ಡಿಜಿಟಲ್ ದುಡ್ಡು ಬಿಟ್ ಕಾಯಿನ್ ಮೌಲ್ಯ ಮತ್ತೆ $50,000ಕ್ಕೆ ಏರಿಕೆ!
ಡಿಜಿಟಲ್ ದುಡ್ಡು ಬಿಟ್ ಕಾಯಿನ್ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ದಾಟಿ ಅಚ್ಚರಿ ಮೂಡಿಸಿದ ಬಳಿಕ ಟ್ರೆಂಡಿಂಗ್ ಮುಂದುವರೆದಿದೆ. ಕೆಲ ದಿನಗಳಿಂದ ಕುಸಿತ ಕಾಣುತ್ತಿದ್ದ ಬಿಟ್ ಕಾಯಿನ್ ಮೌಲ್ಯ ಮತ್ತೊಮ್ಮೆ 50, 000 ಡಾಲರ್ ಮೌಲಕ್ಕೇರಿದೆ.
ಫೆ. 21ರಂದು 58, 354 ಡಾಲರ್ ಮೌಲ್ಯಕ್ಕೇರಿ ಅಚ್ಚರಿ ಮೂಡಿಸಿತ್ತು. ಫೆ.28ರಂದು ಶೇ 5.84ರಷ್ಟು ಕುಸಿತ ಕಂಡು 2,691.96 ಡಾಲರ್ ಮೌಲ್ಯ ಕಳೆದುಕೊಂಡು 43,418.02 ಯುಎಸ್ ಡಾಲರ್ ಮೌಲ್ಯಕ್ಕೆ ಇಳಿದಿತ್ತು. ಫೆ.21ರಿಂದ ಇಲ್ಲಿ ತನಕ ಶೇ 25.6ರಷ್ಟು ಕುಸಿತ ಕಂಡಿದೆ. ಆದರೆ, ಪ್ರಮುಖ ಹೂಡಿಕೆದಾರ ಟಿಮ್ ಡ್ರೇಪರ್ ಕ್ರಿಪ್ಟೋ ಕರೆನ್ಸಿ ಮೌಲ್ಯ ಏರಿಕೆ ಬಗ್ಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದ್ದು ಮೌಲ್ಯ 100 ಪಟ್ಟು ಏರಿಕೆ ಕಾಣಲು ಕಾರಣವಾಗಿದೆ.
2022 ಅಥವಾ 2023ರ ವೇಳೆಗೆ ಬಿಟ್ ಕಾಯಿನ್ ಮೌಲ್ಯ 250, 000 ಡಾಲರ್ ನಷ್ಟು ಏರಿಕೆ ಕಾಣಲಿದೆ ಎಂದು ಡ್ರೇಪರ್ ಭವಿಷ್ಯ ನುಡಿದ ಸಂದರ್ಭದಲ್ಲಿ ಬಿಟ್ ಕಾಯಿನ್ ಮೌಲ್ಯ ಇನ್ನೂ 4000 ಡಾಲರ್ ದಾಟಿರಲಿಲ್ಲ. ಆದರೆ, ಈಗ ಡ್ರೇಪರ್ ಹೇಳಿದ್ದ ಮಾತುಗಳು ಒಂದೊಂದೇ ನಿಜವಾಗುತ್ತಿದೆ. ಸದ್ಯ 1 ಟ್ರಿಲಿಯನ್ ಮಾರುಕಟ್ಟೆ ಮೌಲ್ಯ ನೂರು ಪಟ್ಟು ಏರಿಕೆ ಕಂಡರೆ ಅಚ್ಚರಿ ಪಡಬೇಕಾಗಿಲ್ಲ ಎಂದು ಡ್ರೇಪರ್ ಹೇಳಿದ್ದಾರೆ.
ಈ ಸಮಯಕ್ಕೆ ಬಿಟ್ ಕಾಯಿನ್ ಮೌಲ್ಯ:
ಒಟ್ಟಾರೆ ಮಾರುಕಟ್ಟೆ ಮೌಲ್ಯ: $959,370,515,849
ಒಂದು ಬಿಟ್ ಕಾಯಿನ್ ಬೆಲೆ =3,368,011.86 ರು
ಬಿಟ್ ಕಾಯಿನ್ ಬೆಲೆ: $51,635.45
ಕಳೆದ 24 ಗಂಟೆಗಳಲ್ಲಿ ಶೇ 5.88ರಷ್ಟು ಏರಿಕೆ ಕಂಡಿದ್ದರೆ, ಈ ವಾರ ಶೇ2.14ರಷ್ಟು ಏರಿಕೆಯಾಗಿದೆ. ಆದಾಯಕ್ಕೆ ಸಂಬಂಧಿಸಿದಂತೆ, ಕಳೆದ ಒಂದು ವರ್ಷದಲ್ಲಿ, ಬಿಟ್‌ಕಾಯಿನ್ ಶೇಕಡಾ 68.78 ರಷ್ಟು ನೀಡಿದೆ.
ಏನಿದು ಬಿಟ್‌ಕಾಯಿನ್?
ಬಿಟ್‌ಕಾಯಿನ್ ಕ್ರಿಪ್ಟೋಕರೆನ್ಸಿಯಾಗಿದ್ದು, ಇದು ಆಧುನಿಕ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಬಿಟ್ ಕಾಯಿನ್ ಎಂಬ ಕರೆನ್ಸಿಯು ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಅಲ್ಲದೇ ಇದಕ್ಕೆ ಯಾವುದೇ ದೇಶ, ಭಾಷೆ, ಬ್ಯಾಂಕು ಇದ್ಯಾವುದು ಇರುವುದಿಲ್ಲ.
ಬಿಟ್‌ಕಾಯಿನ್ ಬೇಡಿಕೆಗೆ ಕಾರಣವೇನು?
ಡಾಲರ್, ಯೂರೋ, ಪೌಂಡ್ ಹೀಗೆ ನಾನಾ ಕರೆನ್ಸಿಗಳನ್ನು ವಿನಿಮಯ ಮಾಡಿಕೊಳ್ಳಲು ಇಷ್ಟಪಡದ ಜನರು ಬಿಟ್‌ಕಾಯಿನ್ ಮೊರೆ ಹೋಗುತ್ತಿದ್ದಾರೆ. ಯಾವುದೇ ದೇಶದಲ್ಲಿ ವಹಿವಾಟು ನಡೆಸಲು ಇದರಿಂದ ಸುಲಭವಾಗುತ್ತದೆ. ಹೀಗಾಗಿಯೇ ಇಂತಹ ಕ್ರಿಪ್ಟೋಕರೆನ್ಸಿಗಳ ಬೇಡಿಕೆ ಪ್ರತಿದಿನ ಹೆಚ್ಚುತ್ತಿದೆ. ಇಷ್ಟಾದರೂ ಕೆಲವು ದೇಶಗಳಲ್ಲಿ ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲಾಗಿದೆ. ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಹೀಗೆ ನಾನಾ ರಾಷ್ಟ್ರಗಳು ಕ್ರಿಪ್ಟೋಕರೆನ್ಸಿ ನಿಷೇಧಿಸಿವೆ.