ಫಾರಿನ್ ಪೋರ್ಟ್ ಫೋಲಿಯೋ ಇನ್ವೆಸ್ಟರ್ಸ್ (FPI) ಸತತವಾಗಿ ಮೂರನೇ ತಿಂಗಳು, 2020ರ ಡಿಸೆಂಬರ್ ನಲ್ಲಿ ಭಾರತದ ಮಾರುಕಟ್ಟೆಯಲ್ಲಿ ಖರೀದಿ ಮಾಡಿದ್ದಾರೆ. ಜಾಗತಿಕ ಹೂಡಿಕೆದಾರರು 68,558 ಕೋಟಿ ರುಪಾಯಿಯನ್ನು ಹೂಡಿಕೆ ಮಾಡಿದ್ದಾರೆ. ನ್ಯಾಷನಲ್ ಸೆಕ್ಯೂರಿಟೀಸ್ ಡೆಪಾಸಿಟರೀಸ್ ಲಿ.ನಲ್ಲಿ ಎಫ್ ಪಿಐ ದತ್ತಾಂಶ ಲಭ್ಯವಾದ ಸಮಯದಿಂದ ಇಲ್ಲಿಯ ತನಕ ಅತಿ ಹೆಚ್ಚಿನ ಪ್ರಮಾಣದಲ್ಲಿ ಈಕ್ವಿಟಿಯಲ್ಲಿನ ಹೂಡಿಕೆ ಡಿಸೆಂಬರ್ ನಲ್ಲಿ ಆಗಿದೆ.
ಎಫ್ ಪಿಐನಿಂದ ಈಕ್ವಿಟಿಯಲ್ಲಿನ ಎರಡನೇ ಅತಿ ಹೆಚ್ಚಿನ ಹೂಡಿಕೆ ನವೆಂಬರ್ ನಲ್ಲಿ ಆಗಿದ್ದು, 60,358 ಕೋಟಿ ರುಪಾಯಿ ಹರಿದುಬಂದಿತ್ತು. ಡೆಪಾಸಿಟರೀಸ್ ದತ್ತಾಂಶದ ಪ್ರಕಾರ, 2020ರ ಡಿಸೆಂಬರ್ ನಲ್ಲಿ ವಿದೇಶೀ ಹೂಡಿಕೆದಾರರು 62,016 ಕೋಟಿ ರುಪಾಯಿ ಈಕ್ವಿಟಿಯಲ್ಲಿ ಮತ್ತು 6542 ಕೋಟಿ ರುಪಾಯಿ ಡೆಟ್ ನಲ್ಲಿ ಹೂಡಿದ್ದಾರೆ.
ಒಟ್ಟಾರೆಯಾಗಿ ಡಿಸೆಂಬರ್ ತಿಂಗಳ ಹೂಡಿಕೆ 68,558 ಕೋಟಿ ರುಪಾಯಿ ಆಗಿದೆ. ಇದಕ್ಕೂ ಮುನ್ನ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಕ್ರಮವಾಗಿ 22,033 ಕೋಟಿ ರು. ಮತ್ತು 62,951 ಕೋಟಿ ರುಪಾಯಿ ಹೂಡಿಕೆ ಮಾಡಿದ್ದರು. "ಬ್ಲ್ಯೂಚಿಪ್ ಷೇರುಗಳು ಭಾರೀ ಪ್ರಮಾಣದಲ್ಲಿ ಬಂಡವಾಳವನ್ನು ಆಕರ್ಷಿಸುತ್ತಿವೆ ಮತ್ತು ಆ ಕಾರಣಕ್ಕೆ ಎತ್ತರದ ಮೌಲ್ಯಮಾಪನ ತಲುಪಿವೆ," ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಕೊರೊನಾ ಲಸಿಕೆ ಯಶಸ್ಸಿನಿಂದಾಗಿ ಆರ್ಥಿಕ ಚಟುವಟಿಕೆ ಹೆಚ್ಚು ವಿಶ್ವಾಸ ಗಳಿಸಲಿದೆ ಮತ್ತು 2021ರಲ್ಲಿ ಹೂಡಿಕೆಯಲ್ಲಿ ಏರಿಕೆ ಮುಂದುವರಿಯಬಹುದು ಎನ್ನುತ್ತಾರೆ.


Click it and Unblock the Notifications