ಹೆಲ್ತ್ ಇನ್ಷೂರೆನ್ಸ್ ಮಾಡಿಸುವಾಗ ಹಿಂದಿನ ಕಾಯಿಲೆ ಬಗ್ಗೆ ಯಾಕೆ ತಿಳಿಸಬೇಕು?
ಆರೋಗ್ಯ ವಿಮೆ ಈಗ ಬಹಳ ಅಗತ್ಯದ ಪ್ಯಾಕೇಜ್ ಆಗಿದೆ. ಅದರಲ್ಲೂ ಕೋವಿಡ್ ಬಂದ ಬಳಿಕವಂತೂ ಜನರಿಗೆ ಹೆಲ್ತ್ ಇನ್ಷೂರೆನ್ಸ್ ಎಷ್ಟು ಮಹತ್ವದ್ದು ಎಂಬ ಅರಿವಾಗತೊಡಗಿದೆ. ಆರೋಗ್ಯ ವಿಮೆ ಮಾಡಿಸದೇ ಹೋದವರು ಕಾಯಿಲೆಗಳಿಗೆ ತುತ್ತಾಗಿ ಆಸ್ಪತ್ರೆಗಳಿಗೆ ದುಡ್ಡು ಕುಕ್ಕಿ ಅನುಭವಿಸಿದ ನಷ್ಟ ಅಷ್ಟಿಷ್ಟಲ್ಲ. ಕೈಯಲ್ಲಿ ದುಡಿದು ಉಳಿಸಿದ ಹಣವೆಲ್ಲಾ ನೀರಲ್ಲಿ ಹೋಮ ಮಾಡಿದಂತೆ ಮಾಡುತ್ತದೆ ಈ ಕಾಯಿಲೆ. ಅದಕ್ಕೆ ಆರೋಗ್ಯ ವಿಮೆ ಬಹಳ ಅಗತ್ಯ.
ಕೋವಿಡ್ ಬಂದ ಬಳಿಕ ಹೆಲ್ತ್ ಇನ್ಷೂರೆನ್ಸ್‌ನ ದರಗಳು ಗಗನಕ್ಕೇರಿವೆ. ಹೆಚ್ಚು ಮಂದಿ ಕಾಯಿಲೆ ಬೀಳುತ್ತಿರುವುದರಿಂದ ವಿಮಾ ಕಂಪನಿಗಳಿಗೆ ಪ್ರೀಮಿಯಂ ಅನ್ನು ಹೆಚ್ಚಿಸದೇ ಬೇರೆ ದಾರಿ ಇಲ್ಲ.
ವೈದ್ಯರು, ವಕೀಲರು ಮತ್ತು ಪೊಲೀಸರ ಮುಂದೆ ಸುಳ್ಳು ಹೇಳಬಾರದು ಎನ್ನುತ್ತಾರೆ. ಈಗ ಈ ಪಟ್ಟಿಗೆ ಹೆಲ್ತ್ ಇನ್ಷೂರೆನ್ಸ್ ಅನ್ನೂ ಸೇರಿಸಬಹುದು. ಆರೋಗ್ಯ ವಿಮೆ ಮಾಡಿಸುವಾಗ ಇನ್ಷೂರೆನ್ಸ್ ಕಂಪನಿ ಕೇಳುವ ಎಲ್ಲಾ ವಿವರವನ್ನು ಒದಗಿಸುವುದು ಮುಖ್ಯ. ಅದರಲ್ಲೂ ನಿಮಗೆ ಹಿಂದೆ ಬಂದಿದ್ದ ಕಾಯಿಲೆಗಳು, ಮೊದಲೇ ಇರುವ ಅನಾರೋಗ್ಯ ಇವೆಲ್ಲದರ ಬಗ್ಗೆ ಮಾಹಿತಿಯನ್ನು ಸಾಮಾನ್ಯವಾಗಿ ಕೇಳಲಾಗುತ್ತದೆ. ಇದನ್ನು ಒದಗಿಸುವುದು ವಿಮಾ ಗ್ರಾಹಕರ ಕರ್ತವ್ಯ.

ಕಾಯಿಲೆ ಬಗ್ಗೆ ಯಾಕೆ ಮಾಹಿತಿ ನೀಡಬೇಕು?
