For Quick Alerts
ALLOW NOTIFICATIONS  
For Daily Alerts

ಆರ್ಥಿಕ ಬೆಳವಣಿಗೆ ಕುಂಠಿತಕ್ಕೆ ಮೂಲ ಸರ್ಕಾರದ ಹಠಮಾರಿತನವೇ?

ಇಂದು ನಮ್ಮ ದೇಶದ ಆರ್ಥಿಕತೆ ಕಳೆದ ಆರು ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂಬುದು ಎಲ್ಲೆಡೆ ಜಾಹಿರಾದ ಅಂಶವಾಗಿದೆ. ಈಗಿನ ಪರಿಸ್ಥಿಯಲ್ಲಿ ಅನೇಕ ಕಂಪನಿಗಳು ತಮ್ಮ ಉತ್ಪಾದನೆಯನ್ನು ಮೊಟಕುಗೊಳಿಸಿವೆ, ಅನೇಕ ಕಂಪನಿಗಳು ಉದ್ಯೋಗ ಕಡಿತ ಮಾಡಿವ

|

ಇಂದು ನಮ್ಮ ದೇಶದ ಆರ್ಥಿಕತೆ ಕಳೆದ ಆರು ವರ್ಷಗಳಲ್ಲಿ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಎಂಬುದು ಎಲ್ಲೆಡೆ ಜಾಹಿರಾದ ಅಂಶವಾಗಿದೆ. ಈಗಿನ ಪರಿಸ್ಥಿಯಲ್ಲಿ ಅನೇಕ ಕಂಪನಿಗಳು ತಮ್ಮ ಉತ್ಪಾದನೆಯನ್ನು ಮೊಟಕುಗೊಳಿಸಿವೆ, ಅನೇಕ ಕಂಪನಿಗಳು ಉದ್ಯೋಗ ಕಡಿತ ಮಾಡಿವೆ, ಮಾಡುತ್ತಿವೆ. ಈ ಆರ್ಥಿಕ ಹಿಂಜರಿತಕ್ಕೆ ಜಾಗತಿಕ ಮಟ್ಟದಲ್ಲುಂಟಾದ ಹಿಂಜರಿತವು ಪ್ರಭಾವಿಯಾಗಿದೆ. ಭಾರತದಂತಹ ಆಂತರಿಕ ಬಳಕೆದಾರ ಸಂಪತ್ತು ಹೊಂದಿರುವ ದೇಶದಲ್ಲಿ ಆರ್ಥಿಕ ಹಿಂಜರಿತವು ಹೆಚ್ಚು ಪ್ರಭಾವಿಯಾಗಿರದು ಆದರೆ ಈ ಪರಿಸ್ಥಿತಿಗೆ ಒಂದು ಕಾರಣ ಸರ್ಕಾರದ ಹಠಮಾರಿತನವಾಗಿದೆ. ಹೊಸ ಸರ್ಕಾರ ಮೇ ತಿಂಗಳಲ್ಲಿ ಅಧಿಕಾರ ಸ್ವೀಕಾರ ಮಾಡಿದಾಗ ಅಂದರೆ ಮೇ.2019 ರ ಅಂತ್ಯದಲ್ಲಿ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಮಾರ್ಕೆಟ್ ಕ್ಯಾಪಿಟಲೈಸೇಶನ್ ರೂ.154.38 ಲಕ್ಷ ಕೋಟಿಯಾಗಿತ್ತು. ಅಂದು ಸೆನ್ಸೆಕ್ಸ್ 39,714 ರಲ್ಲಿತ್ತು. ನಂತರದ ದಿನಗಳಲ್ಲಿ ಜೂನ್ 3 ರಂದು ಸೆನ್ಸೆಕ್ಸ್ 40,308 ರ ಸರ್ವಕಾಲೀನ ಗರಿಷ್ಠದ ದಾಖಲೆ ನಿರ್ಮಿಸಿತು. ಆಗ ಮಾರ್ಕೆಟ್ ಕ್ಯಾಪಿಟಲೈಸೇಶನ್ ರೂ.156.14 ರ ದಾಖಲೆಯ ಹಂತವನ್ನು ತಲುಪಿತು. ಅಲ್ಲಿಂದ ಮೂರೇ ತಿಂಗಳಲ್ಲಿ ಮೂರು ಸಾವಿರ ಪಾಯಿಂಟುಗಳ ಇಳಿಕೆ ಕಂಡಿತು ಆದರೆ ಪೇಟೆಯ ಮಾರ್ಕೆಟ್ ಕ್ಯಾಪಿಟಲೈಸೇಶನ್ ಮಾತ್ರ ರೂ.140.98 ಲಕ್ಷ ಕೋಟಿಗೆ ಕುಸಿದಿದೆ. ಅಂದರೆ ಮೂರು ತಿಂಗಳಲ್ಲಿ ರೂ.15 ಲಕ್ಷ ಕೋಟಿಯಷ್ಟು ಬಂಡವಾಳವನ್ನು ಕರಗಿಸಿದೆ. ಸೆನ್ಸೆಕ್ಸ್ ನ ಕುಸಿತಕ್ಕಿಂತ ಹೆಚ್ಚಿನ ಅಗಾಧ ಪ್ರಮಾಣದಲ್ಲಿ ಮಾರ್ಕೆಟ್ ಕ್ಯಾಪಿಟಲೈಸೇಶನ್ ಕರಾಗಿರುವುದು ಹೆಚ್ಚು ಹಾನಿಕಾರವಾಗಿದೆ. ಇನ್ನು ಕೇಂದ್ರಸರ್ಕಾರ ಜುಲೈನಲ್ಲಿ ತನ್ನ ಹೊಸ ಬಜೆಟ್ ಮಂಡನೆ ಮಾಡಿದ ದಿನವು ಸಹ ಸೆನ್ಸೆಕ್ಸ್ 38,736 ರರಲ್ಲಿದ್ದು ಅಂದಿನ ಮಾರ್ಕೆಟ್ ಕ್ಯಾಪಿಟಲೈಸೇಶನ್ ರೂ.151.35 ಲಕ್ಷ ಕೋಟಿಯಲ್ಲಿತ್ತು. ಅಂದರೆ ಕೇವಲ ಒಂದು ತಿಂಗಳಲ್ಲಿ ಮಾರ್ಕೆಟ್ ಕ್ಯಾಪಿಟಲೈಸೇಶನ್ ರೂ.ಹತ್ತು ಲಕ್ಷ ಕೋಟಿಯಷ್ಟು ಕರಗಿ ಹೋಗಿದೆ. ಈ ಮಟ್ಟದ ಬಂಡವಾಳ ಕರಗುವಿಕೆಯ ಹಿಂದೆ ಅಡಗಿದೆ ಕೇಂದ್ರ ಸರ್ಕಾರದ ಹಠಮಾರಿತನವೆನ್ನಬಹುದು.

