ಸೆಪ್ಟೆಂಬರ್ 1ರಿಂದ ಯಾವೆಲ್ಲಾ ಹಣಕಾಸು ನಿಯಮ ಬದಲಾವಣೆ ತಿಳಿಯಿರಿ
ಆಗಸ್ಟ್ ತಿಂಗಳು ಕೊನೆಯಾಗುತ್ತಿದ್ದು ಸೆಪ್ಟೆಂಬರ್ ತಿಂಗಳು ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಎಲ್‌ಪಿಜಿ ದರ ಏರಿಕೆ, ಟೋಲ್ ತೆರಿಗೆ ಏರಿಕೆ ಸೇರಿದಂತೆ ಹಲವಾರು ಹಣಕಾಸು ಸಂಬಂಧಿತ ಬದಲಾವಣೆಗಳು ಆಗಲಿದೆ. ಹಾಗೆಯೇ ಕೆಲವು ಕಾರ್ಯಗಳಿಗೆ ಈ ತಿಂಗಳ ಅಂತ್ಯವೇ ಕೊನೆಯ ದಿನಾಂಕವಾಗಿದೆ. ಹೊಸ ತಿಂಗಳಿನಲ್ಲಿ ಆಗುವ ಈ ಬದಲಾವಣೆಗಳು ಖಚಿತವಾಗಿಯೂ ನಿಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪರಿಣಾಮ ಉಂಟು ಮಾಡಲಿದೆ.
ನಮ್ಮ ಜೀವನವನ್ನು ಸರಿಯಾಗಿ ಹೊಂದಾಣಿಕೆ ಮಾಡಿಕೊಂಡು ಸಾಗಲು ನಮಗೆ ವೈಯಕ್ತಿಕ ಹಣಕಾಸು ಮುಖ್ಯವಾಗಿದೆ. ನಮ್ಮ ಸುತ್ತಮುತ್ತಲೂ ಆಗುವ ಎಲ್ಲಾ ಬದಲಾವಣೆಗಳು ಕೂಡಾ ನಮ್ಮ ವೈಯಕ್ತಿಕ ಹಣಕಾಸಿನ ಮೇಲೆ ಪ್ರಭಾವ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಕೆಲವು ನಿಯಮ ಬದಲಾವಣೆಯು ನಮಗೆ ಲಾಭವನ್ನು ಉಂಟು ಮಾಡಿದರೆ, ಇನ್ನು ಕೆಲವು ನಿಯಮ ಬದಲಾವಣೆಯು ನಮಗೆ ನಷ್ಟವನ್ನು ಉಂಟು ಮಾಡಬಹುದು. ನಮ್ಮ ಮಾಸಿಕ ಬಜೆಟ್ ಅನ್ನು ಬುಡಮೇಲು ಮಾಡಬಹುದು.
ಸೆಪ್ಟೆಂಬರ್ ಒಂದರಿಂದ ನಮ್ಮ ವೈಯಕ್ತಿಕ ಹಣಕಾಸು ಮೇಲೆ ಪ್ರಭಾವ ಬೀರುವ ಬ್ಯಾಂಕಿಂಗ್ ಸಂಬಂಧಿತ ನಿಯಮಗಳು ಬದಲಾವಣೆಯಾಗಲಿದೆ. ಇನ್ನು ಕೆಲವು ಕಾರ್ಯಗಳನ್ನು ಮಾಡಲು ಈ ತಿಂಗಳೇ ಕೊನೆಯ ದಿನಾಂಕವಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ನಿಯಮ ಬದಲಾವಣೆಯಾಗಲಿದೆ. ಟೋಲ್ ತೆರಿಗೆ ಏರಿಕೆಯಾಗಿದೆ. ಪಿಎಂ ಕಿಸಾನ್ ಯೋಜನೆ ಸಂಬಂಧಿತ ಕಾರ್ಯವನ್ನು ರೈತರು ಮಾಡಬೇಕಾಗಿದೆ. ಸೆಪ್ಟೆಂಬರ್‌ನಿಂದ ಯಾವೆಲ್ಲಾ ಹಣಕಾಸು ನಿಯಮಗಳು ಬದಲಾವಣೆಯಾಗಲಿದೆ ಎಂದು ತಿಳಿಯೋಣ ಮುಂದೆ ಓದಿ....

