For Quick Alerts
ALLOW NOTIFICATIONS  
For Daily Alerts

ಕನ್ನಡದಲ್ಲಿ ಒಂದು ಸಿನ್ಮಾ ಮಾಡಲು ಎಷ್ಟು ಖರ್ಚಾಗುತ್ತೆ? ಪಿನ್ ಟು ಪಿನ್ ಲೆಕ್ಕಾಚಾರ

|

ಸಮೂಹ ಮಾಧ್ಯಮಗಳ ಪೈಕಿ ಅತ್ಯಂತ ಹೆಚ್ಚು ಪರಿಣಾಮಕಾರಿಯಾಗಿರುವುದು, ಹೆಚ್ಚು ಜನರನ್ನು ತಲುಪಬಲ್ಲ ತಾಕತ್ತು ಇರುವುದು ಸಿನಿಮಾಗಳಿಗೆ. ಹಾಗಂತ, ಒಂದು ಸಿನಿಮಾವನ್ನು ಯಾರು ಬೇಕಾದರೂ, ಯಾವಾಗ ಬೇಕಾದರೂ ನಿರ್ಮಾಣ ಮಾಡಿ ತೆರೆಗೆ ತರಲು ಸಾಧ್ಯವಿಲ್ಲ. ಆ ಕಾರಣಕ್ಕಾಗಿಯೇ 'ಮೇಕಿಂಗ್ ಆಫ್‌ ದಿ ಸಿನಿಮಾ' ಕೆಲವೊಮ್ಮೆ ಸಿನಿಮಾದಷ್ಟೆ ಮಹತ್ವ ಪಡೆದುಕೊಳ್ಳುತ್ತದೆ.

ಒಂದು ಸಿನಿಮಾ ಅದರಲ್ಲೂ ಕನ್ನಡದ ಸಿನಿಮಾವೊಂದು ತಯಾರಿಕೆಯ ಹಿಂದಿನ ಕಥನವನ್ನು ಅದರ ಆರ್ಥಿಕತೆ ಹಿನ್ನೆಲೆಯಲ್ಲಿ ಕಟ್ಟಿಕೊಡುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಒಂದು ವೇಳೆ ನೀವು ಭವಿಷ್ಯದಲ್ಲಿ ಸಿನಿಮಾ ಒಂದನ್ನು ನಿರ್ಮಾಣ ಮಾಡಬೇಕು ಅಂತಿದ್ದರೆ ಖಂಡಿತಾ ಈ ಮಾಹಿತಿ ಉಪಯೋಗಕ್ಕೆ ಬರುತ್ತದೆ. ಅಥವಾ ನೀವು ಸಿನಿಮಾಗಳನ್ನು ನೋಡುವವರಾಗಿದ್ದರೆ, ತೆರೆಯ ಮೇಲೆ ಕಾಣುವ ದೃಶ್ಯಗಳ ಹಿಂದಿನ ಆರ್ಥಿಕತೆಯನ್ನು ಅರ್ಥ ಮಾಡಿಕೊಳ್ಳಲು ಈ ವರದಿ ನೆರವಾಗಲಿದೆ.

 

ಒಟ್ಟಾರೆ, ಒಂದು ಸಿನಿಮಾ ಹಾಗೂ ಅದರ ಮೇಕಿಂಗ್ ಹಿಂದಿರುವ ಆರ್ಥಿಕ ಆಯಾಮವನ್ನು ಇಲ್ಲಿ ವಿವರಿಸುವ ಪ್ರಯತ್ನ ಮಾಡಲಾಗಿದೆ.

