Post Office PPF Scheme 2022 : ದಿನಕ್ಕೆ 417 ರೂ ವ್ಯಯಿಸಿ, 1 ಕೋಟಿ ಪಡೆಯಿರಿ
ಅಂಚೆ ಕಚೇರಿಯ ಹಲವು ಯೋಜನೆಗಳು ಒಳ್ಳೆಯ ಜನಪ್ರಿಯತೆ ಪಡೆದಿವೆ. ಕೆಲ ಪೋಸ್ಟ್ ಆಫೀಸ್ ಸ್ಕೀಮ್‌ಗಳು ಎಫ್‌ಡಿಗಿಂತಲೂ ಉತ್ತಮ ರಿಟರ್ನ್ ಕೊಡುತ್ತವೆ. ಸರ್ಕಾರೀ ಯೋಜನೆಗಳಾದ್ದರಿಂದ ಸುರಕ್ಷಿತ ಹೂಡಿಕೆಯೂ ಹೌದು. ಹೀಗಾಗಿ, ಪೋಸ್ಟ್ ಆಫೀಸ್‌ನ ಸೇವಿಂಗ್ ಸ್ಕೀಮ್‌ಗಳಿಗೆ ಒಳ್ಳೆಯ ಬೇಡಿಕೆ ಇದೆ. ವಿವಿಧ ಪ್ರಮಾಣದ ಹೂಡಿಕೆಗಳು ಮತ್ತು ರಿಟರ್ನ್‌ಗಳ ಆಯ್ಕೆಗಳನ್ನು ಈ ಸ್ಕೀಮ್‌ಗಳು ನೀಡುತ್ತವೆ. ಹೆಚ್ಚು ಹೊರೆಯಾಗದಷ್ಟು ಪ್ರಮಾಣದಲ್ಲಿ ನೀವು ಉಳಿತಾಯ ಹಣವನ್ನು ಈ ಯೋಜನೆಗೆ ನಿಯೋಜಿಸಬಹುದು.
ಪೋಸ್ಟ್ ಆಫೀಸ್‌ನ ಪಿಪಿಎಫ್ ಖಾತೆ ಒಳ್ಳೆಯ ಉಳಿತಾಯ ಯೋಜನೆಯಾಗಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್‌ನಲ್ಲಿ ಹೆಚ್ಚು ಬಡ್ಡಿ, ಹೆಚ್ಚು ರಿಟರ್ನ್ಸ್ ಇರುತ್ತದೆ. ನಿಗದಿತ ಬಡ್ಡಿ ದರವೇ ಅನ್ವಯ ಆಗುತ್ತದೆ. ಆರ್‌ಬಿಐ ಬಡ್ಡಿ ದರ ಏರಿಳಿಕೆ ಮಾಡಿದರೂ ಪಿಪಿಎಫ್ ಸ್ಕೀಮ್ ತೆಗೆದುಕೊಳ್ಳುವಾಗ ಇದ್ದ ಬಡ್ಡಿ ದರ ಕೊನೆಯವರೆಗೂ ಅನ್ವಯ ಆಗುತ್ತದೆ. ಹೀಗಾಗಿ, ನಿಮಗೆ ಸಿಗುವ ರಿಟರ್ನ್ ನಿಮ್ಮ ಎಣಿಕೆಯಂತೆಯೇ ಇರುತ್ತದೆ.
ಒಂದು ಕೋಟಿ ರಿಟರ್ನ್ ಪಡೆಯುವುದು ಹೇಗೆ?
ಪೋಸ್ಟ್ ಆಫೀಸ್‌ನ ಪಿಪಿಎಫ್ ಸ್ಕೀಮ್‌ನಲ್ಲಿ ನೀವು ದಿನಕ್ಕೆ 417 ರೂಗಳಂತೆ 25 ವರ್ಷಗಳ ಕಾಲ ತೊಡಗಿಸಿಕೊಳ್ಳುತ್ತಾ ಹೋದಲ್ಲಿ ನಿಮಗೆ 1 ಕೋಟಿ ರೂಪಾಯಿ ರಿಟರ್ನ್ ಸಿಗುತ್ತದೆ.

