ್ನೆಲ್ಲ ಸಂಭ್ರಮಾಚರಣೆಗಾಗಿ ಅಥವಾ ಜಾಲಿ ಟ್ರಿಪ್‌ಗಾಗಿ ಖರ್ಚು ಮಾಡುವುದು ಜಾಣತನವಲ್ಲ. ಬೋನಸ್‌ನ ಕೆಲ ಭಾಗವನ್ನು ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡುವುದು, ಹಳೆಯ ಸಾಲದ ಬಾಕಿ ಕಂತು ತೀರಿಸುವುದು ಹೀಗೆ ಜಾಣ್ಮೆಯಿಂದ ಲೆಕ್ಕಾಚಾರ ಹಾಕಿ ಹಣಕಾಸಿನ ನಿರ್ವಹಣೆ ಮಾಡಬೇಕಾಗುತ್ತದೆ. ಕಷ್ಟಪಟ್ಟು ದುಡಿದಾಗ ಸಿಕ್ಕ ಬೋನಸ್ ಮೊತ್ತವನ್ನು ಸೂಕ್ತ ರೀತಿಯಲ್ಲಿ ಹೇಗೆ ನಿರ್ವಹಿಸಬಹುದು ಎಂಬ ಬಗ್ಗೆ ಈ ಅಂಕಣದಲ್ಲಿ ಮಹತ್ವದ ಟಿಪ್ಸ್‌ಗಳನ್ನು ನೀಡಲಾಗಿದ್ದು, ನೀವೂ ತಿಳಿದುಕೊಳ್ಳಿ.

   

  ಬೋನಸ್ ಹಣದ ಸದುಪಯೋಗಕ್ಕೆ ಪ್ರಮುಖ ಟಿಪ್ಸ್‌ಗಳು:

  1. ದುಬಾರಿ ಹಾಗೂ ದೀರ್ಘಾವಧಿ ಸಾಲಗಳನ್ನು ತೀರಿಸಿ

  ಇತ್ತೀಚೆಗೆ ಗೃಹ ಸಾಲದ ಬಡ್ಡಿ ದರಗಳು ನಿಧಾನವಾಗಿ ಹೆಚ್ಚಾಗುತ್ತಿವೆ. ಹೀಗಾಗಿ ಆದಷ್ಟೂ ಈ ಸಾಲಗಳ ಹೊರೆಯನ್ನು ಕಡಿಮೆ ಮಾಡಿಕೊಳ್ಳುವುದರತ್ತ ಗಮನಹರಿಸಿ. ಕೈಯಲ್ಲಿ ಕೊಂಚ ಹೆಚ್ಚುವರಿ ಹಣ ಇದ್ದಾಗಲೇ ಈ ಹೊರೆ ಕಡಿಮೆ ಮಾಡಿಕೊಳ್ಳಲು ಸಾಧ್ಯ. ಕಡಿಮೆ ಬಡ್ಡಿದರದ ಗೃಹಸಾಲಗಳನ್ನು ಮರುಪಾವತಿ ಮಾಡುವುದಕ್ಕಿಂತ ಹೆಚ್ಚು ಆದಾಯ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂದು ಅನೇಕರು ನಿಮಗೆ ಸಲಹೆ ನೀಡಬಹುದು ಅಥವಾ ನಿಮ್ಮ ಅನಿಸಿಕೆಯೂ ಇದೇ ಆಗಿರಬಹುದು. ಆದರೆ ಸಾಲಮುಕ್ತರಾದಾಗ ಒಟ್ಟಾರೆ ಜೀವನದಲ್ಲಿ ನೆಮ್ಮದಿ ಹೆಚ್ಚಾಗುತ್ತದೆ ಹಾಗೂ ನಿಮ್ಮ ಕ್ರೆಡಿಟ್ ಸ್ಕೋರ್ ಸಹ ಸುಧಾರಿಸುತ್ತದೆ. ಇದಕ್ಕಿಂತ ಖುಷಿ ಬೇರೇನೂ ಇಲ್ಲ.
  ಸಾಲಗಳ ಮರುಪಾವತಿ ಮಾಡುವಾಗ ಅವುಗಳ ಬಡ್ಡಿದರಗಳನ್ನು ನೋಡಿಕೊಂಡು ಯಾವ ಸಾಲ ಮೊದಲು ತೀರಿಸಬೇಕೆಂಬುದನ್ನು ನಿರ್ಧರಿಸಿ. ಶೇ.20 ರಿಂದ 22 ರವರೆಗೆ ಬಡ್ಡಿ ವಿಧಿಸುವ ಕ್ರೆಡಿಟ್ ಕಾರ್ಡ ಬಾಕಿ, ನಂತರ ವೈಯಕ್ತಿಕ ಸಾಲಗಳನ್ನು ತೀರಿಸಲು ಯೋಜನೆ ತಯಾರಿಸಿ. ಆದಾಗ್ಯೂ ಅವಧಿಪೂರ್ವ ಸಾಲ ತೀರಿಸಿದರೆ ಸಾಲ ನೀಡಿದ ಸಂಸ್ಥೆ ಹೆಚ್ಚುವರಿ ಶುಲ್ಕ ವಿಧಿಸುತ್ತದೆಯಾ ಎಂಬುದನ್ನು ಪರಿಶೀಲಿಸಿ.
  ಆದಷ್ಟೂ ಕಾರಲೋನ್‌ಗಳಂಥ ಚಿಕ್ಕ ಸಾಲಗಳನ್ನು ಮೊದಲು ತೀರಿಸಲು ಯತ್ನಿಸಿ. ತೆರಿಗೆ ವಿನಾಯಿತಿಯ ಸೌಲಭ್ಯ ನೀಡುವ ಗೃಹಸಾಲ ಹಾಗೂ ಶೈಕ್ಷಣಿಕ ಸಾಲ ತೀರಿಸುವಿಕೆ ಕೊನೆಯ ಆದ್ಯತೆಯಾಗಿರಲಿ.

