For Quick Alerts
ALLOW NOTIFICATIONS  
For Daily Alerts

ವೇಗದಲ್ಲಿ ಭರ್ತಿಯಾಗುತ್ತಿದೆ ಭಾರತದ ಫೋರೆಕ್ಸ್ ರಿಸರ್ವ್; ಏನಿದರ ಪರಿಣಾಮ?

|

ನವದೆಹಲಿ, ನ. 19: ತುಂಬಿ ತುಳುಕುತ್ತಿದ್ದ ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (ಫೋರೆಕ್ಸ್) ಇತ್ತೀಚೆಗೆ ವಿವಿಧ ಕಾರಣಗಳಿಂದ ಕಡಿಮೆಗೊಳ್ಳುತ್ತಾ ಹೋಗಿತ್ತು. ಈಗ ಮತ್ತೆ ಏರಿಕೆಯಾಗತೊಡಗಿದೆ. ನವೆಂಬರ್ 11ರಂದು ಅಂತ್ಯಗೊಂಡ ವಾರದಲ್ಲಿ ಫೋರೆಕ್ಸ್ ಮೀಸಲು ಭಾರೀ ವೇಗದಲ್ಲಿ ಹೆಚ್ಚಳ ಕಂಡಿರುವುದು ವರದಿಗಳಿಂದ ತಿಳಿದುಬಂದಿದೆ. ಅಮೆರಿಕದ ಹಣದುಬ್ಬರ, ಡಾಲರ್ ದರ ಇತ್ಯಾದಿ ಕೆಲ ಕಾರಣಗಳು ಭಾರತದ ಫಾರೆಕ್ಸ್ ರಿಸರ್ವ್ ಮೇಲೆ ಪರಿಣಾಮ ಬೀರಿವೆ. ಡಾಲರ್ ಬಲವರ್ಧನೆ ಕಡಿಮೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಜ್ಞರು ಫಾರೆಕ್ಸ್ ರಿಸರ್ವ್ ಹೆಚ್ಚಬಹುದು ಎಂದು ನಿರೀಕ್ಷಿಸಿದ್ದರು. ಅದರಂತೆಯೇ ಬೆಳವಣಿಗೆಯಾಗಿದೆ.

 

ನವೆಂಬರ್ 5ರಿಂದ 11ರ ಅವಧಿಯಲ್ಲಿ ಆರ್‌ಬಿಐನ ವಿದೇಶೀ ವಿನಿಮಯ ಮೀಸಲು ನಿಧಿ 14.72 ಬಿಲಿಯನ್ ಡಾಲರ್ (ಸುಮಾರು 1.2 ಲಕ್ಷ ಕೋಟಿ ರೂಪಾಯಿ) ಮೊತ್ತದಷ್ಟು ಏರಿಕೆ ಕಂಡಿದೆ. ಇದು ಕಳೆದ 15 ತಿಂಗಳ ಅವಧಿಯಲ್ಲಿ ಒಂದು ವಾರದಲ್ಲಿ ಆದ ಅತಿ ಹೆಚ್ಚು ಏರಿಕೆ ಎಂಬ ದಾಖಲೆ ಬರೆದಿದೆ. ಭಾರತದಲ್ಲಿ ಈಗ ಫೋರೆಕ್ಸ್ ರಿಸರ್ವ್ ಮೊತ್ತ 544.715 ಬಿಲಿಯನ್ ಡಾಲರ್‌ನಷ್ಟು (44 ಲಕ್ಷ ಕೋಟಿ ರೂಪಾಯಿ) ಇದೆ. ಇದು ಆರ್‌ಬಿಐ ಶುಕ್ರವಾರ ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದುಬಂದಿದೆ.

ಅಕ್ಟೋಬರ್ 28ರಂದು ಅಂತ್ಯಗೊಂಡ ವಾರದಲ್ಲೂ ಫಾರೆಕ್ಸ್ ಮೀಸಲು ನಿಧಿ 6.56 ಬಿಲಿಯನ್ ಡಾಲರ್‌ನಷ್ಟು ಏರಿಕೆಯಾಗಿತ್ತು. ಆದರೆ, ನವೆಂಬರ್ 11ರ ವಾರದಲ್ಲಿ ಅದನ್ನೂ ಮೀರಿಸುವ ರೀತಿಯಲ್ಲಿ ಮೀಸಲು ನಿಧಿ ಜಿಗಿದಿದೆ.

ಏನು ಕಾರಣ?

ಏನು ಕಾರಣ?

ಆರ್‌ಬಿಐನ ಫಾರೀನ್ ಎಕ್ಸ್‌ಚೇಂಜ್ ಮೀಸಲು ನಿಧಿಯ ಖಜಾನೆಯಲ್ಲಿ ವ್ಯತ್ಯಾಸವಾಗಲು ಸಾಮಾನ್ಯವಾಗಿ ಅಮೆರಿಕದ ಆರ್ಥಿಕತೆಯೇ ಪ್ರಮುಖ ಪ್ರಭಾವಿಯಾಗಿರುತ್ತದೆ. ಅಮೆರಿಕದಲ್ಲಿ ಹಣದುಬ್ಬರ ತೀರಾ ಹೆಚ್ಚಿ ಹೋಗುತ್ತಿದ್ದಂತೆಯೇ, ಅದನ್ನು ನಿಯಂತ್ರಿಸಲು ಅಲ್ಲಿನ ಫೆಡರಲ್ ಬ್ಯಾಂಕ್ ಬಡ್ಡಿ ದರವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸತೊಡಗಿತು. ಇದರಿಂದ ಡಾಲರ್‌ಗೆ ಬೇಡಿಕೆ ಬಂದಿತು. ಇನ್ನೊಂದೆಡೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಾ ಹೋಯಿತು. ಪರಿಣಾಮವಾಗಿ ಭಾರತದ ಫಾರೆಕ್ಸ್ ರಿಸರ್ವ್‌ನಲ್ಲಿ ಹಣ ಕಡಿಮೆಯಾಗುತ್ತಾ ಹೋಯಿತು.

ಅಮೆರಿಕದಲ್ಲಿ ಹಣದುಬ್ಬರದ ದರ ಇನ್ನಷ್ಟು ಏರಿಕೆ ಕಂಡಿದ್ದರೆ ಬ್ಯಾಂಕ್ ಬಡ್ಡಿ ದರ ಮತ್ತೆ ದೊಡ್ಡ ಮಟ್ಟದಲ್ಲಿ ಏರಿಸುವ ನಿರೀಕ್ಷೆ ಇತ್ತು. ಆದರೆ ಈಗ ಅಮೆರಿಕದಲ್ಲಿ ಹಣದುಬ್ಬರ ನಿರೀಕ್ಷಿಸಿದ್ದಕ್ಕಿಂತ ಕಡಿಮೆಗೊಂಡಿದೆ. ಫೆಡರಲ್ ಬ್ಯಾಂಕ್ ದೊಡ್ಡ ಮಟ್ಟದಲ್ಲಿ ಬಡ್ಡಿ ದರ ಏರಿಕೆ ಮಾಡುವುದಿಲ್ಲ ಎಂದು ಕಳೆದ ವಾರ ಹೇಳಿತು. ಡಾಲರ್ ಬಲವರ್ಧನೆ ನಿಂತು ರೂಪಾಯಿ ಮೌಲ್ಯ ಕಳೆದ ಕೆಲ ದಿನಗಳಿಂದ ಏರಿಕೆಯಾಗತೊಡಗಿದೆ. ಇದು ವಿದೇಶೀ ಪೋರ್ಟ್‌ಫೋಲಿಯೋ ಹೂಡಿಕೆದಾರರು ಭಾರತದ ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಹೆಚ್ಚಾಗಿದೆ. ಇದು ಫಾರೆಕ್ಸ್ ರಿಸರ್ವ್ ಹೆಚ್ಚಳಕ್ಕೆ ಕಾರಣವಾಗಿರಬಹುದು.

