Year Ender 2022: ಈ ವರ್ಷ ವಿವಾದಕ್ಕೆ ಒಳಗಾದ ಬಾಸ್‌ಗಳು ಇವರೇ ನೋಡಿ!
ಈ ವರ್ಷ ಅಂದರೆ 2022 ಕೊನೆಯಾಗುತ್ತಿದೆ, ಇನ್ನು ಕೆಲವೇ ವಾರಗಳಲ್ಲಿ 2023 ಹೊಸ ವರ್ಷಕ್ಕೆ ನಾವು ಕಾಲಿಡಲಿದ್ದೇವೆ. ಅದಕ್ಕೂ ಮುನ್ನ ನಾವು ನಿಮಗೆ ಈ ವರ್ಷದ ಕೆಲವು ವಿಶೇಷ ವಿಚಾರಗಳನ್ನು ಪ್ರಸ್ತುತ ಪಡಿಸುತ್ತೇವೆ.
2022ರಲ್ಲಿ ಹಲವಾರು ಸಂಸ್ಥೆಗಳಲ್ಲಿ ಗೊಂದಲಗಳು ಉಂಟಾಗಿದೆ. ಪ್ರಮುಖವಾಗಿ ಟ್ವಿಟ್ಟರ್ ಮಾಲೀಕತ್ವವೇ ಬದಲಾವಣೆಯಾಗಿದೆ. ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಎಲಾನ್ ಮಸ್ಕ್ ಟ್ವಿಟ್ಟರ್ ಅನ್ನು ಖರೀದಿ ಮಾಡಿದ್ದು ಬಳಿಕ ಸಂಸ್ಥೆಯಲ್ಲಿ ಹಲವಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಸಂಸ್ಥೆಗೆ ನಷ್ಟ ಉಂಟಾದ ಕಾರಣದಿಂದಾಗಿ ಹಲವಾರು ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ, ಬೇರೆ ಆಯ್ಕೆ ನಮಗೆ ಇಲ್ಲ ಎಂದು ಎಲಾನ್ ಮಸ್ಕ್ ಹೇಳಿಕೊಂಡಿದ್ದಾರೆ.
ಇನ್ನು ಕ್ರಿಪ್ಟೋ ಸಂಸ್ಥೆಯಾದ ಎಫ್‌ಟಿಎಕ್ಸ್ ಸ್ಯಾಮ್ ಬ್ಯಾಂಕ್‌ಮನ್-ಫ್ರೈಡ್ಸ್ ನಾಯಕತ್ವದಲ್ಲಿ ಕುಸಿದು ಬಿದ್ದಿದೆ. ಇನ್ನು ಭಾರತದಲ್ಲಿ ಕೆಲವು ಸಿಇಒಗಳು ಯುವಕರು ದಿನದ 18 ಗಂಟೆ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಈ ನಡುವೆ 2022ರಲ್ಲಿ ವಿವಾದದ ಮೂಲಕವೇ ಸುದ್ದಿಯಾದ ಸಿಇಒಗಳ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ, ಮುಂದೆ ಓದಿ...

ವಿವಾದಗಳ ಸುಳಿಯಲ್ಲಿ ಎಲಾನ್ ಮಸ್ಕ್
ಟೆಸ್ಲಾ ಸಿಇಒ, ವಿಶ್ವದ ಅತೀ ಶ್ರೀಮಂತ ವ್ಯಕ್ತಿ, ಟ್ವಿಟ್ಟರ್ ಸಂಸ್ಥೆಯ ಮಾಲೀಕ ಎಲಾನ್ ಮಸ್ಕ್ ಈ ವರ್ಷ ಪೂರ್ತಿ ವಿವಾದಗಳ ಮೂಲಕವೇ ಸುದ್ದಿಯಾಗಿದ್ದಾರೆ. ಮೊದಲಿಗೆ ಟ್ವಿಟ್ಟರ್ ಅನ್ನು ಖರೀದಿ ಮಾಡುತ್ತೇನೆ ಎಂದು ಹೇಳುವ ಮೂಲಕ ಭಾರೀ ಸುದ್ದಿಯಾಗಿದ್ದರು. ಅದಾದ ಬಳಿಕ ಡೀಲ್‌ನಿಂದ ಹಿಂದೆ ಸರಿಯುವ ಮೂಲಕ ಸುದ್ದಿಯಾದರು. ನಡುವೆ ತನ್ನ ಮಾಲೀಕತ್ವಕ್ಕೆ ಸಂಸ್ಥೆ ಬಂದ ಬಳಿಕ ಟ್ವಿಟ್ಟರ್‌ನಲ್ಲಿ ಮಾಡಲಾಗುವ ಹಲವಾರು ಬದಲಾವಣೆಗಳನ್ನು ಟ್ವೀಟ್ ಮಾಡುವ ಮೂಲಕವೂ ವಿವಾದ ಸೃಷ್ಟಿಸಿದ್ದಾರೆ. ಡೀಲ್‌ನಿಂದ ಹಿಂದೆ ಸರಿಯುತ್ತಿದ್ದಂತೆ ಸಂಸ್ಥೆಯು ಮಸ್ಕ್ ಅನ್ನು ಕೋರ್ಟ್‌ಗೆ ಬಾಗಿಲಿಗೆ ಎಳೆದೊಯ್ದಿದೆ. ಅದಾದ ಬಳಿಕ ಡೀಲ್ ಅನ್ನು ಮಸ್ಕ್ ಒಪ್ಪಲೇ ಬೇಕಾಯಿತು. ಟ್ವಿಟ್ಟರ್ ಮಾಲೀಕತ್ವವನ್ನು ಪಡೆದ ಕೂಡಲೇ ಮುಖ್ಯ ಸ್ಥಾನದಲ್ಲಿ ಇರುವವರನ್ನು ಕೆಲಸದಿಂದ ಮಸ್ಕ್ ವಜಾ ಮಾಡಿದ್ದಾರೆ. ಸುಮಾರು 7500 ಮಂದಿಯನ್ನು ಕೆಲಸದಿಂದ ಮಸ್ಕ್ ತೆಗೆದುಹಾಕಿದ್ದಾರೆ. ಸಂಸ್ಥೆಯಲ್ಲಿ ಸದ್ಯ ಇರುವವರು ಅಧಿಕ ಅವಧಿ, ಹೆಚ್ಚು ಕೆಲಸ ಮಾಡಬೇಕು ಎಂದು ಆದೇಶ ಮಾಡಲಾಗಿದೆ. ಇವೆಲ್ಲವೂ ಭಾರೀ ವಿವಾದಕ್ಕೆ ಕಾರಣವಾಗಿದೆ.