ಈಗಿರುವ ಕಾಯಿಲೆ, ಹಿಂದೆ ಬಂದಿದ್ದ ಕಾಯಿಲೆ, ಬಿಪಿ ಶುಗರ್ ಇತ್ಯಾದಿ ಮೊದಲೇ ಇರುವ ಕಾಯಿಲೆ ಇತ್ಯಾದಿ ಏನಾದರೂ ಅನಾರೋಗ್ಯ ಸಮಸ್ಯೆ ಇದ್ದರೆ ಅದನ್ನು ನೀಡುವುದು ಮುಖ್ಯ. ಕೆಲ ವಿಮಾ ಕಂಪನಿಗಳು ಇಂಥ ಕಾಯಿಲೆಗಳಿದ್ದರೆ ಅಂಥವರಿಗೆ ಪಾಲಿಸಿ ಕೊಡುವುದಿಲ್ಲ. ಅಥವಾ ಪಾಲಿಸಿಯ ಮೊತ್ತವನ್ನು ಹೆಚ್ಚು ಮಾಡುತ್ತವೆ. ಹೀಗಾಗಿ, ಬಹಳ ಜನರು ತಮಗೆ ಕಾಯಿಲೆಗಳಿದ್ದರೂ ಗೌಪ್ಯವಾಗಿಡುತ್ತಾರೆ.
ಇದು ತಪ್ಪು ಎನ್ನುತ್ತಾರೆ ತಜ್ಞರು. ಒಂದು ವೇಳೆ ನೀವು ಕಾಯಿಲೆ ವಿಚಾರದಲ್ಲಿ ನಿಜಾಂಶ ಮುಚ್ಚಿಟ್ಟರೆ ನಿಮಗೆ ಪಾಲಿಸಿ ಸಿಗಬಹುದು. ಆದರೆ, ನೀವು ಹೇಳಿದ್ದ ಮಾಹಿತಿ ತಪ್ಪು ಎಂದು ವಿಮಾ ಕಂಪನಿಗೆ ತಿಳಿದರೆ ಪಾಲಿಸಿಯನ್ನು ರದ್ದು ಮಾಡುತ್ತದೆ, ಅಥವಾ ಕ್ಲೇಮ್ ಮಾಡಲು ಸಾಧ್ಯವಾಗುವುದಿಲ್ಲ.

ವಿಮಾ ಕಂಪನಿಗೆ ನಿಜ ಗೊತ್ತಾಗುತ್ತದಾ?
ನೀವು ಪೂರ್ವದಲ್ಲೇ ಇರುವ ಕಾಯಿಲೆ ಕಾರಣದಿಂದ ಆಸ್ಪತ್ರೆಗೆ ಅಡ್ಮಿಟ್ ಆಗಿ ವಿಮೆ ಬಳಸುವಾಗ ಅಥವಾ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿ ವಿಮಾ ಹಣವನ್ನು ಕ್ಲೇಮ್ ಮಾಡುವಾಗ ಇನ್ಷೂರೆನ್ಸ್ ಕಂಪನಿಗಳಿಗೆ ನಿಮ್ಮ ಆರೋಗ್ಯದ ಇತಿಹಾಸ ತಿಳಿಯುವ ಸಾಧ್ಯತೆ ಇರುತ್ತದೆ. ಆಗ ನಿಮಗೆ ಇನ್ಷೂರೆನ್ಸ್ ಹಣವನ್ನು ಕೊಡಲು ಕಂಪನಿ ನಿರಾಕರಿಸಬಹುದು. ಹೀಗಾಗಿ, ನೀವು ಮೊದಲೇ ನಿಮ್ಮ ಕಾಯಿಲೆಯ ಇತಿಹಾಸವನ್ನು ತಿಳಿಸುವುದು ಸರಿ.
ನಿಮಗೆ ಗಂಭೀರ ಕಾಯಿಲೆಯ ಇತಿಹಾಸ ಇದ್ದರೆ ವಿಮೆ ಪಾಲಿಸಿ ನೀಡಲು ಕೆಲವೇ ಕಂಪನಿಗಳು ನಿರಾಕರಿಸಬಹುದು. ಆದರೆ ಹೆಚ್ಚಿನ ಇನ್ಷೂರೆನ್ಸ್ ಕಂಪನಿಗಳು ಹೆಚ್ಚಿನ ಪ್ರೀಮಿಯಂ ದರಕ್ಕೆ ಪಾಲಿಸಿಯನ್ನು ಆಫರ್ ಮಾಡುತ್ತವೆ. ಅಥವಾ ಕನಿಷ್ಠ 1 ವರ್ಷದಿಂದ 4 ವರ್ಷದ ಕಾಯುವಿಕೆ ಅವಧಿ ಬಳಿಕ ನಿಮ್ಮ ಹಳೆಯ ಕಾಯಿಲೆ ಮರುಕಳಿಸಿದರೆ ಚಿಕಿತ್ಸಾ ವೆಚ್ಚ ಭರಿಸುವ ಆಫರ್ ಕೊಡಬಹುದು.