ಸರ್ಚಾರ್ಜ್ ಎಫೆಕ್ಟ್

ಸರ್ಚಾರ್ಜ್ ಎಫೆಕ್ಟ್

ಕೇಂದ್ರದ ಬಜೆಟ್ ನಲ್ಲಿ ಹೆಚ್ಚಿಸಿದ ಸರ್ ಚಾರ್ಜ್ ಕಾರಣ ವಿದೇಶಿ ವಿತ್ತೀಯ ಸಂಸ್ಥೆಗಳು ನಿರಂತರವಾದ ಮಾರಾಟದ ಹಾದಿ ಹಿಡಿದು ಷೇರುಪೇಟೆಯ ಸ್ವಾಸ್ಥ್ಯವನ್ನು ಹಾಳುಗೆಡವಿದವು. ಈ ಹೆಚ್ಚುವರಿ ಸರ್ ಚಾರ್ಜ್ ನಿಂದ ಬರಬಹುದಾದ ಆದಾಯವು ರೂ. 1,400 ಕೋಟಿಯಷ್ಟು, ಆದರೆ ಈ ತೆರಿಗೆಯಿಂದ ದೇಶದ ಆರ್ಥಿಕ ಪೇಟೆಗಳಲ್ಲಿ ಹೆಚ್ಚಿನ ಅಸ್ಥಿರತೆಯೊಂದಿಗೆ ಜನಸಾಮಾನ್ಯರ, ಕಾರ್ಪೊರೇಟ್ ಗಳ ಆರ್ಥಿಕ ಬಿಕ್ಕಟ್ಟು ಹೆಚ್ಚುವಂತೆ ಮಾಡಿತು. ಕೇವಲ ಒಂದೇ ತಿಂಗಳಲ್ಲಿ ಹತ್ತು ಲಕ್ಷಕೋಟಿಯಷ್ಟು ಬಂಡವಾಳವನ್ನು ಕರಗಿಸಿದೆ ಎಂದರೆ ಅದರ ನಕಾರಾತ್ಮಕ ಪ್ರಭಾವ ಯಾವಮಟ್ಟದ್ದಾಗಿದೆ ಎಂಬುದರ ಅರಿವಾಗುವುದು.

