For Quick Alerts
ALLOW NOTIFICATIONS  
For Daily Alerts

Goodreturns Explainer: ಭಾರತ್ ಬಾಂಡ್ ಇಟಿಎಫ್ ಏನು, ಎತ್ತ? ಹೂಡಿಕೆಗೆ ಸೂಕ್ತವೆ?

By ವಿ. ಮಾಲಾ
|

ಭಾರತ್‌ ಬಾಂಡ್ ಇಟಿಎಫ್ ಬಂದಿದೆ ಗಮನಿಸಿದ್ರಾ? ಏನಿದು ಇಟಿಎಫ್? ಏಕೆ ಗಮನಿಸಬೇಕು? ನಮ್ಮ ಹಣ ಇದರಲ್ಲಿ ಹೂಡಿದರೆ ಸುರಕ್ಷಿತವೆ? ಇಂಥ ಅನೇಕ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರವಿದೆ. ಹೂಡಿಕೆ ಮಾಡಬೇಕು ಅಂದುಕೊಳ್ಳುವವರಿಗಂತೂ ಇದರಿಂದ ದೊಡ್ಡ ಮಟ್ಟದಲ್ಲಿ ಪ್ರಯೋಜನ. ಇನ್ನೇಕೆ ತಡ, ಮುಂದೆ ಓದಿ.

ಇಟಿಎಫ್ ಎಂದರೇನು?
ಷೇರು ಮಾರುಕಟ್ಟೆಯಲ್ಲಿ ನೋಂದಣಿಯಾಗಿ ಆಗುವ ಮತ್ತು ವಹಿವಾಟಾಗುವ ಒಂದು ವಿಧದ ಮ್ಯೂಚ್ಯುವಲ್ ಫಂಡ್ ಗಳನ್ನು ಇಟಿಎಫ್ (ಎಕ್ಸ್‌ಚೇಂಜ್ ಟ್ರೇಡೆಟ್ ಫಂಡ್ಸ್) ಎನ್ನುತ್ತಾರೆ. ಇಂಥ ಫಂಡ್ ಗಳು ಮೊದಲೇ ಒಂದು ಇಂಡೆಕ್ಸ್‌ (ಮಾನದಂಡ) ಗುರುತಿಸಿಕೊಂಡು, ಅದನ್ನು ಅನುಸರಿಸುತ್ತವೆ.

ಫಂಡ್ ಮ್ಯಾನೇಜರ್‌ಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅಷ್ಟಾಗಿ ಇರದ ಪ್ಯಾಸಿವ್ ಫಂಡ್ ಗಳು ಇವು. ಹೀಗಾಗಿ ಪ್ರಕ್ರಿಯೆ ಮತ್ತು ನಿರ್ವಹಣಾ ಶುಲ್ಕ ಇತರ ಮ್ಯೂಚ್ಯುವಲ್ ಫಂಡ್ ಗಳಿಗೆ ಹೋಲಿಸಿದರೆ ಅತಿ ಕಡಿಮೆ.

ಏನಿದು ಭಾರತ್‌ ಬಾಂಡ್ ಇಟಿಎಫ್?
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಉದ್ಯಮಗಳು (ಸಿಪಿಎಸ್ ಇ- ಸೆಂಟ್ರಲ್ ಪಬ್ಲಿಕ್ ಸೆಕ್ಟರ್ ಇಂಡಸ್ಟ್ರೀಸ್) ಬಿಡುಗಡೆ ಮಾಡುವ 'ಎಎಎ' ಗುಣಮಟ್ಟದ ಸಾಲಪತ್ರಗಳಲ್ಲಿ ಹೂಡಿಕೆ ಮಾಡಲಾಗುವುದು ಎಂದು ಘೋಷಿಸಿ ಈಡಲ್ ವೈಸ್‌ ಸಂಸ್ಥೆ ಘೋಷಿಸಿರುವ ಇಟಿಎಫ್ ಮತ್ತು ಎಫ್‌ ಒಎಫ್ (ಫಂಡ್ ಆಫ್ ಫಂಡ್) ಮಾದರಿಯ ಮ್ಯೂಚ್ಯುವಲ್ ಫಂಡ್ ನ ಎನ್‌ ಎಫ್‌ ಒ (ನ್ಯೂ ಫಂಡ್ ಆಫರ್).

