For Quick Alerts
ALLOW NOTIFICATIONS  
For Daily Alerts

ಗೂಗಲ್‌ಗೆ ಮತ್ತೊಮ್ಮೆ ಭಾರೀ ಮೊತ್ತದ ದಂಡ ವಿಧಿಸಿದ ಸಿಸಿಐ

|

ನವದೆಹಲಿ, ಅ. 26: ಕಳೆದ ವಾರ ಗೂಗಲ್‌ಗೆ 1,337.76 ಕೋಟಿ ರೂ ದಂಡ ಹಾಕಿದ್ದ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ನಿನ್ನೆ ಮಂಗಳವಾರ ಮತ್ತೊಮ್ಮೆ ದಂಡ ಹೇರಿದೆ. ತನ್ನ ಪ್ಲೇ ಸ್ಟೋರ್ ನೀತಿಯನ್ನು ಗೂಗಲ್ ದುರುಪಯೋಗಿಸಿಕೊಂಡು ಸ್ಪರ್ಧಾತ್ಮಕತೆಯನ್ನು ಹತ್ತಿಕ್ಕುತ್ತಿದೆ ಎಂದು ಅಕ್ಟೋಬರ್ 25ರಂದು ಆಯೋಗ ತನ್ನ ತೀರ್ಪಿನಲ್ಲಿ ತಿಳಿಸಿದೆ. 936.44 ಕೋಟಿ ರೂಪಾಯಿ ದಂಡವನ್ನು ವಿಧಿಸಿರುವ ಸಿಸಿಐ, ಪ್ಲೇ ಸ್ಟೋರ್‌ನಲ್ಲಿ ತನ್ನ ಅನ್ಯಾಯದ ನಡವಳಿಕೆಯನ್ನು ಇಲ್ಲಿಗೇ ನಿಲ್ಲಿಸುವಂತೆ ಗೂಗಲ್‌ಗೆ ಆದೇಶಿಸಿದೆ.

ಅಕ್ಟೋಬರ್ 20ರಂದು ಸಿಸಿಐ ಗೂಗಲ್‌ಗೆ 1,337.76 ಕೋಟಿ ರೂ ದಂಡ ವಿಧಿಸಿತ್ತು. ಆಂಡ್ರಾಯ್ಡ್ ಮೊಬೈಲ್‌ ಸಾಧನದ ವ್ಯವಸ್ಥೆಯಲ್ಲಿ (ಇಕೋಸಿಸ್ಟಂ) ತನಗಿರುವ ಮಾರುಕಟ್ಟೆ ಪ್ರಾಬಲ್ಯವನ್ನು ದುರುಪಯೋಗಿಸಿಕೊಳ್ಳುತ್ತಿದೆ ಎಂದು ಭಾರತೀಯ ಸ್ಪರ್ಧಾ ಆಯೋಗ ಅಭಿಪ್ರಾಯಪಟ್ಟಿತ್ತು. ಆ ಪ್ರಕರಣವಾಗಿ ಐದು ದಿನಗಳ ಅಂತರದಲ್ಲಿ ಗೂಗಲ್‌ಗೆ ಎರಡನೇ ಬಾರಿ ದಂಡ ವಿಧಿಸಲಾಗಿದೆ.

ಗೂಗಲ್‌ಗೆ ಭಾರತದ ಪ್ರಾಧಿಕಾರ 1337 ಕೋಟಿ ದಂಡ ಹಾಕಿದ್ದು ಯಾಕೆ?ಗೂಗಲ್‌ಗೆ ಭಾರತದ ಪ್ರಾಧಿಕಾರ 1337 ಕೋಟಿ ದಂಡ ಹಾಕಿದ್ದು ಯಾಕೆ?

ಗೂಗಲ್ ಮೇಲಿನ ಆರೋಪಗಳೇನು?

ಗೂಗಲ್ ಮೇಲಿನ ಆರೋಪಗಳೇನು?

