ಇಪಿಎಫ್ (EPF) ಬಗ್ಗೆ ತಪ್ಪದೇ ತಿಳಿದುಕೊಳ್ಳಲೇಬೇಕಾದ 10 ಸಂಗತಿಗಳು

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಇಪಿಎಫ್ ಅಥವಾ ಕಾರ್ಮಿಕ ಭವಿಷ್ಯ ನಿಧಿ ಇದು ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ಭಾರತ ಸರಕಾರ ಜಾರಿಗೆ ತಂದಿರುವ ಪ್ರಮುಖ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯ ಅನುಸಾರ ಕೆಲಸ ನೀಡಿರುವ ಉದ್ಯೋಗದಾತ ನಿರ್ದಿಷ್ಟ ಮೊತ್ತದ ಹಣವನ್ನು ತನ್ನ ವಂತಿಗೆಯಾಗಿ ಭರಿಸುತ್ತಾನೆ. ಉದ್ಯೋಗಿಯ ವಂತಿಗೆಗೆ ಸಮನಾದ ಮೊತ್ತದ ವಂತಿಗೆಯನ್ನು ಉದ್ಯೋಗದಾತ ಇಪಿಎಫ್ ಖಾತೆಗೆ ಸಲ್ಲಿಸಬೇಕಾಗುತ್ತದೆ. ಈ ಎರಡೂ ಮೊತ್ತಗಳಿಗೆ ಸರಕಾರ ತಾನು ನಿಗದಿಪಡಿಸಿದ ಬಡ್ಡಿಯನ್ನು ನೀಡುತ್ತದೆ.

  ಈಗಲೂ ಇಪಿಎಫ್ ಬಗ್ಗೆ ಸಂಪೂರ್ಣ ವಿವರಗಳು ಬಹುತೇಕ ನೌಕರರರಿಗೆ ಗೊತ್ತೇ ಇಲ್ಲ. ಇಪಿಎಫ್ ಖಾತೆಯಿಂದ ಹಣ ಹಿಂಪಡೆಯುವುದು, ಬಡ್ಡಿ ದರ ಹಾಗೂ ತಮ್ಮ ವಂತಿಗೆಯ ಪ್ರಮಾಣದ ಬಗ್ಗೆ ಬಹುತೇಕ ಉದ್ಯೋಗಿಗಳಲ್ಲಿ ಹಲವಾರು ಗೊಂದಲಗಳಿವೆ. ಈ ಎಲ್ಲ ಗೊಂದಲಗಳನ್ನು ನಿವಾರಿಸುವ ಸಲುವಾಗಿ ಇಪಿಎಫ್ ಬಗೆಗಿನ ಪ್ರಮುಖ ಅಂಶಗಳನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ. ಈ ಅಂಕಣ ಓದಿ ಇಪಿಎಫ್ ಬಗ್ಗೆ ನಿಮ್ಮ ಮನದಲ್ಲಿರುವ ಸಂಶಯಗಳನ್ನು ನಿವಾರಿಸಿಕೊಳ್ಳಿ. ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ? ಇಲ್ಲಿವೆ 5 ವಿಧಾನ

   

  ಇಪಿಎಫ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಹತ್ತು ಪ್ರಮುಖ ಸಂಗತಿಗಳು

  1. ಯುಎಎನ್ (ಯುನಿವರ್ಸಲ್ ಅಕೌಂಟ್ ನಂಬರ್)

