ಏರ್ ಟೆಲ್ ಪ್ರೀಪೇಯ್ಡ್ ಮೊಬೈಲ್ ಕನಿಷ್ಠ ರೀಚಾರ್ಜ್ ದರದಲ್ಲಿ ಏರಿಕೆ
ಭಾರತದ ಪ್ರಮುಖ ಟೆಲಿಕಾಂ ಆಪರೇಟರ್ ಗಳಲ್ಲಿ ಒಂದಾದ ಏರ್ ಟೆಲ್ ನಿಂದ ಪ್ರೀಪೇಯ್ಡ್ ಮೊಬೈಲ್ ಗ್ರಾಹಕರಿಗೆ ತಿಂಗಳ ಕನಿಷ್ಠ ರೀಚಾರ್ಜ್ ಮೊತ್ತವನ್ನು ಹೆಚ್ಚಿಸಲಾಗಿದೆ. ಡಿಸೆಂಬರ್ 29ರ ಭಾನುವಾರದಿಂದ ದರ ಹೆಚ್ಚಳ ಜಾರಿಗೆ ಬರಲಿದೆ. ಕಳೆದ ಒಂದು ವರ್ಷದಿಂದ ಕನಿಷ್ಠ ರೀಚಾರ್ಜ್ ಮೊತ್ತವು 35 ರುಪಾಯಿ ಇತ್ತು. ಇದೀಗ ಆ ಮೊತ್ತವನ್ನು 45 ರುಪಾಯಿಗೆ ಹೆಚ್ಚಳ ಮಾಡಲಾಗಿದೆ.
ಇದರರ್ಥ ಏರ್ ಟೆಲ್ ನ ಪ್ರೀಪೇಯ್ಡ್ ಗ್ರಾಹಕರು, ಯಾರು ಕನಿಷ್ಠ ಮೊತ್ತದ ರೀಚಾರ್ಜ್ ಮಾಡಿಸುತ್ತಿದ್ದರೋ ಅವರು ಪ್ರತಿ ತಿಂಗಳು 10 ರುಪಾಯಿ ಹೆಚ್ಚು ಪಾವತಿಸಬೇಕು. ಮೊಬೈಲ್ ಫೋನ್ ಸೇವೆ ದೊರೆಯಬೇಕು ಅಂದರೆ ಪ್ರತಿ 28 ದಿನಕ್ಕೆ ಒಮ್ಮೆ ಕನಿಷ್ಠ 45 ರುಪಾಯಿ ಮತ್ತು ಅದಕ್ಕೆ ಮೇಲ್ಪಟ್ಟು ರೀಚಾರ್ಜ್ ಮಾಡಿಸಬೇಕಾಗುತ್ತದೆ ಎಂದು ಏರ್ ಟೆಲ್ ನಿಂದ ತಿಳಿಸಲಾಗಿದೆ.
ಒಂದು ವೇಳೆ 45 ರುಪಾಯಿ ಅಥವಾ ಅದಕ್ಕೆ ಮೇಲ್ಪಟ್ಟ ಮೊತ್ತಕ್ಕೆ ರೀಚಾರ್ಜ್ ಮಾಡಿಸದಿದ್ದರೆ ಅಲ್ಲಿಂದ ಮುಂದಿನ ಹದಿನೈದು ದಿನಗಳಲ್ಲಿ ಈಗ ಇರುವ ಯೋಜನೆಯ ಅನುಕೂಲಗಳಲ್ಲಿ ಕಡಿತಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಬಹುದಾಗಿರುತ್ತದೆ. ಒಂದು ವೇಳೆ ಆ ನಂತರವೂ ರೀಚಾರ್ಜ್ ಮಾಡಿಸದಿದ್ದಲ್ಲಿ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.

ಅಂದ ಹಾಗೆ, ಕಳೆದ ತಿಂಗಳು ಭಾರ್ತಿ ಏರ್ ಟೆಲ್, ವೊಡಾಫೋನ್ ಐಡಿಯಾದಿಂದ ದರವನ್ನು 40 ಪರ್ಸೆಂಟ್ ಏರಿಕೆ ಮಾಡಲಾಗಿತ್ತು. ಈಗ ತೆಗೆದುಕೊಂಡಿರುವ ತೀರ್ಮಾನವು ಕಂಪೆನಿಯ ಆದಾಯದ ಮೇಲೆ ದೊಡ್ಡ ಮಟ್ಟದಲ್ಲಿ ಪ್ರಭಾವ ಆಗುತ್ತದೆ. ಕಳೆದ ವರ್ಷದ ನವೆಂಬರ್ ನಲ್ಲಿ ಏರ್ ಟೆಲ್ ನಿಂದ ಕನಿಷ್ಠ ರೀಚಾರ್ಜ್ ಮೊತ್ತವನ್ನು 35 ರುಪಾಯಿಗೆ ನಿಗದಿಗೊಳಿಸಲಾಗಿತ್ತು.