  2. ಒಂದೇ ಕಂತಿನ ಟರ್ಮ ಇನ್ಸೂರೆನ್ಸ್ ಖರೀದಿಸಿ

  ಒಂದೇ ಕಂತಿನ ಟರ್ಮ ಲೈಫ್ ಇನ್ಸೂರೆನ್ಸ್ ಪಾಲಿಸಿ ಕೊಂಡಲ್ಲಿ ಅದು 60 ನೇ ವಯಸ್ಸಿನವರೆಗೂ ನಿಮಗೆ ಜೀವ ವಿಮಾ ರಕ್ಷಣೆ ನೀಡಬಲ್ಲದು. ನಮ್ಮ ದೇಶದಲ್ಲಿ ಲಕ್ಷಾಂತರ ಜನತೆ ಜೀವ ವಿಮಾ ಪಾಲಿಸಿ ಕೊಂಡರೂ ಅದರ ಕಂತುಗಳನ್ನು ನಿಯಮಿತವಾಗಿ ಪಾವತಿಸದೆ ಪಾಲಿಸಿ ಲ್ಯಾಪ್ಸ್ ಮಾಡಿಕೊಳ್ಳುತ್ತಾರೆ. ನೀವೂ ಅಂಥವರಲ್ಲಿ ಒಬ್ಬರಾಗಿದ್ದರೆ ಸಿಂಗಲ್ ಪ್ರೀಮಿಯಂ ಟರ್ಮ ಇನ್ಸೂರೆನ್ಸ್ ಅನ್ನು ಈಗಲೇ ಮಾಡಿಸಿ. ಒಂದು ಬಾರಿ ದೊಡ್ಡ ಮೊತ್ತ ಪಾವತಿಸಿದರೂ ಆಗಾಗ ಕಂತು ಕಟ್ಟುವ ರಗಳೆ ಇರುವುದಿಲ್ಲ. ಇದು ದೀರ್ಘಾವಧಿಯ ಜೀವ ವಿಮಾ ಸುರಕ್ಷತೆ ನೀಡುತ್ತದೆ ಎಂಬುದು ಗಮನದಲ್ಲಿರಲಿ.
  ಆದಾಗ್ಯೂ ಏಕಕಂತಿನ ಜೀವವಿಮಾ ಯೋಜನೆಗಳು ತುಸು ದುಬಾರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಉದಾಹರಣೆಗೆ ನೋಡುವುದಾದರೆ, 30 ವರ್ಷದ ವ್ಯಕ್ತಿಯೊಬ್ಬ ಮುಂದಿನ 30 ವರ್ಷಗಳವರೆಗೆ 1 ಕೋಟಿ ರೂ. ಮೊತ್ತದ ಜೀವವಿಮಾ ಸುರಕ್ಷೆ ಪಡೆಯಬೇಕಾದರೆ 1.57 ಲಕ್ಷ ರೂ.ಗಳನ್ನು ಏಕಕಂತಿನಲ್ಲಿ ಪಾವತಿಸಬೇಕಾಗುತ್ತದೆ. ಆದರೆ ಇದನ್ನೇ ವಾರ್ಷಿಕ ಕಂತುಗಳ ಆಧಾರದಲ್ಲಿ ಪಡೆದರೆ ವರ್ಷಕ್ಕೆ ಕೇವಲ 9 ಸಾವಿರ ರೂ. ಕಂತು ಕಟ್ಟಬೇಕಾಗುತ್ತದೆ. ಇದನ್ನು ಇನ್ನೊಂದು ರೀತಿಯಲ್ಲಿ ಲೆಕ್ಕಾಚಾರ ಹಾಕಿ ನೋಡೋಣ. ಇದೇ 1.57 ಲಕ್ಷ ರೂ.ಗಳನ್ನು ಶೇ.7 ಬಡ್ಡಿದರದಲ್ಲಿ ಬ್ಯಾಂಕಿನಲ್ಲಿ ಎಫ್‌ಡಿ ಮಾಡಿಸಿದರೆ ಅದಕ್ಕೆ ವರ್ಷಕ್ಕೆ 11 ಸಾವಿರ ರೂ. ಬಡ್ಡಿ ಆದಾಯ ಸಿಗುತ್ತದೆ. ಅಂದರೆ ಈ ಬಡ್ಡಿಯಿಂದಲೇ ವಾರ್ಷಿಕ ವಿಮಾ ಕಂತುಗಳನ್ನು ಕಟ್ಟಿ ಬಿಡಬಹುದು. ಹೀಗಾಗಿ ಏಕಕಂತಿನ ಜೀವವಿಮಾ ಪಾಲಿಸಿಗಳು ದುಬಾರಿ ಎಂಬುದು ಸತ್ಯ. ಇದನ್ನೆಲ್ಲ ಅಳೆದು ತೂಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ.