  ಯುಎಎನ್ ಅಥವಾ ಯುನಿವರ್ಸಲ್ ಅಕೌಂಟ್ ನಂಬರ ಇದು ಪ್ರತಿಯೊಬ್ಬ ಎಪಿಎಫ್ ಬಳಕೆದಾರರಿಗೆ ನೀಡಲಾಗುವ ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಹಲವಾರು ಕಡೆಗಳಲ್ಲಿ ಕೆಲಸ ಮಾಡುವಾಗ ಆಯಾ ಉದ್ಯೋಗದಾತರು ಉದ್ಯೋಗಿಗೆ ನೀಡುವ ಸದಸ್ಯತಾ ಐಡಿ ವಿವರಗಳು ಯುಎಎನ್‌ಗೆ ಲಿಂಕ್ ಆಗಿರುತ್ತವೆ. ಇದರಿಂದ ಉದ್ಯೋಗಿಯು ತನ್ನ ಎಲ್ಲ ಸದಸ್ಯತಾ ಐಡಿ ವಿವರಗಳನ್ನು ಒಂದೇ ಕಡೆ ಪರಿಶೀಲನೆ ಮಾಡಲು ಸಾಧ್ಯವಾಗುತ್ತದೆ. ಪ್ರತಿ ಬಾರಿ ಉದ್ಯೋಗಿಯು ಕೆಲಸ ಬದಲಾಯಿಸಿದಾಗ ಹೊಸ ಕಂಪನಿಗೆ ತನ್ನ ಇಪಿಎಫ್ ಯುಎಎನ್ ನಂಬರನ್ನು ನೀಡಬೇಕಾಗುತ್ತದೆ. ಇದರಿಂದ ಹೊಸ ಇಪಿಎಫ್ ಖಾತೆಯನ್ನು ಯುಎಎನ್ ನಂಬರಿಗೆ ಲಿಂಕ್ ಮಾಡಲು ಸಾಧ್ಯವಾಗುತ್ತದೆ. ಪಿಎಫ್ ಖಾತೆಯಿಂದ ಹಣ ಹಿಂಪಡೆಯುವುದು ಮತ್ತು ಖಾತೆಗಳನ್ನು ವರ್ಗಾವಣೆ ಮಾಡುವುದು ಇದರಿಂದ ಅತ್ಯಂತ ಸುಲಭವಾಗಿದೆ. ಏನಿದು ಇಪಿಎಫ್ ಆಪ್(EPF App)? ಇದರ ಪ್ರಯೋಜನಗಳೇನು?

  2. ಇಪಿಎಫ್ ವಂತಿಗೆ

  ಉದ್ಯೋಗಿ ಹಾಗೂ ಉದ್ಯೋಗದಾತ ಇಬ್ಬರೂ ಇಪಿಎಫ್ ಖಾತೆಗೆ ಸಮಪ್ರಮಾಣದ ವಂತಿಗೆಯನ್ನು ನೀಡಬೇಕಾಗುತ್ತದೆ. ಉದ್ಯೋಗಿಯು ತನ್ನ ಮೂಲ ಸಂಬಳ, ತುಟ್ಟಿ ಭತ್ಯೆ ಮತ್ತು ಉಳಿತಾಯ ಭತ್ಯೆಗಳ ಒಟ್ಟು ಮೊತ್ತದ ಶೇ.12 ರಷ್ಟು ಹಣವನ್ನು ಇಪಿಎಫ್ ವಂತಿಗೆಯಾಗಿ ನೀಡಬೇಕು. ಉದ್ಯೋಗದಾತ ನೀಡುವ ಇಷ್ಟೇ ಮೊತ್ತದ ವಂತಿಗೆಯ ಶೇ. 8.33 ರಷ್ಟನ್ನು ಉದ್ಯೋಗಿಯ ಪಿಂಚಣಿ ನಿಧಿಗೆ ಸೇರಿಸಿ ಬಾಕಿ ಮೊತ್ತವನ್ನು ಮಾತ್ರ ಇಪಿಎಫ್‌ಗೆ ಸೇರಿಸಲಾಗುತ್ತದೆ. 20 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಎಲ್ಲ ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗುತ್ತದೆ. ಒಂದೊಮ್ಮೆ ಸಂಸ್ಥೆಯಲ್ಲಿ 20 ಕ್ಕೂ ಕಡಿಮೆ ನೌಕರರು ಇದ್ದಲ್ಲಿ ಉದ್ಯೋಗಿ ಹಾಗೂ ಉದ್ಯೋಗದಾತರ ಇಪಿಎಫ್ ವಂತಿಗೆ ಪ್ರಮಾಣ ಶೇ. 10 ರಷ್ಟಾಗಿರುತ್ತದೆ. ನಿಮಗೆ ಗೊತ್ತಿರದ ಇಪಿಎಫ್(EPF) ನಿಯಮಗಳು