ಸಾಮಾನ್ಯ ಲೆಕ್ಕಾಚಾರಗಳು

ಸಾಮಾನ್ಯ ಲೆಕ್ಕಾಚಾರಗಳು

ಒಂದು ಸಿನಿಮಾಗೆ ಎಷ್ಟು ಖರ್ಚಾಗುತ್ತೆ ಮತ್ತು ಯಾವ ಯಾವ ಕೆಲಸಗಳಿಗೆ ವೆಚ್ಚವಾಗಲಿದೆ ಎಂಬುದನ್ನು ನೋಡುವ ಮೊದಲು, ಸದ್ಯ ಸ್ಯಾಂಡಲ್ ವುಡ್‌ನಲ್ಲಿರುವ ಲೆಕ್ಕಾಚಾರಗಳು ಹೇಗಿವೆ ನೋಡಿ. ಸದ್ಯಕ್ಕೆ ಕನ್ನಡದಲ್ಲಿ ಹೊಸಬರೇ ಇರುವ ಸಿನಿಮಾವೊಂದು ಒಂದು ಕೋಟಿ ರುಪಾಯಿಯೊಳಗೆ ನಿರ್ಮಾಣವಾದರೆ ಪರವಾಗಿಲ್ಲ ಮಾತಿದೆ. ಈ ವೆಚ್ಚ ಮಿತಿಯಲ್ಲಿ ನಿರ್ಮಾಣ ಮಾಡಿದವರು ಕಷ್ಟಕ್ಕೆ ಸಿಲುಕಲ್ಲ. ಸಿನಿಮಾ ಚೆನ್ನಾಗಿದ್ದು, ಕೊಂಚ ಬಾಕ್ಸ್‌ ಆಫೀಸ್ ಗಳಿಕೆ ಮಾಡಿದರೂ ಹದಿನೈದು- ಇಪ್ಪತ್ತು ಲಕ್ಷ ಲಾಭ ಕಾಣಬಹುದು. ಆದರೆ ಅದಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಹಣ ವಾಪಸ್ ಬರುವುದೇ ಕಷ್ಟ ಎನ್ನುತ್ತಾರೆ ಅನುಭವಿಗಳು.

ಖರ್ಚು ಹೇಗೆಲ್ಲಾ ಆಗುತ್ತೆ?
 

ಖರ್ಚು ಹೇಗೆಲ್ಲಾ ಆಗುತ್ತೆ?

ಇನ್ನು, ಸಿನಿಮಾ ನಿರ್ಮಾಣದ ನಾನಾ ಹಂತಗಳಲ್ಲಿ ಖರ್ಚು ಹೇಗಾಗುತ್ತದೆ ಎಂಬುದು ಕುತೂಹಲಕಾರಿ ಮಾಹಿತಿ. ಸಾಮಾನ್ಯವಾಗಿ ಸಿನಿಮಾ ನಿರ್ಮಾಣವನ್ನು ಮೂರು ಭಾಗವಾಗಿ ವಿಂಗಡಿಸಬಹುದು. ಪ್ರೀ ಪ್ರೊಡಕ್ಷನ್, ಪ್ರೊಡಕ್ಷನ್, ಪೋಸ್ಟ್ ಪ್ರೊಡಕ್ಷನ್. ಕಥೆ- ಚಿತ್ರಕಥೆ- ಸಂಭಾಷಣೆ, ಲೊಕೇಷನ್ ಗಳ ಹುಡುಕಾಟ ಇತ್ಯಾದಿಯೆಲ್ಲ ಪ್ರೀ ಪ್ರೊಡಕ್ಷನ್ ಖರ್ಚುಗಳು. ಆ ನಂತರ ಶೂಟಿಂಗ್ ಅಥವಾ ಪ್ರೊಡಕ್ಷನ್. ಅದಾದ ಮೇಲೆ ಎಡಿಟಿಂಗ್, ಹಿನ್ನೆಲೆ ಸಂಗೀತ, ಸಿ.ಜಿ. (ಕಂಪ್ಯೂಟರ್ ಗ್ರಾಫಿಕ್ಸ್), ಸಿನಿಮಾ ಪ್ರಚಾರ ಇತ್ಯಾದಿಯೆಲ್ಲ ಪೋಸ್ಟ್ ಪ್ರೊಡಕ್ಷನ್. ಈ ಮೂರಕ್ಕೂ ಯಾವ ಪ್ರಮಾಣದಲ್ಲಿ ಹಣ ಖರ್ಚಾಗುತ್ತದೆ ಎಂಬ ಅಂದಾಜಿದ್ದು, ಆ ಅಂದಾಜಿಗಿಂತ ಹತ್ತು ಪರ್ಸೆಂಟ್ ಮೊತ್ತ ಮೀರಿ ಖರ್ಚು ಕೈಯಿಂದ ಹೋಗಬಾರದು. ಯಾವುದೇ ಸಿನಿಮಾ ನಿರ್ಮಾಣದ ವೇಳೆ ನಾನಾ ಕಾರಣಗಳಿಗೆ ಒಂದಿಷ್ಟು ಹಣ ವ್ಯರ್ಥ ಆಗುತ್ತದೆ. ಅವು ಅನಿರೀಕ್ಷಿತವಾಗಿರುತ್ತದೆ. ಆದರೆ ತುಂಬ ಚೆನ್ನಾಗಿ ಯೋಜನೆ ಹಾಕಿಕೊಂಡರೆ ಅದನ್ನು ಕೂಡ ಉಳಿಸುವುದು ಸಾಧ್ಯವಿದೆ ಎನ್ನುತ್ತಾರೆ ಅನುಭವಸ್ಥರು.

