ಟೈಮ್ ಡೆಪಾಸಿಟ್ ಸ್ಕೀಮ್ 2019: 1 ಲಕ್ಷಕ್ಕೆ 39 ಸಾವಿರ ಬಡ್ಡಿ
ವಿತ್ತ ಸಚಿವಾಲಯವು ನ್ಯಾಷನಲ್ ಸೇವಿಂಗ್ಸ್ ಟೈಮ್ ಡೆಪಾಸಿಟ್ ಸ್ಕೀಮ್ 2019ರ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಯಲ್ಲಿ ನಾಲ್ಕು ವಿಧವಾದ ಟೈಮ್ ಡೆಪಾಸಿಟ್ (ಅಥವಾ ಫಿಕ್ಸೆಡ್ ಡೆಪಾಸಿಟ್) ಖಾತೆಗಳು ಇರುತ್ತವೆ. ಒಂದು ವರ್ಷದ ಖಾತೆ, ಎರಡು ವರ್ಷದ ಖಾತೆ, ಮೂರು ವರ್ಷದ ಖಾತೆ ಮತ್ತು ಐದು ವರ್ಷದ ಖಾತೆ ಇರುತ್ತದೆ.
ಈ ಖಾತೆಗಳಲ್ಲಿ ಒಂದು, ಎರಡು, ಮೂರು ಮತ್ತು ಐದು ವರ್ಷಗಳಿಗೆ ಡೆಪಾಸಿಟ್ ಮಾಡಬಹುದು. ಪ್ರಾಪ್ತ ವಯಸ್ಕರೊಬ್ಬರು, ಮೂವರು ಜಂಟಿ ಹೆಸರಿನಲ್ಲಿ ಡೆಪಾಸಿಟ್ ಖಾತೆ ಮಾಡಬಹುದು. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರಬಹುದು ಅಥವಾ ಜಂಟಿಯಾಗಿ ಇನ್ನೊಬ್ಬ ವ್ಯಕ್ತಿ ಜತೆಗೆ ಖಾತೆ ಹೊಂದಿರಬಹುದು.
ಟೈಮ್ ಡೆಪಾಸಿಟ್ ನಲ್ಲಿ ಇರಬೇಕಾದ ಕನಿಷ್ಠ ಮೊತ್ತ ಒಂದು ಸಾವಿರ ರುಪಾಯಿ. ಯಾವುದೇ ಗರಿಷ್ಠ ಮಿತಿ ಇಲ್ಲ. ನೂರು ರುಪಾಯಿಯಂತೆ ಹೆಚ್ಚಿಸಿಕೊಳ್ಳುತ್ತಾ ಯಾವುದೇ ಮೊತ್ತವನ್ನು ಟೈಮ್ ಡೆಪಾಸಿಟ್ ಖಾತೆಗೆ ಠೇವಣಿ ಮಾಡಬಹುದು.

ಟೈಮ್ ಡೆಪಾಸಿಟ್ ನ ಬಡ್ಡಿ ದರದ ಲೆಕ್ಕಾಚಾರ:
ಸದ್ಯದ ಬಡ್ಡಿ ದರ (ವಾರ್ಷಿಕ) ನಾಲ್ಕು ವಿಭಾಗದಲ್ಲಿ ನೀಡಲಾಗುವುದು:
* 1 ವರ್ಷಕ್ಕೆ 6.9%
* 2 ವರ್ಷಕ್ಕೆ 6.9%
* 3 ವರ್ಷಕ್ಕೆ 6.9%
* 5 ವರ್ಷಕ್ಕೆ 7.7%
ಮುಖ್ಯ ನಿಯಮಗಳು:
ಡೆಪಾಸಿಟ್ ಮೇಲಿನ ಬಡ್ಡಿ ದರವು ಮೂರು ತಿಂಗಳಿಗೊಮ್ಮೆ ಸೇರ್ಪಡೆಯಾಗುತ್ತದೆ. ಆ ನಂತರ ಖಾತೆ ತೆರೆದ ದಿನಾಂಕದಿಂದ ಒಂದು ವರ್ಷದ ನಂತರ ಪಾವತಿ ಮಾಡಲಾಗುತ್ತದೆ. ಖಾತೆದಾರರ ಉಳಿತಾಯ ಖಾತೆಗೆ ಬಡ್ಡಿಯನ್ನು ಹಾಕಲಾಗುತ್ತದೆ. ಒಂದು ವೇಳೆ ಠೇವಣಿದಾರರು ವಾರ್ಷಿಕವಾಗಿ ಬಡ್ಡಿಯನ್ನು ವಿಥ್ ಡ್ರಾ ಮಾಡದಿದ್ದಲ್ಲಿ ಅದಕ್ಕೆ ಹೆಚ್ಚುವರಿಯಾಗಿ ಬಡ್ಡಿ ಸಿಗುವುದಿಲ್ಲ.
ಇಲ್ಲೊಂದು ಉದಾಹರಣೆ ನೀಡಲಾಗಿದೆ. ಅದರ ಅನ್ವಯ, ಒಂದು ಲಕ್ಷ ರುಪಾಯಿ ಡೆಪಾಸಿಟ್ ಮಾಡಿದರೆ ನಾಲ್ಕು ಯೋಜನೆಗಳಲ್ಲಿ ವರ್ಷಕ್ಕೆ ಎಷ್ಟು ಬಡ್ಡಿ ಬರುತ್ತದೆ ಎಂಬ ವಿವರ ಹೀಗಿದೆ:
1 6.9% 7,081
2 6.9% 7,081
3 6.9% 7,081
5 7.7% 7,925
ಅವಧಿಪೂರ್ವ ವಿಥ್ ಡ್ರಾ:
ಒಂದು ವೇಳೆ ಐದು ವರ್ಷದ ಟೈಮ್ ಡೆಪಾಸಿಟ್ ಖಾತೆಯನ್ನು ನಾಲ್ಕು ವರ್ಷದ ನಂತರ ಕ್ಲೋಸ್ ಮಾಡಿದಲ್ಲಿ ಮೂರು ವರ್ಷದ ಅವಧಿಗೆ ಇರುವ ಬಡ್ಡಿ ದರವೇ ದೊರೆಯುತ್ತದೆ. ಮತ್ತು ಈಗಾಗಲೇ ಪಾವತಿಸಿರುವ ಹೆಚ್ಚುವರಿ ಬಡ್ಡಿಯನ್ನು ವಸೂಲಿ ಮಾಡಲಾಗುತ್ತದೆ. ಅಂದ ಹಾಗೆ ಈ ಟೈಮ್ ಡೆಪಾಸಿಟ್ ಅಕೌಂಟ್ ಅನ್ನು ಅಡಮಾನ ಮಾಡಬಹುದು ಅಥವಾ ವರ್ಗಾವಣೆ ಮಾಡಬಹುದು.