ಜನವರಿ 1, 2021ರಿಂದ ಜಾರಿಗೆ ಬರಲಿರುವ ಹತ್ತು ಬದಲಾವಣೆಗಳಿವು
ಬದಲಾವಣೆ ಎಂಬ ಐದಕ್ಷರ ಚೀಜು ಸದಾ ಹಸಿರು. 2020ನೇ ಇಸವಿಯನ್ನು ಮುಗಿಸಿಕೊಂಡು, 2021ಕ್ಕೆ ಕಾಲಿಡಲಿದ್ದೇವೆ. ಮತ್ತೆ ಬದಲಾವಣೆಗಳಿಗೆ ಸಿದ್ಧವಾಗಬೇಕಿದೆ. ಚೆಕ್ ಪಾವತಿಯಿಂದ ಎಲ್ ಪಿಜಿ ಸಿಲಿಂಡರ್ ದರದ ತನಕ, ಜಿಎಸ್ ಟಿಯಿಂದ ಯುಪಿಐ ವ್ಯವಹಾರದ ತನಕ ಶ್ರೀಸಾಮಾನ್ಯರ ಜೀವನದಲ್ಲಿ ಆಗುವ ಬದಲಾವಣೆಗಳನ್ನು ನಿಮ್ಮೆದುರು ಇಡಲಾಗುತ್ತಿದೆ.
2021ನೇ ಇಸವಿಗೆ ಎಚ್ ಡಿಎಫ್ ಸಿ ಸೆಕ್ಯೂರಿಟೀಸ್ ಷೇರು ಖರೀದಿ ಆಯ್ಕೆ
ದೈನಂದಿನ ವ್ಯವಹಾರದಲ್ಲಿ ಈ ಬದಲಾವಣೆಗಳು ಪರಿಣಾಮ ಬೀರುತ್ತವೆ. ಆ ಕಾರಣಕ್ಕೆ ಇವುಗಳ ಬಗ್ಗೆ ವಿವರಣೆ ಸಹಿತ ತಿಳಿದುಕೊಳ್ಳುವುದು ಉತ್ತಮ. ಹಾಗಿದ್ದರೆ ಜನವರಿ 1, 2021ರಿಂದ ಜಾರಿಗೆ ಬರಲಿರುವ ಹತ್ತು ಬದಲಾವಣೆಗಳೇನು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಮುಂದಕ್ಕೆ ಓದಿ.

ಚೆಕ್ ಪಾವತಿ ನಿಯಮ
ಚೆಕ್ ಪಾವತಿಯಲ್ಲಿನ ವಂಚನೆಯನ್ನು ತಡೆಯುವ ಉದ್ದೇಶದಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಕೆಲವು ತಿಂಗಳ ಹಿಂದೆಯೇ "ಪಾಸಿಟಿವ್ ಪೇ ಸಿಸ್ಟಮ್" ಪರಿಚಯಿಸಲು ನಿರ್ಧರಿಸಲಾಗಿತ್ತು. ಐವತ್ತು ಸಾವಿರ ಮೇಲ್ಪಟ್ಟ ಯಾವುದೇ ಚೆಕ್ ಪಾವತಿಗೆ ಮುಖ್ಯ ಮಾಹಿತಿಗಳನ್ನು ಪುನರ್ ಖಾತ್ರಿ ಮಾಡಿಕೊಳ್ಳಬೇಕಾಗುತ್ತದೆ. ಜನವರಿ 1, 2021ರಿಂದ ಈ ನಿಯಮ ಜಾರಿಗೆ ಬರುತ್ತದೆ. ಈ ವ್ಯವಸ್ಥೆಯ ಅನುಕೂಲ ಪಡೆಯಬೇಕಾ ಅನ್ನೋದು ಖಾತೆದಾರರಿಗೆ ಬಿಟ್ಟಂಥ ವಿಚಾರ ಆಗಿರುತ್ತದೆ. ಇನ್ನು ಐದು ಲಕ್ಷ ರುಪಾಯಿ ಮತ್ತು ಅದಕ್ಕಿಂತ ಮೇಲ್ಪಟ್ಟ ಚೆಕ್ ಗೆ ಬ್ಯಾಂಕ್ ಗಳು ಈ ನಿಯಮವನ್ನು ಕಡ್ಡಾಯ ಮಾಡಬಹುದು.

