ಅತೀ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲ ನೀಡುತ್ತೆ ಈ ಬ್ಯಾಂಕುಗಳು!
ನಮಗೆ ಯಾವುದೇ ಮೂಲದಿಂದ ಹಣ ಲಭ್ಯವಾಗದೆ ಇದ್ದಾಗ ನಮಗೆ ಕೊನೆಯ ಆಯ್ಕೆ ವೈಯಕ್ತಿಕ ಸಾಲವಾಗಿದೆ. ಬೇರೆಯವರ ಕೈಯಿಂದ ಹಣವನ್ನು ಪಡೆದು ಆ ಹಣ ಹಿಂದಕ್ಕೆ ಕೊಡಲು ಪರದಾಡುವ ಬದಲಾಗಿ ನಾವು ಬ್ಯಾಂಕ್‌ನಿಂದ ವೈಯಕ್ತಿಕ ಸಾಲ ಪಡೆದು ಪ್ರತಿ ತಿಂಗಳು ಇಎಂಐ ಮೂಲಕ ಮರುಪಾವತಿ ಮಾಡಬಹುದು.
ಚಿನ್ನದ ಸಾಲವನ್ನು ಪಡೆಯುವ ಸಂದರ್ಭದಲ್ಲಿ ನಾವು ಚಿನ್ನವನ್ನು ಅಡವಿಟ್ಟು ಸಾಲವನ್ನು ಪಡೆಯುತ್ತೇವೆ. ಇದಕ್ಕಾಗಿ ಚಿನ್ನ ನಮ್ಮಲ್ಲಿ ಇರುವುದು ಅತೀ ಮುಖ್ಯವಾಗಿದೆ. ಆದರೆ ನಾವು ವೈಯಕ್ತಿಕ ಸಾಲವನ್ನು ಪಡೆಯುವಾಗ ಯಾವುದೇ ಅಡಮಾನವನ್ನು ಇಡಬೇಕಾಗಿಲ್ಲ.
ಆಧಾರ್ ಕಾರ್ಡ್ ಮೂಲಕ ತ್ವರಿತ ಸಾಲ ಪಡೆಯುವುದು ಹೇಗೆ?
ನಾವು ವೈಯಕ್ತಿಕ ಸಾಲವನ್ನು ಪಡೆಯುವ ಸಂದರ್ಭದಲ್ಲಿ ಅತೀ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಬ್ಯಾಂಕ್‌ನಿಂದ ಸಾಲವನ್ನು ಪಡೆಯುವುದು ನಮ್ಮ ಬುದ್ಧಿವಂತಿಕೆ ಕೂಡಾ ಹೌದು. ಯಾಕೆಂದರೆ ವೈಯಕ್ತಿಕ ಸಾಲದ ಮೇಲೆ ಅತೀ ಹೆಚ್ಚು ಬಡ್ಡಿದರವನ್ನು ವಿಧಿಸಲಾಗುತ್ತದೆ. ಕ್ರೆಡಿಟ್ ಸ್ಕೋರ್ ನೋಡಿಕೊಂಡು ಬ್ಯಾಂಕುಗಳು ಅತೀ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತದೆ. ಆ ಬ್ಯಾಂಕುಗಳು ಯಾವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ವೈಯಕ್ತಿಕ ಸಾಲದ ಮೇಲೆ ಅತೀ ಕಡಿಮೆ ಬಡ್ಡಿದರ ಈ ಬ್ಯಾಂಕ್‌ಗಳಲ್ಲಿ
ಐಡಿಬಿಐ ಬ್ಯಾಂಕ್: 25,000ಕ್ಕಿಂತ ಮೇಲೆ 5 ಲಕ್ಷಕ್ಕಿಂತ ಕಡಿಮೆ, ಅವಧಿ 12-60, ಬಡ್ಡಿದರ 8.90% - 14.00%
ಪಂಜಾಬ್ ನ್ಯಾಷನಲ್ ಬ್ಯಾಂಕ್: ಹತ್ತು ಲಕ್ಷದವರೆಗೆ, ಅವಧಿ 60 ತಿಂಗಳವರೆಗೆ, ಬಡ್ಡಿದರ 9.35% - 15.35%
ಇಂಡಿಯನ್ ಬ್ಯಾಂಕ್: 50000ದಿಂದ 5 ಲಕ್ಷದವರೆಗೆ, ಅವಧಿ 12 - 36 ತಿಂಗಳು, ಬಡ್ಡಿದರ 9.40% - 9.90%
ಕರೂರ್ ವೈಶ್ಯ ಬ್ಯಾಂಕ್: ಹತ್ತು ಲಕ್ಷದವರೆಗೆ, ಅವಧಿ 12 - 60 ತಿಂಗಳು, ಬಡ್ಡಿದರ 9.40% - 19.00%
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ: 25000ದಿಂದ 20 ಲಕ್ಷದವರೆಗೆ, ಅವಧಿ 06 - 72 ತಿಂಗಳು, ಬಡ್ಡಿದರ 9.80% - 12.80%

