For Quick Alerts
ALLOW NOTIFICATIONS  
For Daily Alerts

ಆರ್ಥಿಕ ವರ್ಷದ ಮೊದಲ ದಿನ ಷೇರು ಪೇಟೆ ಎಂಬ ಮಾಯೆ ಬಗ್ಗೆ

By ಕೆ.ಜಿ. ಕೃಪಾಲ್
|

ನಮ್ಮ ಹಿರಿಯರ ದುಡ್ಡು-ಕಾಸಿನ ವಿಚಾರದ ಶಿಸ್ತು ನಮಗೆ ಆದರ್ಶ ಆಗಬೇಕು. ಅವುಗಳೆಲ್ಲವೂ ಇಂದಿಗೂ ಪ್ರಸ್ತುತವೇ ಎಂದು ಪ್ರಶ್ನಿಸುವವರು ಸಿಗಬಹುದು. ಆದರೆ ಅವೆಲ್ಲವೂ ಅಪ್ರಸ್ತುತವೇ ಎಂದರೆ ಅದನ್ನು ಬಿಲ್ ಕುಲ್ ಒಪ್ಪಲು ಸಾಧ್ಯವಿಲ್ಲ. ನಮ್ಮ ಹಿರಿಯರನ್ನೆಲ್ಲ ನೆನೆಯುತ್ತಾ, ನನ್ನ ನಾಲ್ಕು ದಶಕಗಳ ಅನುಭವದಿಂದ ಅರಿತ ಅಲ್ಪ ಅಂಶಗಳನ್ನು ಆರ್ಥಿಕ ವರ್ಷದ ಮೊದಲ ದಿನ ಸಣ್ಣ ಹೂಡಿಕೆದಾರರರಿಗೆ ಪ್ರಸ್ತುತ ಪಡಿಸಲು ಇಚ್ಚಿಸುತ್ತೇನೆ.

ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್ ಕಳೆದ ಆಗಸ್ಟ್ ಅಂತ್ಯದಲ್ಲಿ 38 ,989 ಪಾಯಿಂಟ್ ಗಳನ್ನು ತಲುಪಿ, ಸರ್ವಕಾಲೀನ ದಾಖಲೆ ನಿರ್ಮಿಸಿತಾದರೂ ಕೇವಲ ಎರಡು ತಿಂಗಳಲ್ಲಿ ಸುಮಾರು ಆರು ಸಾವಿರ ಪಾಯಿಂಟುಗಳಿಗೂ ಹೆಚ್ಚಿನ ಕುಸಿತವನ್ನು ಕಂಡಿತು. ಈ ಭಾರಿ ಕುಸಿತದ ಹಿಂದೆ ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆ ರೀತಿ ಅಡಗಿದೆ.

ಈ ಸಮಯದ ಅಂತರದಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಸತತವಾದ ಮಾರಾಟದ ಹಾದಿ ಹಿಡಿದಿದ್ದೇ ಈ ರೀತಿಯ ಮಂದ ವಾತಾವರಣವನ್ನು ನಿರ್ಮಿಸಲು ಕಾರಣವಾಗಿದೆ. ಆದರೆ ಈ ಸಮಯದಲ್ಲಿ ರಕ್ಷಣೆಗೆ ಬಂದಿದ್ದು ಗೃಹಿಣಿಯರ ಸಾಸಿವೆ ಡಬ್ಬಿ ಹಣ ( ಅಂದರೆ ಡೊಮೆಸ್ಟಿಕ್ ಸೇವಿಂಗ್ಸ್).