ಜಿಡಿಪಿ ಕುಸಿತ

ಜಿಡಿಪಿ ಕುಸಿತ

ಭಾರತದ ಜಿ ಡಿ ಪಿ ಈ ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.5 ಕ್ಕೆ ಕುಸಿದಿರುವುದು ಹೆಚ್ಚಿನವರಿಗೆ ದಿಗ್ಭ್ರಮೆಯುಂಟುಮಾಡಿದೆ. ಆದರೆ ದೇಶದ ಆರ್ಥಿಕ ಪೇಟೆಗಳಲ್ಲಾದ ಭಾರಿ ಕುಸಿತವು ಇದರಲ್ಲಿ ಸೇರಿಲ್ಲ. ಈ ಅಂಶವು ಮುಂದಿನ ತ್ರೈಮಾಸಿಕದಲ್ಲಿ ಬಿಂಬಿತವಾಗುವುದು. ಕೇಂದ್ರ ಸರ್ಕಾರವೇನೋ ತಾನು ವಿಧಿಸಿದ ಹೆಚ್ಚುವರಿ ಸರ್ ಚಾರ್ಜ್ ಹಿಂಪಡೆದಿದೆಯಾದರು ಕಾರ್ಪೊರೇಟ್ ವಲಯದಲ್ಲಾಗಿರುವ ಹಾನಿಯು ಶೀಘ್ರವಾಗಿ ತುಂಬಿಕೊಡಲಸಾಧ್ಯವಾದುದಾಗಿದೆ. ಪೇಟೆಗಳು ಉತ್ತುಂಗದಲ್ಲಿದ್ದಾಗ ಮಾಧ್ಯಮಗಳಲ್ಲಿ ಹೆಚ್ಚು ಹೆಚ್ಚು ಶಿಫಾರಸುಗೊಂಡ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಭಾರಿ ಕುಸಿತಕಂಡ ಕಾರಣ ಈ ವಲಯದ ಷೇರುಗಳಲ್ಲಿ ಹೂಡಿಕೆಮಾಡಿದ ಮ್ಯುಚುಯಲ್ ಫಂಡ್, ಸಣ್ಣ ಹೂಡಿಕೆದಾರರು ತಮ್ಮ ಬಂಡವಾಳ ಕರಗುವುದನ್ನು ಮೂಕ ಪ್ರೇಕ್ಷಕರಂತೆ ಸಾಕ್ಷಿಭೂತರಾಗಿದ್ದಾರೆ. ಷೇರುಪೇಟೆಯಲ್ಲಿ ಹೂಡಿಕೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಮಾಡಿದವರಿಗೆಲ್ಲಾ ಹೆಚ್ಚಿನ ಹಾನಿಯುಂಟಾಗಿದೆ. ಮ್ಯುಚುಯಲ್ ಫಂಡ್ ಗಳಲ್ಲಿ ಹೂಡಿಕೆ ಸರಿಯಿದೆ ಎಂಬ ಪ್ರಚಾರದಿಂದ ಹೂಡಿಕೆ ಮಾಡಿದವರ ಹೂಡಿಕೆ ಮೌಲ್ಯವು ಕರಗಿದ ವೇಗ ಕಲ್ಪನಾತೀತವಾಗಿದೆ.