  3. ಇಪಿಎಫ್ ಬಡ್ಡಿ ದರ

  ಪ್ರಸ್ತುತ ಇಪಿಎಫ್ ಸಂಸ್ಥೆಯು ತನ್ನ ಸದಸ್ಯರಿಗೆ ಶೇ.೮.೫೫ ರಷ್ಟು ಬಡ್ಡಿದರ ನಿಗದಿಪಡಿಸಿದೆ. ಕೇಂದ್ರದ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯವು ಪ್ರಸ್ತುತ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಇಪಿಎಫ್ ಬಡ್ಡಿದರದಲ್ಲಿ 10 ಮೂಲ ಅಂಕಗಳಷ್ಟು ಕಡಿಮೆ ಮಾಡಿದೆ. ಆಯಾ ಕಾಲಕ್ಕೆ ತಕ್ಕಂತೆ ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯವು ಪ್ರತಿವರ್ಷ ಇಪಿಎಫ್ ಬಡ್ಡಿದರಗಳನ್ನು ಪರಿಷ್ಕರಣೆ ಮಾಡುತ್ತದೆ. ಪ್ರತಿತಿಂಗಳು ಇಪಿಎಫ್ ಖಾತೆಯಲ್ಲಿ ಚಾಲ್ತಿಯಲ್ಲಿರುವ ಮೊತ್ತವನ್ನು ಆಧರಿಸಿ ಬಡ್ಡಿಯನ್ನು ಲೆಕ್ಕ ಹಾಕಲಾಗುತ್ತದೆ.

  4. ಇಪಿಎಫ್ ಸ್ವಯಂ ಚಾಲಿತ ವರ್ಗಾವಣೆ (ಆಟೊ ಟ್ರಾನ್ಸಫರ್)

  ಉದ್ಯೋಗಿಯೊಬ್ಬ ತನ್ನ ಕೆಲಸದ ಕಂಪನಿಯನ್ನು ಬದಲಾಯಿಸಿದಾಗ ಆತ ಸೇರಿಕೊಳ್ಳುವ ಕಂಪನಿಯಲ್ಲಿ ಹೊಸ ಇಪಿಎಫ್ ಖಾತೆಯನ್ನು ಆರಂಭಿಸಲಾಗುತ್ತದೆ. ಈ ಸಂದರ್ಭದಲ್ಲಿ ಉದ್ಯೋಗಿಯು ತನ್ನ ಹಳೆಯ ಇಪಿಎಫ್ ಖಾತೆಯಲ್ಲಿನ ಮೊತ್ತವನ್ನು ಹೊಸ ಖಾತೆಗೆ ವರ್ಗಾಯಿಸಬೇಕಾಗುತ್ತದೆ. ಫಾರ್ಮ ನಂ.13 ನ್ನು ಭರ್ತಿ ಮಾಡಿ ಸಲ್ಲಸುವ ಮೂಲಕ ಈ ರೀತಿ ಹೊಸ ಖಾತೆಗೆ ಹಣ ವರ್ಗಾವಣೆ ಮಾಡಬಹುದು. ಅಲ್ಲದೆ ಕೆಲಸ ಬದಲಾಯಿಸಿದಾಗ ಸ್ವಯಂ ಚಾಲಿತವಾಗಿ ಹೊಸ ಖಾತೆಗೆ ಹಣ ವರ್ಗಾವಣೆ ಆಗುವಂತೆ ಇಪಿಎಫ್ ಸೌಲಭ್ಯ ಕಲ್ಪಿಸಿದೆ. ಉದ್ಯೋಗಿಯು ಫಾರ್ಮ ನಂ.11 ನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಇಪಿಎಫ್ ಆಟೊ ಟ್ರಾನ್ಸಫರ್ ಚಾಲನೆಗೊಳಿಸಬಹುದು.

