ಪ್ಯಾಕ್ ಮಾಡದ ಈ 14 ವಸ್ತುಗಳ ಮೇಲೆ ಜಿಎಸ್‌ಟಿ ಇಲ್ಲ: packed ವಸ್ತುಗಳ ಮೇಲೆ ತೆರಿಗೆಯೇಕೆ?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮೊದಲೇ ಪ್ಯಾಕ್ ಮಾಡದ, ಲೇಬಲ್ ಇಲ್ಲದ ಯಾವೆಲ್ಲಾ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ. ಈ ವಸ್ತುಗಳ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಿದ್ದಾರೆ.
ಈವರೆಗೆ ಜಿಎಸ್‌ಟಿ ವಿಧಿಸದ ವಸ್ತುಗಳ ಮೇಲೆ ಕೇಂದ್ರ ಸರ್ಕಾರವು ಹೊಸದಾಗಿ ಜಿಎಸ್‌ಟಿ ವಿಧಿಸಿರುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ವಿರೋಧ ಪಕ್ಷಗಳು ಸರ್ಕಾರದ ಈ ಕ್ರಮದ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿದೆ. ಈ ಹಿನ್ನೆಲೆಯಿಂದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಬಗ್ಗೆ ಸ್ಪಷ್ಟಣೆ ನೀಡಿದ್ದಾರೆ. ಧಾನ್ಯಗಳು, ಅಕ್ಕಿ, ಹಿಟ್ಟು, ಮೊಸರಿನ ಮೇಲೆ ಶೇಕಡ 5ರಷ್ಟು ಜಿಎಸ್‌ಟಿ ವಿಧಿಸುವುದರ ಬಗ್ಗೆ ಸ್ಪಷ್ಟೀಕರಣ ನೀಡಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಸ್ತುಗಳನ್ನು ಮೊದಲೇ ಪ್ಯಾಕ್ ಮಾಡಿದ್ದರೆ, ಲೇಬಲ್ ಇದ್ದರೆ ಮಾತ್ರ ಜಿಎಸ್‌ಟಿ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.
ಹಾಗೆಯೇ ಕಳೆದ ತಿಂಗಳು ಬಿಜೆಪಿಯೇತರ ಆಡಳಿತ ಇರುವ ರಾಜ್ಯಗಳ ಪ್ರತಿನಿಧಿಗಳ ಸಮ್ಮುಖದಲ್ಲೇ ಈ ನಿರ್ಧಾರವನ್ನು ಅವಿರೋಧವಾಗಿ ಕೈಗೊಳ್ಳಲಾಗಿದೆ. ಧಾನ್ಯ, ಕಾಳು, ಹಿಟ್ಟಿನ ಮೇಲೆ ಜಿಎಸ್‌ಟಿಯ ಬಗ್ಗೆ ಮರುವಿಮರ್ಶೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ವಿತ್ತ ಸಚಿವೆ ನೀಡಿದ ಸ್ಪಷ್ಟಣೆ
ಈ ಬಗ್ಗೆ ಸರಣಿ ಟ್ವೀಟ್ ಅನ್ನು ಮಾಡಿದ್ದಾರೆ. "ಇತ್ತೀಚೆಗೆ 47ನೇ ಜಿಎಸ್‌ಟಿ ಸಭೆ ನಡೆದಿದ್ದು, ಇದರಲ್ಲಿ ಧಾನ್ಯ, ಕಾಳು, ಹಿಟ್ಟು ಮೊದಲಾದವುಗಳ ಮೇಲೆ ಜಿಎಸ್‌ಟಿ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ ಈಗ ಈ ಬಗ್ಗೆ ವದಂತಿಯನ್ನು ಹರಡಲಾಗುತ್ತಿದೆ. ಇಲ್ಲಿ ನಾವು ಈ ಬಗ್ಗೆ ಸ್ಪಷ್ಟನೆ ನೀಡುತ್ತೇವೆ," ಎಂದು ತಿಳಿಸಿದ್ದಾರೆ.

