ಹೊಸ ಕೆಲಸಕ್ಕೆ ಸೇರಿದಾಗ ಪಿಎಫ್ ಖಾತೆ ವರ್ಗಾಯಿಸದೇ ಇದ್ದರೆ ಏನಾಗುತ್ತದೆ?
ಪ್ರಾವಿಡೆಂಟ್ ಫಂಡ್ ಅಥವಾ ಭವಿಷ್ಯ ನಿಧಿ ಪ್ರತಿಯೊಬ್ಬ ಉದ್ಯೋಗಿಯ ನಿವೃತ್ತಿ ಕಾಲಕ್ಕೆ ನೆರವಾಗಲೆಂದು ಇರುವ ಯೋಜನೆ. ಆದರೆ, ಖಾಸಗಿ ವಲಯದಲ್ಲಿ ಕೆಲಸ ಮಾಡುವವರು ಒಂದೇ ಕಂಪನಿಯಲ್ಲಿ ಉದ್ಯೋಗದಲ್ಲಿ ಉಳಿಯುವುದು ಬಹಳ ಅಪರೂಪ. ಹಲವು ಕಂಪನಿಗಳನ್ನು ಬದಲಿಸುತ್ತಿರುತ್ತಾರೆ. ಈ ಸಮಯದಲ್ಲಿ ಪಿಎಫ್ ಖಾತೆಯನ್ನು ನಿಭಾಯಿಸುವ ಕೆಲಸವನ್ನು ಯುಎಎನ್ ನಂಬರ್ ಮೂಲಕ ಸುಗಮಗೊಳಿಸಲಾಗಿದೆ.
ನೀವು ಎಲ್ಲೇ ಕೆಲಸಕ್ಕೆ ಸೇರಿದರೂ ನಿಮ್ಮ ಹಳೆಯ ಕಂಪನಿಯ ಪಿಎಫ್ ಖಾತೆಯನ್ನು ಹೊಸ ಉದ್ಯೋಗ ಸ್ಥಳಕ್ಕೆ ರವಾನಿಸುವುದನ್ನು ಮರೆಯಬಾರದು. ಈಗ ಯುಎಎನ್ ನಂಬರ್ ಬಂದಿರುವುದರಿಂದ ಆ ನಂಬರ್ ಕೊಟ್ಟರೂ ಸಾಕು.
ಒಂದು ವೇಳೆ ನೀವು ಕಂಪನಿ ಬದಲಿಸಿ, ಪಿಎಫ್ ಖಾತೆ ಅಥವಾ ಯುಎಎನ್ ಅನ್ನು ಹೊಸ ಕಂಪನಿಗೆ ಜೋಡಿಸದಿದ್ದರೆ ಹಣ ಮರಳುವುದು ಕಷ್ಟವಾಗಬಹುದು. ಅದ್ದರಿಂದ ಹುಷಾರ್. ಹಾಗೆಯೇ ಪಿಎಫ್ ಖಾತೆ ನಿಷ್ಕ್ರಿಯಗೊಳ್ಳುವ ಹಂತಕ್ಕೆ ಹೋಗಲು ಬಿಡದಿರಿ.

ಪಿಎಫ್ ಖಾತೆ ಯಾವಾಗ ನಿಷ್ಕ್ರಿಯಗೊಳ್ಳುತ್ತೆ?
* ಇಪಿಎಫ್ ಖಾತೆದಾರ ತನ್ನ ಉದ್ಯೋಗ ಬಿಟ್ಟು, ಅದನ್ನು ಹೊಸ ಕಂಪನಿಗೆ ಜೋಡಿಸಿದೇ ಸುಮ್ಮನಿದ್ದರೆ 36 ತಿಂಗಳ ಬಳಿಕ, ಅಂದರೆ ಕೆಲಸ ಬಿಟ್ಟು 3 ವರ್ಷಗಳ ಬಳಿಕ ಆ ಖಾತೆ ಮುಕ್ತಾಯವಾಗುತ್ತದೆ. ಆದ್ದರಿಂದ ಕೆಲಸ ಬಿಟ್ಟು 3 ವರ್ಷದೊಳಗೆ ಪಿಎಫ್ ಅಕೌಂಟ್ ಹೋಲ್ಡರ್ ತನ್ನ ಖಾತೆಯಿಂದ ಹಣವನ್ನು ಹಿಂಪಡೆದುಕೊಳ್ಳಬೇಕು ಎನ್ನುತ್ತದೆ ನಿಯಮ.
* ಪಿಎಫ್ ಖಾತೆದಾರ ಸಾವನ್ನಪ್ಪಿದಾಗ ಅವರ ಪಿಎಫ್ ಅಕೌಂಟ್ ಮುಕ್ತಾಯವಾಗುತ್ತದೆ. ಹೀಗಾಗಿ, ಪಿಎಫ್ ಖಾತೆಗೆ ನಾಮಿನಿ ಹಾಕುವುದನ್ನು ಮರೆಯಬೇಡಿ.
* ಪಿಎಫ್ ಖಾತೆದಾರ ಬೇರೆ ದೇಶಕ್ಕೆ ಖಾಯಂ ಆಗಿ ಸ್ಥಳಾಂತರ ಗೊಂಡರೆ ಪಿಎಫ್ ಖಾತೆ ಮುಗಿಯುತ್ತದೆ.
* ಪಿಎಫ್ ಖಾತೆದಾರ ಉದ್ಯೋಗದಿಂದ ನಿವೃತ್ತಿ ಹೊಂದಿ 3 ವರ್ಷಗಳಾದರೂ ಹಣ ವಿತ್‌ಡ್ರಾ ಮಾಡದೇ ಹೋದಲ್ಲಿ ಖಾತೆ ಮುಕ್ತಾಯವಾಗುತ್ತದೆ. ಆದ್ದರಿಂದ ನಿವೃತ್ತಿ ಹೊಂದಿದ ನಂತರ ಅಕೌಂಟ್ ಸೆಟಲ್ಮೆಂಟ್ ಮಾಡಿ.