ಅಲ್ಲಿಂದ ಕೇವಲ ಮಾರ್ಚ್ ಒಂದೇ ತಿಂಗಳಲ್ಲಿ ಸುಮಾರು 2,600 ಪಾಯಿಂಟ್ ಗಳ ಏರಿಕೆಯನ್ನು ಪಡೆದು ದಿಗ್ಭ್ರಮೆ ಉಂಟು ಮಾಡಿದೆ. ಇತ್ತೀಚಿನ ದಿನಗಳಲ್ಲಿ ಷೇರಿನ ಬೆಲೆಗಳ ಚಲನೆಯನ್ನು ಗಮನಿಸಿದಾಗ ಷೇರುಪೇಟೆಯ ಚಟುವಟಿಕೆಯು ಈಗ ಹೂಡಿಕೆಯಾಗದೆ ವ್ಯಾವಹಾರಿಕ ಚಟುವಟಿಕೆಯಾಗಿದೆ.

ವಿಶ್ಲೇಷಣೆಗಳು ವರ್ಣರಂಜಿತವಾಗಿದ್ದರೂ ಸಹಜತೆಯಿಂದ ಕೂಡಿದ್ದರೂ ಪೇಟೆಯ ಚಲನೆಯನ್ನು ಮುಂಚಿತವಾಗಿ ಕಲ್ಪಿಸಿಕೊಳ್ಳಲಾಗದೆ ಇರುವ ಮಟ್ಟಕ್ಕೆ ಬೆಳೆದಿದೆ. ಪೇಟೆಯನ್ನು ಸಕಾರಾತ್ಮಕವಾಗಿಯಾಗಲಿ ಅಥವಾ ನಕಾರಾತ್ಮಕವಾಗಿಯಾಗಲಿ ವರ್ಣಿಸಲು ಹತ್ತು ಹಲವಾರು ಉದಾಹರಣೆಗಳು ಲಭ್ಯವಿದ್ದು, ತಮಗೆ ಬೇಕಾದಂತೆ ಬಳಸಿಕೊಳ್ಳಲು ಅವಕಾಶವಿದೆ.

ಹಿಂದೆಲ್ಲ ಕಂಪನಿ ಸಾಧನೆಯೇ ಷೇರು ಖರೀದಿಗೆ ಆಧಾರವಾಗಿತ್ತು

ಹಿಂದೆಲ್ಲ ಕಂಪನಿ ಸಾಧನೆಯೇ ಷೇರು ಖರೀದಿಗೆ ಆಧಾರವಾಗಿತ್ತು

ಹಿಂದಿನ ದಿನಗಳಲ್ಲಿ ವಿಶೇಷವಾಗಿ ಜಾಗತೀಕರಣಕ್ಕೂ ಮುಂಚಿನ ದಿನಗಳಲ್ಲಿ ಹೂಡಿಕೆದಾರರಿಗೆ ದೊರೆಯುತ್ತಿದ್ದ ಮಾಹಿತಿಯು ಅತ್ಯಲ್ಪ. ಆಗಿನ ದಿನಗಳ ಚಿಂತನೆಗಳಿಗೆ ಹಿತವಾಗಿತ್ತು. ಷೇರುಪೇಟೆಯ ವಹಿವಾಟು ನಡೆಸಬೇಕಾದಲ್ಲಿ ಹೂಡಿಕೆದಾರರು ಮತ್ತು ಅವರ ಬ್ರೋಕರ್ ಬಾಂಧವ್ಯವು ಪವಿತ್ರತೆಯಿಂದ ಕೂಡಿದ್ದು, ಗ್ರಾಹಕರು ತಮ್ಮ ವೈಯಕ್ತಿಕ ಅಗತ್ಯಗಳನ್ನು ಸಹ ಬ್ರೋಕರ್ ಅವರೊಂದಿಗೆ ಹಂಚಿಕೊಂಡು ಸಲಹೆ ಪಡೆಯುತ್ತಿದ್ದರು. ಆಗ ಲಭ್ಯವಾಗುತ್ತಿದ್ದ ಕಾರ್ಪೊರೇಟ್ ಬಗ್ಗೆ, ಅದರ ಸಾಧನೆಯ ಮಾಹಿತಿ ಮುಂತಾದವುಗಳು ವರ್ಷಕ್ಕೊಮ್ಮೆ ಅವು ಪ್ರಕಟಿಸುತ್ತಿದ್ದ ವಾರ್ಷಿಕ ವರದಿಯೇ ಆಗಿರುತ್ತಿತ್ತು. ಕಂಪನಿಗಳ ಯೋಗ್ಯತಾ ಮಾಪಕಕ್ಕಾಗಿ ಈ ವಾರ್ಷಿಕ ವರದಿಯೊಂದೇ ಮೂಲ.