  3. ಕುಟುಂಬಕ್ಕೆ ಆರೋಗ್ಯ ವಿಮೆಯ ರಕ್ಷಣೆ ಪಡೆದುಕೊಳ್ಳಿ

  ಈಗಾಗಲೇ ಕುಟುಂಬಕ್ಕಾಗಿ ಯಾವುದೇ ಆರೋಗ್ಯ ವಿಮೆ ಕೊಂಡಿಲ್ಲವಾದರೆ ಈ ಬಗ್ಗೆ ಪರಿಶೀಲಿಸಿ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ನಿರ್ವಹಣೆ ದುಬಾರಿಯಾಗುತ್ತಿದೆ. ಹೀಗಾಗಿ ಕುಟುಂಬದ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ವಿಮೆ ಮಾಡಿಸುವುದು ಸೂಕ್ತ. ಗುಂಪು ವಿಮಾ ಯೋಜನೆಗಳು ಇಡೀ ಕುಟುಂಬಕ್ಕೆ ಸಾಕಾಗುವಷ್ಟು ವಿಮಾ ಸುರಕ್ಷೆ ನೀಡಲಾರವು. ಈಗ ಬೋನಸ್ ಹಣ ಕೈಯಲ್ಲಿರುವಾಗ ಆರೋಗ್ಯ ವಿಮೆ ಪಡೆದುಕೊಂಡಲ್ಲಿ ಕುಟುಂಬದ ಯಾರಿಗೇ ಅನಾರೋಗ್ಯವಾದರೂ ಆಸ್ಪತ್ರೆಯ ಖರ್ಚುಗಳನ್ನು ಸುಲಭವಾಗಿ ನಿಭಾಯಿಸಬಹುದು.
  ಆದರೆ ಕುಟುಂಬ ಆರೋಗ್ಯ ವಿಮಾ ಪಾಲಿಸಿಗಳು ಚಿಕ್ಕ ಕುಟುಂಬಗಳಿಗೆ ಹೆಚ್ಚು ಸೂಕ್ತವಾಗಿವೆ. ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಮತ್ತೊಬ್ಬ ಕುಟುಂಬ ಸದಸ್ಯನಿಗೂ ವಿಮಾ ರಕ್ಷಣೆ ಪಡೆಯಬಹುದು. ಇದರಿಂದ ಆತನಿಗಾಗಿ ಪ್ರತ್ಯೇಕ ಪಾಲಿಸಿ ಮಾಡಿಸುವುದನ್ನು ತಪ್ಪಿಸಬಹುದು.
  ಉದಾಹರಣೆಗೆ ನೋಡಿದರೆ, 30 ವರ್ಷದ ವ್ಯಕ್ತಿಯೊಬ್ಬನಿಗೆ ಆರೋಗ್ಯ ವಿಮೆ ಪಡೆಯಲು ವರ್ಷಕ್ಕೆ 11,750 ರೂ. ಕಂತು ಪಾವತಿಸಬೇಕಾಗುತ್ತದೆ. ಅದೇ ಪತಿ ಹಾಗೂ ಪತ್ನಿ ಇಬ್ಬರಿಗೂ ಫ್ಯಾಮಿಲಿ ಫ್ಲೋಟರ್ ವಿಮಾ ಪಾಲಿಸಿ ಕೊಂಡರೆ ವರ್ಷಕ್ಕೆ ಕೇವಲ 