  5. ಆನ್ಲೈನ್ ಸೌಲಭ್ಯಗಳು

  ಇಪಿಎಫ್‌ನ ಹಲವಾರು ಸೌಲಭ್ಯಗಳನ್ನು ಪಡೆದುಕೊಳ್ಳುವುದು ಈಗ ಮೊದಲಿಗಿಂತ ಬಹಳಷ್ಟು ಸುಲಭವಾಗಿದೆ. ತಮ್ಮ ಯುಎಎನ್ ನಂಬರ್ ಬಳಸಿ ಇಪಿಎಫ್ ಖಾತೆಗೆ ಲಾಗಿನ್ ಮಾಡುವ ಮೂಲಕ ಮೊತ್ತ ಹಿಂಪಡೆಯುವಿಕೆ, ಹಣ ಅಥವಾ ಖಾತೆ ವರ್ಗಾವಣೆ, ಕೆವೈಸಿ ಅಪ್ಡೇಟ್, ಬ್ಯಾಲೆನ್ಸ್ ತಪಾಸಣೆ ಮುಂತಾದ ಕೆಲಸಗಳನ್ನು ಆನ್ಲೈನ್ ಮೂಲಕವೇ ಸುಲಭವಾಗಿ ನಿರ್ವಹಿಸಬಹುದು. ಆನ್ಲೈನ್ ಮೂಲಕ ಇಪಿಎಫ್ ಖಾತೆಗೆ ಪ್ರವೇಶ ಪಡೆಯಬೇಕಾದರೆ ಮೊದಲು ಇಪಿಎಫ್ ಪೋರ್ಟಲ್‌ಗೆ ಹೋಗಿ ಯುಎಎನ್ ನಂಬರ್ ಬಳಸಿ ಪಾಸವರ್ಡ ಸೃಷ್ಟಿಸಬೇಕು. ಇಷ್ಟು ಮಾಡಿದರೆ ಆನ್ಲೈನ್ ಮೂಲಕ ಇಪಿಎಫ್ ಖಾತೆಗೆ ಪ್ರವೇಶ ಪಡೆಯಬಹುದಾಗಿದೆ. ಆನ್ಲೈನ್ ಮೂಲಕ ನಡೆಸುವ ಎಲ್ಲ ಇಪಿಎಫ್ ವ್ಯವಹಾರಗಳು ಉಚಿತವಾಗಿದ್ದು, ಈ ಸೌಲಭ್ಯವು ದಿನದ 24 ಗಂಟೆಗಳ ಕಾಲವೂ ಲಭ್ಯವಿರುತ್ತದೆ. ಆದಾಗ್ಯೂ ಆನ್ಲೈನ್ ಮೂಲಕ ಯಾವುದೇ ಮೊತ್ತವನ್ನು ಹಿಂಪಡೆಯಬೇಕಾದಲ್ಲಿ ಅಥವಾ ಹಣ ಸ್ವೀಕರಿಸಬೇಕಾದಲ್ಲಿ ಪ್ಯಾನ್ ಹಾಗೂ ಆಧಾರ ಸಂಖ್ಯೆಗಳನ್ನು ನೀಡುವುದು ಕಡ್ಡಾಯವಾಗಿದೆ.

  6. ಇಪಿಎಫ್‌ನಿಂದ ಹಣ ಹಿಂಪಡೆಯುವಿಕೆ

  ಆನ್ಲೈನ್ ಮೂಲಕವೇ ಇಪಿಎಫ್ ಸದಸ್ಯರು ತಮ್ಮ ಖಾತೆಯಲ್ಲಿನ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ಇಪಿಎಫ್ ಸಂಸ್ಥೆ ಕಲ್ಪಿಸಿದೆ. ಅಲ್ಲದೇ ಯಾವುದೇ ಸಂದರ್ಭದಲ್ಲಿ ಹಿಂಪಡೆಯುವ ಹಣದ ಮೊತ್ತವು 10 ಲಕ್ಷ ರೂ. ದಾಟುತ್ತಿದ್ದರೆ ಅಂಥ ಎಲ್ಲ ವ್ಯವಹಾರಗಳನ್ನು ಆನ್ಲೈನ್ ಮೂಲಕವೇ ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆನ್ಲೈನ್ ಮೂಲಕ ಹಣ ಹಿಂಪಡೆಯಲು ಮೊದಲಿಗೆ ಕೆವೈಸಿ ದಾಖಲೆಗಳಿಗೆ (ಪ್ಯಾನ್ ಹಾಗೂ ಆಧಾರ ಕಾರ್ಡ) ಸಂಬಂಧಿತ ಸಂಸ್ಥೆ (ಕ್ರಮವಾಗಿ ತೆರಿಗೆ ಇಲಾಖೆ ಹಾಗೂ ಆಧಾರ ಪ್ರಾಧಿಕಾರಗಳು) ಗಳಿಂದ ಡಿಜಿಟಲ್ ಸಿಗ್ನೇಚರ್ ಪಡೆದುಕೊಳ್ಳಬೇಕಾಗುತ್ತದೆ. ಫಾರ್ಮ ನಂ.31, 19 ಮತ್ತು 10 ಸಿ ಗಳನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಹಣ ಹಿಂಪಡೆಯಲು ಅರ್ಜಿ ಸಲ್ಲಿಸಬಹುದು.

