ಫಸಲ್ ಬಿಮಾ ಯೋಜನೆ ಹಗರಣ: ರಾಜ್ಯವಾರು ಅಂಕಿ-ಅಂಶ ನೋಡಿದ್ರೆ ಬೆಚ್ಚಿ ಬೀಳ್ತಿರಾ! ವೈಫಲ್ಯಗಳ ಪಟ್ಟಿ ಇಲ್ಲಿದೆ ನೋಡಿ..

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಪ್ರಕೃತಿ ವಿಕೋಪ ಅಥವಾ ಇನ್ನೂ ಕೆಲ ಕಾರಣಗಳಿಂದ ಹಾಳಾಗುವ ರೈತರ ಫಸಲಿಗೆ ಪರಿಹಾರ ನೀಡಲು ಕೇಂದ್ರ ಸರಕಾರ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಕೇಂದ್ರದ ಈ ಮಹತ್ವಾಕಾಂಕ್ಷಿ ಯೋಜನೆಯಿಂದ ರೈತರಿಗೆ ಎಷ್ಟು ಲಾಭವಾಗಿದೆ ಎಂಬುದಕ್ಕಿಂತ ದೇಶದ 10 ಖಾಸಗಿ ವಿಮಾ ಕಂಪನಿಗಳಿಗೆ ಮಾತ್ರ ದುಡ್ಡಿನ ಸುರಿಮಳೆ ಆಗಿರುವುದು ಮಾತ್ರ ಸತ್ಯ.
  ಹೌದು. ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಜಾರಿಗೊಳಿಸಲು ನೇಮಕವಾಗಿರುವ 10 ವಿಮಾ ಕಂಪನಿಗಳು ಕಳೆದ ೨ ವರ್ಷಗಳಲ್ಲಿ ಭಾರಿ ಲಾಭ ಮಾಡಿಕೊಂಡಿವೆ ಎಂಬುದನ್ನು ನೀವು ನಂಬಲೇಬೇಕು. ಎರಡು ವರ್ಷಗಳಲ್ಲಿ ಈ ಕಂಪನಿಗಳಿಗೆ ಸಂದಾಯವಾದ ವಿಮಾ ಪ್ರೀಮಿಯಂ ಹಾಗೂ ಇವು ಪಾವತಿಸಿದ ಕ್ಲೇಮಗಳಲ್ಲಿ 16 ಸಾವಿರ ಕೋಟಿ ರೂಪಾಯಿಗಳಷ್ಟು ವ್ಯತ್ಯಾಸವಿದೆ ಎಂದು ತಿಳಿದು ಬಂದಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?

  ಫಸಲ್ ಬಿಮಾ ಯೋಜನೆಯಿಂದ ಹೊರ ಬಂದ 84 ಲಕ್ಷ ರೈತರು (ಆರ್‌ಟಿಐ)

  ನೊಂದ ರೈತ ಸಮುದಾಯಕ್ಕೆ ನೆರವು ನೀಡಬೇಕಾದ ಈ ವಿಮಾ ಯೋಜನೆ ರೈತರಲ್ಲಿ ನಿರಾಸೆ ಮೂಡಿಸಿದ್ದು ದುರದೃಷ್ಟಕರ. ದೇಶದ ನಾಲ್ಕು ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಒಂದೇ ವರ್ಷದಲ್ಲಿ 84 ಲಕ್ಷ ರೈತರು ಈ ಯೋಜನೆಯಿಂದ ಹಿಂದೆ ಸರಿದಿದ್ದಾರೆ. ಇದೆಲ್ಲ ಮಾಹಿತಿ ಆರ್‌ಟಿಐ ಮೂಲಕ ಹೊರ ಬಂದಿದ್ದು, ಫಸಲ್ ಬಿಮಾ ಯೋಜನೆಯ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ.