ಕೆಲಸ ಬಿಟ್ಟಾಗ ಪಿಎಫ್ ಖಾತೆಗೆ ಏನಾಗುತ್ತದೆ?
* ನೀವು ಕೆಲಸ ಬಿಟ್ಟರೂ ನಿಮ್ಮ ಪಿಎಫ್ ಖಾತೆಯಲ್ಲಿರುವ ಹಣಕ್ಕೆ ನಿಗದಿತ ಬಡ್ಡಿ ಕೂಡಿಕೊಳ್ಳುತ್ತಿರುತ್ತದೆ.
* ನೀವು ಐದು ವರ್ಷ ನಿರಂತರವಾಗಿ ಕೆಲಸ ಮಾಡುವ ಮುನ್ನ ಪಿಎಫ್ ಖಾತೆಯಿಂದ ಹಣವನ್ನು ಹಿಂಪಡೆದುಕೊಂಡರೆ ನಿನ್ನ ಆ ಹಣದ ಬಡ್ಡಿಗೆ ತೆರಿಗೆ ಹಾಕಲಾಗುತ್ತದೆ.
* ಒಬ್ಬ ಉದ್ಯೋಗಿ ಮೊದಲ ಐದು ವರ್ಷಗಳ ಕಾಲ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದರೂ ಅದನ್ನು ನಿರಂತರ ಉದ್ಯೋಗ ಎಂದು ಪರಿಗಣಿಸಲಾಗುತ್ತದೆ. ಆ ಎಲ್ಲಾ ಕಂಪನಿಗಳಿಗೂ ಪಿಎಫ್ ಖಾತೆಯನ್ನು ಟ್ರಾನ್ಸ್‌ಫರ್ ಮಾಡಿರಬೇಕು.
* ಪಿಎಫ್ ಖಾತೆದಾರ 58 ವರ್ಷ ವಯಸ್ಸು ಮುಗಿಯುವವರೆಗೂ ಅಥವಾ ಕೆಲಸ ಬಿಡುವವರೆಗೂ ಪಿಎಫ್ ಖಾತೆಯಲ್ಲಿನ ಹಣಕ್ಕೆ ತೆರಿಗೆ ಹಿಡಿಯುವುದಿಲ್ಲ. ಆದರೆ, ನೀವು ನಿವೃತ್ತರಾದಾಗ ಅಥವಾ ಉದ್ಯೋಗ ಬಿಟ್ಟಾಗ ಪಿಎಫ್ ಹಣದ ಮೇಲಿನ ಬಡ್ಡಿಗೆ ತೆರಿಗೆ ಬೀಳುತ್ತದೆ.

ನೀವೇನು ಮಾಡಬೇಕು?
* ನೀವು ಕಂಪನಿ ಬದಲಿಸಿದಾಗೆಲ್ಲಾ ಹಿಂದಿನ ಪಿಎಫ್ ಖಾತೆಯನ್ನು ವರ್ಗಾಯಿಸುವುದನ್ನು ಮರೆಯಬೇಡಿ.
* ನೀವು ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿದಾಗ ಪ್ರತ್ಯೇಕ ಪಿಎಫ್ ಖಾತೆಗಳು ತೆರೆಯಲಾಗುತ್ತದೆ. ಆದ್ದರಿಂದ ನಿಮ್ಮ ಎಲ್ಲಾ ಪಿಎಫ್ ಖಾತೆಗಳನ್ನು ಒಂದೇ ಯುಎಎನ್ ನಂಬರ್‌ಗೆ ಜೋಡಿಸಿ.
* 58 ವರ್ಷ ಮುಗಿಯುವುದರೊಳಗೆ ನೀವು ನಿವೃತ್ತಿ ಹೊಂದಿದರೆ, ಅದಾಗಿ 36 ತಿಂಗಳು ಅಥವಾ 3 ವರ್ಷದೊಳಗೆ ಪಿಎಫ್ ಹಣವನ್ನು ಹಿಂಪಡೆಯಲು ಮರೆಯದಿರಿ.