  7. ಉಮಂಗ್ ಆಪ್ (UMANG app)

  ಇಪಿಎಫ್‌ಓಗೆ ಸಂಬಂಧಿಸಿದ ಎಲ್ಲ ಸೌಲಭ್ಯಗಳನ್ನು ಸುಲಭವಾಗಿ ಬಳಸಿಕೊಳ್ಳಲು ಅನುವಾಗುವಂತೆ ಇಪಿಎಫ್ ಸಂಸ್ಥೆ ಉಮಂಗ್ ಹೆಸರಿನ ಮೊಬೈಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ. ಉದ್ಯೋಗಿಗಳು ಹಾಗೂ ಉದ್ಯೋಗದಾತರು ಇಬ್ಬರಿಗೂ ಅನುಕೂಲವಾಗುವಂತೆ ಈ ಆಪ್ ಅನ್ನು ರೂಪಿಸಲಾಗಿದೆ. ಕಂಪನಿಗಳ ಹುಡುಕಾಟ, ಇಪಿಎಫ್ ಕಚೇರಿ ಹುಡುಕಾಟ, ಕ್ಲೇಮ್ ಬಗ್ಗೆ ಮಾಹಿತಿ, ಎಸ್ಸೆಮ್ಮೆಸ್ ಮೂಲಕ ಖಾತೆಯ ವಿವರಗಳು ಹೀಗೆ ಹಲವಾರು ಸೇವೆಗಳು ಉಮಂಗ್ ಆಪ್‌ನಲ್ಲಿ ಲಭ್ಯವಿವೆ. ಅಲ್ಲದೆ ಯಾವುದೇ ಗೊಂದಲಗಳ ನಿವಾರಣೆಗೆ ಲೈವ್ ಚಾಟ್ ಸೌಲಭ್ಯವೂ ಇದರಲ್ಲಿದೆ. ಆಪ್ ಬಳಸಿ ಉದ್ಯೋಗಿಗಳು ತಮ್ಮ ಯುಎಎನ್ ಸಂಖ್ಯೆಗೆ ಆಧಾರ ಸಂಖ್ಯೆಯನ್ನು ಲಿಂಕ್ ಮಾಡಬಹುದು.

  8. ಹೊಸ ಕಂಪನಿಯ ಕಾಗದ ರಹಿತ ನೋಂದಣಿ ಪ್ರಕ್ರಿಯೆ

  20 ಅಥವಾ ಅದಕ್ಕೂ ಹೆಚ್ಚು ಉದ್ಯೋಗಿಗಳಿರುವ ಸಂಸ್ಥೆಗಳು ಇಪಿಎಫ್ ಸಂಸ್ಥೆಯ ವ್ಯಾಪ್ತಿಗೆ ಒಳಪಡುತ್ತವೆ. ಇಂಥ ಯಾವುದೇ ಕಂಪನಿಯನ್ನು ಆರಂಭಿಸುವ ಮುನ್ನ ಫಾರ್ಮ 5ಎ ಯನ್ನು ಭರ್ತಿ ಮಾಡಿ ಹತ್ತಿರದ ಕ್ಷೇತ್ರೀಯ ಕಾರ್ಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಸಂಸ್ಥೆಗಳ ಮಾಲೀಕತ್ವ ಬದಲಾವಣೆ ಆದಾಗ ಸಹ ಇದೇ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಆದರೆ ಈಗ ಇ-ಸಿಗ್ನೇಚರ್ ವ್ಯವಸ್ಥೆ ಅಳವಡಿಸಿಕೊಂಡು ಆನ್ಲೈನ್ ಮೂಲಕವೇ ಫಾರ್ಮ 5ಎ ಯನ್ನು ಅಪ್ಲೋಡ್ ಮಾಡಬಹುದಾಗಿದೆ. ಇದರಿಂದ ಸಾಕಷ್ಟು ಕಾಗದದ ಉಳಿತಾಯ ಸಾಧ್ಯವಾಗಿದ್ದು, ಇಪಿಎಫ್ ಕಚೇರಿಗಳಿಗೆ ಅಲೆದಾಟವೂ ಕಡಿಮೆಯಾಗಿದೆ.