ವಿಶ್ವದಲ್ಲಿರುವ ಮೊಬೈಲ್‌ಗಳಲ್ಲಿ ಹೆಚ್ಚಿನ ಭಾಗ ಆಂಡ್ರಾಯ್ಡ್ ಸೆಟ್‌ಗಳೇ ಆಗಿವೆ. ಆಂಡ್ರಾಯ್ಡ್ ತಂತ್ರಾಂಶವನ್ನು ಗೂಗಲ್ ಸಂಸ್ಥೆಯೇ ಕಾರ್ಯನಿರ್ವಹಿಸುತ್ತದೆ. ಹೀಗಾಗಿ, ಆಂಡ್ರಾಯ್ಡ್ ಮಾರುಕಟ್ಟೆಯಲ್ಲಿ ಗೂಗಲ್‌ನದ್ದೇ ಪಾರಮ್ಯ. ಆಂಡ್ರಾಯ್ಡ್ ಸಾಧನಗಳಲ್ಲಿ ಗೂಗಲ್‌ನ ಬೇರೆ ಬೇರೆ ಆ್ಯಪ್‌ಗಳಿಗೆ ಅಥವಾ ಅದು ಇಚ್ಛಿಸುವ ಆ್ಯಪ್‌ಗಳಿಗೆ ಪ್ರಾಶಸ್ತ್ಯ ನೀಡುವಂತೆ ಹ್ಯಾಂಡ್‌ಸೆಟ್ ತಯಾರಕರಿಗೆ ಗೂಗಲ್ ತಾಕೀತು ಮಾಡುತ್ತದೆ. ಅಂತೆಯೇ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರೀ-ಇನ್‌ಸ್ಟಾಲ್ ಆಗಿ ಬರುವ ಬಹುತೇಕ ಆ್ಯಪ್‌ಗಳು ಗೂಗಲ್ ನಿರ್ದೇಶನದಿಂದಲೇ ಅದಂಥವು ಎಂಬ ಆರೋಪ ಇದೆ.

ಇನ್ನು, ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಮಾರುಕಟ್ಟೆ ಎನಿಸಿರುವ ಪ್ಲೇ ಸ್ಟೋರ್ ಅನ್ನು ತಯಾರಿಸಿರುವುದೂ ಗೂಗಲ್ ಸಂಸ್ಥೆಯೇ. ಈ ಪ್ಲೇ ಸ್ಟೋರ್‌ನ ನಿರ್ವಹಣೆ ಎಲ್ಲವೂ ಗೂಗಲ್‌ನದ್ದೇ ಆಗಿರುತ್ತದೆ. ಹೀಗಾಗಿ, ಈ ಮಾರುಕಟ್ಟೆಯಲ್ಲಿ ಗೂಗಲ್‌ನದ್ದೇ ಪಾರಮ್ಯ. ಈ ಸ್ಥಿತಿಯನ್ನು ದುರುಪಯೋಗಿಸಿಕೊಂಡು ತನ್ನ ಆ್ಯಪ್‌ಗಳಿಗೆ ಪೈಪೋಟಿ ನೀಡಬಲ್ಲ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಲ್ಲಿ ಕಡೆಗಣಿಸುತ್ತಿದೆ. ಕೆಲವೊಮ್ಮೆ ತನ್ನ ಪ್ರತಿಸ್ಪರ್ಧಿಗಳ ಆ್ಯಪ್ ಅನ್ನು ಪ್ಲೇ ಸ್ಟೋರ್‌ನಲ್ಲಿ ಲಿಸ್ಟ್ ಕೂಡ ಮಾಡುವುದಿಲ್ಲ ಎಂಬುದು ಗೂಗಲ್ ಮೇಲಿರುವ ಪ್ರಮುಖ ದೂರು.

ಅಷ್ಟೇ ಅಲ್ಲ, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಒಂದು ಆ್ಯಪ್ ಅನ್ನು ಖರೀದಿಸಬೇಕಾದರೆ ಗೂಗಲ್ ನಿರ್ದೇಶಿಸಿದ ಪೇಮೆಂಟ್ ವ್ಯವಸ್ಥೆ ಮೂಲಕವೇ ಆಗಬೇಕು. ಥರ್ಡ್ ಪಾರ್ಟಿ ಬಿಲ್ಲಿಂಗ್‌ಗಾಗಲೀ, ಅಥವಾ ಥರ್ಡ್ ಪಾರ್ಟಿ ಪೇಮೆಂಟ್ ಸೇವೆಯನ್ನಾಗಲೀ ಆ್ಯಪ್ ತಯಾರಕರು ಬಳಸುವ ಸ್ವಾತಂತ್ರ್ಯ ಇರುವುದಿಲ್ಲ. ಈ ಸಂಬಂಧ ವರ್ಷಗಳ ಹಿಂದೆಯೇ ಸಿಸಿಐಗೆ ದೂರು ಬಂದಿತ್ತು. 2020 ನವೆಂಬರ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ನ ಪೇಮೆಂಟ್ ವ್ಯವಸ್ಥೆ ಬಗ್ಗೆ ತನಿಖೆ ನಡೆಸುವಂತೆ ಭಾರತೀಯ ಸ್ಪರ್ಧಾ ಆಯೋಗ ಆದೇಶ ನೀಡಿತ್ತು.