ಸ್ಯಾಮ್ ಬ್ಯಾಂಕ್‌ಮಾನ್-ಫ್ರೈಡ್ ಬಗ್ಗೆ ತಿಳಿಯಿರಿ
ಈ ವರ್ಷ ಕ್ರಿಪ್ಟೋ ಹೂಡಿಕೆ ಬಗ್ಗೆ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಿದೆ. ಎಫ್‌ಟಿಎಕ್ಸ್ ಮಾಲೀಕ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ವಯಸ್ಸು ಕೇವಲ 30 ವರ್ಷ. ಎಫ್‌ಟಿಎಕ್ಸ್ ಎಂಬ ಕ್ರಿಪ್ಟೋ ಎಕ್ಸ್‌ಚೇಂಜ್ ಕಂಪನಿ ಸ್ಥಾಪಿಸಿ ವಂಡರ್ ಕಿಡ್ ಎನಿಸಿದ್ದ. ಬೈನಾನ್ಸ್ ಬಿಟ್ಟರೆ ಅತಿದೊಡ್ಡ ಕ್ರಿಪ್ಟೋ ಎಕ್ಸ್‌ಚೇಂಜ್ ಕಂಪನಿ ಅದಾಗಿತ್ತು. ಆದರೆ, ಯಾವಾಗ ಬೈನಾನ್ಸ್ ಕಂಪನಿ ತನ್ನ ಸಮೀಪ ಸ್ಪರ್ಧಿ ಎಫ್‌ಟಿಎಕ್ಸ್ ಅನ್ನು ಖರೀದಿಸಲು ಮುಂದಾಯಿತೋ ಆಗ ಎಲ್ಲವೂ ಕುಸಿಯಲು ಆರಂಭವಾಯಿತು. ಎಫ್‌ಟಿಎಕ್ಸ್‌ನ ಕರ್ಮಕಾಂಡಗಳ ಬಗ್ಗೆ ವದಂತಿ ರೂಪದಲ್ಲಿ ಸುದ್ದಿಗಳು ಹರಡಲು ಆರಂಭವಾಗಿವೆ. ಎಫ್‌ಟಿಎಕ್ಸ್‌ನಿಂದ ಕ್ರಿಪ್ಟೋ ಹಣವನ್ನು ಲಪಟಾಯಿಸಲಾಗಿದೆ. ಅದರ ಅಂಗ ಸಂಸ್ಥೆಯಾದ ಅಲಾಮೆಡಾ ರೀಸರ್ಚ್ ಕಂಪನಿಗೆ ಫಂಡ್‌ಗಳನ್ನು ರವಾನಿಸಲಾಗಿದೆ ಎಂಬಂತಹ ಸುದ್ದಿ ಬಂದವು. ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಸಿಇಒ ಹುದ್ದೆಯಿಂದ ಕೆಳಗಿಳಿಯಬೇಕಾಯಿತು. ಜಾನ್ ಜೆ ರೇ ಅಧಿಕಾರ ಪಡೆದುಕೊಂಡರು. ಸೋಮವಾರ ಸ್ಯಾಮ್ ಬ್ಯಾಂಕ್‌ಮಾನ್-ಫ್ರೈಡ್ ಅನ್ನು ಬಹಮಾಸ್‌ನಲ್ಲಿ ಬಂಧನ ಮಾಡಲಾಗಿದೆ.

