For Quick Alerts
ALLOW NOTIFICATIONS  
For Daily Alerts

ಪರ್ಸನಲ್ ಸರ್ವಿಸಸ್ ಬ್ರೋಕರ್ - ಅವಶ್ಯವೆನಿಸುತ್ತಿರುವ ಪೇಟೆ

By ಕೆ ಜಿ ಕೃಪಾಲ್
|

ಷೇರುಪೇಟೆಯ ನಡೆಯು ಅದ್ಭುತವಾಗಿದ್ದು, ಅಲ್ಪಕಾಲೀನವಾಗಿ ಟೆಕ್ನಿಕಲ್ಸ್ ಅಂಶಗಳಿಗೆ ಪೇಟೆಯಲ್ಲಿ ಮನ್ನಣೆ ದೊರೆತರು ಸಹ ದೀರ್ಘಕಾಲೀನವಾಗಿ ಅಂತರ್ಗತವಾಗಿ ಅಡಕವಾಗಿರುವ ಅಂಶಗಳಿಗೆ ಹೆಚ್ಚಿನ ಆದ್ಯತೆ ನೀಡಿದೆ. ಯಾವುದೇ ಅಲಂಕಾರಿಕ ಅಂಶಗಳಿಗೆ ಮಾನ್ಯತೆ ಅಲ್ಪಕಾಲೀನವಾಗಿರುತ್ತದೆ.

ಈಗಿನ ದಿನಗಳಲ್ಲಿ ಈ ಅಲಂಕಾರಿಕ ಅಂಶಗಳು ಹೆಚ್ಚು ವಿಜೃಂಭಿಸುತ್ತಿರುವುದರಿಂದ ಷೇರುಗಳ ಬೆಲೆಗಳಲ್ಲಿ ಏರಿಕೆಯಾಗಲಿ ಅಥವಾ ಇಳಿಕೆಯಾಗಲಿ ತಾತ್ಕಾಲಿಕವೆನ್ನುವಂತಾಗಿದೆ. ಆಂತರಿಕವಾಗಿ ಅಡಕವಾಗಿರುವ ಅಂಶಗಳನ್ನು ಕಡೆಗಣಿಸಿರುವುದು ಸಹ ಈ ಪರಿಸ್ಥಿತಿಗೆ ಕಾರಣವಾಗಿದೆ. ಷೇರುಪೇಟೆಯ ಈ ಜಾತ್ರೆಯಲ್ಲಿ ತೇರಿನ ಚಕ್ರಕ್ಕೆ ಸಿಕ್ಕು ನಲುಗಿದ, ನಶಿಸಿದ ಕಂಪನಿಗಳು ಅನೇಕ. ಹಾಗೆಯೇ ತೇರಿನ ಶಿಖರಕ್ಕೆ ಏರಿಕೆಯಿಂದ ವಿಜೃಂಭಿಸಿದ ಕಂಪನಿಗಳು ಸಹ ಹೆಚ್ಚಿವೆ.

ಎಲ್ಐಸಿ ನ್ಯೂ ಮನಿ ಬ್ಯಾಕ್ ಪಾಲಿಸಿ- 20 ವರ್ಷ: ಇಲ್ಲಿದೆ ಸಂಪೂರ್ಣ ಮಾಹಿತಿ..ಎಲ್ಐಸಿ ನ್ಯೂ ಮನಿ ಬ್ಯಾಕ್ ಪಾಲಿಸಿ- 20 ವರ್ಷ: ಇಲ್ಲಿದೆ ಸಂಪೂರ್ಣ ಮಾಹಿತಿ..