 

 

ಷೇರುಪೇಟೆ ಪ್ರಭಾವ
 

ಷೇರುಪೇಟೆ ಪ್ರಭಾವ

ಜೂನ್ ತಿಂಗಳ ಆರಂಭದಲ್ಲಿ ರೂ. 35 ರ ಸಮೀಪವಿದ್ದ ಸಿ ಜಿ ಪವರ್ ಕಂಪನಿ ಷೇರು ರೂ. 8.25 ಕ್ಕೆ ಕುಸಿದಿದೆ. ರೂ. 90 ರಲ್ಲಿದ್ದ ಕಾಕ್ಸ್ ಅಂಡ್ ಕಿಂಗ್ಸ್ ಷೇರಿನ ಬೆಲೆ ರೂ.4.19 ಕ್ಕೆ ಕುಸಿದಿದೆ. ರೂ.50 ರಲ್ಲಿದ್ದ ತಲ್ವಾಲ್ಕರ್ ಬೆಟ್ಟರ್ ವ್ಯಾಲ್ಯೂ ಫಿಟ್ ನೆಸ್ ಷೇರು ರೂ.7.45 ರಲ್ಲಿದೆ. ರೂ.345 ರ ಸಮೀಪವಿದ್ದ ಶಿಲ್ಪ ಮೆಡಿಕೇರ್ ರೂ.208 ರವರೆಗೂ ಕುಸಿದಿದೆ. ರೂ.100 ರ ಸಮೀಪವಿದ್ದ ರಿಲಯನ್ಸ್ ಇನ್ಫ್ರಾ ಸ್ಟ್ರಕ್ ಚರ್ ಷೇರು ರೂ.35 ರ ಸಮೀಪಕ್ಕೆ ಜಾರಿದೆ. ಇನ್ನು ಕಾಫಿ ಡೇ ಇಂಟರ್ ಪ್ರೈಸಸ್, ಸಿಕಾಲ್ ಲಾಜಿಸ್ಟಿಕ್ಸ್, ಗೋದಾವರಿ ಪವರ್, ಗ್ರಾಫೈಟ್ ಇಂಡಿಯಾ, ಹೆಚ್ ಇ ಜಿ, ಮೈಂಡ್ ಟ್ರೀ, ವೇದಾಂತ, ಟಾಟಾ ಸ್ಟಿಲ್, ಸ್ಟರ್ ಲೈಟ್ ಟೆಕ್ನಾಲಜಿಸ್, ಎಸ್ ಬ್ಯಾಂಕ್, ಜಿ ಐ ಸಿ ಹೌಸಿಂಗ್ ನಂತಹ ಕಂಪನಿಗಳು ವಿಭಿನ್ನ ಕಾರಣಗಳಿಂದ ತಮ್ಮ ಮೌಲ್ಯವನ್ನು ಕಳೆದುಕೊಂಡು ಹೂಡಿಕೆದಾರ ಹಣ ಕರಗಿಸಿವೆ. ಅಂದರೆ ಈ ಎಲ್ಲ ಹೂಡಿಕೆದಾರರಲ್ಲಿ ಹರಿದಾಡುವ ಹಣ ಕ್ಷೀಣಿತವಾಗಿ ಖರೀದಿ ಸಾಮರ್ಥ್ಯವು ಕರಗಿದ ಕಾರಣ ಸಂಬಂದಿತ ವಲಯಗಳ ಮಾರಾಟವು ಕುಸಿದಿದೆ. ಇದು ಮತ್ತಷ್ಟು ದುಷ್ಪರಿಣಾಮ ಬೀರಬಹುದು. ಈ ಕುಸಿತವು ಸೆಪ್ಟೆಂಬರ್ ಅಂತ್ಯದ ತ್ರೈಮಾಸಿಕದ ಜಿ ಡಿ ಪಿ ಅಂಶದಲ್ಲಿ ಬಿಂಬಿತವಾಗುವುದು.