ಆರ್‌ಬಿಐ ಖರೀದಿ ತಂತ್ರ
 

ಆರ್‌ಬಿಐ ಖರೀದಿ ತಂತ್ರ

ಫೋರೆಕ್ಸ್ ರಿಸರ್ವ್ ವೃದ್ಧಿಸಲು ಇನ್ನೊಂದು ಪ್ರಮುಖ ಕಾರಣವೆಂದರೆ ರೂಪಾಯಿ ಮೌಲ್ಯ ಕುಸಿತ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಸುಮಾರು 8 ಬಿಲಿಯನ್ ಡಾಲರ್ (65 ಸಾವಿರ ಕೋಟಿ ರೂಪಾಯಿ) ಮೌಲ್ಯದಷ್ಟು ವಿದೇಶೀ ಕರೆನ್ಸಿಗಳನ್ನು ಖರೀದಿ ಮಾಡಿದ್ದು ಪರಿಣಾಮ ಬೀರಿರಬಹುದು ಎಂದು ಅಂದಾಜಿಸಲಾಗಿದೆ. ಹಾಗೆಯೇ ಫೋರೆಕ್ಸ್ ಮೀಸಲು ನಿಧಿಯಲ್ಲಿರುವ ಡಾಲರೇತರ ಸ್ವತ್ತುಗಳ ಮರುಮೌಲ್ಯೀಕರಣ ಮಾಡಲಾಗಿದ್ದೂ ಕೂಡ ಸಹಾಯಕವಾಗಿದೆ ಎಂದು ತಜ್ಞರು ಹೇಳುತ್ತಾರೆ.

ವಿಶ್ವದ ಇತರ ಕರೆನ್ಸಿಗಳು ಡಾಲರ್ ಎದುರು ಚೇತರಿಸಿಕೊಂಡ ಪ್ರಮಾಣದಲ್ಲಿ ರೂಪಾಯಿ ವೃದ್ಧಿ ಕಂಡಿಲ್ಲ. ಅಕ್ಟೋಬರ್ 21ರಿಂದ ನವೆಂಬರ್ 11ರ ಅವಧಿಯಲ್ಲಿ ಡಾಲರ್ ಎದುರು ರುಪಾಯಿ ಶೇ. 2.3ರಷ್ಟು ಮೌಲ್ಯ ಹೆಚ್ಚಿಸಿಕೊಂಡಿತು. ಅದೇ ವೇಳೆಯಲ್ಲಿ ದಕ್ಷಿಣ ಕೊರಿಯಾ ಮತ್ತು ಥಾಯ್ಲೆಂಡ್ ದೇಶಗಳ ಕರೆನ್ಸಿಗಳು ಶೇ.. 9.2 ಮತ್ತು ಶೇ. 6.7ರಷ್ಟು ವೃದ್ಧಿ ಕಂಡಿದ್ದವು. ಈ ಕಾರಣಕ್ಕೆ ಆರ್‌ಬಿಐ ಡಾಲರ್‌ಗಳನ್ನು ಹೆಚ್ಚಾಗಿ ಖರೀದಿಸಿ ಸಮತೋಲನ ಸಾಧಿಸಲು ಯತ್ನಿಸಿತ್ತು.

ತಜ್ಞರ ಪ್ರಕಾರ ಆರ್‌ಬಿಐ ನಡೆ ಸಮಯೋಚಿತವಾಗಿದೆ. ಭವಿಷ್ಯದಲ್ಲಿ ಎದುರಾಗಬಹುದಾದ ಕರೆನ್ಸಿ ಬಿಕ್ಕಟ್ಟನ್ನು ಎದುರಿಸಲು ಭಾರತಕ್ಕೆ ಬಲ ಸಿಕ್ಕಂತಾಗಿದೆ ಎನ್ನುತ್ತಾರೆ ಕೋಟಕ್ ಸೆಕ್ಯೂರಿಟೀಸ್‌ನ ಕರೆನ್ಸಿ ಅನಾಲಿಸ್ಟ್ ಅನಿಂದ್ಯ ಬ್ಯಾನರ್ಜಿ.