17,624 ರೂ. ಪ್ರೀಮಿಯಂ ಪಾವತಿಸಿದರೆ ಸಾಕು. ಹಾಗೆಯೇ ಕುಟುಂಬದ ನಾಲ್ವರಿಗೆ (40 ವರ್ಷದೊಳಗಿನ ಇಬ್ಬರು ದೊಡ್ಡವರು, ಇಬ್ಬರು ಮಕ್ಕಳಿಗೆ) ವರ್ಷಕ್ಕೆ 25,204 ರೂ. ಪ್ರೀಮಿಯಂ ಪಾವತಿಸಿ ಫ್ಯಾಮಿಲಿ ಫ್ಲೋಟರ್ ಯೋಜನೆ ಪಡೆದುಕೊಳ್ಳಬಹುದು.

  4. ಸಾಲಗಳನ್ನು ಬೇಗ ಮುಗಿಸಿಕೊಳ್ಳಿ

  ಈಗಾಗಲೇ ಇರುವ ಸಾಲದ ಕೆಲ ಕಂತುಗಳನ್ನು ಅವಧಿಪೂರ್ವ ಪಾವತಿಸಬಹುದು. ಇದರಿಂದ ಇಎಂಐ ಹೊರೆ ಕಡಿಮೆಯಾಗಿ ಬೇಗ ಸಾಲಮುಕ್ತರಾಗಲು ಸಹಾಯವಾಗುತ್ತದೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಲು ಸಹ ಕಾರಣವಾಗುತ್ತದೆ. ಅಲ್ಲದೆ ಹೊಸ ಹೂಡಿಕೆಗಳತ್ತ ನೀವು ಗಮನಹರಿಸಬಹುದು.

  5. ತುರ್ತು ಪರಿಸ್ಥಿತಿಗಳಿಗಾಗಿ ಹಣ ಕಾಯ್ದಿಡಿ

  ಯಾವುದೋ ತುರ್ತು ಸಂದರ್ಭದಲ್ಲಿ ನೆರವಾಗುವಂತೆ ಒಂದಿಷ್ಟು ಹಣವನ್ನು ಯಾವಾಗಲೂ ಕಾಯ್ದಿಡುವುದು ಜಾಣತನವಾಗಿದೆ. ನಿಮಗೆ ಅಥವಾ ಕುಟುಂಬದ ಯಾವುದೇ ಸದಸ್ಯರಿಗೆ ಹಠಾತ್ತಾಗಿ ಅನಾರೋಗ್ಯ ಕಾಣಿಸಿಕೊಂಡಾಗ ಅಥವಾ ಇನ್ನಾವುದೋ ಖರ್ಚು ಬಂದಾಗ ಈ ತುರ್ತು ನಿಧಿ ಕೈ ಹಿಡಿಯುತ್ತದೆ. ನೀವು ಮಾಸಿಕ ಪಡೆಯುವ ಸಂಬಳದ ನಾಲ್ಕರಿಂದ ಆರು ಪಟ್ಟು ಮೊತ್ತದಷ್ಟು ಹಣವನ್ನು ತುರ್ತುನಿಧಿಯಾಗಿ ಇಟ್ಟುಕೊಳ್ಳುವುದು ಕ್ಷೇಮವಾಗಿದೆ. ಕೆಲಬಾರಿ ಯಾವುದೋ ಕಾರಣದಿಂದ ಕೆಲಸ ಕಳೆದುಕೊಂಡಾಗ ಈ ಹಣದಿಂದ ಸುಲಭವಾಗಿ ಕೆಲಕಾಲ ಜೀವನ ನಿರ್ವಹಣೆ ಮಾಡಬಹುದು.