ಪಿಪಿಎಫ್ ಸ್ಕೀಮ್‌ನಲ್ಲಿ ಮೂಲತಃ 15 ವರ್ಷದವರೆಗೆ ಪಾಲಿಸಿ ಅವಧಿ ಇರುತ್ತದೆ. ನೀವು 5 ವರ್ಷ ಅವಧಿ ವಿಸ್ತರಿಸುವ ಅವಕಾಶ ಇರುತ್ತದೆ. ಈ ರೀತಿ ಎರಡು ಅವಕಾಶಗಳಿರುತ್ತವೆ. ಅಂದರೆ ಮೂಲ 15 ವರ್ಷ ಪಾಲಿಸಿ ಅವಧಿ ಜೊತೆಗೆ 10 ವರ್ಷ ಕಾಲ ನೀವು ಅವಧಿ ವಿಸ್ತರಿಸಬಹುದು. ಇದು ನೀವು ಇಚ್ಛಿಸಿದಲ್ಲಿ ಮಾತ್ರ.
ಈ ಸ್ಕೀಮ್‌ನಲ್ಲಿ ನಿಮ್ಮ ಠೇವಣಿ ಹಣಕ್ಕೆ ಶೇ. 7.1ರ ವಾರ್ಷಿಕ ಬಡ್ಡಿ ಕೂಡಿಕೊಳ್ಳುತ್ತಾ ಹೋಗುತ್ತದೆ. ಮೇಲಾಗಿ ನಿಮಗೆ ತೆರಿಗೆ ವಿನಾಯಿತಿ ಇರುತ್ತದೆ. ನಿಮಗೆ ಸಿಗುವ ಬಡ್ಡಿಯ ಮೇಲೆ ಹೆಚ್ಚು ತೆರಿಗೆ ಬೀಳುವುದಿಲ್ಲ.

ಲೆಕ್ಕಾಚಾರ ಹೀಗೆ
ಪಿಪಿಎಫ್ ಸ್ಕೀಮ್‌ನಲ್ಲಿ ನೀವು ದಿನಕ್ಕೆ 417 ರೂ, ಅಥವಾ ತಿಂಗಳಿಗೆ 12,500 ರೂನಂತೆ 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಒಟ್ಟು ಹಣ 22.50 ಲಕ್ಷ ರೂ ಸಂಗ್ರಹ ಆಗುತ್ತದೆ. ಇದಕ್ಕೆ ವಾರ್ಷಿಕ ಬಡ್ಡಿ 7.1 ನಿಮ್ಮ ಹಣಕ್ಕೆ ಜಮೆಯಾಗುತ್ತಾ ಹೋಗುತ್ತದೆ. ನಿಮಗೆ ಬಡ್ಡಿಯೇ 18.18 ಲಕ್ಷ ರೂ ಸಿಗುತ್ತದೆ. ನಿಮ್ಮ ಅಸಲಿ ಹೂಡಿಕೆ ಮತ್ತು ಬಡ್ಡಿ ಎರಡೂ ಸೇರಿದರೆ ನಿಮಗೆ ಸಿಗುವ ರಿಟರ್ನ್ 40.68 ಲಕ್ಷ ರೂ ಆಗುತ್ತದೆ. ಇದು ಸ್ಕೀಮ್ ಅವಧಿಯಾದ 15 ವರ್ಷಕ್ಕೆ ಸಿಗುವ ರಿಟರ್ನ್.
ಇನ್ನು ನೀವು ಎರಡು ಬಾರಿ ಅವಧಿ ವಿಸ್ತರಿಸಿಕೊಂಡು ಕಂತುಗಳನ್ನು ಪಾವತಿಸಿದರೆ ಒಟ್ಟು ಅವಧಿ 15 ವರ್ಷದಿಂದ 25 ವರ್ಷಕ್ಕೆ ಏರುತ್ತದೆ. ಆಗ ನೀವು ಕಟ್ಟುವ ಒಟ್ಟು ಹಣ 37.50 ಲಕ್ಷ ರೂ ಆಗುತ್ತದೆ. 25 ವರ್ಷದಲ್ಲಿ ಶೇಖರಣೆ ಆಗುವ ಬಡ್ಡಿ ಹಣವೇ 65.58 ಲಕ್ಷ ರೂ ಅಗುತ್ತದೆ. ಅಸಲು ಮತ್ತು ಬಡ್ಡಿ ಎರಡೂ ಸೇರಿ ನಿಮ್ಮ ಕೈ ಸೇರುವ ಹಣ 1.03 ಕೋಟಿ ರೂಪಾಯಿ ಆಗುತ್ತದೆ.