ಅಂದಿನ ದಿನಗಳಲ್ಲಿ ಪ್ರಾದೇಶಿಕ ವಿನಿಮಯ ಕೇಂದ್ರಗಳ ಸದಸ್ಯರ ವಹಿವಾಟಿಗೆ ಕಂದು ಬಣ್ಣದ ಪತ್ರಿಕೆಗಳಲ್ಲಿ ಬರುತ್ತಿದ್ದ ಅಗ್ರಮಾನ್ಯ ವಿನಿಮಯ ಕೇಂದ್ರದಲ್ಲಿ ಹಿಂದಿನ ದಿನ ನಡೆದ ಷೇರಿನ ದರಗಳೇ ಆಧಾರವಾಗುತ್ತಿತ್ತು. ಆದರೆ ಈಗಿನ ದಿನಗಳಲ್ಲಿ ಸುದ್ದಿ ಸಮಾಚಾರಗಳು ಮಿಂಚಿನ ವೇಗದಲ್ಲಿ ಲಭ್ಯವಾಗುತ್ತಿದ್ದು, ಅನೇಕ ವಾಹಿನಿಗಳು ವ್ಯಾವಹಾರಿಕ ಸುದ್ದಿಯನ್ನು ಬಿತ್ತರಿಸುವುದಲ್ಲದೆ, ಮೊಬೈಲ್, ಈ ಮೇಲ್ ಮುಂತಾದ ವೇಗವಾದ ವಾಹಕಗಳಿರುವುದರಿಂದ ಸುದ್ದಿಗೆ ತಕ್ಕಂತೆ ಷೇರಿನ ದರಗಳು ಏರಿಳಿತಗಳನ್ನು ಪ್ರದರ್ಶಿಸುತ್ತಿವೆ.

 

ರಭಸವಾದ ಏರಿಳಿತದಿಂದ ಈಗ ವ್ಯವಹಾರವಾಗಿ ಮಾರ್ಪಟ್ಟಿದೆ
 

ರಭಸವಾದ ಏರಿಳಿತದಿಂದ ಈಗ ವ್ಯವಹಾರವಾಗಿ ಮಾರ್ಪಟ್ಟಿದೆ

ದೇಶದಲ್ಲಿ ಹಲವಾರು ವಿದೇಶಿ ವಿತ್ತೀಯ ಸಂಸ್ಥೆಗಳು, ಮ್ಯುಚುಯಲ್ ಫಂಡ್ ಸಂಸ್ಥೆಗಳು, ಸ್ಥಳೀಯ ವಿತ್ತೀಯ ಸಂಸ್ಥೆಗಳು, ಬ್ಯಾಂಕಿಂಗ್ ಕಂಪನಿಗಳು, ಸಾಹುಕಾರಿ ಹೂಡಿಕೆದಾರರು ಮತ್ತು ಹೆಚ್ಚಿನ ಹೂಡಿಕೆದಾರರ ಭಾಗವಹಿಸುವಿಕೆಯು ಷೇರುಪೇಟೆಗಳನ್ನು ಹೆಚ್ಚು ಅಸ್ಥಿರವಾಗುವಂತೆ ಮಾಡಿವೆ. ವಹಿವಾಟಿನ ಗಾತ್ರವು ಅತಿ ಹೆಚ್ಚಿದೆ. ಸ್ಥಳೀಯವಾಗಿ ಎಲ್ಲವೂ ಉತ್ತಮವಾಗಿದ್ದರೆ, ಹೊರದೇಶಗಳಲ್ಲಿ ಉಂಟಾಗುವ ಬದಲಾವಣೆಗಳು ಹಲವಾರು ಬಾರಿ ಪೇಟೆಯ ಅಸ್ಥಿರತೆಗ ಕಾರಣವಾಗಿವೆ. ಬಾಹ್ಯ ಬೆಳವಣಿಗೆಗಳಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಕಂಪನಿಗಳ ಫಲಿತಾಂಶಗಳು ಪ್ರತಿ ಮೂರು ತಿಂಗಳಿಗೊಮ್ಮೆ ಬರುತ್ತಿದ್ದು, ಮಹತ್ತರ ಬದಲಾವಣೆಗಳು ತಕ್ಷಣ ಹೊರಹಾಕುವ ನಿಯಮಗಳಿರುವುದರಿಂದ ಪೇಟೆಗಳು ಹೆಚ್ಚು ಅಸ್ಥಿರತೆಗೆ ಮೊರೆ ಹೋಗಿವೆ. ಪೇಟೆಗಳ ನಿಯಂತ್ರಣಕ್ಕೆ ಸೆಬಿ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ.