ಆಹಾರ ಧಾನ್ಯದ ಮೇಲೆ ತೆರಿಗೆ ಇದೇ ಮೊದಲ?
"ಮೊದಲ ಬಾರಿಗೆ ಆಹಾರ ಸಾಮಾಗ್ರಿಗಳ ಮೇಲೆ ನಾವು ತೆರಿಗೆ ವಿಧಿಸುತ್ತಿದ್ದೇವೆಯೇ?, ಅಲ್ಲವಲ್ಲವೇ. ಜಿಎಸ್‌ಟಿ ಆರಂಭ ಆಗುವುದಕ್ಕೂ ಮುನ್ನವೇ ರಾಜ್ಯ ಸರ್ಕಾರಗಳು ಆಹಾರಧಾನ್ಯಗಳ ಮೇಲಿನ ತೆರಿಗೆಯಿಂದ ಸಾಕಷ್ಟು ತೆರಿಗೆ ಸಂಪಾದನೆ ಮಾಡಿದೆ. ಪಂಜಾಬ್ ರಾಜ್ಯ ಒಂದರಲ್ಲೇ ಸುಮಾರು 2,000 ಕೋಟಿ ರೂಪಾಯಿ ಆಹಾರ ಧಾನ್ಯದ ಮೇಲೆ ತೆರಿಗೆಯಿಂದ ಸಂಗ್ರಹ ಮಾಡಲಾಗಿದೆ. ಉತ್ತರ ಪ್ರದೇಶದಲ್ಲಿ 700 ಕೋಟಿ ರೂಪಾಯಿ ಸಂಗ್ರಹ ಮಾಡಲಾಗಿದೆ. ಈಗ ನಾವು ಜಿಎಸ್‌ಟಿ ಬಳಿಕ ಬರೀ ಬ್ರಾಂಡೆಡ್ (BRANDED) ಧಾನ್ಯ, ಕಾಳು, ಹಿಟ್ಟಿನ ಮೇಲೆ ಜಿಎಸ್‌ಟಿಯನ್ನು ವಿಧಿಸುತ್ತಿದ್ದೇವೆ. ನೋಂದಾಯಿತ (REGISTERED) ಬ್ರಾಂಡ್ ಅಡಿಯಲ್ಲಿ ಮಾರಾಟ ಮಾಡುವ ವಸ್ತುಗಳ ಮೇಲೆ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತದೆ," ಎಂದು ಕೇಂದ್ರ ಹಣಕಾಸು ಸಚಿವೆ ವಿವರಿಸಿದ್ದಾರೆ.

ಈ ನಿರ್ಧಾರಕ್ಕೆ ಪ್ರಮುಖ ಕಾರಣವೇನು?
"ಬ್ರಾಂಡೆಡ್ ಸರಕುಗಳ ಮೇಲೆ ತೆರಿಗೆಯನ್ನು ಪಾವತಿಸುತ್ತಿರುವ ಪೂರೈಕೆದಾರರು ಮತ್ತು ಉದ್ಯಮ ಸಂಘಗಳು ಅಸಮಾಧಾನ ವ್ಯಕ್ತಪಡಿಸಿದೆ. ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಎಲ್ಲಾ ಪ್ಯಾಕ್ ಮಾಡಲಾದ ಸರಕುಗಳ ಮೇಲೆ ಏಕರೂಪವಾಗಿ ಜಿಎಸ್‌ಟಿ ವಿಧಿಸಬೇಕು ಎಂದು ಸಂಘಗಳು ಸರ್ಕಾರಕ್ಕೆ ಪತ್ರವನ್ನು ಬರೆದಿದೆ. ರಾಜ್ಯಗಳು ಕೂಡಾ ತೆರಿಗೆಯಲ್ಲಿ ವಂಚನೆ ನಡೆಯುತ್ತಿದೆ ಎಂಬುವುದನ್ನು ಗಮನಿಸಿದೆ. ರಾಜಸ್ಥಾನ, ಪಶ್ಚಿಮ ಬಂಗಾಳ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ ಮತ್ತು ಗುಜರಾತ್‌ನ ಅಧಿಕಾರಿಗಳನ್ನು ಒಳಗೊಂಡ ಸಮಿತಿಯು ಈ ಸಮಸ್ಯೆಯನ್ನು ಪರಿಶೀಲನೆ ಮಾಡಿದೆ. ಈ ಹಿನ್ನೆಲೆಯಿಂದಾಗಿ ಜಿಎಸ್‌ಟಿ ಕೌನ್ಸಿಲ್ ತನ್ನ 47 ನೇ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡಿದೆ," ಎಂದು ಸ್ಪಷ್ಟನೆ ನೀಡಿದ್ದಾರೆ.

ಯಾವೆಲ್ಲ ವಸ್ತುಗಳ ಮೇಲೆ ಜಿಎಸ್‌ಟಿ ಇಲ್ಲ?
ಕಾಳು,ಬೇಳೆ, ಗೋಧಿ, ಓಟ್ಸ್, ಜೋಳ, ಅಕ್ಕಿ, ಹಿಟ್ಟು, ಸೂಜಿ, ರವೆ, ಕಡಲೆ ಹಿಟ್ಟು, ಮಂಡಕ್ಕಿ, ಮೊಸರು,ಮಜ್ಜಿಗೆಯನ್ನು ಪ್ಯಾಕ್ ಮಾಡದೆ, ಲೇಬಲ್ ಇಲ್ಲದೆ ಮಾರಾಟ ಮಾಡಿದರೆ ಇದರ ಮೇಲೆ ಯಾವುದೇ ಜಿಎಸ್‌ಟಿಯನ್ನು ವಿಧಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಹಾಗೆಯೇ ಈ ನಿರ್ಧಾರವನ್ನು ಬಿಜೆಪಿಯೇತರ ರಾಜ್ಯಗಳ ಪ್ರತಿನಿಧಿಗಳ ಸಮ್ಮುಖದಲ್ಲೇ ಅವಿರೋಧವಾಗಿ ಕೈಗೊಳ್ಳಲಾಗಿದೆ ಎಂದು ಪುನರುಚ್ಛರಿಸಿದ್ದಾರೆ.