For Quick Alerts
ALLOW NOTIFICATIONS  
For Daily Alerts

ದರ್ಶನ್, ಯಶ್, ಪುನೀತ್, ಸುದೀಪ್ ಕೂಡ ಬದಲಾವಣೆ ಮಾಡಿಕೊಳ್ತಾರಾ?

By ಅನಿಲ್ ಆಚಾರ್
|

ಚಿತ್ರಮಂದಿರಗಳಲ್ಲಿ, ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾಗೆ ಅಂತ ಟಿಕೆಟ್ ಹರಿದು ಐವತ್ತು ದಿನಗಳೇ ಕಳೆದುಹೋದವು. ಕೊರೊನಾದ ಕಾರಣಕ್ಕೆ ಶೂಟಿಂಗ್ ನಿಂತಿರುವುದರಿಂದ ಟೀವಿಗಳಲ್ಲಿ ಅವೇ ಹಳೇ ಎಪಿಸೋಡ್, ಹಳೇ ರಿಯಾಲಿಟಿ ಶೋಗಳು. ಮತ್ತೆ ಮತ್ತೆ ಅದೇ ಸಿನಿಮಾಗಳು. ಈ ಅವಧಿಯಲ್ಲಿ ಅದೆಷ್ಟು ಲಕ್ಷ ಮಂದಿ ಓಟಿಟಿ (ಓವರ್ ದಿ ಟಾಪ್) ಕಡೆಗೆ ಇಡಿಯಾಗಿ ತಿರುಗಿಬಿಟ್ಟಿದ್ದಾರೋ ಲೆಕ್ಕವಿನ್ನೂ ಪಕ್ಕಾ ಆಗಬೇಕಿದೆ.

ಓವರ್ ದಿ ಟಾಪ್ ಅಂದರೆ, ಹೈ ಸ್ಪೀಡ್ ಇಂಟರ್ ನೆಟ್ ಬಳಸಿಕೊಂಡು ಸಿನಿಮಾ ಹಾಗೂ ಟೀವಿಯ ಕಾರ್ಯಕ್ರಮಗಳನ್ನು ಪ್ರೇಕ್ಷಕರಿಗೆ ಮುಟ್ಟಿಸುವುದು ಅಂತರ್ಥ. ಇಲ್ಲಿ ಕೇಬಲ್ ಅಗತ್ಯ ಇಲ್ಲ. ಸ್ಯಾಟಲೈಟ್ ಮೂಲಕ ಸೇವೆ ಪಡೆದುಕೊಳ್ಳಬೇಕು ಅಂತಿಲ್ಲ. ಇಂಟರ್ ನೆಟ್ ಕನೆಕ್ಷನ್ ಇದ್ದು, ಅದರ ಸ್ಪೀಡ್ ಉತ್ತಮವಾಗಿದ್ದು, ಆಯಾ ಓಟಿಟಿ ಪ್ಲಾಟ್ ಫಾರ್ಮ್ ಗಳಿಗೆ (ಅಮೆಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ಇತ್ಯಾದಿ ಇತ್ಯಾದಿ) ಸಬ್ಸ್ಕ್ರೈಬ್ ಆಗಿದ್ದರೆ ಆಯಿತು.

2019ರ ಸೂಪರ್ ಡೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾಗಳಿವು2019ರ ಸೂಪರ್ ಡೂಪರ್ ಹಿಟ್, ಬ್ಲಾಕ್ ಬಸ್ಟರ್ ಸಿನಿಮಾಗಳಿವು

ನೀವು ಗಮನಿಸಿದ್ದರೆ, ಗೊತ್ತಾಗಿರುತ್ತದೆ. ಈ ಓಟಿಟಿ ಪ್ಲಾಟ್ ಫಾರ್ಮ್ ಗಳಲ್ಲಿ ಅವುಗಳದೇ ಒರಿಜಿನಲ್ ವೆಬ್ ಸಿರೀಸ್, ಸಿನಿಮಾಗಳು ಬರುತ್ತಿವೆ. ಅವು ವಿಪರೀತ ಜನಪ್ರಿಯವೂ ಆಗಿವೆ. ಜತೆಗೆ ಅವುಗಳಿಗೆ ವಿಮರ್ಶೆಗಳನ್ನು ಗಂಭೀರವಾಗಿ ಬರೆಯಲಾಗುತ್ತಿದೆ. ಕೊರೊನಾಗೆ ಮುಂಚೆಯೇ ಥಿಯೇಟರ್- ಮಲ್ಟಿಪ್ಲೆಕ್ಸ್ ಮೂಲಕ ಬರುವ ಆದಾಯದಲ್ಲಿ ಸಿಕ್ಕಾಪಟ್ಟೆ ಕಡಿಮೆ ಆಗಿಹೋಗಿತ್ತು. ಇನ್ನು ಕೊರೊನಾ ಮುಗಿದು, ಆ ನಂತರದ ಸ್ಥಿತಿ ಹೇಗಾಗಬಹುದು ಅನ್ನೋದನ್ನು ಸದ್ಯಕ್ಕೆ ಊಹಿಸಲು ಸಹ ಸಾಧ್ಯವಾಗುತ್ತಿಲ್ಲ.