ಅಗ್ರಮಾನ್ಯ ಕಂಪನಿಗಳಾದ ಎಸಿಸಿ, ಲಾರ್ಸನ್ ಅಂಡ್ ಟೋಬ್ರೋ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್, ಪವರ್ ಫೈನಾನ್ಸ್ ಕಾರ್ಪೊರೇಷನ್, ಆರ್ ಇಸಿ, ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಫಾರ್ಮಾ ವಿಶೇಷವಾಗಿ ವಲಯದ ಸಿಪ್ಲಾ, ಕ್ಯಾಂಡಿಲ್ಲ, ಡಾಕ್ಟರ್ ರೆಡ್ಡೀಸ್ ಲ್ಯಾಬ್, ವಿಮಾ ವಲಯದ ಎಸ್ ಬಿಐ ಲೈಫ್ ಮುಂತಾದ ಕಂಪನಿಗಳು ಪ್ರದರ್ಶಿಸಿದ ಹೆಚ್ಚಿನ, ರಭಸದ ಏರಿಳಿತಗಳು ಹೂಡಿಕೆಯ ಬದಲಾಗಿ ವ್ಯವಹಾರಗಳು ನಡೆಯಲು ಪ್ರೇರಣೆಯಾಗಿವೆ. ಅಕ್ಟೊಬರ್ ತಿಂಗಳಲ್ಲಿ (ದೀಪಾವಳಿ ಸಂದರ್ಭದಲ್ಲಿ) ಷೇರಿನ ಬೆಲೆಗಳು ಭಾರಿ ಕುಸಿತಕ್ಕೊಳಗಾಗಿ ಹೂಡಿಕೆಗೆ ನಿರಾಶಾಮಯವಾಗಿತ್ತು.

 