  6. ಒಳ್ಳೆಯ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿ

  ನಿಮ್ಮ ಸಾಲಗಳ ಮರುಪಾವತಿ ಹಾಗೂ ತುರ್ತುನಿಧಿಯ ಅಗತ್ಯತೆಗಳನ್ನು ನೀವು ಈಗಾಗಲೇ ಪೂರೈಸಿದ್ದಲ್ಲಿ ಉಳಿದ ಹೆಚ್ಚುವರಿ ಹಣವನ್ನು ಒಳ್ಳೆಯ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಹಣದುಬ್ಬರದ ಪರಿಣಾಮವನ್ನು ಸರಿದೂಗಿಸಬಹುದಾಗಿದೆ. ನಿಮ್ಮಲ್ಲಿರುವ ಹಣ, ನೀವು ಎಷ್ಟು ಕಾಲದವರೆಗೆ ಹೂಡಿಕೆ ಮಾಡಬಹುದು ಹಾಗೂ ರಿಸ್ಕ್ ತಡೆಯುವ ಆಂಶಗಳನ್ನು ಆಧರಿಸಿ ಸೂಕ್ತ ಹೂಡಿಕೆ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ೫ ವರ್ಷ ಅಥವಾ ಅದಕ್ಕೂ ಹೆಚ್ಚು ಕಾಲಾವಧಿಗೆ ಹೂಡಿಕೆ ಮಾಡುವಿರಾದರೆ ಮ್ಯೂಚುವಲ್ ಫಂಡ್, ಎಫ್‌ಡಿ, ಪಿಪಿಎಫ್ ಮುಂತಾದ ಯೋಜನೆಗಳು ನಿಮಗೆ ಸೂಕ್ತವಾಗಿವೆ.

  7. ವಿಮಾ ಸುರಕ್ಷೆ ಹೆಚ್ಚಿಸಿಕೊಳ್ಳಿ

  ತೆರಿಗೆ ವಿನಾಯಿತಿಯ ಸೌಲಭ್ಯ ಪಡೆಯುವ ಅಂತಿಮ ದಿನಾಂಕಗಳು ಬರುವವರೆಗೆ ಕಾಯಬೇಡಿ. ಇನ್ನಷ್ಟು ತೆರಿಗೆ ವಿನಾಯಿತಿ ಸಿಗುವ ಹಾಗಿದ್ದಲ್ಲಿ ನಿಮ್ಮ ವಿಮಾ ಯೋಜನೆಯನ್ನು ವಿಸ್ತರಿಸಿಕೊಳ್ಳಿ. ಬೋನಸ್ ಹಣದಿಂದ ನಿಮ್ಮ ವಿಮಾ ಸುರಕ್ಷತೆಗೆ ಮತ್ತಷ್ಟು ಬಲ ನೀಡಬಹುದು ಎಂಬುದು ಗೊತ್ತಿರಲಿ. ಭವಿಷ್ಯದ ಅಗತ್ಯತೆಗಳನ್ನು ಸೂಕ್ತವಾಗಿ ಪರಾಮರ್ಶಿಸಿ ಬೋನಸ್‌ನಲ್ಲಿನ ಹೆಚ್ಚುವರಿ ಹಣದಿಂದ ಸರಿಯಾದ ವಿಮಾ ಪಾಲಿಸಿ ಕೊಂಡುಕೊಳ್ಳಿ. ಆರೋಗ್ಯ ಸೇವೆಗಳು ತೀರಾ ದುಬಾರಿಯಾಗುತ್ತಿರುವ ಈ ದಿನಗಳಲ್ಲಿ ಸೂಕ್ತ ಆರೋಗ್ಯ ವಿಮೆಯ ಸುರಕ್ಷತೆ ಹೊಂದುವುದು ವಿವೇಕಯುತವಾಗಿದೆ.