  9. ಕೇಂದ್ರೀಕೃತ ಪಾವತಿ ವ್ಯವಸ್ಥೆಗೆ ನೋಂದಣಿ (ಎನ್‌ಪಿಸಿಐ)

  ಇಪಿಎಫ್‌ಓ ತನ್ನ ಪಾವತಿ ಪ್ಲಾಟಫಾರ್ಮ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್‌ಪಿಸಿಐ) ದೊಂದಿಗೆ ಜೋಡಿಸಲು ಮುಂದಾಗಿದೆ. ಇದರಿಂದ ಹಣ ವರ್ಗಾವಣೆ ಪ್ರಕ್ರಿಯೆ ಮತ್ತಷ್ಟು ಸುಲಭಗೊಂಡು ವ್ಯವಹಾರ ಶುಲ್ಕಗಳಲ್ಲಿ ಇಳಿಕೆಯಾಗಬಹುದು. ಅಲ್ಲದೆ ಇದರಿಂದ ಒಂದೇ ದಿನದಲ್ಲಿ ಇಪಿಎಫ್‌ಓ ತನ್ನ ಉದ್ಯೋಗಿಗಳಿಗೆ ಹಣ ಪಾವತಿಸಲು ಸಾಧ್ಯವಾಗುತ್ತದೆ.

  10. ಇಪಿಎಫ್ ಅಡ್ವಾನ್ಸ್ ಪಡೆಯುವುದು

  ನಿವೃತ್ತಿಯ ಸಂದರ್ಭದಲ್ಲಿ ಉದ್ಯೋಗಿಗೆ ದೊಡ್ಡ ಮೊತ್ತದ ಹಣವನ್ನು ನೀಡುವುದು ಇಪಿಎಫ್‌ನ ಮುಖ್ಯ ಉದ್ದೇಶವಾಗಿದೆ. ಆದರೂ ನಿವೃತ್ತಿಯ ಮುಂಚೆ ಸಹ ಹಣ ಹಿಂಪಡೆಯಲು ಉದ್ಯೋಗಿಗಳಿಗೆ ಅವಕಾಶ ನೀಡಲಾಗಿದೆ. ಹೀಗೆ ಹಣ ಹಿಂಪಡೆಯುವಿಕೆಯನ್ನು ಇಪಿಎಫ್ ಅಡ್ವಾನ್ಸ್ ಎಂದು ಕರೆಯಲಾಗುತ್ತದೆ. ಹೊಸ ಮನೆ ಖರೀದಿಸಲು, ಗೃಹ ಸಾಲ ಮರುಪಾವತಿ, ಆರೋಗ್ಯ ಸಂಬಂಧಿ ವೆಚ್ಚಗಳು, ಮಕ್ಕಳ ಮದುವೆ ಅಥವಾ ಅವರ ಉನ್ನತ ವಿದ್ಯಾಭ್ಯಾಸದ ಕಾರಣಗಳಿಗೆ ಮಾತ್ರ ಹಣ ಹಿಂಪಡೆಯಲು ಅವಕಾಶವಿದೆ. ಉದ್ಯೋಗಿಯ ಕೆಲಸದ ಮಾಡುತ್ತಿರುವ ವರ್ಷಗಳು ಹಾಗೂ ಇನ್ನಿತರ ಕೆಲ ಅಂಶಗಳನ್ನು ಆಧರಿಸಿ ಹಿಂಪಡೆಯಬಹುದಾದ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಇಪಿಎಫ್ ಖಾತೆಯಿಂದ ಹಿಂಪಡೆದ ಹಣವನ್ನು ಮರುಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಆಧಾರ ಹಾಗೂ ಪ್ಯಾನ್ ಸಂಖ್ಯೆಗಳನ್ನು ಈಗಾಗಲೇ ತಮ್ಮ ಪಿಎಫ್ ಯುಎಎನ್‌ಗೆ ಲಿಂಕ್ ಮಾಡಿರುವ ಉದ್ಯೋಗಿಗಳು ತಮ್ಮ ಸಂಸ್ಥೆಯ ಮಾಲೀಕರ ಅನುಮತಿ ಇಲ್ಲದೆಯೇ ಆನ್ಲೈನ್ ಮೂಲಕ ಹಣ ಹಿಂಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

  English summary

  10 Things You Need to Know About EPF

  Employees’ Provident Fund or EPF is a scheme managed by the government that promotes savings for professionals employed in the service sector.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more