  ದೊಡ್ಡ ಹಗರಣ

  ಫಸಲ್ ಬಿಮಾ ಯೋಜನೆ ವಿಮಾ ಕಂಪನಿಗಳಿಗೇ ಹೆಚ್ಚು ಲಾಭ ತಂದುಕೊಡುತ್ತಿದೆ ಎನ್ನುವುದು ಆರೋಪ. ಹರಿಯಾಣ ರಾಜ್ಯದ ಮಾಹಿತಿ ಹಕ್ಕು ಕಾರ್ಯಕರ್ತ ಪಿ.ಪಿ. ಕಪೂರ ಎಂಬುವರು ಕಳೆದ ಸೆಪ್ಟೆಂಬರ್ 12 ರಂದು ಕೇಂದ್ರದ ಕೃಷಿ ಸಚಿವಾಲಯಕ್ಕೆ ಫಸಲ್ ಬಿಮಾ ಯೋಜನೆಯ ಅಂಕಿ-ಅಂಶಗಳ ಕುರಿತು ಅರ್ಜಿ ಸಲ್ಲಿಸಿದ್ದರು. ರೈತರಿಗೆ ಕಷ್ಟ ಕಾಲದಲ್ಲಿ ನೆರವಾಗಬೇಕಿದ್ದ ಫಸಲ್ ಬಿಮಾ ಯೋಜನೆ ಕೇವಲ ಖಾಸಗಿ ವಿಮಾ ಕಂಪನಿಗಳಿಗೆ ಲಾಭ ತಂದು ಕೊಡುವ ಯೋಜನೆಯಾಗಿ ಬದಲಾಗಿದ್ದು, ಇದೊಂದು ದೊಡ್ಡ ಹಗರಣವಾಗಿದೆ ಎಂದು ಕಪೂರ ಗಂಭೀರ ಆರೋಪ ಮಾಡಿದ್ದಾರೆ.

  ರಾಜ್ಯವಾರು ಬೆಚ್ಚಿ ಬೀಳಿಸುವ ಅಂಕಿ-ಅಂಶ

  ಆರ್‌ಟಿಐ ಕಾರ್ಯಕರ್ತ ಕಪೂರ ಅವರು ಸಲ್ಲಿಸಿದ್ದ ಅರ್ಜಿಗೆ ಅಕ್ಟೋಬರ್ 14 ರಂದು ಕೇಂದ್ರ ಕೃಷಿ ಸಚಿವಾಲಯ ತನ್ನ ಉತ್ತರ ನೀಡಿದೆ. ಇದರಲ್ಲಿನ ಅಂಕಿ-ಅಂಶಗಳನ್ನು ನೋಡಿದರೆ ಫಸಲ್ ಬಿಮಾ ಯೋಜನೆಯ ವೈಫಲ್ಯ ಎದ್ದು ಕಾಣುತ್ತಿದೆ.
  ಮಧ್ಯ ಪ್ರದೇಶದಲ್ಲಿ 2.90 ಲಕ್ಷ ರೈತರು, ರಾಜಸ್ಥಾನದಲ್ಲಿ 31.25 ಲಕ್ಷ ರೈತರು, ಮಹಾರಾಷ್ಟ್ರದಲ್ಲಿ 19.47 ಲಕ್ಷ ರೈತರು ಹಾಗೂ ಉತ್ತರ ಪ್ರದೇಶದಲ್ಲಿ 14.69 ಲಕ್ಷ ರೈತರು ಯೋಜನೆಯಿಂದ ಹಿಂದೆ ಸರಿದಿದ್ದಾರೆ ಎಂದು ಕಪೂರ ಆರೋಪಿಸಿದ್ದಾರೆ.
  2016-17 ನೇ ಸಾಲಿನಲ್ಲಿ 5,72,17,159 ರೈತರು ಫಸಲ್ ಬಿಮಾ ಯೋಜನೆಗೆ ನೋಂದಾಯಿಸಿಕೊಂಡಿದ್ದರು. ಮರು ವರ್ಷದಲ್ಲಿ 4,87,70,515 ರೈತರು ಮಾತ್ರ ಯೋಜನೆಯಲ್ಲಿ ಉಳಿದುಕೊಂಡಿದ್ದರು. ಅಂದರೆ ಒಂದೇ ವರ್ಷದಲ್ಲಿ ಸುಮಾರು 84.47 ಲಕ್ಷ ರೈತರು ವಿಮಾ ಯೋಜನೆಯಿಂದ ಹೊರ ಬಂದಿದ್ದಾರೆ. ಅದರಲ್ಲೂ ಬಿಜೆಪಿ ಆಡಳಿತವಿರುವ ನಾಲ್ಕು ರಾಜ್ಯಗಳಲ್ಲಿನ 68 ಲಕ್ಷ ರೈತರು ಯೋಜನೆಯಿಂದ ಹಿಂದೆ ಸರಿದಿದ್ದಾರೆ ಎಂದು ಕಪೂರ ಮಾಹಿತಿ ನೀಡುತ್ತಾರೆ.