ವಿವಿಧ ಭಾಷೆ ಪ್ರೇಕ್ಷಕರು ಗುರುತಿಸುವಂಥವರಿಗೆ ಬೇಡಿಕೆ ಹೆಚ್ಚು

ವಿವಿಧ ಭಾಷೆ ಪ್ರೇಕ್ಷಕರು ಗುರುತಿಸುವಂಥವರಿಗೆ ಬೇಡಿಕೆ ಹೆಚ್ಚು

ಕನ್ನಡದ ಇತ್ತೀಚಿನ ತಲೆಮಾರಿನ ನಿರ್ದೇಶಕರೊಬ್ಬರು ತಮ್ಮ ತಂಡದ ಸದಸ್ಯರೆಲ್ಲರನ್ನೂ ಕರೆದು, "ಇನ್ನು ಸಿನಿಮಾಗಳಿಗೋಸ್ಕರ ಜನರು ಥಿಯೇಟರ್ ಗಳಿಗೆ ಬರುತ್ತಾರೆ ಅನ್ನೋ ಆಸೆ ಬಿಟ್ಟುಬಿಡಿ. ಓಟಿಟಿಗಳಿಗೆ ಎಂಥ ಕಂಟೆಂಟ್ ಸಿದ್ಧ ಮಾಡಿಟ್ಟುಕೊಳ್ಳಬೇಕು ಎಂಬ ಕಡೆ ಗಮನ ಕೊಡಿ" ಎಂದಿದ್ದಾರೆ ಎಂಬ ವರ್ತಮಾನ ಸಿಕ್ಕಿದೆ. ಒಂದು ವೇಳೆ ಓಟಿಟಿ ಆ ಪರಿಯಲ್ಲಿ ಜನಪ್ರಿಯ ಆಗಿಬಿಟ್ಟರೆ ದರ್ಶನ್, ಪುನೀತ್, ಯಶ್, ಸುದೀಪ್, ಶಿವರಾಜ್ ಕುಮಾರ್ ಸೇರಿದಂತೆ ಕನ್ನಡದ ಎಲ್ಲ ನಟರು ಸಿನಿಮಾ, ವೆಬ್ ಸೀರೀಸ್ ಗಳನ್ನು ಮಾಡಬೇಕಾದ ಸನ್ನಿವೇಶ ಬರಬಹುದು. ಹಾಗಂತ ಇದು ಅವಮಾನದ ಸಂಗತಿ ಅಂತೇನಲ್ಲ. ಆದರೆ ಓಟಿಟಿಯಲ್ಲಿ ಪ್ರಸಾರ ಆಗುವ ವೆಬ್ ಸೀರೀಸ್, ಸಿನಿಮಾಗಳ ವಸ್ತು, ವಿಷಯಗಳಿಗೆ ಬೇರೆ ಸಿದ್ಧತೆ ಬೇಕಾಗುತ್ತದೆ. ಜತೆಗೆ ಡಬ್ಬಿಂಗ್ ವಿಚಾರದಲ್ಲಿ ತಕರಾರೇನೂ ಇಲ್ಲವಾದ್ದರಿಂದ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಭಾಷೆಯಲ್ಲಿ ಪರಿಚಯ ಆಗಿರುವ ಹಾಗೂ ಪ್ರೇಕ್ಷಕರು ಗುರುತಿಸಬಲ್ಲಂಥವರಿಗೆ ಬೇಡಿಕೆ ಜಾಸ್ತಿ ಆಗಬಹುದು.