ಷೇರುಪೇಟೆಯಲ್ಲಿ ಹಣಗಳಿಸುವುದಾಗಲಿ ಅಥವಾ ಕಳೆದುಕೊಳ್ಳುವುದಾಗಲಿ ಕೇವಲ ಷೇರುದಾರರಷ್ಟೇ ಅಲ್ಲ, ಕಂಪನಿಗಳ ಪ್ರವರ್ತಕರು ಸಹ ಅಗಾದವಾದ ಸಂಪತ್ತನ್ನು ಸೇರಿಸಿಕೊಂಡಿರುತ್ತಾರೆ, ಮತ್ತೆ ಕೆಲವರು ಕಳೆದುಕೊಂಡಿರುತ್ತಾರೆ. ಷೇರುಪೇಟೆಯ ಚಟುವಟಿಕೆಯಲ್ಲಿ ಪೇಟೆ ಹಂಸಕ್ಷೀರ ನ್ಯಾಯದಂತೆ ಕಾರ್ಯ ನಿರ್ವಹಿಸುತ್ತದೆ. ಜೊಳ್ಳನ್ನು ಪಕ್ಕಕ್ಕೆ ತಳ್ಳುತ್ತದೆ, ಸಾಧನೆಯಾಧಾರಿತ ಕಂಪನಿಗಳನ್ನು ಅಟ್ಟಕ್ಕೇರಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಪ್ರವರ್ತಕರ ಸಂಪತ್ತು ಸಹ ಷೇರಿನ ಏರಿಳಿತಗಳಿಗೆ ತಕ್ಕಂತೆ ಜೋಕಾಲಿಯಾಡುತ್ತದೆ.

ಪರ್ಸನಲ್ ಸರ್ವಿಸಸ್  ಬ್ರೋಕರ್ - ಅವಶ್ಯವೆನಿಸುತ್ತಿರುವ ಪೇಟೆ

2007-08ರಲ್ಲಿ ಸೆನ್ಸೆಕ್ಸ್ 20,206ರ ಗರಿಷ್ಠದಲ್ಲಿದ್ದಾಗ ಅನಿಲ್ ಅಂಬಾನಿಯವರ ಒಟ್ಟು ಸಂಪತ್ತು ರೂ. 3 ಲಕ್ಷ ಕೋಟಿಯಷ್ಟಿತ್ತು. ಸುಮಾರು ಒಂದು ವರ್ಷದ ನಂತರದಲ್ಲಿ ಸೆನ್ಸೆಕ್ಸ್ 9,533 ರಲ್ಲಿದ್ದಾಗ ಸುಮಾರು ರೂ. 80 ಸಾವಿರ ಕೋಟಿಗೆ ಕರಗಿತ್ತು. ಆದರೆ 2010ರಲ್ಲಿ ಸೆನ್ಸೆಕ್ಸ್ 20 ಸಾವಿರಕ್ಕೆ ಚೇತರಿಕೆ ಕಂಡರೂ ಸಹ ಅವರ ಸಂಪತ್ತು ರೂ.67 ಸಾವಿರ ಕೋಟಿಗೆ ಇಳಿದಿತ್ತು.

2008ರಲ್ಲಿ ಯುನಿಟೆಕ್ ಸಮೂಹದ ಪ್ರವರ್ತಕರ ಸಂಪತ್ತು ರೂ.79 ಸಾವಿರ ಕೋಟಿಯಷ್ಟಿತ್ತು. ನಂತರದ ಕುಸಿತದಲ್ಲಿ ರೂ.6 ಸಾವಿರ ಕೋಟಿಗೆ ಕುಸಿದಿತ್ತು. 2010ರಲ್ಲಿ ಸೆನ್ಸೆಕ್ಸ್ 20 ಸಾವಿರದ ಗಡಿ ತಲುಪಿದಾಗ ರೂ.10 ಸಾವಿರ ಕೋಟಿಯಾಗಿತ್ತು. ಆದರೆ ಈಗ ಷೇರಿನ ಬೆಲೆ ರೂ.1ರ ಸಮೀಪಕ್ಕೆ ಕುಸಿದಿರುವ ಕಾರಣ ಯುನಿಟೆಕ್ ಮಾರ್ಕೆಟ್ ಕ್ಯಾಪಿಟಲೈಸೇಶನ್ ರೂ.277 ಕೋಟಿಯಷ್ಟೆ.