  8. ಸಿಪ್, ಇಕ್ವಿಟಿಗಳಲ್ಲಿ ಹೂಡಿಕೆ ಮಾಡಿ

  ಇತ್ತೀಚಿನ ಶೇರು ಮಾರುಕಟ್ಟೆಯ ಸ್ಥಿತ್ಯಂತರಕ್ಕೂ ಮುಂಚೆ ಇಕ್ವಿಟಿ ಯೋಜನೆಗಳು ಬಲು ಆಕರ್ಷಕವಾಗಿದ್ದವು. ಈಗಲೂ ಸಹ ಇವುಗಳಲ್ಲಿನ ದೀರ್ಘಾವಧಿ ಹೂಡಿಕೆ ಉತ್ತಮ ಆದಾಯ ತರಬಲ್ಲದು. ಕೆಲ ಮಟ್ಟಿನ ರಿಸ್ಕ್ ತಡೆಯಬಹುದಾಗಿದ್ದರೆ ಹಾಗೂ ದೀರ್ಘಾವಧಿಯವರೆಗೆ ತಾಳ್ಮೆ ಇದ್ದಲ್ಲಿ ಇಕ್ವಿಟಿ ಫಂಡಗಳಲ್ಲಿ ಹೂಡಿಕೆ ಮಾಡಿ ಉತ್ತಮ ಗಳಿಕೆ ನಿಮ್ಮದಾಗಿಸಿಕೊಳ್ಳಬಹುದು. ಆದರೆ ಒಮ್ಮೆಲೇ ಶೇರು ಮಾರುಕಟ್ಟೆಗೆ ನುಗ್ಗುವ ಮುಂಚೆ ಮೊದಲು ಲಿಕ್ವಿಡ್ ಫಂಡಗಳಲ್ಲಿ ಹೂಡಿಕೆ ಮಾಡಿ. ನಂತರ ಇದನ್ನು ಸಿಪ್ (ಯೋಜನಾಬದ್ಧ ಹೂಡಿಕೆ ಯೋಜನೆ)ಗೆ ವರ್ಗಾಯಿಸಿ. ಹೀಗೆ ಮಾಡಿದಲ್ಲಿ ಎರಡು ರೀತಿಯ ಪ್ರಯೋಜನಗಳಿವೆ. ಮೊದಲನೆಯದಾಗಿ ಸಿಪ್‌ನಲ್ಲಿನ ಹೂಡಿಕೆಗಳು ಮಾರುಕಟ್ಟೆಯ ಏರಿಳಿತಗಳ ಅಪಾಯದಿಂದ ಸುರಕ್ಷೆ ನೀಡುತ್ತವೆ. ಎರಡನೆಯದಾಗಿ, ದೀರ್ಘಾವಧಿಯಲ್ಲಿ ರೂಪಾಯಿ ಬೆಲೆಯು ಸ್ಥಿರವಾದಾಗ ಅದರಿಂದಾಗುವ ಲಾಭಗಳಿಂದ ಆದಾಯ ಹೆಚ್ಚಾಗುತ್ತದೆ.