 

ಫೋರೆಕ್ಸ್ ಹಾವು ಏಣಿ ಆಟ

ಫೋರೆಕ್ಸ್ ಹಾವು ಏಣಿ ಆಟ

2021, ಸೆಪ್ಟೆಂಬರ್ 3ರಂದು ಭಾರತದ ಫಾರೆಕ್ಸ್ ರಿಸರ್ವ್ 642.45 ಬಿಲಿಯನ್ ಡಾಲರ್ ಇತ್ತು. ಸುಮಾರು 52 ಲಕ್ಷ ಕೋಟಿ ರೂಪಾಯಿ. ಇದು ನಮ್ಮ ದೇಶದ ಈವರೆಗಿನ ಸಾರ್ವಕಾಲಿಕ ಗರಿಷ್ಠ ಫಾರೆಕ್ಸ್ ಸಂಗ್ರಹ ಎನಿಸಿದೆ. ಆದರೆ ಆಗಿನಿಂದ ಫಾರೆಕ್ಸ್ ಮೀಸಲು ಖಜಾನೆ ಕುಸಿಯುತ್ತಾ ಹೋಗಿದೆ. ಅದರಲ್ಲೂ ಅಕ್ಟೋಬರ್ 21ರಂದು ಅಂತ್ಯಗೊಂಡ ವಾರದಲ್ಲಂತೂ 117.93 ಬಿಲಿಯನ್ ಡಾಲರ್‌ನಷ್ಟು ಮಹಾಕುಸಿತವಾಗಿತ್ತು. 642.45 ಬಿಲಿಯನ್ ಡಾಲರ್ ಇದ್ದ ಫೋರೆಕ್ಸ್ ಮೀಸಲು ಖಜಾನೆ 542.52 ಬಿಲಿಯನ್ ಡಾಲರ್‌ಗೆ ಕುಸಿದುಹೋಗಿತ್ತು. ಆ ಮಹಾಕುಸಿತವೂ ಸದ್ಯ ಸಾರ್ವಕಾಲಿಕ ದಾಖಲೆ ಎನಿಸಿದೆ.

ಅದಾದ ಬಳಿಕ ಮತ್ತೆ ಚೇತರಿಸಿಕೊಂಡು ಮಾರ್ಚ್ ಅಂತ್ಯಕ್ಕೆ ಭಾರತದ ಫೋರೆಕ್ಸ್ ರಿಸರ್ವ್ಸ್ 607 ಬಿಲಿಯನ್ ಡಾಲರ್‌ಗೆ ಹೋಗಿ ನಿಂತಿತು. ಇದಾದ ಬಳಿಕ ಮತ್ತೆ ಕುಸಿತದ ಪರ್ವ ಆರಂಭಗೊಂಡಿತು. 13 ವಾರಗಳ ಪೈಕಿ 11 ವಾರಗಳಲ್ಲಿ ಫೋರೆಕ್ಸ್ ಮೀಸಲು ನಿಧಿ ಕಡಿಮೆಗೊಂಡಿತ್ತು. ಈಗ 544.8 ಬಿಲಿಯನ್ ಡಾಲರ್ ಮೊತ್ತಕ್ಕೆ ಹೋಗಿ ನಿಂತಿದೆ. ಮುಂಬರುವ ದಿನಗಳಲ್ಲಿ ಖಜಾನೆ ಇನ್ನಷ್ಟು ಭರ್ತಿಯಾಗುತ್ತದಾ ಎಂಬುದು ಕುತೂಹಲ ಮೂಡಿಸಿರುವ ಸಂಗತಿ.

 

English summary

Forex Reserves Of India See Sharp Increase of Over 14 Billion USD In One Week

India's forex reserve in the week ending on November 11th, has seen increase by USD 14.74 billion to reach 544.715 billion USD. But this remains far from its peak of 642.45 USD last year.
Story first published: Saturday, November 19, 2022, 9:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X