ಕ್ಯಾನ್ಸರ್ ಇತ್ಯಾದಿ ದೊಡ್ಡ ಕಾಯಿಲೆ ಬಂದಿದ್ದರೆ ಅದನ್ನು ವಿಮೆ ಮಾಡಿಸುವಾಗ ನಮೂದಿಸುವುದು ಬಹಳ ಮುಖ್ಯ. ಬಿಪಿ, ಶುಗರ್ ಇತ್ಯಾದಿ ತೊಂದರೆ ಇದ್ದರೂ ಅದನ್ನು ತಪ್ಪದೇ ತಿಳಿಸಬೇಕು.

ಇನ್ಷೂರೆನ್ಸ್ ಕವರೇಜ್ ಎಷ್ಟಿರಬೇಕು?
ಇನ್ನು, ಇನ್ಷೂರೆನ್ಸ್ ಕವರೇಜ್ ಬಗ್ಗೆ ತಜ್ಞರು ಒಂದು ಮುಖ್ಯ ಸಲಹೆ ನೀಡುತ್ತಾರೆ. ನೀವು ಕೆಲಸ ಮಾಡುವ ಕಂಪನಿಯಿಂದ ಇನ್ಷೂರೆನ್ಸ್ ವ್ಯವಸ್ಥೆ ಇರುತ್ತದೆ. ಅದಿದ್ದರೂ ಜೊತೆಗೆ ವೈಯಕ್ತಿಕವಾಗಿ ಇನ್ಷೂರೆನ್ಸ್ ಹೊಂದಿರುವುದು ಮುಖ್ಯ. ಉದ್ಯೋಗನಷ್ಟ ಯಾವಾಗ ಬೇಕಾದರೂ ಆಗಬಹುದಾದ್ದರಿಂದು ವೈಯಕ್ತಿಕ ವಿಮೆ ಮಾಡಿಸುವುದು ಕ್ಷೇಮಕರ. ಆದರೆ, ಎಷ್ಟು ಕವರೇಜ್ ಇರಬೇಕು ಎಂಬ ಗೊಂದಲ ಇರುತ್ತದೆ.
ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ವಾರ್ಷಿಕ 5 ಲಕ್ಷದಿಂದ 15 ಲಕ್ಷ ರೂವರೆಗೆ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ನಿಮ್ಮ ವೈಯಕ್ತಿಕ ಇನ್ಷೂರೆನ್ಸ್ ಆದರೆ ಎಷ್ಟು ಕವರೇಜ್ ಇರಬೇಕು? ತಜ್ಞರ ಪ್ರಕಾರ ನಿಮ್ಮ ವಾರ್ಷಿಕ ವರಮಾನದ ಶೇ. 50ರಷ್ಟು ಮೊತ್ತವನ್ನು ಇನ್ಷೂರೆನ್ಸ್ ಕವರ್ ಮಾಡಬೇಕು ಎಂಬ ಸೂತ್ರವಿದೆ. ನಿಮ್ಮ ವಾರ್ಷಿಕ ವರಮಾನ 6 ಲಕ್ಷ ಇದ್ದರೆ ನಿಮ್ಮ ಇನ್ಷೂರೆನ್ಸ್ ಕವರೇಜ್ 3 ಲಕ್ಷ ರೂ ಇರಬೇಕು. ಇನ್ಷೂರೆನ್ಸ್ ವ್ಯಾಪ್ತಿ ಹೆಚ್ಚಿದಷ್ಟೂ ಪ್ರೀಮಿಯಂ ಹಣ ಹೆಚ್ಚುತ್ತದೆ. ಹಾಗಾಗಿ, ನಿಮ್ಮ ಕುಟುಂಬ ಸದಸ್ಯರ ಸಂಖ್ಯೆ ಮತ್ತು ಕಾಯಿಲೆ ಸಾಧ್ಯತೆ ಬಗ್ಗೆ ಯೋಚಿಸಿ ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಪಡೆಯುವುದು ಉತ್ತಮ.