ಎಲ್‌ಪಿಜಿ ದರ ಏರಿಕೆ
ಪ್ರತಿ ತಿಂಗಳು ಕೂಡಾ ಪೆಟ್ರೋಲಿಯಂ ಕಂಪನಿಗಳು ಎಲ್‌ಪಿಜಿ ದರವನ್ನು ಏರಿಕೆ ಮಾಡುತ್ತದೆ. ಪ್ರಸ್ತುತ ಈ ಹಣದುಬ್ಬರದ ನಡುವೆ ಹೊಸ ತಿಂಗಳಿನಲ್ಲಿ ಎಲ್‌ಪಿಜಿ ದರವು ಏರಿಕೆಯಾಗುವ ಸಾಧ್ಯತೆ ಇದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು ಹಲವಾರು ತಿಂಗಳುಗಳಿಂದ ಏರಿಕೆ ಮಾಡಲಾಗುತ್ತಿದೆ. ಆದರೆ ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆಯು ಈಗಾಗಲೇ ಗಗನಕ್ಕೆ ಏರಿದೆ. ಸರ್ಕಾರ ಉಜ್ವಲ ಯೋಜನೆಯಡಿಯಲ್ಲಿ ವಾರ್ಷಿಕ 12 ಸಿಲಿಂಡರ್‌ಗಳಿಗೆ 200 ರೂಪಾಯಿಯಂತೆ ಸಬ್ಸಿಡಿ ಘೋಷಣೆ ಮಾಡಿದೆ. ಕಳೆದ ಬಾರಿ ಜುಲೈನಲ್ಲಿ ಎಲ್‌ಪಿಜಿ ದರವನ್ನು ಹೆಚ್ಚಳ ಮಾಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಮತ್ತೆ ಏರಿಕೆ ಮಾಡುವ ಸಾಧ್ಯತೆ ಇದೆ.

ವಿಮಾ ಎಜೆಂಟ್‌ಗಳಿಗೆ ಕಮಿಷನ್ ಇಳಿಕೆ
ಐಆರ್‌ಟಿಎಐ ಜನರೆಲ್ ವಿಮೆಯ ನಿಯಮವನ್ನು ಬದಲಾವಣೆ ಮಾಡಿದೆ. ಈ ಹಿಂದೆ ವಿಮಾ ಏಜೆಂಟ್‌ಗಳು ಸುಮಾರು ಶೇಕಡ 30ರಿಂದ 35ರಷ್ಟು ಕಮಿಷನ್ ಅನ್ನು ಪಡೆಯುತ್ತಿದ್ದರು. ಆದರೆ ಇನ್ನು ಮುಂದೆ ಶೇಕಡ 20ರಷ್ಟು ಮಾತ್ರ ಕಮಿಷನ್ ಲಭ್ಯವಾಗಲಿದೆ. ಇದರಿಂದಾಗಿ ವಿಮೆ ಪಡೆಯುವವರ ಪ್ರೀಮಿಯಂ ಮೊತ್ತ ಇಳಿಕೆಯಾಗಲಿದೆ.

ಪಿಎನ್‌ಬಿ ಕೆವೈಸಿ ಅಪ್‌ಡೇಟ್
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಗ್ರಾಹಕರು ಕೆವೈಸಿ ಮಾಹಿತಿಯನ್ನು ಅಪ್‌ಡೇಟ್ ಮಾಡುವಂತೆ ತಿಳಿಸಿದೆ. ಕೆವೈಸಿ ಅಪ್‌ಡೇಟ್ ಮಾಡಲು ಆಗಸ್ಟ್ 31 ಕೊನೆಯ ದಿನಾಂಕ ಎಂದು ಬ್ಯಾಂಕ್ ಈಗಾಗಲೇ ಸ್ಪಷ್ಟಣೆ ನೀಡಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿ ಪ್ರಕಾರ ಕೆವೈಸಿ ಅಪ್‌ಡೇಟ್ ಮಾಡುವುದು ಕಡ್ಡಾಯ ಎಂದು ಬ್ಯಾಂಕ್ ಹೇಳಿದೆ. ನೀವು ಕೆವೈಸಿ ಅಪ್‌ಡೇಟ್ ಮಾಡದಿದ್ದರೆ ನಿಮ್ಮ ಖಾತೆಯಿಂದ ಹಣವನ್ನು ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಲಾಗಿದೆ.