ನಬಾರ್ಡ್, ಭಾರತೀಯ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪವರ್ ಗ್ರಿಡ್, ಪವರ್ ಫೈನಾನ್ಸ್ ಕಾರ್ಪೊರೇಷನ್ ಸೇರಿದಂತೆ ಹಲವು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಭಾರತ್‌ ಬಾಂಡ್ ಇಟಿಎಫ್ ನ ಹೂಡಿಕೆ ಪಟ್ಟಿಯಲ್ಲಿದೆ. ಎನ್‌ ಎಫ್‌ ಒಗೆ ಡಿಸೆಂಬರ್ 20 ಕೊನೆಯ ದಿನ. ನಂತರ ಈ ಫಂಡ್ ಷೇರು ಮಾರುಕಟ್ಟೆಯಲ್ಲಿ ಷೇರುಗಳಂತೆಯೇ ವಹಿವಾಟಿಗೆ ಬರುತ್ತದೆ.

ಭಾರತ್‌ ಬಾಂಡ್ ನಲ್ಲಿ ಹೂಡಿಕೆ ಮಾಡಿದ ನನ್ನ ಹಣ ಸುರಕ್ಷಿತವೇ?

ಭಾರತ್‌ ಬಾಂಡ್ ನಲ್ಲಿ ಹೂಡಿಕೆ ಮಾಡಿದ ನನ್ನ ಹಣ ಸುರಕ್ಷಿತವೇ?

ಬಾಂಡ್ ಗಳು ಅಂದರೆ ಸಾಲಪತ್ರಗಳಲ್ಲಿ ಮಾಡುವ ಹೂಡಿಕೆ ನಿಶ್ಚಿತ ಠೇವಣಿಯಂತೆ ಅಲ್ಲ. ಅದರಲ್ಲಿ ಸ್ವಲ್ಪ ಮಟ್ಟಿಗೆ ರಿಸ್ಕ್ ಇದ್ದೇ ಇದೆ. ಆದರೆ ಇದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಷ್ಟು ಆತಂಕಕಾರಿಯಲ್ಲ. ಹೀಗಾಗಿ ತಕ್ಕ ಮಟ್ಟಿಗೆ, ಅಲ್ಲಲ್ಲ, ಬಹುಮಟ್ಟಿಗೆ ಸುರಕ್ಷಿತವೂ ಹೌದು. ಆದರೆ ನೂರಕ್ಕೆ ನೂರು ಸುರಕ್ಷಿತ ಎಂದು ಹೇಳುವ ಸಾಹಸವನ್ನು ಮಾತ್ರ ಯಾರೂ ಮಾಡಲಾರರು. 'ಎಎಎ' ಶ್ರೇಣಿಯ ಕ್ರೆಡಿಟ್ ರೇಟಿಂಗ್ ಹೊಂದಿರುವ ಬಾಂಡ್ ಗಳಲ್ಲಿ ಹೂಡಿಕೆ ಇರುವುದರಿಂದ ಇಲ್ಲಿ ನಷ್ಟದ ಸಾಧ್ಯತೆ ಕನಿಷ್ಠ ಮಟ್ಟದ್ದು ಎಂದು ಧೈರ್ಯವಾಗಿ ಹೇಳಬಹುದು.

ನಾನು ಭಾರತ್ ಬಾಂಡ್ ನಲ್ಲಿ ಹಣ ಹೂಡಬಹುದೇ?

ನಾನು ಭಾರತ್ ಬಾಂಡ್ ನಲ್ಲಿ ಹಣ ಹೂಡಬಹುದೇ?