ತಾರಾಗಣ ಕೂಡ ಮುಖ್ಯ

ತಾರಾಗಣ ಕೂಡ ಮುಖ್ಯ

ಒಂದು ಸಿನಿಮಾದಲ್ಲಿ ಯಾವ ಕಲಾವಿದರಿದ್ದಾರೆ, ತಂತ್ರಜ್ಞರಿದ್ದಾರೆ ಹಾಗೂ ಅವರ ಸಂಭಾವನೆ ಎಷ್ಟು ಎಂಬುದು ಹೇಗೆ ಸಿನಿಮಾದ ನಿರ್ಮಾಣ ವೆಚ್ಚವನ್ನು ನಿರ್ಧಾರ ಮಾಡುತ್ತದೋ ಅದೇ ರೀತಿ ಸಿನಿಮಾದ ಶೂಟಿಂಗ್ ಲೊಕೇಷನ್ ಕೂಡ ಖರ್ಚಿನಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಉದಾಹರಣೆಗೆ ಸೆಟ್ ಹಾಕುವುದಿದ್ದರೆ, ತಾಜ್ ಮಹಲ್ ಸೇರಿದಂತೆ ಐತಿಹಾಸಿಕ ಸ್ಥಳಗಳಲ್ಲಿ ಮತ್ತು ವಿದೇಶಗಳಲ್ಲಿ, ತುಂಬ ದೂರ ಪ್ರದೇಶದಲ್ಲಿ ಹೆಚ್ಚು ಖರ್ಚಾಗುವ ರೀತಿಯಲ್ಲಿ ಶೂಟಿಂಗ್ ಗಳು ಇದ್ದಾಗಲೂ ನಿರ್ಮಾಣ ದುಬಾರಿ ಆಗುತ್ತಾ ಸಾಗುತ್ತದೆ.

ಇನ್ನು ಈಚೆಗಂತೂ ಐಫೋನ್ ನಲ್ಲಿ ಇಡೀ ಸಿನಿಮಾ ಶೂಟಿಂಗ್ ಮುಗಿಸಿ ದಾಖಲೆ ಮಾಡಿದವರಿದ್ದಾರೆ. ಅದೇ ರೀತಿ 5D ಕ್ಯಾಮೆರಾದಲ್ಲೂ ಶೂಟಿಂಗ್ ಮಾಡಬಹುದು. ಅದಕ್ಕೆ ಒಂದು ದಿನದ ಬಾಡಿಗೆ ನಾಲ್ಕೂವರೆ ಸಾವಿರದಿಂದ ಆರಂಭವಾಗುತ್ತದೆ. ಡ್ರ್ಯಾಗನ್ ಎಂಬ ಕ್ಯಾಮೆರಾ ಇದೆ. ಅದಕ್ಕೆ ವಿಪರೀತ ದುಬಾರಿ ಬಾಡಿಗೆ ಇದೆ. ಡ್ರೋಣ್ ಬಳಸಿ ಕೂಡ ಶೂಟಿಂಗ್ ಮಾಡಲಾಗುತ್ತದೆ. ಜತೆಗೆ ಸಿನಿಮಾದಲ್ಲಿ ಹೆಲಿಕಾಪ್ಟರ್ ಬಳಸುತ್ತಾರೆ, ರೈಲು ನಿಲ್ದಾಣದಲ್ಲಿ ಶೂಟಿಂಗ್ ಮಾಡ್ತಾರೆ. ಎಲ್ಲಿ ಶೂಟಿಂಗ್ ಲೊಕೇಷನ್ ಮತ್ತು ಬೇಕಾಗುವ ಸೆಟ್ ಪ್ರಾಪರ್ಟಿಸ್, ಕ್ಯಾಮೆರಾ ಇತ್ಯಾದಿಗಳ ಬಾಡಿಗೆ ಎಷ್ಟು ಎಂಬುದರ ಲೆಕ್ಕಾಚಾರವು ಖರ್ಚಿನ ಭಾಗವಾಗಿರುತ್ತದೆ.