ಕಾಂಟ್ಯಾಕ್ಟ್ ಲೆಸ್ ಕಾರ್ಡ್ ವ್ಯವಹಾರ ಮಿತಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ಹೇಳಿರುವ ಪ್ರಕಾರ, ಕಾಂಟ್ಯಾಕ್ಟ್ ಲೆಸ್ ಕಾರ್ಡ್ ವ್ಯವಹಾರದ ಮಿತಿ ಹಾಗೂ ಯುಪಿಐ ಮತ್ತು ಕಾರ್ಡ್ ಗಳ ರೆಕರಿಂಗ ವ್ಯವಹಾರಗಳನ್ನು ಜನವರಿ 1, 2021ರಿಂದ 2000 ರುಪಾಯಿಯಿಂದ 5000 ರುಪಾಯಿಗೆ ಹೆಚ್ಚಿಸಲಾಗುವುದು. ಕೊರೊನಾ ಸಂದರ್ಭದಲ್ಲಿ ಸುಲಭ ಮತ್ತು ಸುರಕ್ಷಿತ ವ್ಯವಹಾರ ಡಿಜಿಟಲ್ ಆಗಿ ನಡೆಸಲು ಈ ಕ್ರಮದಿಂದ ಅನುಕೂಲ ಆಗಲಿದೆ. ಇದು ಗ್ರಾಹಕರ ವಿವೇಚನೆಗೆ ಬಿಟ್ಟ ವಿಚಾರವಾಗಿರುತ್ತದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ವಾಟ್ಸಾಪ್ ಕೆಲ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ
ಜನಪ್ರಿಯ ಮೆಸೇಜಿಂಗ್ ಪ್ಲಾಟ್ ಫಾರ್ಮ್ ವಾಟ್ಸಾಪ್ ಕೆಲವು ಫೋನ್ ಗಳಲ್ಲಿ ಜನವರಿ 1ರಿಂದ ಕಾರ್ಯ ನಿರ್ವಹಿಸುವುದಕ್ಕೆ ಬೆಂಬಲಿಸುವುದಿಲ್ಲ. ಆಂಡ್ರಾಯಿಡ್ 4.0.3 ಮತ್ತು ಐಫೋನ್ iOS 9 ಹಾಗೂ ಮೇಲ್ಪಟ್ಟು, ಆಯ್ದ ಫೋನ್ ಗಳು KaiOS 2.5.1 ಮೇಲ್ಪಟ್ಟು ಹಾಗೂ ಜಿಯೋಫೋನ್ ಮತ್ತು ಜಿಯೋಫೋನ್ 2ರಲ್ಲಿ ಕಾರ್ಯ ನಿರ್ವಹಿಸುತ್ತದೆ.

ಕಾರು ಬೆಲೆಗಳು
ಮಾರುತಿ ಸುಜುಕಿ ಇಂಡಿಯಾ ಮತ್ತು ಮಹೀಂದ್ರಾ ಅಂಡ್ ಮಹೀಂದ್ರಾ ವಾಹನಗಳ ಬೆಲೆಯು ಜನವರಿ 1ರಿಂದ ಏರಿಕೆ ಆಗಲಿದೆ. ಇನ್ ಪುಟ್ ವೆಚ್ಚ ಹೆಚ್ಚಳ ಆಗುತ್ತಿರುವ ಪರಿಣಾಮವನ್ನು ಸರಿತೂಗಿಸಲು ಈ ತೀರ್ಮಾನ ಮಾಡಲಾಗಿದೆ.

ಲ್ಯಾಂಡ್ ಲೈನ್ ನಿಂದ ಮೊಬೈಲ್ ಫೋನ್ ಕಾಲ್ ಗಳು
ಲ್ಯಾಂಡ್ ಲೈನ್ ನಿಂದ ಮೊಬೈಲ್ ಫೋನ್ ಗಳಿಗೆ ಕರೆ ಮಾಡಬೇಕಿದ್ದಲ್ಲಿ ಆರಂಭದಲ್ಲಿ ಸಂಖ್ಯೆ '0'ಯನ್ನು ಸೇರಿಸಿಕೊಳ್ಳಬೇಕಾಗುತ್ತದೆ. ಜನವರಿ 1ನೇ ತಾರೀಕಿನಿಂದ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ. ಟ್ರಾಯ್ ಶಿಫಾರಸನ್ನು ಇಲಾಖೆಯು ಒಪ್ಪಿಕೊಂಡಿದೆ.

ನಾಲ್ಕು ಚಕ್ರದ ಎಲ್ಲ ವಾಹನಗಳಿಗೆ FASTag
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅಧಿಸೂಚನೆ ಹೊರಡಿಸಿ, ಜನವರಿ 1, 2021ರಿಂದ ನಾಲ್ಕು ಚಕ್ರದ ವಾಹನಗಳಿಗೆ FASTag ಕಡ್ಡಾಯ ಮಾಡಲಾಗಿದೆ. ಡಿಸೆಂಬರ್ 1, 2017ರ ಮುಂಚಿನ M ಮತ್ತು N ಕ್ಲಾಸ್ ಎಲ್ಲ ವಾಹನಗಳಿಗೆ FASTag ಕಡ್ಡಾಯಗೊಳಿಸಿ, ಸಚಿವಾಲಯದಿಂದ ಆದೇಶ ಹೊರಡಿಸಲಾಗಿದೆ.