ನಿಮ್ಮ ದುಡ್ಡು ನಿಮ್ಮಿಷ್ಟ. ಯಾರು ಬೇಡ ಅಂತಾರೆ. ಆದರೆ ಹಣದ ಉಳಿತಾಯ, ಹೂಡಿಕೆ, ಮರುಹೂಡಿಕೆ, ವಿಮೆ, ಸುರಕ್ಷೆ ಎಲ್ಲವೂ ಬೇರೆಬೇರೆ. ಇದನ್ನು ಗಮನದಲ್ಲಿರಿಸಿಕೊಂಡು ಭಾರತ್‌ ಬಾಂಡ್ ಗೆ ಹಣ ಹೂಡಿಕೆ ಮಾಡುವ ನಿರ್ಧಾರ ತೆಗೆದುಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ವಯಸ್ಸು ಮತ್ತು ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಗಮನಿಸಿಕೊಳ್ಳಿ. ಇದು ಹೂಡಿಕೆಗಿಂತ ಉಳಿತಾಯಕ್ಕೆ ಸೂಕ್ತ ಎನಿಸುವ ಫಂಡ್. ಇದರರ್ಥ ಭಾರತ್‌ ಬಾಂಡ್ ನಲ್ಲಿ ಹಾಕಿದ ನಿಮ್ಮ ಅಸಲು ಸುರಕ್ಷಿತ. ಆದರೆ ಅದು ಕಾಲಾನುಕ್ರಮದಲ್ಲಿ ಸಾಕಷ್ಟು ಬೆಳೆಯುತ್ತೆ ಎನ್ನುವುದು ಮಾತ್ರ ದುಬಾರಿ ನಿರೀಕ್ಷೆಯಾದೀತು. ಐದು ವರ್ಷಕ್ಕಿಂತ ಹೆಚ್ಚಿನ ಅವಧಿ ಅಂದರೆ ದೀರ್ಘಾವಧಿಯಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಹಣ ತಂದುಕೊಡುವಂಥ ನೀಡುವ ಲಾಭವನ್ನು ಇಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ.

ನೀವು ಈಗಾಗಲೇ ಷೇರು ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದ ಹಣ ಹೂಡಿದ್ದರೆ, ನಿವೃತ್ತಿಯಾದಾಗ ಬಂದ ಹಣಕ್ಕೆ ಬ್ಯಾಂಕ್‌ ಎಫ್‌ ಡಿಗಿಂತಲೂ ತುಸು ಹೆಚ್ಚು ಪ್ರತಿಫಲ ಬೇಕು ಎನ್ನುವುದು ನಿಮ್ಮ ನಿರೀಕ್ಷೆಯಾಗಿದ್ದರೆ, ನಿಮ್ಮ ಹಣಕ್ಕೆ ಬ್ಯಾಂಕ್‌ ಎಫ್‌ ಡಿಯಂಥದ್ದು ಮತ್ತು ಎಫ್‌ ಡಿಯಷ್ಟೇ ಸುರಕ್ಷಿತ ಎನಿಸುವಂಥ ಖಾತ್ರಿ ಬೇಕಿದ್ದರೆ ಭಾರತ್‌ ಫಂಡ್ ಉತ್ತಮ ಆಯ್ಕೆಯಾದೀತು.

ಸಣ್ಣ ವಯಸ್ಸು, ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಚೆನ್ನಾಗಿದೆ, ಹೂಡಿದ ಹಣಕ್ಕೆ ಉತ್ತಮ ಪ್ರತಿಫಲ ಬೇಕು ಎನ್ನುವಂಥವರು ನೀವಾಗಿದ್ದರೆ ಬಿಟ್ಟುಬಿಡಿ, ಇದು ನಿಮಗಲ್ಲ.

ನಿಶ್ಚಿತ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಮತ್ತು ಡೆಟ್ ಮ್ಯೂಚುವಲ್ ಫಂಡ್ ಗಳಿಂದ ನಿರ್ದಿಷ್ಟ ಆದಾಯ ಪಡೆಯುತ್ತಿರುವವರಿಗೆ ಭಾರತ್ ಬಾಂಡ್ ಒಂದು ಪರ್ಯಾಯ. ಮೂರು ವರ್ಷಗಳಿಗಿಂತ ಹೆಚ್ಚು/ ಕಾಲ ಹೂಡಿಕೆ ಮಾಡಿದರೆ ಒಂದಿಷ್ಟು ತೆರಿಗೆ ಅನುಕೂಲ ಸಿಗುತ್ತದೆ ಎನ್ನುವುದು ಇನ್ನೊಂದು ಪ್ಲಸ್ ಪಾಯಿಂಟ್.

 

ನಾನು ದುಡ್ಡು ಹಾಕಬೇಕು ಅಂತ ತೀರ್ಮಾನ ಮಾಡಿದ್ದೇನೆ. ನನಗೆ ಎಷ್ಟು ಪ್ರತಿಫಲ ಸಿಗಬಹುದು?

ನಾನು ದುಡ್ಡು ಹಾಕಬೇಕು ಅಂತ ತೀರ್ಮಾನ ಮಾಡಿದ್ದೇನೆ. ನನಗೆ ಎಷ್ಟು ಪ್ರತಿಫಲ ಸಿಗಬಹುದು?