ಎಷ್ಟು ಜನರ ಶ್ರಮ ಬೇಕಾಗುತ್ತೆ?

ಎಷ್ಟು ಜನರ ಶ್ರಮ ಬೇಕಾಗುತ್ತೆ?

ಹೀರೋ- ಹೀರೋಯಿನ್ ಮತ್ತಿತರ ಕಲಾವಿದರು ಬಳಸುವ ಕಾಸ್ಟ್ಯೂಮ್ ನ ಖರ್ಚು ಕೂಡ ಮುಖ್ಯವಾಗಿರುತ್ತದೆ. ಸರಾಸರಿ ಒಂದು ದಿನದ ಶೂಟಿಂಗ್ ಖರ್ಚು ಒಂದು ಲಕ್ಷದಿಂದ ಒಂದೂವರೆ ಲಕ್ಷದಷ್ಟಾಗುತ್ತದೆ. ಅದರಲ್ಲಿ ಡ್ಯಾನ್ಸ್, ಫೈಟ್ ಯಾವ ರೀತಿ ಇರುತ್ತವೆ ಎಂಬುದ ಆಧಾರದಲ್ಲಿ ಖರ್ಚು ಇನ್ನೂ ಹೆಚ್ಚಾಗಬಹುದು. ಇದು ಸರಾಸರಿ ವೆಚ್ಚ. ಒಂದು ಹಾಡಿನಲ್ಲೇ ಐನೂರು ಜೂನಿಯರ್ ಕಲಾವಿದರನ್ನು ಬಳಸಿ, ಶೂಟಿಂಗ್ ಮಾಡಿದ್ದರೆ ಆ ಹಾಡಿಗೇ ಬಹಳ ಖರ್ಚಾಗಿರುತ್ತದೆ. ಇನ್ನು ಕೆಲವು ದೃಶ್ಯಗಳಲ್ಲಿ ಹೆಚ್ಚಿನ ಕಲಾವಿದರು ಸಹ ಇಲ್ಲದೆ ಕಡಿಮೆ ಖರ್ಚಿನಲ್ಲೇ ಆಗುತ್ತವೆ. ಆದರೆ ಸರಾಸರಿ ಖರ್ಚು ಮಾತ್ರ ಒಂದರಿಂದ ಒಂದೂವರೆ ಲಕ್ಷಕ್ಕೂ ಹೆಚ್ಚೇ ಇರುತ್ತದೆ. ಐವತ್ತರಿಂದ ನೂರು- ನೂರಿಪ್ಪತ್ತು ದಿನಗಳ ಕಾಲ ಶೂಟಿಂಗ್ ಮಾಡಿದರೆ, ದಿನಕ್ಕೆ ಒಂದು- ಒಂದೂವರೆ ಲಕ್ಷದಂತೆ ಖರ್ಚಿನಂತೆ ಒಂದು ಕೋಟಿಯಿಂದ ಒಂದೂವರೆ ಕೋಟಿ ತನಕ ಶೂಟಿಂಗ್ ಗೆ ಮಾತ್ರ ಖರ್ಚಾಗುತ್ತದೆ. ಮೊದಲೇ ಹೇಳಿದ ಹಾಗೆ ಯಾವ ಲೊಕೇಷನ್ ಎಂಬುದು ಇಲ್ಲಿ ಮುಖ್ಯವಾಗುತ್ತದೆ.