ಬಡ್ಡಿದರ ಸ್ಥಿರವೇ, ಅಸ್ಥಿರವೇ ನೋಡಿಕೊಳ್ಳಿ
ನಾವು ವೈಯಕ್ತಿಕ ಸಾಲವನ್ನು ಪಡೆಯುವ ಸಂದರ್ಭದಲ್ಲಿ ಬಡ್ಡಿದರವು ಸ್ಥಿರವಾಗಿರುತ್ತದೆಯೇ ಅಥವಾ ಸಮಯಕ್ಕೆ ತಕ್ಕಂತೆ ಬದಲಾವಣೆ ಹೊಂದುತ್ತದೆಯೇ ಎಂದು ತಿಳಿದುಕೊಳ್ಳಬೇಕು. ಬಡ್ಡಿದರವು ಸ್ಥಿರವಾಗಿದ್ದರೆ ನಿಮ್ಮ ಮಾಸಿಕ ಇಎಂಐ ಸ್ಥಿರವಾಗಿರುತ್ತದೆ. ಅದರಲ್ಲಿ ಯಾವುದೇ ಬದಲಾವಣೆಗಳು ಉಂಟಾಗುವುದಿಲ್ಲ. ಒಂದು ವೇಳೆ ಬಡ್ಡಿದರವು ಸ್ಥಿರವಾಗಿಲ್ಲದಿದ್ದರೆ, ಸಮಯಕ್ಕೆ ತಕ್ಕಂತೆ ಬದಲಾವಣೆ ಆಗಲಿದೆ. ಉದಾಹರಣೆಗೆ ಇತ್ತೀಚೆಗೆ ಆರ್‌ಬಿಐ ರೆಪೋ ದರ ಏರಿಕೆ ಮಾಡಿದ ಕಾರಣದಿಂದಾಗಿ ಸಾಲದ ಬಡ್ಡಿದರವು ಏರಿಕೆಯಾಗಿ ಇಎಂಐ ಮೊತ್ತ ಹೆಚ್ಚಳವಾಗಿದೆ. ಸಾಮಾನ್ಯವಾಗಿ ರೆಪೋ ದರ ಏರಿಕೆಯು ಗೃಹ, ಕಾರು ಸಾಲದ ಮೇಲೆ ಪರಿಣಾಮ ಉಂಟು ಮಾಡುತ್ತದೆ.

ಯಾರು ವೈಯಕ್ತಿಕ ಸಾಲವನ್ನು ನೀಡುತ್ತಾರೆ?
ನೀವು ಸ್ನೇಹಿತರೊಂದಿಗೆ ಅಥವಾ ಕುಟುಂಬದವರೊಂದಿಗೆ ವೈಯಕ್ತಿಕ ಸಾಲವನ್ನು ಕೇಳಬಹುದು. ಹಾಗೆಯೇ ಕೆಲವು ಸಹಕಾರಿ ಬ್ಯಾಂಕ್‌ಗಳು, ಹಣಕಾಸು ಸಂಸ್ಥೆಗಳು ಕೂಡಾ ವೈಯಕ್ತಿಕ ಸಾಲವನ್ನು ನೀಡುತ್ತದೆ. ಎನ್‌ಬಿಎಫ್‌ಸಿಗಳಾದ ಟಾಟಾ ಕ್ಯಾಪಿಟಲ್, ಬಜಾಜ್ ಫಿನ್‌ಸರ್ವ್‌ನಿಂದಲೂ ಸಾಲವನ್ನು ಪಡೆಯಬಹುದು.. ಹಾಗೆಯೇ ಎಸ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಕೂಡಾ ವೈಯಕ್ತಿಕ ಸಾಲವನ್ನು ನೀಡುತ್ತದೆ.

ವೈಯಕ್ತಿಕ ಸಾಲದ ಮೇಲಿನ ಶುಲ್ಕ, ಅವಧಿ
ಬ್ಯಾಂಕುಗಳು ವೈಯಕ್ತಿಕ ಸಾಲದ ಮೇಲೆ ಪ್ರೋಸೆಸಿಂಗ್ ಚಾರ್ಜ್ ಅನ್ನು ವಿಧಿಸುತ್ತದೆ. ನೀವು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಕೆ ಮಾಡಿದ ಬಳಿಕ ಸ್ಟಾಮ್, ಮೊದಲಾದವುಗಳಿಗೆ ತಗುಲುವ ವೆಚ್ಚವನ್ನು ಸಾಲದಿಂದಲೇ ಕಡಿತ ಮಾಡಿ ನೀಡಲಾಗುತ್ತದೆ. ಪ್ರತಿ ಬ್ಯಾಂಕಿನಲ್ಲೂ ಬೇರೆ ಬೇರೆ ರೀತಿಯಲ್ಲಿ ಶುಲ್ಕ ವಿಧಿಸಲಾಗುತ್ತದೆ. ಇನ್ನು ನಾವು ಸಮಯಕ್ಕೂ ಮೊದಲೇ ಸಾಲ ಮರುಪಾವತಿ ಮಾಡಿಬಿಡುವುದಾದರೂ ಅದಕ್ಕೂ ಹೆಚ್ಚು ಶುಲ್ಕ ವಿಧಿಸುವ ಹಕ್ಕು ಬ್ಯಾಂಕ್‌ಗಳಿಗೆ ಇದೆ. ಆದ್ದರಿಂದ ಎಲ್ಲಾ ಶುಲ್ಕವನ್ನು ನೋಡಿಕೊಂಡು ನಾವು ಸಾಲ ಪಡೆಯಲು ಬ್ಯಾಂಕ್ ಆಯ್ಕೆ ಮಾಡಬೇಕಾಗುತ್ತದೆ. ಹೆಚ್ಚಾಗಿ ಬ್ಯಾಂಕ್‌ಗಳು ಐದು ವರ್ಷಗಳ ವೈಯಕ್ತಿಕ ಸಾಲವನ್ನು ನೀಡುತ್ತದೆ. ಇದರ ಅವಧಿ ಬದಲಾವಣೆಯಾಗುತ್ತದೆ.