ಯಾರು ಮನೆಗಳಿಂದಲೇ ಉದ್ಯೋಗ ಮಾಡುವುದಕ್ಕೆ ಬಯಸುತ್ತಾರೋ ಅಂಥವರು ಮುಂದಿನ ವರ್ಷ, 2021ರ ಜೂನ್ ತನಕ ಮುಂದುವರಿಸಬಹುದು ಎಂದು ಮಂಗಳವಾರ ಅಮೆಜಾನ್ ಹೇಳಿದೆ. ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವರ್ಕ್ ಫ್ರಮ್ ಹೋಮ್ ಅವಧಿ ವಿಸ್ತರಣೆ ಮಾಡಲಾಗಿದೆ.
ಯಾವ ಉದ್ಯೋಗಿಗಳು ತಮ್ಮ ಜವಾಬ್ದಾರಿಯನ್ನು ಮನೆಗಳಿಂದಲೇ ಪರಿಣಾಮಕಾರಿಯಾಗಿ ಮಾಡಲು ಸಾಧ್ಯವೋ ಅಂಥವರು ಜೂನ್ 30, 2021ರ ತನಕ ಮಾಡುವುದಿದ್ದಲ್ಲಿ ಸ್ವಾಗತಿಸುತ್ತೇವೆ ಎಂದು ಅಮೆಜಾನ್ ವಕ್ತಾರೆ ಮಂಗಳವಾರ ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಹಿಂದೆ ಅಮೆಜಾನ್ ನಿಂದ ಜನವರಿ ತನಕ ಅವಕಾಶ ನೀಡಲಾಗಿತ್ತು.
ವಿಶ್ವದ ಅತಿ ದೊಡ್ಡ ರೀಟೇಲರ್ ಅಮೆಜಾನ್ ಗೆ ಉದ್ಯೋಗ ಮಾಡುವ 19,000 ಮಂದಿ ಮುಂಚೂಣಿ ಉದ್ಯೋಗಿಗಳಿಗೆ ಕೊರೊನಾ ಸೋಂಕು ಈ ವರ್ಷ ದೃಢಪಟ್ಟಿತ್ತು ಎಂದು ತಿಳಿಸಿದ ಮೂರು ವಾರದೊಳಗೆ ಈಗಿನ ಹೇಳಿಕೆ ಬಂದಿದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ವೇರ್ ಹೌಸ್ ತೆರೆಯುವ ಮೂಲಕ ಅಮೆಜಾನ್ ನಿಂದ ಉದ್ಯೋಗಿಗಳ ಆರೋಗ್ಯ ಅಪಾಯಕ್ಕೆ ಸಿಲುಕಿದೆ ಎಂದು ಕೆಲವರು ಆರೋಪ ಮಾಡಿದ್ದರು.

ಕಳೆದ ಮೇ ತಿಂಗಳಲ್ಲಿ ಟ್ವಿಟ್ಟರ್ ನಿಂದ ಸಿಬ್ಬಂದಿಗೆ ಅನಿರ್ದಿಷ್ಟಾವಧಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಲಾಗಿದೆ. ಇನ್ನು ಮೈಕ್ರೋಸಾಫ್ಟ್ ಕೂಡ ಉದ್ಯೋಗಿಗಳ ಒಟ್ಟು ಕಾರ್ಯ ನಿರ್ವಹಣೆಯ ಅರ್ಧದಷ್ಟು ಸಮಯವನ್ನು ಮನೆಯಿಂದಲೇ ಕಾರ್ಯ ನಿರ್ವಹಿಸಬಹುದು ಎಂದು ತಿಳಿಸಿದೆ.
ಫೇಸ್ ಬುಕ್ ನಿಂದ ಮುಂದಿನ ವರ್ಷದ ಜುಲೈ ತನಕ, ಗೂಗಲ್ ನಿಂದ ಮುಂದಿನ ವರ್ಷದ ಜೂನ್ ತನಕ ವರ್ಕ್ ಫ್ರಮ್ ಹೋಮ್ ವಿಸ್ತರಣೆ ಮಾಡಲಾಗಿದೆ.


Click it and Unblock the Notifications