ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿದೆ. ಜುಲೈ 7ರಿಂದ ಜಾರಿಗೆ ಬರುವಂತೆ ಕೆನರಾ ಬ್ಯಾಂಕ್ ಎಂಸಿಎಲ್‌ಆರ್ ಹಾಗೂ ರೆಪೊ ಲಿಂಕ್ಡ್ ಲೆಂಡಿಂಗ್ ದರ (RLLR) ಅನ್ನು ಹೆಚ್ಚಳ ಮಾಡಿದೆ. ಒಂದು ರಾತ್ರಿಯಿಂದ ಒಂದು ವರ್ಷದವರೆಗಿನ ಸಾಲದ ಬಡ್ಡಿದರವನ್ನು ಹೆಚ್ಚಿಸಿದೆ.
ಬ್ಯಾಂಕ್ ತನ್ನ ಒಂದು ರಾತ್ರಿಯಿಂದ ಒಂದು ತಿಂಗಳವರೆಗಿನ ಎಂಸಿಎಲ್‌ಆರ್ ದರವನ್ನು 10 ಬೇಸಿಸ್ ಪಾಯಿಂಟ್ ಹೆಚ್ಚಳ ಮಾಡಿದೆ. ಇದರಿಂದಾಗಿ ಬಡ್ಡಿದರವು ಶೇಕಡ 6.75ಕ್ಕೆ ಹೆಚ್ಚಾಗಿದೆ. ಇನ್ನು 3 ತಿಂಗಳ ಎಂಸಿಎಲ್‌ಆರ್ ದರವು ಶೇ.6.95ರಿಂದ ಶೇ.7.05ಕ್ಕೆ ಹೆಚ್ಚಳ ಮಾಡಲಾಗಿದೆ. ಅಂದರೆ ಹತ್ತು ಮೂಲಾಂಕ ಏರಿಕೆ ಮಾಡಲಾಗಿದೆ.
6 ತಿಂಗಳ ಎಂಸಿಎಲ್‌ಆರ್ 10 ಬೇಸಿಸ್ ಪಾಯಿಂಟ್ ಹೆಚ್ಚಳ ಮಾಡಲಾಗಿದ್ದು, ಶೇ.7.35ರಿಂದ ಶೇ.7.45ಕ್ಕೆ ಏರಿದೆ. ಬ್ಯಾಂಕ್‌ಗಳು ತಮ್ಮ ಗೃಹ ಸಾಲದ ದರಗಳನ್ನು ನಿರ್ಧಾರ ಮಾಡಲು ಒಂದು ವರ್ಷದ ಎಂಸಿಎಲ್‌ಆರ್ ಮಾನದಂಡವಾಗಿದೆ. ಈ ಅವಧಿಯ ಸಾಲದ ಬಡ್ಡಿದರವು ಕೂಡಾ 10 ಬೇಸಿಸ್ ಪಾಯಿಂಟ್ ಹೆಚ್ಚಳವಾಗಿದೆ. ಶೇ.7.40 ರಿಂದ ಶೇ.7.50ಕ್ಕೆ ಹೆಚ್ಚಳವಾಗಿದೆ.

ಆರ್‌ಆರ್‌ಎಲ್‌ಆರ್ 50 ಬೇಸಿಸ್ ಪಾಯಿಂಟ್ ಹೆಚ್ಚಳ
ಕೆನರಾ ಬ್ಯಾಂಕ್ ತನ್ನ ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್ (ಆರ್‌ಎಲ್‌ಎಲ್‌ಆರ್) ದರವನ್ನು 50 ಬೇಸಿಸ್ ಪಾಯಿಂಟ್ ಹೆಚ್ಚಳ ಮಾಡಿದೆ. ಆರ್‌ಎಲ್‌ಎಲ್‌ಆರ್ ಈ ಹಿಂದೆ ಶೇ.7.30 ಆಗಿತ್ತು. ಆದರೆ ಈಗ ಶೇ.7.80 ಆಗಿದೆ. ಆರ್‌ಎಲ್‌ಎಲ್‌ಆರ್ ಎಂದೂ ಕರೆಯಲ್ಪಡುವ ರೆಪೊ-ಲಿಂಕ್ಡ್ ಸಾಲದ ದರವು ಆರ್‌ಬಿಐ ನಿಗದಿಪಡಿಸಿದ ರೆಪೊ ದರಕ್ಕೆ ಲಿಂಕ್ ಮಾಡಲಾದ ಸಾಲದ ದರವಾಗಿದೆ.
ಜೂನ್‌ನಲ್ಲಿ ಆರ್‌ಬಿಐ ರೆಪೊ ದರದಲ್ಲಿ 50 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿದೆ. ಇದು ಬ್ಯಾಂಕ್‌ಗಳ ಎಂಸಿಎಲ್‌ಆರ್ ಮೇಲೆ ಪರಿಣಾಮವನ್ನು ಉಂಟು ಮಾಡಿದೆ. ಬ್ಯಾಂಕುಗಳು ಗೃಹ ಸಾಲವನ್ನು ಪಡೆಯುವವರಿಗೆ ಸಾಲದ ಬಡ್ಡಿದರವನ್ನು ಹೆಚ್ಚಳ ಮಾಡುತ್ತಿದೆ.
ಹೊಸ ಎಂಸಿಎಲ್‌ಆರ್ ಎಷ್ಟಿದೆ?
ಒಂದು ರಾತ್ರಿ ಅವಧಿ: ಶೇಕಡ 6.75
ಒಂದು ತಿಂಗಳ ಅವಧಿ: ಶೇಕಡ 6.75
ಮೂರು ತಿಂಗಳ ಅವಧಿ: ಶೇಕಡ 7.05
ಆರು ತಿಂಗಳ ಅವಧಿ: ಶೇಕಡ 7.45
ಒಂದು ವರ್ಷದ ಅವಧಿ: ಶೇಕಡ 7.50


Click it and Unblock the Notifications