  ಪರಿಹಾರ ಮೊತ್ತ ಕಡಿಮೆ ಮಾಡಿದ ವಿಮಾ ಕಂಪನಿಗಳು
  2016-17 ನೇ ಸಾಲಿನಲ್ಲಿ ಖಾಸಗಿ ವಿಮಾ ಕಂಪನಿಗಳು ರೂ. 17,902.47 ಕೋಟಿಗಳಷ್ಟು ಹಣವನ್ನು ಪರಿಹಾರವಾಗಿ ವಿತರಿಸಿದ್ದವು. ಈ ವರ್ಷ ಕಂಪನಿಗಳು ಪಡೆದುಕೊಂಡ ಪ್ರೀಮಿಯಂ ಮೊತ್ತ ಹಾಗೂ ವಿತರಿಸಿದ ಕ್ಲೇಮ್ ಗಳಲ್ಲಿ 6459.64 ಕೋಟಿ ರೂ. ವ್ಯತ್ಯಾಸವಿತ್ತು. ಅಂದರೆ ಕ್ಲೇಮ್ ಮೊತ್ತವು ಪ್ರೀಮಿಯಂ ಮೊತ್ತಕ್ಕಿಂತಲೂ ಕಡಿಮೆಯಾಗಿತ್ತು. ಇನ್ನು 2017-18 ರ ಸಾಲಿನಲ್ಲಿ ಹಿಂದಿಗಿಂತ 2 ಸಾವಿರ ಕೋಟಿ ರೂಪಾಯಿ ಕಡಿಮೆ ಪರಿಹಾರ ವಿತರಿಸಲಾಗಿದೆ. ಈ ವರ್ಷದಲ್ಲಿ ಖಾಸಗಿ ವಿಮಾ ಕಂಪನಿಗಳು ರೈತರಿಗೆ ರೂ. 15,710.25 ಕೋಟಿ ಪರಿಹಾರ ಧನ ಸಂದಾಯ ಮಾಡಿವೆ.

   

  ರೈತರ ಸಂಖ್ಯೆ ಕಡಿಮೆಯಾದಷ್ಟೂ ಕಂಪನಿಗಳ ಲಾಭ ಹೆಚ್ಚಳ

  ಎರಡು ವರ್ಷಗಳಲ್ಲಿ ಫಸಲ್ ಬಿಮಾ ಯೋಜನೆಗೆ ರೈತರ ಸಂಖ್ಯೆ ಕಡಿಮೆಯಾಗಿದೆ. ಆದರೆ ರೈತರ ಸಂಖ್ಯೆ ಕಡಿಮೆಯಾದಷ್ಟೂ ವಿಮಾ ಕಂಪನಿಗಳ ಲಾಭ ದೊಡ್ಡ ಮಟ್ಟದಲ್ಲಿ ಹೆಚ್ಚಾಗಿದೆ.
  "ಫಸಲ್ ಬಿಮಾ ಯೋಜನೆ ಸಂಪೂರ್ಣ ವಿಫಲವಾಗಿದೆ. ಖಾಸಗಿ ವಿಮಾ ಕಂಪನಿಗಳು ದೊಡ್ಡ ಮೊತ್ತದ ಲಾಭ ಮಾಡಲು ಅವಕಾಶ ನೀಡಬಾರದಾಗಿತ್ತು. ಸಂಗ್ರಹಿಸಿದ ಹಣವನ್ನು ಆದಷ್ಟೂ ಹೆಚ್ಚಾಗಿ ರೈತರಿಗೆ ತಲುಪಿಸುವಂತೆ ಕೇಂದ್ರ ಸರಕಾರ ಮಾರ್ಗಸೂಚಿಗಳನ್ನು ರಚಿಸಬೇಕಿತ್ತು" ಎಂದು ಕಾರ್ಯಕರ್ತ ಕಪೂರ ಅಸಮಾಧಾನ ವ್ಯಕ್ತಪಡಿಸುತ್ತಾರೆ.