ಭಾರತ್‌ ಬಾಂಡ್ ಎರಡು ರೀತಿಯ ಇಟಿಎಫ್ ಗಳನ್ನು ಮಾರುಕಟ್ಟೆಗೆ ತರುವುದಾಗಿ ಘೋಷಿಸಿದೆ. ಮೂರು ವರ್ಷ ಅವಧಿಯ ಅಲ್ಪಾವಧಿ ಇಟಿಎಫ್= ಮತ್ತು ಹತ್ತು ವರ್ಷ ಅವಧಿಯ ದೀರ್ಘಾವಧಿ ಇಟಿಎಫ್ . ಇವುಗಳಿಂದ ಕ್ರಮವಾಗಿ ಶೇ 6.69 ಮತ್ತು ಶೇ 7.58ರಷ್ಟು ಲಾಭಾಂಶ ನಿರೀಕ್ಷಿಸಬಹುದು ಈ ಫಂಡ್ ಮಾರುಕಟ್ಟೆಗೆ ತರುತ್ತಿರುವ ಈಡಲ್ ವೈಸ್ ಕಂಪೆನಿ ಘೋಷಿಸಿದೆ. ಆದರೆ ಈ ಲಾಭಾಂಶಕ್ಕೆ ಖಾತರಿ ಇಲ್ಲ. ಭಾರತದ ಸರ್ಕಾರದ ಖಾತರಿ ಇದೆ ಎನ್ನುವುದು ಕೇವಲ ಗಾಳಿಮಾತು. 10 ವರ್ಷದ ಅವಧಿಗೆ ಹಣ ಹೂಡಿಕೆಯಾಗಿದ್ದರೆ ಇಂಡೆಕ್ಸೇಶನ್ ಮೂಲಕ ಶೇ 1.20ಯಷ್ಟು ಹೆಚ್ಚು ಪ್ರತಿಫಲ ಸಿಗಬಹುದು ಎಂದು ಕೆಲ ಪಂಡಿತರು ಲೆಕ್ಕ ಹಾಕಿದ್ದಾರೆ.

ಡಿಸೆಂಬರ್ 20ಕ್ಕೆ ಎನ್‌ಎಫ್‌ಒ ಮುಗಿಯಲಿದೆ. ಇಟಿಎಫ್ ನ ಪ್ರತಿ ಯುನಿಟ್ ಮೌಲ್ಯವನ್ನು ₹ 1,000ಕ್ಕೆ ನಿಗದಿ ಮಾಡಲಾಗಿದೆ. ಅಲ್ಪಾವಧಿ ಸರಣಿಯು 2023ರ ಏಪ್ರಿಲ್‌, ದೀರ್ಘಾವಧಿ ಸರಣಿಯು 2030ರ ಏಪ್ರಿಲ್‌ನಲ್ಲಿ ಮೆಚ್ಯೂರಿಟಿ ಹೊಂದಲಿದೆ. ಷೇರುಪಟ್ಟೆಯಲ್ಲಿ ವಹಿವಾಟಿಗೆ ಮುಕ್ತವಾದ ನಂತರ ಎರಡೂ ಫಂಡ್ ಗಳು ಖರೀದಿ ಮತ್ತು ಮಾರಾಟಕ್ಕೆ ಅವಕಾಶವಿದೆ.

ಖರೀದಿಸುವುದು ಹೇಗೆ?

ಖರೀದಿಸುವುದು ಹೇಗೆ?

ಈಗಾಗಲೇ ಡಿಮ್ಯಾಟ್ ಖಾತೆ ಹೊಂದಿದ್ದರೆ ನೇರವಾಗಿ www.bharatbond.in ವೆಬ್‌ಸೈಟ್‌ ಓಪನ್ ಮಾಡಿ Invest Now ಬಟನ್ ಕ್ಲಿಕ್ ಮಾಡಿ. ಅದರಲ್ಲಿ ETF ಆಯ್ಕೆ ಮಾಡಿಕೊಂಡು, ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆ ಇತ್ಯಾದಿ ವಿವರಗಳನ್ನು ನಮೂದಿಸಿದ ನಂತರ ಎನ್‌ ಎಸ್‌ ಡಿಎಲ್ ವೆಬ್‌ಸೈಟ್‌ಗೆ ರಿಡೈರೆಕ್ಷನ್ ಆಗುತ್ತೆ. ಅಲ್ಲಿ ಪ್ಯಾನ್ ವಿವರ ನೀಡಿದರೆ ನಿಮ್ಮ ಡಿಮ್ಯಾಟ್ ಖಾತೆಯ ವಿವರಗಳು ಕಾಣಿಸುತ್ತವೆ. ನಿರ್ದಿಷ್ಟ ಡಿಮ್ಯಾಟ್ ಖಾತೆ ಬಳಸಿ ಫಂಡ್ ಖರೀದಿಸಬಹುದು.