ಹತ್ತಾರು ಸಾವಿರ ಕೋಟಿ ರುಪಾಯಿಯ ಚಿತ್ರೋದ್ಯಮ

ಹತ್ತಾರು ಸಾವಿರ ಕೋಟಿ ರುಪಾಯಿಯ ಚಿತ್ರೋದ್ಯಮ

ನಾವೆಲ್ಲ ಉದ್ಯೋಗ, ಭವಿಷ್ಯ ಅಂತ ತಲೆ ಕೆಡಿಸಿಕೊಳ್ಳುತ್ತಿದ್ದರೆ ಇದೇನ್ರಿ ಓಟಿಟಿ, ಸಿನಿಮಾ ಅಂತೆ ಎಂದೇನಾದರೂ ಅಂದುಕೊಳ್ಳುತ್ತಿದ್ದರೆ ಭಾರತೀಯ ಚಿತ್ರರಂಗದ ಎಕನಾಮಿಕ್ಸ್ ಬಗ್ಗೆ ಕೂಡ ತಿಳಿದುಕೊಳ್ಳುವುದು ಉತ್ತಮ. 2019ರಲ್ಲಿ ತಮಿಳು ಚಿತ್ರರಂಗದಲ್ಲಿ 1460 ಕೋಟಿ ರುಪಾಯಿ ವ್ಯವಹಾರ ಆಗಿದೆ. ಹಿಂದಿ ಚಿತ್ರರಂಗ 2500 ಕೋಟಿ ರುಪಾಯಿಗೂ ಹೆಚ್ಚು ವಹಿವಾಟು ನಡೆಸಿದೆ. ಇನ್ನು ತೆಲುಗು ಸಹ 1400 ಕೋಟಿ ಹತ್ತಿರ ಹತ್ತಿರ ವ್ಯಾಪಾರ ಮಾಡಿದೆ. ಕನ್ನಡ ಸಿನಿಮಾಗಳು 520 ಕೋಟಿ ರುಪಾಯಿಯಷ್ಟು ವಹಿವಾಟು ನಡೆಸಿವೆ. ಕಳೆದ ವರ್ಷ ಕನ್ನಡ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಪ್ರಶಸ್ತಿ ನಮ್ಮ ಚಿತ್ರರಂಗಕ್ಕೆ ಬಂದಿದೆ. ಈಗ ತಿಳಿಸಿರುವುದರಲ್ಲಿ ಮಲೆಯಾಳಂ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳ ಸಿನಿಮಾಗಳ ಲೆಕ್ಕಾಚಾರ ಇಲ್ಲ. ಇತರ ಮೂಲಗಳಿಂದಲೂ ಸೇರ್ಪಡೆಯಾಗಿರುವ ಮೊತ್ತದ ಮಾಹಿತಿಯೂ ಇಲ್ಲ. ಸುಲಭವಾಗಿ ಹತ್ತಾರು ಸಾವಿರ ಕೋಟಿ ಎಂದು ಲೆಕ್ಕ ಇಡಬಹುದಾದ ಭಾರತದ ಚಿತ್ರೋದ್ಯಮದಲ್ಲಿ ತಲ್ಲಣವೊಂದು ಕಾಣಿಸಿಕೊಂಡರೆ ಅದರಿಂದ ಪ್ರತ್ಯಕ್ಷವಾಗಿ- ಪರೋಕ್ಷವಾಗಿ ಎಷ್ಟು ಕುಟುಂಬಗಳಿಗೆ ಸಮಸ್ಯೆಯಾಗಬಹುದು?!