  ಸರಕಾರಿ ವಿಮಾ ಕಂಪನಿಯೂ ಇದೆ!

  ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆಯನ್ನು ಜಾರಿಗೊಳಿಸಲು ಎರಡು ವರ್ಷಗಳ ಅವಧಿಗೆ 10 ಖಾಸಗಿ ವಿಮಾ ಕಂಪನಿಗಳಲ್ಲದೆ ಸರಕಾರಿ ಒಡೆತನದ ಕೃಷಿ ವಿಮಾ ಸಂಸ್ಥೆ (ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ-ಎಐಸಿ) ಯನ್ನು ಸಹ ನೇಮಿಸಲಾಗಿದೆ ಎಂಬ ಮಾಹಿತಿ ಆರ್‌ಟಿಐ ಮಾಹಿತಿಯಲ್ಲಿ ಬಹಿರಂಗವಾಗಿದೆ.

  ಹಿಂಗಾರು-ಮುಂಗಾರು ಪರಿಹಾರ ಲೆಕ್ಕಾಚಾರ

  ವಿಮಾ ಪರಿಹಾರದ ಕುರಿತು ತಾನು ನೀಡಿರುವ ಅಂಕಿ-ಅಂಶಗಳು 2017-18 ನೇ ಸಾಲಿನ ವಾರ್ಷಿಕ 2017 ರ ಮುಂಗಾರು, ಹಿಂಗಾರು ಹಾಗೂ 2017-18 ರ ಹಿಂಗಾರು ಪರಿಹಾರದ ಲೆಕ್ಕವನ್ನು ಒಳಗೊಂಡಿವೆ. ಆದಾಗ್ಯೂ 2017-18 ರ ಹಿಂಗಾರು ಪರಿಹಾರದ ಮೊತ್ತವನ್ನು ಇನ್ನಷ್ಟೆ ಲೆಕ್ಕ ಹಾಕಬೇಕಿರುವುದು ಹಾಗೂ ಕಂಪನಿಗಳು ಅದಕ್ಕೆ ಒಪ್ಪಿಗೆ ನೀಡುವುದು ಬಾಕಿ ಇದ್ದು, ಈ ಮೊತ್ತ ಬಟವಾಡೆ ಆದ ನಂತರ ರೈತರಿಗೆ ಸಾಕಷ್ಟು ಲಾಭವಾಗಲಿದ್ದು, ಕಂಪನಿಗಳ ಲಾಭದ ಮೊತ್ತ ಕಡಿಮೆಯಾಗಲಿದೆ ಎಂದು ಕೃಷಿ ಸಚಿವಾಲಯ ತಿಳಿಸಿದೆ.