ಖರೀದಿಗೆ ಮುಂದಾದರೆ ಗೋಲ್ಡನ್ ಟಚ್ - ಮಾರಾಟಕ್ಕೆ ಬಂದರೆ ಬೆಂಕಿ ಹೆಚ್ಚು

ಖರೀದಿಗೆ ಮುಂದಾದರೆ ಗೋಲ್ಡನ್ ಟಚ್ - ಮಾರಾಟಕ್ಕೆ ಬಂದರೆ ಬೆಂಕಿ ಹೆಚ್ಚು

ಷೇರುಪೇಟೆಯ ಚಟುವಟಿಕೆಗೆ ಸದಾ ಕಾಲಕ್ಕೂ ಅನ್ವಯಿಸಬಹುದಾದ ಯಶಸ್ವಿ ಸಮೀಕರಣವೆಂದರೆ 'ವಾಲ್ಯೂ ಪಿಕ್ - ಪ್ರಾಫಿಟ್ ಬುಕ್'. ಷೇರಿನ ಬೆಲೆಗಳು ಹೆಚ್ಚಿನ ಏರಿಳಿತ ಪ್ರದರ್ಶಿಸಲು ಕಾರಣಗಳು ಅನೇಕ. ಹೊಸ ಹೊಸ ಕಾರಣಗಳು ಸಹ ಹುಟ್ಟಿಕೊಳ್ಳುತ್ತವೆ. ಆದರೆ ಹೆಚ್ಚಿನವು ಬಾಹ್ಯ ಕಾರಣಗಳಾಗಿವೆ. ಆಂತರಿಕವಾಗಿ ಕಂಪನಿಯ ಸಾಧನೆಗೆ ಹೆಚ್ಚು ಆದ್ಯತೆ ಇರುವುದಿಲ್ಲ. ಷೇರುಪೇಟೆಯ ಚಟುವಟಿಕೆಯು ಹೆಚ್ಚು ಎಫ್ ಐಐ ಗಳ ಒಳಹರಿವಿನ ಮೇಲೆ ಅವಲಂಭಿತವಾಗಿದೆ. ಅವು ಖರೀದಿಗೆ ಮುಂದಾದರೆ ಗೋಲ್ಡನ್ ಟಚ್ - ಮಾರಾಟಕ್ಕೆ ಬಂದರೆ ಬೆಂಕಿ ಹೆಚ್ಚು ಎಂಬಂತಾಗಿದೆ. ಜನವರಿಯಿಂದ ಸ್ವಲ್ಪ ಮಟ್ಟಿನ ಖರೀದಿಯ ಹಾದಿಯಲ್ಲಿದ್ದ ಕಾರಣ ಷೇರಿನ ಬೆಲೆಗಳು ಏರಿಕೆ ಕಾಣುತ್ತಿವೆ. ಆದರೆ ಆಗಸ್ಟ್ ಅಂತ್ಯದ ಗರಿಷ್ಠ ಹಂತದಿಂದ ಹೆಚ್ಚು ಕುಸಿತ ಕಾಣಲು ಮುಖ್ಯ ಕಾರಣ ಈ ಎಫ್ ಐಐಗಳು ಭಾರಿ ಮಾರಾಟ ಮಾಡಿದ್ದಾಗಿದೆ.

ಕಂಪನಿಯು ಪ್ರತಿ ಷೇರಿಗೆ ಹದಿನಾಲ್ಕು ರುಪಾಯಿಗಳ ಲಾಭಾಂಶ ಪ್ರಕಟಿಸಿದಾಗ ರು. 1,400 ರಲ್ಲಿದ್ದ ಷೇರಿನ ಬೆಲೆ ರು.1,675ರ ವರೆಗೂ ಜಿಗಿತವನ್ನು ಅದೇ ತಿಂಗಳಲ್ಲಿ ಜಿಗಿದ ಎಸಿಸಿಯಾಗಲಿ, ಪ್ರತಿ ಲೀಟರ್ ಗೆ ರು.1 ಕಡಿತಗೊಳಿಸಿದ ಸರಕಾರದ ಕ್ರಮಕ್ಕೆ ಪೆಟ್ರೋಲಿಯಂ ಕಂಪನಿಗಳು ಕಂಡ ಭರ್ಜರಿ ಕುಸಿತ ವಿಶೇಷವಾಗಿ ಇಂಡಿಯನ್ ಆಯಿಲ್ ಷೇರಿನ ಬೆಲೆ ರು.150 ರ ಸಮೀಪದಿಂದ ರು.105ರ ವರೆಗೂ ಕುಸಿದು ನಂತರ ರು.155 ತಲುಪಿ, ಮತ್ತೆ ರು.125 ಕ್ಕೆ ಕುಸಿದು, ರು.165 ಕ್ಕೆ ಚೇತರಿಸಿಕೊಳ್ಳುವುದಾಗಲಿ, ಆರ್ ಇ ಸಿ ಕಂಪನಿಯನ್ನು ಪವರ್ ಫೈನಾನ್ಸ್ ಕಾರ್ಪೊರೇಷನ್ ನಲ್ಲಿ ವಿಲೀನಗೊಳಿಸುವ ವಿಚಾರವು ಪ್ರಕಟವಾದ ನಂತರ ಆರ್ ಇಸಿ ಷೇರಿನ ಬೆಲೆ ರು.100 ರವರೆಗೂ ಕುಸಿದು ನಂತರದ ಮೂರೇ ತಿಂಗಳಲ್ಲಿ ರು.159 ರವರೆಗೂ ಚೇತರಿಕೆ ಕಾಣುವುದರೊಂದಿಗೆ ಪ್ರತಿ ಷೇರಿಗೆ ರು.11 ರಂತೆ ಲಾಭಾಂಶ ಸಹ ವಿತರಿಸಿದೆ. ಇಂಥ ಭಾರೀ ಏರಿಳಿತದ ಹಲವು ಉದಾಹರಣೆ ಇದೆ. ಉತ್ತಮ ಕಂಪನಿಗಳ ಷೇರಿನ ಬೆಲೆಗಳು ಕುಸಿತ ಕಂಡಾಗ, ಆ ಕಂಪನಿಗಳು ವಿತರಿಸುವ ಲಾಭಾಂಶವನ್ನಾಧರಿಸಿ ಹೂಡಿಕೆ ಬಗ್ಗೆ ನಿರ್ಧರಿಸುವುದು ಉತ್ತಮ.