ಡಿಮ್ಯಾಟ್ ಖಾತೆ ಇಲ್ಲದವರಿಗೆ ಎಫ್‌ ಒಎಫ್ (ಫಂಡ್ ಆಫ್ ಫಂಡ್) ಮೂಲಕ ಖರೀದಿ ಸೌಲಭ್ಯವಿದೆ. www.bharatbond.in ವೆಬ್‌ಸೈಟ್‌ ಓಪನ್ ಮಾಡಿ, Invest Now ಬಟನ್ ಕ್ಲಿಕ್ ಮಾಡಿ. ಅದರಲ್ಲಿ FOF ಆಯ್ಕೆ ಮಾಡಿಕೊಂಡು ಪ್ಯಾನ್‌ ಮತ್ತು ಇತರ ಅಗತ್ಯ ವಿವರ ನೀಡಿದರೆ ಫಂಡ್ ಖರೀದಿಯ ವಿಂಡೋ ಓಪನ್ ಆಗುತ್ತೆ. ಇಲ್ಲಿ ನೀವು ಹಣ ವರ್ಗಾಯಿಸಿ ಫಂಡ್ ಖರೀದಿಸಬಹುದು.

ಫಂಡ್ ಖರೀದಿಗಾಗಿ ಇಂಟರ್ನೆಟ್ ಬ್ಯಾಂಕಿಂಗ್‌ ಹಾಗೂ ಯುಪಿಐ ಬಳಸಿ ಹಣ ವರ್ಗಾಯಿಸಿಕೊಳ್ಳುವ ಸೌಕರ್ಯವಿದೆ.

ಇತರ ಎಫ್‌ ಎಂಪಿಗಳಿಗೂ ಭಾರತ್‌ ಬಾಂಡ್ ಗೂ ಏನು ವ್ಯತ್ಯಾಸ?

ಇತರ ಎಫ್‌ ಎಂಪಿಗಳಿಗೂ ಭಾರತ್‌ ಬಾಂಡ್ ಗೂ ಏನು ವ್ಯತ್ಯಾಸ?

ನಿರ್ದಿಷ್ಟ ಅವಧಿಗೆ ಪರಿಪಕ್ವವಾಗುವ ಫಿಕ್ಸೆಡ್ ಮೆಚ್ಯುರಿಟಿ ಪ್ಲಾನ್ ಗಳ (ಎಫ್‌ಎಂಪಿ) ಜೊತೆಗೆ ಭಾರತ್‌ ಬಾಂಡ್ ಫಂಡ್ ಹೋಲಿಕೆಯಾಗುತ್ತೆ. ಆದರೆ ಎಫ್‌ ಎಂಪಿಗಳು ಕ್ಲೋಸ್ಡ್ ಫಂಡ್ ಆಗಿರುತ್ತವೆ. ಇಲ್ಲಿ ಅವಧಿಗೆ ಮೊದಲೇ ಯೂನಿಟ್‌ಗಳ ಖರೀದಿ ಅಥವಾ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಭಾರತ್‌ ಬಾಂಡ್ ನ ಇಟಿಎಫ್ ಷೇರು ಮಾರುಕಟ್ಟೆಯಲ್ಲಿ ವಹಿವಾಟಾಗುವುದರಿಂದ ಲಿಕ್ವಿಡಿಟಿ ಸಮಸ್ಯೆ ಇರುವುದಿಲ್ಲ. ಈ ವಿಚಾರದಲ್ಲಿ ಎಫ್‌ ಎಂಪಿಗಿಂತ ಭಾರತ್‌ ಬಾಂಡ್ ಉತ್ತಮ ಆಯ್ಕೆ ಆಗಬಲ್ಲದು.

 

 

English summary

Bharat Fund ETF Explainer, Is It Good For Investment?

What is Bharat Fund ETF? Here is an explainer article about Bharat fund ETF.
Story first published: Tuesday, December 17, 2019, 13:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X