ಆ್ಯಪ್ ತಯಾರಕರಿಗೆ ಅವರಿಷ್ಟದ ಪೇಮೆಂಟ್ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನಿರಾಕರಿಸುವುದು ಸರಿ ಅಲ್ಲ ಎಂಬುದು ಸಿಸಿಐನ ಪ್ರಾಥಮಿಕ ಹಂತದ ಅನಿಸಿಕೆಯಾಗಿತ್ತು. ತನಿಖೆ ನಡೆಸಿದ ಬಳಿಕ ಈ ಅಭಿಪ್ರಾಯವನ್ನು ಸಿಸಿಐ ತನ್ನ ತೀರ್ಪಿನಲ್ಲಿ ದೃಢಪಡಿಸಿದೆ.

ಅವರಿಗೊಂದು ನ್ಯಾಯ, ಇವರಿಗೊಂದು ನ್ಯಾಯ

ಅವರಿಗೊಂದು ನ್ಯಾಯ, ಇವರಿಗೊಂದು ನ್ಯಾಯ

ಪ್ಲೇ ಸ್ಟೋರ್‌ನಲ್ಲಿ ಗೂಗಲ್‌ನದ್ದೇ ಬಿಲಿಂಗ್ ವ್ಯವಸ್ಥೆ ಮತ್ತು ಪೇಮೆಂಟ್ ವ್ಯವಸ್ಥೆ ಇದೆ. ಇಲ್ಲಿ ಲಿಸ್ಟ್ ಆಗುವ ಆ್ಯಪ್‌ಗಳು ಇದೇ ಪೇಮೆಂಟ್ ವ್ಯವಸ್ಥೆ ಬಳಸಬೇಕೆಂದು ಷರತ್ತು ಹಾಕಲಾಗುತ್ತದೆ. ಆ್ಯಪ್ ಖರೀದಿ ಅಥವಾ ಇನ್-ಆ್ಯಪ್ ಖರೀದಿಗಳಲ್ಲಿ ಆಗುವ ಪಾವತಿಯ ಹಣದಲ್ಲಿ ಒಂದಷ್ಟು ಭಾಗವನ್ನು ಗೂಗಲ್‌ಗೆ ನೀಡಲೂ ಬೇಕಾಗುತ್ತದೆ. ಆ್ಯಂಡ್ರಾಯ್ಡ್ ಜಗತ್ತಿನಲ್ಲಿ ಇರುವುದೊಂದೇ ಮಾರುಕಟ್ಟೆ ಇದಾಗಿರುವುದರಿಂದ ಆ್ಯಪ್ ತಯಾರಕರು ಗೂಗಲ್‌ನ ಕಂಡೀಷನ್‌ಗೆ ಒಪ್ಪದೇ ಬೇರೆ ವಿಧಿ ಇಲ್ಲ.

ಕುತೂಹಲವೆಂದರೆ ಯೂಟ್ಯೂಬ್ ಇತ್ಯಾದಿ ಗೂಗಲ್‌ನ ವಿವಿಧ ಆ್ಯಪ್‌ಗಳು ಗೂಗಲ್‌ನ ಪೇಮೆಂಟ್ ವ್ಯವಸ್ಥೆಯನ್ನು ಬಳಸುವುದಿಲ್ಲ. ಇದು ಮಲತಾಯಿ ಧೋರಣೆ ಎಂಬುದು ಗೂಗಲ್ ವಿರುದ್ಧ ಕೆಲ ಆ್ಯಪ್ ತಯಾರಕರ ಅಸಮಾಧಾನ.