ಈ ಮಾರ್ಗದಲ್ಲಿ ಟೋಲ್ ತೆರಿಗೆ ಏರಿಕೆ
ಯಮುನಾ ಎಕ್ಸ್‌ಪ್ರೆಸ್‌ನಿಂದ ದೆಹಲಿಗೆ ಪ್ರವಾಸ ಮಾಡುವವರು ಸೆಪ್ಟೆಂಬರ್ 1ರಿಂದ ಅಧಿಕ ಟೋಲ್ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಕಾರು, ಜೀಪು, ವಾನುಗಳು, ಮೋಟಾರು ವಾಹನಗಳ ಟೋಲ್ ಅನ್ನು 2.65 ಕಿಲೋ ಮೀಟರ್‌ಗೆ ರೂಪಾಯಿ 2.50ರಷ್ಟು ಹೆಚ್ಚಳ ಮಾಡಲಾಗಿದೆ. ಕಿಲೋ ಮೀಟರ್‌ಗೆ ಹತ್ತು ಪೈಸೆಯಂತೆ ಹೆಚ್ಚಿಸಲಾಗಿದೆ. ವಾಣಿಜ್ಯ ವಾಹನಗಳು, ಕಾರ್ಗೊ ಟ್ರಕ್‌ಗಳು, ಮಿನಿ ಬಸ್‌ಗಳ ಟೋಲ್ ಕಿಲೋಮೀಟರ್‌ಗೆ 4.15 ರೂಪಾಯಿಗೆ ಏರಳಿದೆ. ಈ ಹಿಂದೆ ರೂಪಾಯಿ 3.90 ಆಗಿತ್ತು. ಟ್ರಕ್, ಬಸ್‌ಗಳ ಟೋಲ್ ರೂಪಾಯಿ 7.90ರಿಂದ ರೂಪಾಯಿ 8.45ಕ್ಕೆ ಹೆಚ್ಚಾಗಿದೆ.

ಪಿಎಂ ಕಿಸಾನ್ ಇಕೆವೈಸಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಇಕೆವೈಸಿ ಕೊನೆಯ ದಿನಾಂಕ 2022ರ ಆಗಸ್ಟ್ 31 ಆಗಿದೆ. ಅದಕ್ಕೂ ಮುನ್ನ ರೈತರು ಇಕೆವೈಸಿ ಅಪ್‌ಡೇಟ್ ಮಾಡಬೇಕಾಗಿದೆ. ಕಳೆದ ತಿಂಗಳು ಗಡುವನ್ನು ವಿಸ್ತರಣೆ ಮಾಡಲಾಗಿದೆ. ಆಗಸ್ಟ್ 31ರ ಒಳಗೆ ಕೆವೈಸಿ ಮಾಡದಿದ್ದರೆ ಮುಂದಿನ ಪಿಎಂ ಕಿಸಾನ್ ಯೋಜನೆಯ ಹಣ ಜಮೆ ಆಗುವುದು ವಿಳಂಬವಾಗಬಹುದು.

ಆಡಿ ಕಾರು ಇನ್ನು ದುಬಾರಿ
ನೀವು ಮುಂದಿನ ತಿಂಗಳಿನಲ್ಲಿ ಆಡಿ (Audi) ಕಾರು ಖರೀದಿ ಮಾಡಲು ನಿರ್ಧಾರ ಮಾಡಿದ್ದರೆ ನಿಮ್ಮ ಬಜೆಟ್ ಕೊಂಚ ಅಧಿಕವಾಗಲಿದೆ. ಯಾಕೆಂದರೆ ಆಡಿ ಕಾರು ಸೆಪ್ಟೆಂಬರ್‌ನಿಂದ ದುಬಾರಿಯಾಗಲಿದೆ. ಆಡಿ ಕಾರು ದರ ಶೇಕಡ 2.5ರಷ್ಟು ಹೆಚ್ಚಳವಾಗಲಿದೆ. ಸೆಪ್ಟೆಂಬರ್ 20ರಿಂದ ಹೊಸ ದರ ಜಾರಿಗೆ ಬರಲಿದೆ.