 

ಸದಾ ನೆನಪಿನಲ್ಲಿ ಇಡಬೇಕಾದ ವಿಷಯ ಇದು

ಸದಾ ನೆನಪಿನಲ್ಲಿ ಇಡಬೇಕಾದ ವಿಷಯ ಇದು

'ವಾಲ್ಯೂ ಪಿಕ್ - ಪ್ರಾಫಿಟ್ ಬುಕ್' ಅಳವಡಿಸಿಕೊಳ್ಳಬೇಕಾದರೂ ಪೇಟೆಯು ಏರಿಕೆಯತ್ತ ಸಾಗುತ್ತಿದ್ದರೆ ವ್ಯಾಲ್ಯೂ ಪಿಕ್ ಗೆ ಹೆಚ್ಚಿನ ವೇಟೇಜ್ ನೀಡಬೇಕು. ಪೇಟೆಯ ದಿಶೆ ಇಳಿಕೆಯಲ್ಲಿದ್ದರೆ ಪ್ರಾಫಿಟ್ ಬುಕ್ ಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡುವುದು ಸೂಕ್ತ. ದೀರ್ಘಕಾಲಿನ ಹೂಡಿಕೆ ಎಂದು ಷೇರಿನ ಬೆಲೆಗಳು ಗರಿಷ್ಠದಲ್ಲಿದ್ದಾಗ ಖರೀದಿಸಿದರೆ ಲಾಭ ಗಳಿಕೆಗೆ ಅವಕಾಶವಿರುವುದಿಲ್ಲ. 2005ರಲ್ಲಿ ರು.1,100ರಂತೆ ವಿತರಣೆ ಮಾಡಿದ ಜೆಟ್ ಏರ್ ವೇಸ್ ಷೇರಿನ ಬೆಲೆ ವಿತರಣೆ ಬೆಲೆ ತಲುಪಿದಾಗಿದೆ. ಕಳೆದ ಏಪ್ರಿಲ್ ನಲ್ಲಿ ರು.650 ರ ಸಮೀಪದಲ್ಲಿದ್ದ ಈ ಷೇರು ದೀಪಾವಳಿ ಸಮಯದಲ್ಲಿ ರು.165 ರ ಸಮೀಪಕ್ಕೆ ಕುಸಿದಿದ್ದು, ನಂತರ ಚೇತರಿಕೆಯಿಂದ ರು.269 ತಲುಪಿದೆ. ಕಳೆದ ವರ್ಷ ಪ್ರತಿ ಷೇರಿಗೆ ರು.1,215 ರಂತೆ ವಿತರಿಸಿದ ಎಚ್ ಎಎಲ್ ಷೇರಿನ ಬೆಲೆ ರು.710ರ ಸಮೀಪವಿದೆ. ಈ ಮಧ್ಯೆ ಕಂಪನಿಯು ಪ್ರತಿ ಷೇರಿಗೆ ರು.19.80ರ ಲಾಭಾಂಶ ವಿತರಿಸಿದೆ.

