ಭಾರತದಲ್ಲಿ ವೈಯಕ್ತಿಕ ಹೂಡಿಕೆದಾರರ ಪ್ರಮಾಣದಲ್ಲಿ ಹೆಚ್ಚಳ
ನವದೆಹಲಿ, ಜನವರಿ 31:ಭಾರತದ ಷೇರು ಮಾರುಕಟ್ಟೆಯ ಹೂಡಿಕೆದಾರರಲ್ಲಿ ವೈಯಕ್ತಿಕ ಹೂಡಿಕೆದಾರರ ಪ್ರಮಾಣ ವರ್ಷದಿಂದ ವರ್ಷಕ್ಕೆ ಏರುತ್ತಿದೆ. 2019-20ರಲ್ಲಿ ಶೇ. 38.8ರಷ್ಟಿದ್ದ ವೈಯಕ್ತಿಕ ಹೂಡಿಕೆದಾರರು 2021ರ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಶೇ.44.7ಕ್ಕೆ ಏರಿಕೆಯಾಗಿದ್ದಾರೆ ಎಂದು ಆರ್ಥಿಕ ಸಮೀಕ್ಷೆ ವರದಿಯಲ್ಲಿ ಹೇಳಿದೆ.
ಕೊರೊನಾ ಅವಧಿಯಲ್ಲಿ ಈ ಪ್ರಮಾಣದಲ್ಲಿ ಏರಿಕೆಯಾಗಿದೆ, ಅದರಲ್ಲೂ 2020ರ ಫೆಬ್ರವರಿ ಬಳಿಕ ವೈಯಕ್ತಿಕ ಹೂಡಿಕೆದಾರರು ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ ಎಂದು ಆರ್ಥಿಕ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ.
2021ರ ಏಪ್ರಿಲ್ ಹಾಗೂ ನವೆಂಬರ್ ಅವಧಿಯಲ್ಲಿ 2.21 ಕೋಟಿ ಡಿಮ್ಯಾಟ್ ಖಾತೆಗಳು ಭಾರತದಲ್ಲಿ ಆರಂಭವಾಗಿವೆ. ಇನ್ನು ಮ್ಯೂಚ್ಯುವಲ್ ಫಂಡ್‌ನ ಒಟ್ಟಾರೆ ಮೊತ್ತವು 30 ಲಕ್ಷ ಕೋಟಿಯಿಂದ 37.3 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದರಿಂದ ಶೇ.24.4ರಷ್ಟು ಹೆಚ್ಚಳ ಕಂಡುಬಂದಿದೆ.

ಭಾರತದಲ್ಲಿ ಐಪಿಒಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುತ್ತಿದ್ದು, 2020ರ ಏಪ್ರಿಲ್-ನವೆಂಬರ್ ಅವಧಿಯಲ್ಲಿ 75 ಐಪಿಒಗಳಿಂದ 89,066 ಕೋಟಿ ಹೂಡಿಕೆ ಕಂಡುಬಂದಿದೆ.
ಕಳೆದೊಂದು ದಶಕದಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಹೂಡಿಕೆ ಆಗಿದೆ. ಆರ್ಥಿಕ ಸಮೀಕ್ಷಾ ವರದಿಯಲ್ಲಿ 2022-23ರಲ್ಲಿ ಶೇ. 8ರಿಂದ ಶೇ.8.5ರಷ್ಟು ಆರ್ಥಿಕ ಪ್ರಗತಿಯ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಸರ್ಕಾರದ ಸಾಲವು ಇಲ್ಲಿಂದ ಕಡಿಮೆಯಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರದ ಸಾಲವು 2019-20 ರಲ್ಲಿ ಜಿಡಿಪಿಯ SE. 49.1 ರಿಂದ 2020-21 ರಲ್ಲಿ ಜಿಡಿಪಿಯ ಶೇ. 59.3ಕ್ಕೆ ಏರಿಕೆಯಾಗಿದ್ದು, ಈಗ ಆರ್ಥಿಕತೆಯ ಚೇತರಿಕೆಯೊಂದಿಗೆ ಅದು ಕುಸಿಯುವ ನಿರೀಕ್ಷೆಯಿದೆ.
ಭಾರತದ ಆರ್ಥಿಕತೆಯು ಸಾಂಕ್ರಾಮಿಕ ರೋಗದಿಂದ ಚೇತರಿಸಿಕೊಳ್ಳುತ್ತಿರುವ ಲಕ್ಷಣಗಳನ್ನು ತೋರಿಸುತ್ತಿದ್ದು, 2021-22ರ ಆರ್ಥಿಕ ಸಮೀಕ್ಷೆಯು ಮುಂದಿನ ಹಣಕಾಸು ವರ್ಷಕ್ಕೆ ಸುಮಾರು ಶೇ. 9 ಬೆಳವಣಿಗೆಯನ್ನು ಅಂದಾಜಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಮುಖ್ಯ ಆರ್ಥಿಕ ಸಲಹೆಗಾರರ (ಸಿಇಎ) ನೇತೃತ್ವದ ತಂಡವು ಈ ಬಜೆಟ್ ಪೂರ್ವ ಆರ್ಥಿಕ ಸಮೀಕ್ಷೆಯನ್ನು ರಚಿಸಿದೆ. ಇದರಲ್ಲಿ ಹಲವು ಅಂಕಿ-ಅಂಶಗಳನ್ನು ಉಲ್ಲೇಖಿಸಲಾಗುತ್ತದೆಯಾದರೂ, ಅತೀ ಹೆಚ್ಚಿನ ಗಮನ ಸೆಳೆಯುವುದು ಮುಂದಿನ ಹಣಕಾಸು ವರ್ಷದ ಜಿಡಿಪಿ ಅಂದಾಜು.