Tirumala Hundi Collection : ತಿರುಪತಿ ತಿಮ್ಮಪ್ಪನ ಹುಂಡಿಗೆ 2022ರಲ್ಲಿ ಬಿದ್ದ ಹಣವೆಷ್ಟು ಗೊತ್ತಾ?
ತಿರುಮಲ ಬೆಟ್ಟದಲ್ಲಿನ ವೆಂಕಟೇಶ್ವರ ಸ್ವಾಮಿ ದೇವಾಲಯವು ವಿಶ್ವದ ಶ್ರೀಮಂತ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಶ್ರೀಮಂತಿಕೆಗೆ ಹಾಗೂ ಭಾರೀ ಹುಂಡಿ ಹಣ ಸಂಗ್ರಹದ ಮೂಲಕವೇ ಹೆಸರುವಾಸಿಯಾದ ಈ ದೇವಾಲಯದಲ್ಲಿ 2022ರಲ್ಲಿ ಹುಂಡಿ ಸಂಗ್ರಹವು ಭಾರೀ ಪ್ರಮಾಣದಲ್ಲಿ ಆಗಿದೆ.
ವಿಶ್ವದ ಅತೀ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಾಲಯದಲ್ಲಿ 2022ರಲ್ಲಿ 1450 ಕೋಟಿ ರೂಪಾಯಿ ಹುಂಡಿಗೆ ಭಕ್ತರು ಹಾಕಿದ ಕಾಣಿಕೆಯ ಮೂಲಕ ಸಂಗ್ರಹವಾಗಿದೆ. ತಿರುಮಲ ತಿರುಪತಿ ದೇವಸ್ಥಾನಂಸ್‌ನ (ಟಿಟಿಡಿ) ಅಧಿಕಾರಿ ಧರ್ಮ ರೆಡ್ಡಿ ಪ್ರಕಾರ 2022ರಲ್ಲಿ ತಿರುಮಲ ದೇವಾಲಯಕ್ಕೆ ಬರೋಬ್ಬರಿ 2.37 ಕೋಟಿ ಭಕ್ತರು ಆಗಮಿಸಿದ್ದಾರೆ.
2021ರಲ್ಲಿ ದೇವಾಲಯಕ್ಕೆ ಹುಂಡಿಗೆ ಭಕ್ತರು ಹಾಕಿದ ಹಣದ ಮೂಲಕ ಸುಮಾರು 853.41 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿತ್ತು. ಹಾಗೆಯೇ ಸುಮಾರು 1.04 ಕೋಟಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. ಆದರೆ ಈ ವರ್ಷ ಭಕ್ತರ ಸಂಖ್ಯೆಯು ದುಪ್ಪಟ್ಟಾಗಿದೆ. ಹುಂಡಿ ಸಂಗ್ರಹವೂ ಕೂಡಾ ಅಧಿಕವಾಗಿದೆ.

ಟಿಟಿಡಿ ಅಧಿಕಾರಿ ಧರ್ಮ ರೆಡ್ಡಿ ಹೇಳುವುದೇನು?