  9. ಮಕ್ಕಳ ಶಿಕ್ಷಣಕ್ಕಾಗಿ ಉಳಿತಾಯ ಮಾಡಿ

  ಮಕ್ಕಳ ಶೈಕ್ಷಣಿಕ ಅಗತ್ಯತೆಗಳಿಗಾಗಿ ಹೂಡಿಕೆ ಆರಂಭಿಸುವುದು ಅಗತ್ಯವಾಗಿದೆ. ಮಕ್ಕಳ ಶಿಕ್ಷಣಕ್ಕೆ ಹಣ ಹೊಂದಿಸುವುದು ಪಾಲಕರ ಅಗತ್ಯ ಕರ್ತವ್ಯಗಳಲ್ಲೊಂದಾಗಿದೆ. ಪ್ರತಿವರ್ಷ ಶಿಕ್ಷಣದ ಖರ್ಚುವೆಚ್ಚಗಳು ಶೇ.10ರ ದರದಲ್ಲಿ ಏರಿಕೆಯಾಗುತ್ತಿರುವುದನ್ನು ನೋಡಿದರೆ ಇದಕ್ಕಾಗಿ ಎಷ್ಟು ಹಣ ಬೇಕಾಗಬಹುದು ಎಂಬುದು ಅರಿವಾಗುತ್ತದೆ. ಉದಾಹರಣೆಗೆ ನೋಡಿದರೆ, ಕಳೆದ ವಾರ ದೇಶದ ಪ್ರತಿಷ್ಠಿತ ಹೈದರಾಬಾದ್ ಐಐಎಂ ತನ್ನ 2 ವರ್ಷದ ಮ್ಯಾನೇಜಮೆಂಟ್ ಕೋರ್ಸ್ ಫೀಯನ್ನು 21 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. 2007 ರಿಂದೀಚೆಗೆ ಐಐಎಂ ಶುಲ್ಕ ಶೇ.500 ರಷ್ಟು ಹೆಚ್ಚಾಗಿವೆ. ಇನ್ನು ನಿಮ್ಮ ಮಗು ಕಾಲೇಜಿಗೆ ಸೇರುವಾಗ ಫೀ ಎಷ್ಟಾಗಿರಬಹುದು ಎಂಬುದನ್ನು ಊಹೆ ಮಾಡಿಕೊಳ್ಳಿ.
  ನಿಮ್ಮ ಮಗ ಈಗ ತಾನೆ ಶಾಲೆಯಲ್ಲಿದ್ದರೂ ಆತನ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಹಣಕಾಸು ಯೋಜನೆ ತಯಾರಿಸಬೇಕಾಗುತ್ತದೆ. ಇದಕ್ಕಾಗಿ ಸಾಕಷ್ಟು ಕಾಲಾವಕಾಶ ಇರುವಾಗಲೇ ಹೂಡಿಕೆ ಆರಂಭಿಸಿದಲ್ಲಿ ಚಿಕ್ಕ ಕಂತುಗಳಲ್ಲಿ ಹಣ ಉಳಿತಾಯ ಮಾಡುತ್ತ ಹೋಗಬಹುದು. ಆದರೆ ನೀವಿನ್ನೂ ಇದಕ್ಕಾಗಿ ಯಾವುದೇ ಯೋಜನೆ ತಯಾರಿಸಿರದೆ ಇದ್ದಲ್ಲಿ ನಿಮ್ಮ ಬೋನಸ್ ಮೊತ್ತವನ್ನು ಏಕಗಂಟಿನಲ್ಲಿ ಹೂಡಿಕೆ ಮಾಡಬಹುದು. ಸಮಾನವಾಗಿ ಡೆಬ್ಟ್, ಇಕ್ವಿಟಿ ಫಂಡ ಅಥವಾ ಬ್ಯಾಲೆನ್ಸಡ್ ಫಂಡಗಳಲ್ಲಿ ಹೂಡಿಕೆ ಮಾಡಿ ಉತ್ತಮ ಆದಾಯದ ನಿರೀಕ್ಷೆ ಇಟ್ಟುಕೊಳ್ಳಬಹುದು.