  ತಜ್ಞರ ಅಭಿಮತ

  ಖಾಸಗಿ ವಿಮಾ ಕಂಪನಿಗಳು ಪಡೆದ ಪ್ರೀಮಿಯಂ ಮೊತ್ತ ಹಾಗೂ ವಿತರಿಸಿದ ಪರಿಹಾರದ ವ್ಯತ್ಯಾಸದ ಸಂಪೂರ್ಣ ಹಣ ಕಂಪನಿಗಳಿಗೆ ಲಾಭ ಎಂದು ಪರಿಗಣಿಸಲಾಗದು. ವಿಮಾ ಯೋಜನೆ ಜಾರಿಗೊಳಿಸುವಲ್ಲಿ ಕಂಪನಿಗಳು ಸಾಕಷ್ಟು ಹಣವನ್ನು ನಿರ್ವಹಣೆಗಾಗಿ ಖರ್ಚು ಮಾಡಬೇಕಾಗುತ್ತದೆ ಎಂಬುದು ಕೆಲ ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
  ಯೋಜನೆ ಕುರಿತಂತೆ ರೈತರು ಹೆಚ್ಚಿನದೇನ್ನೂ ಕಳೆದುಕೊಂಡಿಲ್ಲ. ರೈತರು ತಾವು ಪಾವತಿಸಬೇಕಾದ ಪ್ರೀಮಿಯಂನಲ್ಲಿ ಕೇವಲ ಶೇ. 2 ರಷ್ಟನ್ನು ಮಾತ್ರ ನೀಡಿದ್ದು, ಉಳಿದ ಹಣವನ್ನು ಆಯಾ ರಾಜ್ಯ ಸರಕಾರ ಹಾಗೂ ಕೇಂದ್ರ ಸರಕಾರಗಳು ಭರಿಸಿವೆ ಎಂದು ತಜ್ಞರು ಹೇಳುತ್ತಾರೆ.

  ಯೋಜನೆಯಿಂದ ಹಿಂದೆ ಸರಿದ ಸರಕಾರಿ ವಿಮಾ ಕಂಪನಿ?

  2016-17 ನೇ ಸಾಲಿನಲ್ಲಿ ಸರಕಾರಿ ಒಡೆತನದ ಕೃಷಿ ವಿಮಾ ಸಂಸ್ಥೆ (ಎಐಸಿ) 21 ರಾಜ್ಯಗಳ 246,83,612 ರೈತರಿಗೆ ವಿಮೆ ನೀಡಿ ರೂ. 7984.56 ಕೋಟಿ ಪ್ರೀಮಿಯಂ ಹಣ ಸಂಗ್ರಹಿಸಿತ್ತು. ಇದರಲ್ಲಿ ಕಂಪನಿ ರೂ. 5373.96 ಕೋಟಿ ಪರಿಹಾರವನ್ನು ಮರಳಿ ರೈತರಿಗೆ ನೀಡಿತು.
  ಆದರೂ ಲಾಭದಲ್ಲಿದ್ದ ಸರಕಾರಿ ವಿಮಾ ಕಂಪನಿಯು 2017-18 ನೇ ಸಾಲಿನಲ್ಲಿ ಫಸಲ್ ಬಿಮಾ ಯೋಜನೆಯಿಂದ ಹೊರ ಬಂದಿತು.
  "ಲಾಭದಲ್ಲಿದ್ದ ಸರಕಾರಿ ವಿಮಾ ಕಂಪನಿಯನ್ನು ಯಾವ ಕಾರಣಕ್ಕಾಗಿ ಯೋಜನೆಯಿಂದ ಹೊರಗಿಡಲಾಯಿತು? ಖಾಸಗಿ ವಿಮಾ ಕಂಪನಿಗಳಿಗೆ ಲಾಭ ಮಾಡಿಕೊಡಲೆಂದೇ ಎಐಸಿಯನ್ನು ತಡೆಯಲಾಯಿತಾ?" ಎಂದು ಆರ್‌ಟಿಐ ಕಾರ್ಯಕರ್ತ ಕಪೂರ ಪ್ರಶ್ನಿಸಿದ್ದಾರೆ.