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ತಿರುಮಲ ತಿರುಪತಿ ದೇವಸ್ಥಾನಂಸ್‌ನ (ಟಿಟಿಡಿ) ಅಧಿಕಾರಿ ಧರ್ಮ ರೆಡ್ಡಿ, "2022ರಲ್ಲಿ 2.37 ಕೋಟಿ ಭಕ್ತರು ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದಾರೆ. 1450 ಕೋಟಿ ರೂಪಾಯಿ ಹುಂಡಿ ಸಂಗ್ರಹವಾಗಿದೆ," ಎಂದು ತಿಳಿಸಿದ್ದಾರೆ. ದೇಶದಲ್ಲಿ ಕೊರೊನಾ ಸಾಂಕ್ರಾಮಿಕದಿಂದಾಗಿ ಹಲವಾರು ನಿರ್ಬಂಧಗಳು ಇದ್ದ ಕಾರಣದಿಂದಾಗಿ 2022, 2021ರಲ್ಲಿನ ಹುಂಡಿ ಸಂಗ್ರಹವನ್ನು ನಾವು ತುಲನೆ ಮಾಡಲಾಗದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಡಿಸೆಂಬರ್‌ನಲ್ಲಿ ಅಧಿಕ ಹುಂಡಿ ಸಂಗ್ರಹ
2022ರ ಡಿಸೆಂಬರ್ ತಿಂಗಳಿನಲ್ಲೇ ತಿರುಮಲ ತಿರುಪತಿ ದೇವಾಲಯದಲ್ಲಿ ಅಧಿಕ ಹುಂಡಿ ಸಂಗ್ರಹವಾಗಿದೆ. ಡಿಸೆಂಬರ್‌ನಲ್ಲಿ ಬರೋಬ್ಬರಿ 129.37 ಕೋಟಿ ರೂಪಾಯಿ ಹುಂಡಿ ಸಂಗ್ರಹವಾಗಿದೆ. ಹಾಗೆಯೇ ಈ ತಿಂಗಳಿನಲ್ಲಿ ಬಾಲಾಜಿ ದೇವಾಲಯಕ್ಕೆ 20.25 ಲಕ್ಷ ಜನರು ಭೇಟಿ ನೀಡಿದ್ದಾರೆ. 2023ರ ಜನವರಿ ತಿಂಗಳಲ್ಲಿ 11 ದಿನದಲ್ಲಿ ಸುಮಾರು 6 ಲಕ್ಷ ಮಂದಿ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಹಾಗೆಯೇ 39.40 ಕೋಟಿ ರೂಪಾಯಿ ಹುಂಡಿ ಸಂಗ್ರಹವಾಗಿದೆ. 2022ರಲ್ಲಿ ಟಿಟಿಡಿ 11.54 ಲಕ್ಷ ಲಡ್ಡು ಪ್ರಸಾದ ಮಾರಾಟ ಮಾಡಿದೆ. ಇದಕ್ಕೂ ಹಿಂದಿನ ವರ್ಷ 5.96 ಲಕ್ಷ ಸಂಗ್ರಹವಾಗಿದೆ.

ವೈಕುಂಠ ಏಕಾದಶಿ ದಿನ ಬರೋಬ್ಬರಿ ಹಣ ಸಂಗ್ರಹ!
ತಿರುಮಲ ತಿರುಪತಿ ದೇವಸ್ಥಾನದಲ್ಲಿ ಹುಂಡಿಗೆ ಭಕ್ತರು ಹಾಕಿದ ಒಂದು ದಿನದ ಹಣವು ಈ ಹಿಂದಿನ ದಾಖಲೆಯನ್ನು ಮುರಿದಿದೆ. ವೈಕುಂಠ ಏಕಾದಶಿ ದಿನವೇ ಸುಮಾರು 7.68 ಕೋಟಿ ರೂಪಾಯಿಯನ್ನು ಜನರು ಹುಂಡಿಗೆ ಹಾಕಿದ್ದಾರೆ. ಈ ಹಿಂದಿನ ದಾಖಲೆಯನ್ನು ಬ್ರೇಕ್ ಮಾಡಲಾಗಿದೆ. ಈ ಹಿಂದೆ ಅಕ್ಟೋಬರ್ 23ರಂದು ಒಂದು ದಿನದಲ್ಲಿಯೇ ತಿರುಮಲ ತಿರುಪತಿ ದೇವಸ್ಥಾನದ ಹುಂಡಿಗೆ 6.31 ಕೋಟಿ ರೂಪಾಯಿ ಹುಂಡಿಗೆ ಹಾಕಿದ್ದಾರೆ. ಒಟ್ಟಾಗಿ 69,414 ಕೋಟಿ ಯಾತ್ರಿಗಳು ದೇವಾಲಯಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ 7.68 ಕೋಟಿ ರೂಪಾಯಿಯನ್ನು ಜನರು ಹುಂಡಿಗೆ ಹಾಕಿದ್ದಾರೆ.