ಪ್ರಚಾರಕ್ಕೆ ಪ್ರತ್ಯೇಕ ಬಜೆಟ್

ಪ್ರಚಾರಕ್ಕೆ ಪ್ರತ್ಯೇಕ ಬಜೆಟ್

ಸಿನಿಮಾ ಶುರುವಿನಲ್ಲಿ, ಟೀಸರ್ ಬಿಡುಗಡೆ, ಶೂಟಿಂಗ್ ನಡೆಯುವಾಗ, ಸಾಂಗ್ ರೆಕಾರ್ಡಿಂಗ್, ಟ್ರೇಲರ್ ಬಿಡುಗಡೆ, ಆಡಿಯೋ ರಿಲೀಸ್, ಆ ನಂತರ ಆ ಹೀರೋ ಅಥವಾ ಹೀರೋಯಿನ್, ನಿರ್ದೇಶಕರ ಬರ್ತ್ ಡೇ ಜಾಹೀರಾತು, ಸಿನಿಮಾ ಬಿಡುಗಡೆ ಮತ್ತು ಬಿಡುಗಡೆ ನಂತರದ ಕೆಲ ದಿನ ಚಿತ್ರದ ಪ್ರಚಾರಕ್ಕಾಗಿಯೇ ಹಣ ಖರ್ಚಾಗುತ್ತದೆ. ಈ ಖರ್ಚು ಕಡ್ಡಾಯ ಏನಲ್ಲ. ಆದರೆ ಹೀಗೆ ಚಿತ್ರದ ಪ್ರಚಾರ ಮಾಡಿದರೆ ಅದಕ್ಕೂ ಖರ್ಚು ಇರುತ್ತದೆ. ಒಂದು ಸಿನಿಮಾದ ಶೂಟಿಂಗ್ ಖರ್ಚಿನಷ್ಟೇ ಬಹುಭಾಗವು ಪ್ರಚಾರಕ್ಕಾಗಿಯೂ ಆಗುತ್ತದೆ.

ಆದರೆ ಈಚೆಗೆ ಸೋಷಿಯಲ್ ಮೀಡಿಯಾ ಮತ್ತು ಆನ್ ಲೈಲ್ ಪ್ರಮೋಷನ್ ಹೆಚ್ಚು ಪರಿಣಾಮಕಾರಿಯಾಗಿವೆ. 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಸಿನಿಮಾದ ಪ್ರಚಾರವು ಈ ರೀತಿಯ ಆನ್ ಲೈನ್ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಜನರನ್ನು ತಲುಪಬಹುದೆಂದು ತೋರಿಸಿಕೊಟ್ಟಿತು. ಸದ್ಯಕ್ಕಂತೂ ಆನ್ ಲೈನ್- ಸೋಷಿಯಲ್ ಮೀಡಿಯಾ ಪ್ರಚಾರ, ಸಿನಿಮಾದ ರಿವ್ಯೂ ಹೆಚ್ಚು ಪ್ರಚಲಿತವಾಗಿದೆ. ಆದರೆ ಅದಕ್ಕಾದರೂ ಖರ್ಚು ಮಾಡಲೇಬೇಕು. ಆದರೆ ತೀರಾ ದುಬಾರಿಯಲ್ಲ.

ಕಂಟೆಂಟ್ ಮುಖ್ಯ

ಕಂಟೆಂಟ್ ಮುಖ್ಯ

ಸಿನಿಮಾದ ಕಂಟೆಂಟ್ ಗಟ್ಟಿಯಾಗಿದ್ದರೆ ಎಷ್ಟು ಕಡಿಮೆ ಹಣದಲ್ಲಿ ನಿರ್ಮಾಣವಾದರೂ ತುಂಬ ಒಳ್ಳೆ ಕಲೆಕ್ಷನ್ ಮಾಡುತ್ತದೆ ಎಂಬುದಕ್ಕೆ ಹಲವು ಉದಾಹರಣೆ ಸಿಗುತ್ತದೆ. ಸಿಂಪಲ್ಲಾಗ್ ಒಂದು ಲವ್ ಸ್ಟೋರಿ, 6-5=2, ಯೂ ಟರ್ನ್, ಒಂದು ಮೊಟ್ಟೆಯ ಕಥೆ, ಲೂಸಿಯಾ, ದುನಿಯಾ, ಎದ್ದೇಳು ಮಂಜುನಾಥಾ, ಮಠ... ಹೀಗೆ ಕೆಲವು ಉದಾಹರಣೆಗಳು ಸಿಗುತ್ತವೆ. ಇಂತಹ ಸಿನಿಮಾಗಳು ಅದ್ಧೂರಿತನಕ್ಕಿಂತ ಕತೆಯ ಕಾರಣಕ್ಕೆ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ಉದಾಹರಣೆ ಕಣ್ಣಮುಂದಿದೆ. ಇದು ನಿರ್ಮಾಪಕ ಜೇಬಿಗೆ ಕನ್ನ ಹಾಕುವುದಕ್ಕಿಂತ ತುಂಬಿಸುವ ಕೆಲಸ.