 

 

ಆಟೊ ವಲಯ ಕುಸಿತ

ಆಟೊ ವಲಯ ಕುಸಿತ

ಇನ್ನು ಆಟೋ ವಲಯದಲ್ಲಿ ಹೆಚ್ಚು ಹಿಂಜರಿತವಾಗುತ್ತಿದೆ ಎಂಬುದು ಗಮನಾರ್ಹ ವಿಷಯ. ಮಾರುತಿ ಸುಜುಕಿ, ದ್ವಿಚಕ್ರ ವಾಹನಗಳ ತಯಾರಿಕಾ ಕಂಪನಿಗಳ ಮಾರಾಟದ ಪ್ರಮಾಣವು ಕ್ಷೀಣಿತವಾಗಿದೆ ಎಂಬುದು ಮತ್ತೊಂದು ಸುದ್ಧಿ. ಇದಕ್ಕೆ ಕಾರಣ ಸರ್ಕಾರಗಳು ತಮ್ಮ ಗಮನವನ್ನು ಹೆಚ್ಚಾಗಿ ನಗರದಿಂದ ನಗರಕ್ಕೆ ಸಂಪರ್ಕಿಸುವ ಮಾರ್ಗಗಳ ಅಭಿವೃದ್ಧಿಯತ್ತ ಹರಿಸಿರುವುದು. ಅಂದರೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಕನಸಿನ ಯೋಜನೆ ಚತುಷ್ಪಥ ಮುಂದುವರೆಸಿಕೊಂಡು ಹೋಗುತ್ತಿದ್ದಾರೆಯೇ ಹೊರತು, ನಗರಗಳಲ್ಲಿ ಆಂತರಿಕ ಮೂಲಸೌಕರ್ಯ ಅಂದರೆ ರಸ್ತೆಗಳನ್ನು ಅಭಿವೃದ್ಧಿ ಪಡಿಸುವತ್ತ ಗಮನಹರಿಸುತ್ತಿಲ್ಲ. ಮಾರುತಿ ಕಾರುಗಳು ಹೆಚ್ಚಾಗಿ ನಗರಗಳಲ್ಲಿ ಆಂತರಿಕ ಸಂಚಾರಕ್ಕೆ ಬಳಸಲಾಗುವುದು. ನಗರಗಳಲ್ಲಿ ಸಂಚಾರದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಗಳ ಕಾರಣ ಕಾರು ಖರೀದಿಗೆ ಬ್ರೇಕ್ ಹಾಕುವ ಅನಿವಾರ್ಯತೆ ಉಂಟಾಗುತ್ತಿದೆ. ಜೊತೆಗೆ ಕೇಂದ್ರ ಸರ್ಕಾರ ರಿಜಿಸ್ಟ್ರೇಷನ್ ಶುಲ್ಕ ಹೆಚ್ಚಿಸಿ ನಂತರ ಹಿಂಪಡೆದಿದೆ ಆದರೂ ಮುಂದಿನ ದಿನಗಳಲ್ಲಿ ಜಾರಿಯಾಗುವುದು ಖಂಡಿತವಾದ್ದರಿಂದ ಇದು ನಕಾರಾತ್ಮಕ ಅಂಶವಾಗಿದೆ. ಪೊಲೀಸ್ ಇಲಾಖೆ ವಿಧಿಸಬಹುದಾದ ದಂಡ ಪ್ರಮಾಣವು ಹಲವು ಪಟ್ಟು ಹೆಚ್ಚಿಸಿರುವುದರಿಂದ ಸ್ವಂತ ವಾಹನಕ್ಕಿಂತ ಪರ್ಯಾಯ ವಿಧದ ಸಂಚಾರವೇ ಅನುಕೂಲಕರವೆಂಬ ಭಾವನೆ ವಾಹನ ವಲಯದ ಬೆಳವಣಿಗೆಗೆ ಮಾರಕವಾಗಲಿದೆ.

ಹೀಗೆ ಅನೇಕ ಅಂಶಗಳು ದೇಶದ ಆರ್ಥಿಕ ಪ್ರಗತಿಗೆ ಅಡ್ಡಗಾಲು ಹಾಕುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಕೈಗೊಂಡಿರುವ ಅನೇಕ ಕ್ರಮಗಳು ಬೆಳವಣಿಗೆಯ ದಿಶೆಯನ್ನು ಬದಲಿಸಲು ಎಷ್ಟರಮಟ್ಟಿಗೆ ಪ್ರಭಾವಿಯಾಗುವುದೆಂಬುದು ಕಾದುನೋಡಬೇಕಾಗಿದೆ

Read more about: stock market economy gdp stock
English summary

Economic growth is slowing, is this the government's stubbornness?

Economic growth is slowing, is this the government's stubbornness?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X