  ಭಾರಿ ಲಾಭ ಮಾಡಿದ ಖಾಸಗಿ ಕಂಪನಿಗಳು

  ಆರ್‌ಟಿಐ ಅರ್ಜಿಗೆ ಸರಕಾರ ನೀಡಿದ ಮಾಹಿತಿಯ ಪ್ರಕಾರ, ಎರಡು ವರ್ಷಗಳಲ್ಲಿ ಒಟ್ಟಾರೆ 10.6 ಲಕ್ಷ ರೈತರು 49,408 ಕೋಟಿ ರೂಪಾಯಿಗಳಷ್ಟು ಮೊತ್ತವನ್ನು ಫಸಲ್ ಬಿಮಾ ಯೋಜನೆ ಪ್ರೀಮಿಯಂ ಆಗಿ ವಿಮಾ ಕಂಪನಿಗಳಿಗೆ ಪಾವತಿಸಿದ್ದರು. ಇದರಿಂದ 4.27 ಕೋಟಿ ರೈತರಿಗೆ 33612.72 ರೂಪಾಯಿಗಳಷ್ಟು ಮೊತ್ತವನ್ನು ಪರಿಹಾರವಾಗಿ ಕಂಪನಿಗಳು ನೀಡಿದವು. ಹೀಗಾಗಿ ಸಂಗ್ರಹಿಸಿದ ಮೊತ್ತ ಹಾಗೂ ಪರಿಹಾರ ಮೊತ್ತದಲ್ಲಿನ ವ್ಯತ್ಯಾಸವಾದ 15,795.26 ಕೋಟಿ ರೂಪಾಯಿಗಳಲ್ಲಿನ ಹೆಚ್ಚಿನ ಅಂಶವನ್ನು 10 ಖಾಸಗಿ ವಿಮಾ ಕಂಪನಿಗಳು ಲಾಭ ಮಾಡಿಕೊಂಡಿವೆ ಎಂದು ಕಪೂರ ಅವರ ಆಪಾದನೆಯಾಗಿದೆ.

  10 ಖಾಸಗಿ ವಿಮಾ ಕಂಪನಿಗಳ ಪಟ್ಟಿ

  ಫಸಲ್ ಬಿಮಾ ಯೋಜನೆಯು ಈ 10 ಖಾಸಗಿ ವಿಮಾ ಕಂಪನಿಗಳಿಗೆ ಮಾತ್ರ ಚಿನ್ನದ ಗಣಿ ಆಗಿದೆ!
  - ಐಸಿಐಸಿಐ ಲೊಂಬಾರ್ಡ್
  - ರಿಲಯನ್ಸ್
  - ಟಾಟಾ ಎಐಜಿ
  - ಯುನಿವರ್ಸಲ್
  - ಬಜಾಜ ಅಲೈಯನ್ಸ್
  - ಫ್ಯೂಚರ್
  - ಎಸ್‌ಬಿಐ
  - ಎಚ್‌ಡಿಎಫ್‌ಸಿ
  - ಇಫ್ಕೊ ಟೋಕಿಯೊ
  - ಚೋಳಮಂಡಲಂ

  ರಾಜ್ಯವಾರು ವ್ಯತ್ಯಾಸ

  2016-17 ನೇ ಸಾಲಿನಲ್ಲಿ ಮಧ್ಯ ಪ್ರದೇಶದಲ್ಲಿ 67.69 ಲಕ್ಷ ರೈತರು ಫಸಲ್ ಬಿಮಾ ಯೋಜನೆ ಪಡೆದುಕೊಂಡಿದ್ದರು. ಮರು ವರ್ಷ ಈ ಸಂಖ್ಯೆ 53 ಲಕ್ಷಕ್ಕೆ ಕುಸಿಯಿತು. ವಿಮೆ ಪಡೆದ ರೈತರ ಸಂಖ್ಯೆ ಕಡಿಮೆಯಾದರೂ ಈ ಅವಧಿಯಲ್ಲಿ ಕಂಪನಿಗಳು ಪಡೆದುಕೊಂಡ ಪ್ರೀಮಿಯಂ ಮೊತ್ತ ಹಾಗೂ ವಿತರಿಸಿದ ಪರಿಹಾರದ ಮೊತ್ತದಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದ್ದು ಮಾತ್ರ ಆಶ್ಚರ್ಯಕರವಾಗಿದೆ. 2016-17 ರಲ್ಲಿ ರೂ. 548.94 ಕೋಟಿ ಇದ್ದ ಇದು ಮರು ವರ್ಷ 1046.81 ಕೋಟಿ ರೂ. ಗಳಾಗಿದ್ದು ಸಂಶಯ ಹುಟ್ಟು ಹಾಕಿದೆ.