ಪೇಟೆಗಳು ಚುರುಕಾಗುತ್ತಿದ್ದಂತೆ ಹೊಸ ವ್ಯವಹಾರ ಚುರುಕಾಗತೊಡಗಿದೆ. ಷೇರುಪೇಟೆಯ ಬಗ್ಗೆ ಜನಸಾಮಾನ್ಯರಲ್ಲಿ ಆಸಕ್ತಿ ಬೆಳೆಯುತ್ತಿರುವುದರ ಲಾಭ ಪಡೆದುಕೊಳ್ಳಲು ಷೇರುಪೇಟೆ ಕ್ಲಾಸ್, ಸೆಮಿನಾರ್, ತರಬೇತಿ ಮುಂತಾದ ನಾಮಾಂಕಿತದಲ್ಲಿ ಸಹಸ್ರಾರು ರುಪಾಯಿಗಳನ್ನು ಸಂಗ್ರಹಿಸಲಾಗುತ್ತಿದೆ. ಸಣ್ಣ ಹೂಡಿಕೆದಾರರು ಈ ರೀತಿ ಸಹಸ್ರಾರು ರುಪಾಯಿಗಳನ್ನು ಕ್ಲಾಸ್ ಗಳಿಗೆ ನೀಡುವ ಬದಲು ಅದನ್ನೇ ಮೂಲ ಬಂಡವಾಳವನ್ನಾಗಿಸಿಕೊಂಡು ಉತ್ತಮ ಕಂಪನಿಗಳ 5/10 ಷೇರುಗಳನ್ನು ಖರೀದಿಸಿ ಅನುಭವಾಮೃತವನ್ನು ಪಡೆದುಕೊಳ್ಳಬಹುದು. ಆ ನಂತರ ಹಿಡಿತ ಸಾಧಿಸಿ, ಹೆಚ್ಚು ಹೆಚ್ಚು ಹೂಡಿಕೆ ಮಾಡಲು ಅವಕಾಶ ಮಾಡಿಕೊಳ್ಳಬಹುದು. ಒಟ್ಟಿನಲ್ಲಿ ಚಂಚಲತೆ ಹೆಚ್ಚಿರುವ ಈಗಿನ ಹಂತದಲ್ಲಿ ಚಪಲ, ಚಟಗಳನ್ನು ಬೆಳೆಸಿಕೊಳ್ಳದೆ ಕೇವಲ ವಾಸ್ತವಾಂಶ ಆಧರಿಸಿ, ಅಂತರ್ಗತ ಸಾಧನೆ ಆಧರಿಸಿ, ವಿತರಿಸಬಹುದಾದ ಕಾರ್ಪೊರೇಟ್ ಫಲಗಳನ್ನಾಧರಿಸಿ, 'ವಾಲ್ಯೂ ಪಿಕ್ - ಪ್ರಾಫಿಟ್ ಬುಕ್' ಸಮೀಕರಣ ಸ್ವಲ್ಪ ಮಟ್ಟಿನ ಸುರಕ್ಷತೆ ಒದಗಿಸಬಹುದು. ಯಾರನ್ನೂ ಅನುಸರಿಸದೆ, ಅವಕಾಶಗಳನ್ನು ಅರಿತು ಹೂಡಿಕೆ ಮಾಡಿರಿ.

 

 

English summary

First day of Financial Year; It's all about stock market strategy

Financial columnist, stock broker K.G.Krupal explains discipline in stock market and how to save our hard earned money and get good returns during tough situation in stock market.
Story first published: Monday, April 1, 2019, 18:27 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X