ಎಲಿಜಬೆತ್ ಹೋಮ್ಸ್
ಅಮೆರಿಕದ ಬಯೋಟೆಕ್ ಸಂಸ್ಥೆಯ ಉದ್ಯಮಿಯಾದ ಎಲಿಜಬೆತ್ ಹೋಮ್ಸ್ 11 ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಥೆರಾನೋಸ್ ವಂಚನೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಸೆಲ್ಫ್ ಕಿಟ್ ಮೇಲೆ ಕೆಲವೇ ರಕ್ತದ ಹನಿಗಳನ್ನು ಹಾಕಿದರೆ ವಿವಿಧ ಪರೀಕ್ಷೆಯನ್ನು ನಡೆಸಲು ಸಾಧ್ಯವಿದೆ ಎಂದು ಹೋಮ್ಸ್ ಭರವಸೆ ನೀಡಿದ್ದಾರೆ. ಆದರೆ ತನಿಖೆಯಲ್ಲಿ ಈ ಸೆಲ್ಫ್ ಕಿಟ್ ಸರಿಯಾಗಿ ಕಾರ್ಯನಿರ್ವಹಣೆ ಮಾಡಿಲ್ಲ ಎಂದು ತಿಳಿದುಬಂದಿದೆ. ಹೋಮ್ಸ್ ಗರ್ಭಿಣಿಯಾಗಿದ್ದು, ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಆಕೆಯ ವಕೀಲರು ಹೇಳಿದ್ದಾರೆ.

ಶಾಂತನು ದೇಶ್ಪಾಂಡೆ
ಶಾಂತನು ದೇಶ್ಪಾಂಡೆ ಬಾಂಬೆ ಶೇವಿಂಗ್ ಕಂಪನಿಯ ಸಿಇಒ ಆಗಿದ್ದು, ಯುವಕರು ದಿನದ 18 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ವಿವಾದಕ್ಕೆ ಒಳಗಾಗಿದ್ದಾರೆ. "ನಿಮ್ಮ ಕೆಲಸವನ್ನು ನೀವು ಆರಾಧಿಸಿ, ಕೆಲಸವಿದೆ ಎಂದು ರೋಧನೆ ಪಡಬೇಡಿ. ಪ್ರಸ್ತುತ ಸ್ಥಿತಿಯನ್ನು ಒಪ್ಪಿಕೊಳ್ಳಿ," ಎಂದು ಶಾಂತನು ದೇಶ್ಪಾಂಡೆ ಹೇಳಿದ್ದಾರೆ. ದೇಶ್ಪಾಂಡೆ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ಬಳಿಕ ತನ್ನ ಹೇಳಿಕೆಗೆ ಶಾಂತನು ಕ್ಷಮೆಯಾಚಿಸಿದ್ದಾರೆ. "ನನ್ನ ಪೋಸ್ಟ್‌ನಿಂದ ಯಾರಿಗೆ ನೋವುಂಟಾಗಿದೆಯೋ, ಅವರಿಗೆ ನಾನು ಕ್ಷಮೆ ಕೇಳುತ್ತೇನೆ," ಎಂದು ತಿಳಿಸಿದ್ದರು.

ಅಶ್ನೀರ್ ಗ್ರೋವರ್
ಭಾರತ್‌ಪೇ ಮಾಜಿ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್, ಸಂಸ್ಥೆಯ ಹಣವನ್ನು ಭಾರೀ ಪ್ರಮಾಣದಲ್ಲಿ ದುರುಪಯೋಗ ಮಾಡಿದ ಆರೋಪವನ್ನು ಹೊತ್ತಿದ್ದಾರೆ. ಅಶ್ನೀರ್ ಗ್ರೋವರ್ ಕುಟುಂಬವು ಈ ಹಣ ದುರುಪಯೋಗದಲ್ಲಿ ಭಾಗಿಯಾಗಿದೆ ಎಂಬ ಆರೋಪವಿದೆ. ಭಾರತ್‌ಪೇ ಮಾಜಿ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಶ್ನೀರ್ ಗ್ರೋವರ್, ಮಾಜಿ ಕಂಟ್ರೋಲಿಂಗ್ ಹೆಡ್, ಮಾಧುರಿ ಜೈನ್ ಗ್ರೋವರ್ ಮತ್ತು ಅವರ ಕುಟುಂಬದ ಕೆಲವರ ವಿರುದ್ಧ ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲು ಮಾಡಲಾಗಿದೆ ಎಂದು ಈ ಹಿಂದೆ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ. ಪ್ರಸ್ತುತ ಗ್ರೋವರ್ ಬೇರೆ ಸ್ಟಾರ್ಟ್‌ಅಪ್ ಸಂಸ್ಥೆಯನ್ನು ಆರಂಭ ಮಾಡುವ ಸುದ್ದಿಯಿದೆ.