ಸೆನ್ಸೆಕ್ಸ್ ಸೂಚ್ಯಂಕ 66.40 ಪಾಯಿಂಟ್‌ ಏರಿಕೆ ಸೆನ್ಸೆಕ್ಸ್ ಸೂಚ್ಯಂಕ 66.40 ಪಾಯಿಂಟ್‌ ಏರಿಕೆ

ತಾಂತ್ರಿಕತೆ ಬೆಳೆದಂತೆಲ್ಲಾ ಬದಲಾವಣೆಗಳು ಹೆಚ್ಚಾಗಿ ಷೇರುಪೇಟೆಯ ಚಟುವಟಿಕೆಯಲ್ಲಿ ಭಾರಿ ಪರಿವರ್ತನೆಗಳನ್ನು ತಂದಿದೆ. ಭೌತಿಕ ಚಟುವಟಿಕೆಯ ಕಾಲದಲ್ಲಿ ಷೇರು ವಿನಿಮಯ ಕೇಂದ್ರಗಳ ಚಟುವಟಿಕೆಯು ಮಧ್ಯಾಹ್ನ 12ರಿಂದ 3 ಗಂಟೆಯವರೆಗೂ ಇದ್ದು, ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ವಹಿವಾಟು ಚುಕ್ತಾ ಮಾಡುವ ಪ್ರಕ್ರಿಯೆಗಳು ನಡೆಯುತ್ತಿದ್ದವು. ಆಗಿನ ನಿಯಮಾವಳಿಯಂತೆ ಷೇರುಪೇಟೆಯ ವ್ಯವಹಾರವನ್ನು ಷೇರು ವಿನಿಮಯ ಕೇಂದ್ರಗಳಿರುವ ಊರುಗಳಿಗೆ ಸೀಮಿತವಾಗಿದ್ದು, ಬೇರೆ ಪ್ರದೇಶದ ಜನರು ವ್ಯವಹರಿಸಬೇಕಾದರೆ ಷೇರು ವಿನಿಮಯ ಕೇಂದ್ರಗಳಿರುವ ಊರಿನ ಷೇರು ಬ್ರೋಕರ್ ಗಳನ್ನು ಸಂಪರ್ಕಿಸಿ ಅವರಿಗೆ ಆರ್ಡರ್ ಕೊಡಬೇಕಿತ್ತು. ವಹಿವಾಟು ಚುಕ್ತಾ ಆಗಿ ಮಾರಾಟ ಮಾಡಿದ ಷೇರುಗಳ ಹಣ ಕೈ ಸೇರಲು ಹೆಚ್ಚಿನ ಸಮಯವೇ ಬೇಕಾಗುತ್ತಿತ್ತು. ಆದರೆ ಒಂದು ಪ್ರಮುಖ ಅಂಶವೆಂದರೆ, ಗ್ರಾಹಕರು ತಮ್ಮ ಬ್ರೋಕರ್ ರವರೊಂದಿಗೆ ಚರ್ಚಿಸಿ ತಮ್ಮ ಅಗತ್ಯಗಳಿಗೆ ತಕ್ಕಂತೆ ಸೂಕ್ತವಾದ ಮಾರ್ಗದರ್ಶನ ಪಡೆದು ಬಾಂಧವ್ಯದ ಲಾಭ ಪಡೆದುಕೊಳ್ಳುತ್ತಿದ್ದರು. ಅಲ್ಲದೆ ಸೂಕ್ತವಾದ ಬ್ರೋಕರೇಜ್ ನ್ನು ಕೊಡಲು ಹಿಂಜರಿತವಿರುತ್ತಿರಲಿಲ್ಲ.

2010 ಆಗಸ್ಟ್ 31ರಂದು ಸೆಬಿ ಅಂಕಿ ಅಂಶಗಳ ಪ್ರಕಾರ : ಸ್ಟಾಕ್ ಎಕ್ಸ್ ಚೇಂಜ್ ಗಳು : 20, ನೋಂದಾಯಿತ ಬ್ರೋಕರ್ ಗಳು : 9,946, ಸಬ್ ಬ್ರೋಕರ್ ಗಳು : 80,299, ಎಫ್ಐಐಗಳು : 1,730, ಡಿಪಾಜಿಟರಿ ಪಾರ್ಟಿಸಿಪಂಟ್ : 776, ಮ್ಯುಚುಯಲ್ ಫಂಡ್ : 48.

2019ರ ಮೇ ತಿಂಗಳ ಸೆಬಿ ಬುಲೆಟಿನ್ ಪ್ರಕಾರ : ಸ್ಟಾಕ್ ಎಕ್ಸ್ ಚೇಂಜ್ ಗಳು ; 5, ನೋಂದಾಯಿತ ಬ್ರೋಕರ್ ಗಳು : 2,282, ಕಾರ್ಪೊರೇಟ್ ಬ್ರೋಕರ್ : 1,975, ಎಫ್ ಪಿ ಐ ಗಳು: 9,385, ಮ್ಯುಚುಯಲ್ ಫಂಡ್ : 45. ಈಗ ಸಬ್ ಬ್ರೋಕರ್ ಗಳಿಲ್ಲದೆ ಅಥರೈಸ್ಡ್ ಪರ್ಸನ್ ಎಂದು ನೇಮಕ ಮಾಡಲಾಗಿದೆ.