ವೆಚ್ಚಕ್ಕೆ ಆದಾಯ ಹೇಗೆ?

ವೆಚ್ಚಕ್ಕೆ ಆದಾಯ ಹೇಗೆ?

ಸರಿ, ಸಿನಿಮಾ ತಯಾರಿಸಿದ ಮೇಲೆ ಅದರ ಆದಾಯ ಮೂಲಗಳು ಯಾವುವು? ಈಗೆಲ್ಲ ಸ್ಯಾಟಲೈಟ್ ರೈಟ್ಸ್ (ಟಿವಿ ಚಾನೆಲ್ ಗಳಿಗೆ ಮಾರಾಟ) ಮೂಲಕ ಬರುವ ಹಣ ಕಡಿಮೆ ಆಗಿದೆ. ಆದರೂ ಅದೊಂದು ಆದಾಯ ಮೂಲ. ಡಿಜಿಟಲ್ ಅಥವಾ ಒಟಿಟಿ ಮಾರಾಟ (ಹಾಟ್ ಸ್ಟಾರ್, ಅಮೆಜಾನ್, ನೆಟ್ ಫ್ಲಿಕ್ಸ್) ಮೂಲಕ ಬರುವ ಆದಾಯ, ಸಿನಿಮಾ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಜನ ಸಿನೆಮಾ ನೋಡುವ ಮೂಲಕ ಬರುವ ಹಣ. ಇವೆಲ್ಲದರ ಜತೆಗೆ ಬ್ರ್ಯಾಂಡಿಂಗ್ ಪಾರ್ಟನರ್ ಗಳನ್ನು ಮಾಡಿಕೊಂಡರೆ, ಉದಾಹರಣೆಗೆ ಕೋಕೋ ಕೋಲಾ, ಪೆಪ್ಸಿ, ಟಿವಿಎಸ್, ಹೀರೋ ಹೋಂಡಾ.... ಹೀಗೆ ವಿವಿಧ ಬ್ರ್ಯಾಂಡಿಂಗ್ ಅನ್ನು ಸಿನಿಮಾದಲ್ಲಿ ಬಳಸಿಕೊಂಡು, ಪ್ರಚಾರ ನೀಡುವ ಮೂಲಕ ಹಣ ಬರುತ್ತದೆ. ರೀಮೇಕ್ ರೈಟ್ಸ್, ಡಬ್ಬಿಂಗ್ ರೈಟ್ಸ್, ಸಿನಿಮಾ ಫೆಸ್ಟಿವಲ್ ಗಳಲ್ಲಿ ಪ್ರದರ್ಶನ, ರಾಷ್ಟ್ರಪ್ರಶಸ್ತಿ- ರಾಜ್ಯ ಪ್ರಶಸ್ತಿ ಬಂದರೆ ಸರ್ಕಾರದ ಪ್ರೋತ್ಸಾಹಧನ, ಕಥೆ ಮಾರಾಟದಿಂದಲೂ ಆದಾಯ ಬರುತ್ತದೆ. ಇದು ಒಂದು ಸಿನಿಮಾ ನಿರ್ಮಾಣದ ಹಿಂದಿರುವ ಆರ್ಥಿಕ ಲೆಕ್ಕಾಚಾರಗಳು. ಸ್ಯಾಂಡಲ್ ವುಡ್‌ಗೆ ಸಿನೆಮಾ ನಿರ್ಮಾಣಕ್ಕೆ ನೀವು ಕಾಲಿಡುವ ಮನಸ್ಸಿದ್ದರೆ ಇಷ್ಟನ್ನಂತೂ ಖಂಡಿತಾ ಮನಸ್ಸಿನಲ್ಲಿ ಇಟ್ಟುಕೊಂಡಿರಿ.

English summary

How Much Money Needed To Produce Kannada Movie? Here Is An Explainer

Currently how much money needed to produce Kannada movie for new comers? Here is an explainer.
Story first published: Thursday, January 9, 2020, 16:29 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more