  ಮಧ್ಯ ಪ್ರದೇಶ

  ಮಧ್ಯ ಪ್ರದೇಶದಲ್ಲಿ 2016-17 ನೇ ಸಾಲಿನಲ್ಲಿ 71.81 ಲಕ್ಷ ರೈತರು ವಿಮಾ ಪಾಲಿಸಿ ಪಡೆದಿದ್ದರು. ಈ ವರ್ಷ ಕಂಪನಿಗಳು ಪಡೆದ ಒಟ್ಟಾರೆ ಪ್ರೀಮಿಯಂ ಮೊತ್ತ ಹಾಗೂ ವಿತರಿಸಿದ ಪರಿಹಾರದಲ್ಲಿ 1,862.32 ಕೋಟಿ ರೂ. ವ್ಯತ್ಯಾಸವಿತ್ತು. ಅದರ ಮರು ವರ್ಷ 2.90 ಲಕ್ಷ ರೈತರು ಯೋಜನೆಯಿಂದ ಹಿಂದೆ ಸರಿದರೂ ಕಂಪನಿಗಳ ಒಟ್ಟಾರೆ ಪ್ರೀಮಿಯಂ ಸಂಗ್ರಹ ಮತ್ತು ಪರಿಹಾರ ವಿತರಣೆಯಲ್ಲಿನ ವ್ಯತ್ಯಾಸ ಕೇವಲ 39.21 ಕೋಟಿ ರೂ. ಮಾತ್ರ ಕಡಿಮೆಯಾಗಿದ್ದು ಪ್ರಶ್ನೆಗಳನ್ನು ಹುಟ್ಟು ಹಾಕುವಂತಿದೆ.

  ಮಹಾರಾಷ್ಟ್ರ

  ಮಹಾರಾಷ್ಟ್ರದಲ್ಲಿ 2016-17 ನೇ ಸಾಲಿನಲ್ಲಿ 1.20 ಕೋಟಿ ರೈತರು ವಿಮಾ ಪಾಲಿಸಿ ಪಡೆದಿದ್ದರು. ಈ ವರ್ಷ ಕಂಪನಿಗಳು ಪಡೆದ ಒಟ್ಟು ಪ್ರೀಮಿಯಂ ಮೊತ್ತ ಹಾಗೂ ಪಾವತಿಸಿದ ಪರಿಹಾರ ಮೊತ್ತದಲ್ಲಿ 2,424.23 ಕೋಟಿ ರೂ. ವ್ಯತ್ಯಾಸವಿತ್ತು. 2017-18 ನೇ ಸಾಲಿನಲ್ಲಿ ಕೇವಲ ಒಂದು ಕೋಟಿ ರೈತರು ಮಾತ್ರ ಯೋಜನೆಯಲ್ಲಿ ಉಳಿದುಕೊಂಡರು. ಈ ವರ್ಷ ಕಂಪನಿಗಳ ಪ್ರೀಮಿಯಂ ಸಂಗ್ರಹ ಹಾಗೂ ವಿತರಿಸಿದ ಪರಿಹಾರದ ಮೊತ್ತದಲ್ಲಿನ ವ್ಯತ್ಯಾಸ 1617.94 ಕೋಟಿ ರೂ. ಗಳಾಗಿತ್ತು.