ಇದೀಗ ಗೂಗಲ್ ಸಂಸ್ಥೆ ತನ್ನ ಪ್ಲೇ ಸ್ಟೋರ್‌ನಲ್ಲಿರುವ ಆ್ಯಪ್‌ಗಳ ತಯಾರಕರಿಗೆ ಥರ್ಡ್ ಪಾರ್ಟಿ ಬಿಲಿಂಗ್ ಮತ್ತು ಪೇಮೆಂಟ್ ಸೇವೆಗಳನ್ನು ಬಳಸುವ ಸ್ವಾತಂತ್ರ್ಯ ನೀಡಬೇಕು ಎಂದು ಸಿಸಿಐ ತನ್ನ ಆದೇಶದಲ್ಲಿ ನಿರ್ದೇಶನ ನೀಡಿದ್ದು, 30 ದಿನದೊಳಗೆ ಈ ಆದೇಶ ಅನುಷ್ಠಾನನಾಗಿರುವುದಕ್ಕೆ ದಾಖಲೆಗಳನ್ನು ತನಗೆ ತಂದೊಪ್ಪಿಸಬೇಕು ಎಂದು ಸೂಚಿಸಿದೆ.

ಗೂಗಲ್ ವಿರುದ್ಧ ಇನ್ನೂ ದೂರುಗಳಿವೆ

ಗೂಗಲ್ ವಿರುದ್ಧ ಇನ್ನೂ ದೂರುಗಳಿವೆ

ಗೂಗಲ್ ವಿರುದ್ಧದ ದೂರು ಮತ್ತು ವಿಚಾರಣೆ ಇಷ್ಟಕ್ಕೇ ಸೀಮಿತವಾಗಿಲ್ಲ. ಸ್ಮಾರ್ಟ್ ಟಿವಿ ವ್ಯವಹಾರ, ನ್ಯೂಸ್ ಅಗ್ರಿಗೇಶನ್ (ಸುದ್ದಿ ಸಂಗ್ರಹ) ಇತ್ಯಾದಿ ವಿಚಾರದಲ್ಲಿ ಗೂಗಲ್ ತನ್ನ ಪ್ರಾಬಲ್ಯ ಸ್ಥಿತಿಯನ್ನು ದುರುಪಯೋಗಿಸಿಕೊಳ್ಳುತ್ತಿದೆ ಎಂದು ಭಾವಿಸಿ ಭಾರತೀಯ ಸ್ಪರ್ಧಾ ಆಯೋಗ ತನಿಖೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಆ ಪ್ರಕರಣಗಳಲ್ಲಿ ಗೂಗಲ್‌ಗೆ ಇನ್ನಷ್ಟು ದಂಡ ಬೀಳುವ ಸಾಧ್ಯತೆಗಳುಂಟು.

ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಗೂಗಲ್‌ಗೆ ಪರ್ಯಾಯವಾಗಿರುವ ಆ್ಯಪಲ್ ಕಂಪನಿಯೂ ಈಗ ಇಂಥದ್ದೇ ಆರೋಪಗಳನ್ನು ಎದುರಿಸುತ್ತಿದೆ. ಅದರ ಆ್ಯಪ್ ಸ್ಟೋರ್‌ನಲ್ಲೂ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂಬ ದೂರುಗಳಿದ್ದು ವಿಚಾರಣೆ ನಡೆಯುತ್ತಿದೆ.

ಕುತೂಹಲವೆಂದರೆ, ಗೂಗಲ್ ಸಂಸ್ಥೆ ಭಾರತ ಸೇರಿ ಕೆಲ ದೇಶಗಳಲ್ಲಿ ಹೊಸ ಪ್ರಯೋಗವೊಂದನ್ನು ಮಾಡುತ್ತಿದ್ದು, ಆ್ಯಪ್ ಡೆವಲಪರ್‌ಗಳು ಗೂಗಲ್ ಪ್ಲೇ ಜೊತೆಗೆ ಬೇರೆ ಬಿಲಿಂಗ್ ಸಿಸ್ಟಂ ಅನ್ನು ಅಭಿವೃದ್ಧಿಸುವ ಅವಕಾಶವನ್ನು ನೀಡುತ್ತಿದೆ. ಇದು ಗೇಮ್ ಆ್ಯಪ್‌ಗಳಿಗೆ ಅನ್ವಯ ಆಗುವುದಿಲ್ಲ.

English summary

CCI Imposes Fine of Rs 936 Crore On Google For Misusing Play Store Policy

The Competition Commission of India (CCI) fined Google Rs 936.44 crore on October 25 for abusing its dominant position with regard to its Play Store policies. In a gap of 5 days, CCI for second time has imposed fine against Google.
Story first published: Wednesday, October 26, 2022, 8:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X