  10. ಪಾಲಕರಿಗಾಗಿ ಎಫ್‌ಡಿ ಮಾಡಿಸಿ

  ಹಿರಿಯರ ಹೆಸರಿನಲ್ಲಿ ಉಳಿತಾಯ ಯೋಜನೆಗಳು ತೆರಿಗೆ ವಿನಾಯಿತಿ ಪಡೆಯಲು ಸೂಕ್ತ ಹೂಡಿಕೆ ವಿಧಾನಗಳಾಗಿವೆ. ಫಿಕ್ಸೆಡ್ ಡಿಪಾಸಿಟ್‌ಗಳಲ್ಲಿನ ಆದಾಯ ಕಡಿಮೆಯಾಗಿರುವುದರಿಂದ ಅದರಲ್ಲಿ ಹೂಡಿಕೆ ಬೇಡವೆಂದು ಹಣಕಾಸು ತಜ್ಞರು ಸಲಹೆ ನೀಡುತ್ತಾರೆ. ಆದರೂ ವಯಸ್ಸಾದ ಹಿರಿಯರಿಗೆ ಫಿಕ್ಸೆಡ್ ಡಿಪಾಸಿಟ್ ಯೋಜನೆಗಳು ಹಣಕಾಸು ಭದ್ರತೆ ನೀಡಬಲ್ಲವು.
  ಈ ವರ್ಷದ ಬಜೆಟ್‌ನಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗಾಗಿ 50 ಸಾವಿರ ರೂ.ಗಳ ವರೆಗಿನ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಹಾಗೂ ಅಂಚೆ ಕಚೇರಿಗಳಲ್ಲಿನ ಹಿರಿಯ ನಾಗರಿಕರ ಎಲ್ಲ ಉಳಿತಾಯ ಯೋಜನೆಗಳಿಗೆ ಇದು ಅನ್ವಯಿಸುತ್ತದೆ.
  ಇದರೊಂದಿಗೆ ಬ್ಯಾಂಕುಗಳು ಮತ್ತೊಂದು ಖುಷಿಯ ಸುದ್ದಿ ನೀಡಿದ್ದು, ಹಿರಿಯ ನಾಗರಿಕರ ಫಿಕ್ಸೆಡ್ ಡಿಪಾಸಿಟ್‌ಗಳ ಬಡ್ಡಿದರವನ್ನು ಹೆಚ್ಚಿಸಿವೆ. ಕೆಲ ಬ್ಯಾಂಕುಗಳು ಶೇ.8 ರವರೆಗೆ ಬಡ್ಡಿದರ ಘೋಷಿಸಿದ್ದು ಹಿರಿಯ ನಾಗರಿಕರಿಗೆ ಹರ್ಷ ತಂದಿದೆ.

  11. ಸುಕನ್ಯಾ ಸಮೃದ್ಧಿ ಯೋಜನೆ

  ನಿಮಗೆ 10 ವರ್ಷದೊಳಗಿನ ಮಗಳಿದ್ದಲ್ಲಿ ಆಕೆಯ ಹೆಸರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಗೆ ಹಣ ಹೂಡಿಕೆ ಮಾಡಬಹುದು. ಕೇಂದ್ರ ಸರಕಾರ ಜಾರಿಗೊಳಿಸಿರುವ ಸುಕನ್ಯಾ ಸಮೃದ್ಧಿ ಯೋಜನೆ ಒಂದು ಉತ್ತಮ ಉಳಿತಾಯ ಯೋಜನೆಯಾಗಿದೆ. ಆಗಾಗ ಈ ಯೋಜನೆಯ ಬಡ್ಡಿದರಗಳು ಪರಿಷ್ಕರಣೆಯಾದರೂ ಸರಾಸರಿ ಶೇ.8.1 ರಷ್ಟು ಬಡ್ಡಿದರ ಈ ಯೋಜನೆ ಕಾಯ್ದುಕೊಂಡಿದೆ.
  ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಾರ್ಷಿಕ ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದಾಗಿದ್ದು, ಇದರಲ್ಲಿ ಹೂಡಿಕೆ ಮಾಡಿದ ಮೊತ್ತ, ಸಿಗುವ ಬಡ್ಡಿ ಆದಾಯ ಹಾಗೂ ಪಕ್ವತಾ ಮೊತ್ತ ಎಲ್ಲವೂ ತೆರಿಗೆಯಿಂದ ಮುಕ್ತವಾಗಿವೆ. ಆದರೆ ಈ ಯೋಜನೆಯಲ್ಲಿನ ನಗದೀಕರಣ ಆಯ್ಕೆಗಳು ಮಾತ್ರ ಸೀಮಿತವಾಗಿವೆ. ಮಗಳಿಗೆ 21 ವರ್ಷಗಳಾಗುವವರೆಗೆ ಹೂಡಿಕೆಯನ್ನು ಹಿಂಪಡೆಯಲಾಗದು. ಹೆಚ್ಚೆಂದರೆ ಮಗಳಿಗೆ 18 ವರ್ಷವಾದ ನಂತರ ಶೇ.50 ರಷ್ಟು ಮೊತ್ತವನ್ನು ಹಿಂಪಡೆಯಲು ಅವಕಾಶವಿದೆ.

  Read more about: money savings finance news salary
  English summary

  Financial tasks you can easily accomplish with your bonus

  There are many ways to put your bonus, or at least part of it to work, depending on your time horizon, risk appetite and tax bracket.
  Story first published: Saturday, December 22, 2018, 11:24 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more