ತಾಂತ್ರಿಕತೆ ಬೆಳೆದ ಕಾರಣ ಯಾಂತ್ರಿಕ ಚಟುವಟಿಕೆ ಹೆಚ್ಚಾಗಿ ವಹಿವಾಟುಗಳೆಲ್ಲಾ ಯಂತ್ರವು ನಿರ್ವಹಿಸುವುದರಿಂದ ಪಾರಿಭಾಷಿಕ ವಿಶ್ಲೇಷಣೆಗಳನ್ನು ಆದ್ಯತೆ ಮೇಲೆ ಅಳವಡಿಸಲಾಗಿದೆ. ಹಾಗಾಗಿ ಕಂಪನಿಗಳ ಮೂಲಭೂತಾಂಶಗಳನ್ನು ಕಡೆಗಣಿಸಲಾಗಿದೆ. ಪೇಟೆಯಲ್ಲಿ ನಡೆಯುವ ವಹಿವಾಟಿಗೆ ಅಳವಡಿಸಬೇಕಾದ ಪಟ್ಟುಗಳೆಲ್ಲಾ ಮುಗಿದಾಗ ಪೇಟೆಯ ಚಲನೆಗಳು ತಮ್ಮದೇ ಅದ ರೀತಿಯಲ್ಲಿ ನಡೆಯುತ್ತಿದ್ದು ಯಾರ ಹಿಡಿತಕ್ಕೂ ಸಿಕ್ಕದ ರೀತಿ ನಡೆಯುತ್ತಿದೆ. ಕಂಪನಿಗಳ ಕಾರ್ಪೊರೇಟ್ ಬೆನಿಫಿಟ್ ಗಳನ್ನಂತೂ ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟು, ವೈವಿಧ್ಯಮಯ ಬಾಹ್ಯ ಕಾರಣಗಳಿಂದ ಏರಿಳಿತಗಳನ್ನು ಪ್ರದರ್ಶಿಸಿ ವಹಿವಾಟುದಾರರು / ಸಂಸ್ಥೆಗಳು ಲಾಭಗಳಿಕೆಗೆ ಪ್ರಯತ್ನಿಸುತ್ತವೆ. ಕಳೆದ ಕೆಲವು ದಿನಗಳಿಂದ ಸೆನ್ಸೆಕ್ಸ್ ಮಾತ್ರ ಸ್ವಲ್ಪಮಟ್ಟಿನ ಇಳಿಕೆ ಕಂಡರೂ ಕೆಲವು ಕ್ಯಾಶ್ ಕಂಪನಿಗಳು ಭಾರಿ ಪ್ರಮಾಣದ ಕುಸಿತಕ್ಕೊಳಗಾಗಿವೆ. ಸಣ್ಣ ಹೂಡಿಕೆದಾರರಂತೂ ನಿರ್ಧರಿಸಲು ಸಾಧ್ಯವಾಗದೆ ಕಂಗಾಲಾದಂತಿದೆ.

ರಿಲಯನ್ಸ್ ಇನ್ಫ್ರಾಸ್ಟ್ರಕ್ ಚರ್ ಕಂಪನಿ, ರಿಲಯನ್ಸ್ ಕ್ಯಾಪಿಟಲ್ ಗಳು ಡೆರಿವೇಟಿವ್ ಪೇಟೆಯಲ್ಲಿ ಮಂಗಳವಾರದವರೆಗೂ ಬ್ಯಾನ್ ಆಗಿದ್ದು, ಬುಧವಾರ ರಿಲಯನ್ಸ್ ಇನ್ಫ್ರಾಸ್ಟ್ರಕ್ ಚರ್ ಬ್ಯಾನ್ ನಿಂದ ಹೊರಬಂದು, ಹೆಚ್ಚಿನ ಸಂಖ್ಯಾಗಾತ್ರದ ವಹಿವಾಟು ಪ್ರದರ್ಶಿಸಿ, ಭಾರಿ ಕುಸಿತದಿಂದ ಚೇತರಿಸಿಕೊಂಡಿದೆ. ಇಂದು ಒಂದೇ ದಿನ ರೂ.48ರ ಸಮೀಪದಿಂದ ರೂ.37.25ರವರೆಗೂ ಕುಸಿದು ನಂತರ ರೂ.43ರ ಸಮೀಪಕ್ಕೆ ಚೇತರಿಕೆ ಕಂಡಿದೆ.

ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಬುಧವಾರದಂದು ರೂ.635ರ ಸಮೀಪದಿಂದ ರೂ.488ರವರೆಗೂ ಕುಸಿದು ನಂತರ ಮಿಂಚಿನ ವೇಗದಲ್ಲಿ ರೂ.575ರವರೆಗೂ ತಲುಪಿ ರೂ.555ರಲ್ಲಿ ಕೊನೆಗೊಂಡಿದೆ.

ಇನ್ನು ನಿರಂತರವಾಗಿ ಕರ್ನಾಟಕ ಬ್ಯಾಂಕ್, ಜೈನ ಇರ್ರೀಗೇಷನ್, ಐ ಆರ್ ಬಿ ಇನ್ಫ್ರಾ, ಚೆನ್ನೈ ಪೆಟ್ರೋ, ಇಂಡಿಯಾ ಸಿಮೆಂಟ್, ವೊಕಾರ್ಡ್, ಪಿ ಸಿ ಜ್ಯೂವೆಲ್ಲರ್, ಜೆಟ್ ಏರ್ ವೇಸ್, ಸಿಯಾಟ್ ಸೇರಿ ಸುಮಾರು ಕಂಪನಿಗಳು ಈ ತಿಂಗಳ 28ರಿಂದ ಡೆರಿವೇಟಿವ್ ಪೇಟೆಯಿಂದ ಹೊರಬರುತ್ತಿವೆ. ಹಾಗಾಗಿ ಈ ಎಲ್ಲಾ ಷೇರಿನ ಬೆಲೆಗಳು ಅಗಾಧವಾಗಿ ಕುಸಿತಕ್ಕೊಳಗಾಗಿವೆ.

ಇಂತಹ ವಿಷಯಗಳಿಗೆ ಹೆಚ್ಚಿನ ಆದ್ಯತೆ ಇಲ್ಲದೆ ಇರುವುದರಿಂದ, ಸತತ ಕುಸಿತಕ್ಕೆ ನೆಪಮಾತ್ರದ ಕಾರಣಗಳನ್ನು ನೀಡಲಾಗುತ್ತಿದೆ. ಇವೆಲ್ಲಾ ಪರಿಶೀಲಿಸಿದಾಗ ಈಗಿನ ಪೇಟೆಗಳು ಅನೇಕ ವೃತ್ತಿಪರರಿಗೆ / ಬ್ರೋಕರ್ ಗಳಿಗೆ ವೈಯಕ್ತಿಕ ಸೇವೆ ಒದಗಿಸಲು ಅನುಕೂಲ ಮಾಡಿಕೊಡುತ್ತಿವೆ. ಇದು ಜಾಗತೀಕರಣಕ್ಕೂ ಮುಂಚೆ ಇದ್ದಂತಹ ಪರ್ಸನಲ್ ಸರ್ವಿಸಸ್ ಕೊಡುವ ಬ್ರೋಕರ್ ಗಳಿಗೆ ಬೇಡಿಕೆ ಹೆಚ್ಚಾಗುವಂತೆ ಮಾಡಿದೆ. ಬ್ರೋಕರೇಜ್ ಕಡಿಮೆ ಎಂದು ಒಬ್ಬ ಬ್ರೋಕರ್ ಹತ್ತಿರ ರಿಜಿಸ್ಟರ್ ಮಾಡಿಕೊಂಡು ಯಾವುದೋ ಬೇರೊಂದು ಸಂಸ್ಥೆಯಿಂದ ಟಿಪ್ಸ್ ಪಡೆದುಕೊಂಡು ಬಾಧೆ ಪಡುವ ರೀತಿಗಿಂತ ಪರ್ಸನಲ್ ಸರ್ವಿಸಸ್ ಕೊಡುವ ಬ್ರೋಕರ್ ರವರ ಅವಶ್ಯಕತೆ ಈಗಿನ ಪೇಟೆಯ ಪರಿಸ್ಥಿತಿಯಲ್ಲಿ ಅತ್ಯಗತ್ಯವಾಗಿದೆ.

English summary

Ups and downs in Stock Market : What one needs to know

Ups and downs in Stock Market : What one needs to know. Valatility in the stock market has given way for personal brokerage services. And this is need of the hour too. Write by stock market expert K G Krupal.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X