ಯುಪಿಐ ಪಾವತಿ
ಅಮೆಜಾನ್ ಪೇ, ಗೂಗಲ್ ಪೇ ಮತ್ತು ಫೋನ್ ಪೇ ವ್ಯವಹಾರಗಳಿಗೆ ಬಳಕೆದಾರರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಥರ್ಡ್ ಪಾರ್ಟಿ ಆಪ್ ಮೂಲಕ ಕೆಲಸ ಮಾಡುವ ಯುಪಿಐ ಪಾವತಿ ಸೇವೆಗೆ ಎನ್ ಪಿಸಿಐಯಿಂದ ಹೆಚ್ಚುವರಿ ಶುಲ್ಕ ವಿಧಿಸಲು ನಿರ್ಧರಿಸಲಾಗಿದೆ. ಎನ್ ಪಿಸಿಐಯಿಂದ 30% ಮಿತಿ ನಿಗದಿ ಮಾಡಲಾಗಿದೆ. ಆದರೆ ಪೇಟಿಎಂನಿಂದ ಪಾವತಿಸಬೇಕು ಎಂದು ವರದಿ ಆಗಿದೆ.

ಗೂಗಲ್ ಪೇ ವೆಬ್ ಆಪ್
ಗೂಗಲ್ ನ ಪೇಮೆಂಟ್ ಅಪ್ಲಿಕೇಷನ್ ಇಷ್ಟು ಸಮಯ ಮೊಬೈಲ್ ನಲ್ಲೂ ವೆಬ್ ಅಪ್ಲಿಕೇಷನ್ ನಲ್ಲೂ ಆಗುತ್ತಿದೆ. ಆದರೆ ಹೊಸ ವರ್ಷದ ಜನವರಿಯಿಂದ ವೆಬ್ ಅಪ್ಲಿಕೇಷನ್ ಕೊನೆ ಮಾಡಲಿದೆ ಮತ್ತು ಹಣ ವರ್ಗಾವಣೆ ಮಾಡುವುದಕ್ಕೆ ಗ್ರಾಹಕರಿಗೆ ದರವನ್ನು ವಿಧಿಸಲಿದೆ. ಸದ್ಯಕ್ಕೆ ಇರುವ ಮಾಹಿತಿಯಂತೆ ಜನವರಿಯಿಂದ ಗೂಗಲ್ ಪೇ ವೆಬ್ ಅಪ್ಲಿಕೇಷನ್ ಕಾರ್ಯ ನಿರ್ವಹಿಸುವುದಿಲ್ಲ.

ಎಲ್ ಪಿಜಿ ಸಿಲಿಂಡರ್ ದರ
ಅಂತರರಾಷ್ಟೀಯ ಮಾರುಕಟ್ಟೆಯಲ್ಲಿನ ತೈಲ ದರವನ್ನು ಆಧರಿಸಿ ತೈಲ ಮಾರ್ಕೆಟಿಂಗ್ ಕಂಪೆನಿಗಳು ಎಲ್ ಪಿಜಿ ದರವನ್ನು ಪ್ರತಿ ತಿಂಗಳ ಒಂದನೇ ತಾರೀಕು ಪರಿಷ್ಕರಣೆ ಮಾಡಲಾಗುತ್ತದೆ.

ಜಿಎಸ್ ಟಿ ಫೈಲಿಂಗ್
5 ಕೋಟಿ ರುಪಾಯಿಯೊಳಗಿನ ವಹಿವಾಟು ಇರುವ ವ್ಯಾಪಾರ- ವ್ಯವಹಾರಗಳು ನಾಲ್ಕು ಜಿಎಸ್ ಟಿ ಸೇಲ್ಸ್ ರಿಟರ್ನ್ಸ್ ಅಥವಾ GSTR- 3B ಫೈಲ್ ಮಾಡಿದರೆ ಸಾಕು. ಸದ್ಯಕ್ಕೆ ಇದು ಹನ್ನೆರಡು ಆಗುತ್ತಿದೆ. ಕ್ವಾರ್ಟರ್ಲಿ ಫೈಲಿಂಗ್ ಆಫ್ ರಿಟರ್ನ್ ವಿಥ್ ಮಂತ್ಲಿ ಪೇಮೆಂಟ್ (QRMP) ಯೋಜನೆಯಿಂದ 94 ಲಕ್ಷದಷ್ಟು ತೆರಿಗೆದಾರರ ಮೇಲೆ ಪರಿಣಾಮ ಆಗುತ್ತದೆ. ಅಂದರೆ ಜಿಎಸ್ ಟಿಯ ಒಟ್ಟು ತೆರಿಗೆದಾರರ 92ರಷ್ಟು ಮಂದಿ ಈ ವಿಭಾಗದಲ್ಲಿ ಬರುತ್ತಾರೆ. ಜನವರಿಯಿಂದ ಸಣ್ಣ ಪ್ರಮಾಣದ ತೆರಿಗೆದಾರರು ಒಂದು ವರ್ಷಕ್ಕೆ ಕೇವಲ ಎಂಟು ರಿಟರ್ನ್ಸ್ (4 GST- 3B ಮತ್ತು ನಾಲ್ಕು GSTR- 1 ರಿಟರ್ನ್ಸ್) ಮಾಡಿದರೆ ಸಾಕು.