  ಏರಿಕೆ ವ್ಯತ್ಯಾಸ

  ಫಸಲ್ ಬಿಮಾ ಯೋಜನೆಯಡಿ ರೈತರ ಸಂಖ್ಯೆ ಹೆಚ್ಚಳಗೊಂಡ ಏಕೈಕ ರಾಜ್ಯ ಗುಜರಾತ್ ಆಗಿದೆ. 2016-17 ರಲ್ಲಿ 5.20 ಲಕ್ಷ ರೈತರು ಯೋಜನೆಗೆ ಒಳಪಟ್ಟಿದ್ದರು. ಆದರೆ ಮರುವರ್ಷ ಈ ಸಂಖ್ಯೆ 17.63 ಲಕ್ಷಕ್ಕೆ ಹೆಚ್ಚಾಗಿದ್ದು ಗಮನಾರ್ಹವಾಗಿದೆ. ಅದೇ ರೀತಿ ಪ್ರೀಮಿಯಂ ಸಂಗ್ರಹ ಹಾಗೂ ಪರಿಹಾರ ವಿತರಣೆಯಲ್ಲಿನ ವ್ಯತ್ಯಾಸದ ಪ್ರಮಾಣ ಶೇ. 5000 ದಷ್ಟು ಏರಿಕೆಯಾಗಿದೆ. 2016-17 ರಲ್ಲಿ 40 ಕೋಟಿ ರೂ. ಇದ್ದ ಈ ವ್ಯತ್ಯಾಸ 2017-18 ಕ್ಕೆ 2,222.58 ಕ್ಕೆ ಏರಿಕೆಯಾಗಿದೆ.
  ಇನ್ನು ಹರಿಯಾಣಾದಲ್ಲಿ ಸಹ ಫಸಲ್ ಬಿಮಾ ಯೋಜನೆಗೆ ಹೆಚ್ಚು ರೈತರು ನೋಂದಾಯಿಸಿಕೊಂಡಿರುವುದು ಕಂಡು ಬಂದಿದೆ. 2016-17 ರಲ್ಲಿ 13.36 ಲಕ್ಷ ಹಾಗೂ 2017-18 ನೇ ಸಾಲಿನಲ್ಲಿ ಹೊಸದಾಗಿ 13.51 ಲಕ್ಷ ರೈತರು ಯೋಜನೆಗೆ ಸೇರ್ಪಡೆ ಆಗಿದ್ದಾರೆ. ಎರಡು ವರ್ಷಗಳಲ್ಲಿ ಪ್ರೀಮಿಯಂ ಸಂಗ್ರಹಣೆ ಹಾಗೂ ಪರಿಹಾರ ವಿತರಣೆಯಲ್ಲಿನ ವ್ಯತ್ಯಾಸ ಪ್ರಮಾಣ ಸಹ ಹೆಚ್ಚಾಗಿದ್ದು, ಇದು 71.83 ಕೋಟಿಯಿಂದ 95 ಕೋಟಿ ರೂ. ಗಳಿಗೆ ಹೆಚ್ಚಳವಾಗಿದೆ.

  ಪಶ್ಚಿಮ ಬಂಗಾಳ

  ಫಸಲ್ ಬಿಮಾ ಯೋಜನೆಯಡಿ ಕಂಪನಿಗಳು ಹೆಚ್ಚು ಲಾಭ ಮಾಡಿಕೊಂಡ ಮತ್ತೊಂದು ರಾಜ್ಯ ಪಶ್ಚಿಮ ಬಂಗಾಳವಾಗಿದೆ. 2016-17 ನೇ ಸಾಲಿನಲ್ಲಿ ರಾಜ್ಯದಲ್ಲಿ 41.33 ಲಕ್ಷ ರೈತರು ಪಾಲಿಸಿ ಪಡೆದುಕೊಂಡಿದ್ದರು. ಮರು ವರ್ಷ ಈ ಸಂಖ್ಯೆ 2.23 ಲಕ್ಷದಷ್ಟು ಕುಸಿದು 39.09 ಲಕ್ಷದಷ್ಟಾಯಿತು. ವಿಮಾ ಕಂಪನಿಗಳು ಸಂಗ್ರಹಿಸಿದ ಒಟ್ಟಾರೆ ಪ್ರೀಮಿಯಂ ಮೊತ್ತ ಹಾಗೂ ವಿತರಿಸಿದ ಪರಿಹಾರದ ವ್ಯತ್ಯಾಸದ ಪ್ರಮಾಣ ಹೆಚ್ಚಳವಾಗಿದ್ದು, ಇದು 2016-17 ನೇ ಸಾಲಿನಲ್ಲಿ 321.26 ಕೋಟಿ ರೂ. ಹಾಗೂ 2017-18 ನೇ ಸಾಲಿನಲ್ಲಿ 547.87 ಕೋಟಿ ರೂ. ಗಳಷ್ಟಾಗಿದೆ.

  English summary

  Fasal Bima Yojana Turned Into a Goldmine for 10 Private Insurers, Here's a list of failures.

  The scheme also failed to enthuse farmers. In just four BJP-ruled states, over 84 lakh farmers exited the scheme after just a year.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more