ನಿರ್ಮಾಪಕರಿಗೆ ದೊಡ್ಡ ಪ್ರಮಾಣದ ನಷ್ಟ

ನಿರ್ಮಾಪಕರಿಗೆ ದೊಡ್ಡ ಪ್ರಮಾಣದ ನಷ್ಟ

ಹಾಗಿದ್ದರೆ ನಾವೆಲ್ಲ ಸರತಿ ಸಾಲಿನಲ್ಲಿ ನಿಂತು, ಟಿಕೆಟ್ ಖರೀದಿಸಿ, ಜನಜಂಗುಳಿ ಮಧ್ಯೆ ಶಿಳ್ಳೆ- ಚಪ್ಪಾಳೆ ಸಹಿತ ಸಿನಿಮಾ ನೋಡುತ್ತಿದ್ದ ದಿನಗಳು ಮುಗಿದವೆ? ಈ ತಕ್ಷಣದ ಪರಿಸ್ಥಿತಿ ಗಮನಿಸಿದರೆ ಹೌದು ಎನಿಸುತ್ತದೆ. ಇದರ ಜತೆಗೆ ಕೊರೊನಾ ಮುಗಿಸಿದ ಮೇಲೆ ವೀಕ್ಷಕರ ಅಭಿರುಚಿ ಹೇಗೆ ಬದಲಾಗಿರುತ್ತದೆ ಎಂಬ ಅಂದಾಜು ಸಹ ಇಲ್ಲ. ಈಗಾಗಲೇ ಸಿನಿಮಾ ಸಿದ್ಧಪಡಿಸಿಕೊಂಡು, ಬಿಡುಗಡೆ ಮಾಡಲು ಕಾಯುತ್ತಿರುವ ಅದೆಷ್ಟೋ ನಿರ್ಮಾಪಕರಿದ್ದಾರೆ. ಬಿಡುಗಡೆ ಮುಂದೆ ಹೋಗಿದ್ದರಿಂದ ಹಾಗೂ ಶೂಟಿಂಗ್ ಮುಂದೂಡಿದ್ದರಿಂದ ನಿರ್ಮಾಪಕರಿಗೆ ದೊಡ್ಡ ನಷ್ಟವೇ ಆಗಿದೆ. ಅದೇ ರೀತಿ ಸಿನಿಮಾಗಳು ಮಾಡಿದ್ದರೆ ಆದಾಯ ಬರುತ್ತಿದ್ದ ಹೀರೋ, ಹೀರೋಯಿನ್, ಸಹ ಕಲಾವಿದರು, ಡೈರೆಕ್ಟರ್, ಚಿತ್ರೋದ್ಯಮದ ಕಾರ್ಮಿಕರು, ವಿತರಕರು, ಪ್ರದರ್ಶಕರು... ಹೀಗೆ ಎಲ್ಲರೂ ಸಮಸ್ಯೆಗೆ ಸಿಲುಕಿಕೊಂಡಿದ್ದಾರೆ.

ಕನ್ನಡ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ?

ಕನ್ನಡ ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ?

ಆ ಕಾರಣಕ್ಕೆ ಓಟಿಟಿ ಕಡೆಗೆ ನಿರೀಕ್ಷೆಯನ್ನು ಹೊತ್ತುಕೊಂಡು ನೋಡುತ್ತಿರುವವರು ಹೆಚ್ಚಾಗಿದ್ದಾರೆ. ಕನ್ನಡ ಟೀವಿ ಚಾನೆಲ್ ವೊಂದರಲ್ಲಿ ಪ್ರಮುಖ ಸ್ಥಾನದಲ್ಲಿ ಇರುವ ವ್ಯಕ್ತಿಯೊಬ್ಬರು ಗುಡ್ ರಿಟರ್ನ್ಸ್ ಕನ್ನಡದ ಜತೆ ಮಾತನಾಡಿ, ನನ್ನ ಪ್ರಕಾರ ಇನ್ನು ಸಿನಿಮಾಗಳ ಜಮಾನ ಥಿಯೇಟರ್ ಗಳ ಮೂಲಕ ಅಳೆಯುವುದು ಮುಗಿಯಿತು. ಓಟಿಟಿಗೆ ಯಾವ ರೀತಿಯ ಕಂಟೆಂಟ್ ಬೇಕು ಅನ್ನೋ ಕಡೆಗೆ ಎಲ್ಲ ಭಾಷೆಯ ಚಿತ್ರರಂಗವೂ ಯೋಚನೆ ಮಾಡಬೇಕಿದೆ. ಕನ್ನಡವೂ ಇದಕ್ಕಿಂತ ಹೊರತೇನಲ್ಲ. ಆದರೆ ಕನ್ನಡದ ಪ್ರೇಕ್ಷಕರು ಹೇಗೆ ಕನ್ನಡದಲ್ಲಿ ಇಂಥ ಕಂಟೆಂಟ್ ಸ್ವೀಕರಿಸುತ್ತಾರೆ ಎಂಬ ಅಳುಕು ಇದ್ದೇ ಇದೆ ಎಂದು ಹೇಳಿದರು.

English summary

Is It A Time For Kannada Film Industry To Concentrate On OTT Platform?

Corona impact: Kannada film industry need to concentrate on OTT platform.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X