ಇನ್ ಫರ್ಮೇಷನ್ ಟೆಕ್ನಾಲಜಿ (ಐ.ಟಿ) ಹಾಗೂ ಐಟಿ- ಎನೇಬಲ್ಡ್ ಸರ್ವೀಸಸ್ (ITeS) ವಲಯಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತ ಸರ್ಕಾರವು ಗುರುವಾರ ಬಾಡಿಗೆ ಮನ್ನಾ ಮಾಡುವುದಾಗಿ ಹೇಳಿದೆ. ಕೊರೊನಾದ ಕಾರಣಕ್ಕೆ ಈ ವಲಯ ಸವಾಲು ಎದುರಿಸುತ್ತಿದೆ. ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (STPI) ಆವರಣದಲ್ಲಿ ಕಾರ್ಯ ನಿರ್ವಹಿಸುವ ಸಣ್ಣ ಪ್ರಮಾಣದ ಐಟಿ ಘಟಕಗಳಿಗೆ ಈ ವಿನಾಯಿತಿ ಸಿಗಲಿದೆ.
ಬಹುತೇಕ ಘಟಕಗಳು ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಸಂಸ್ಥೆಗಳು (MSME) ಎಂದು ತಿಳಿಸಲಾಗಿದೆ. ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಬಗ್ಗೆ ನಿರ್ಧಾರ ಮಾಡಿದ್ದು, ದೇಶದ ಎಸ್ ಟಿಪಿಐ ಆವರಣದಲ್ಲಿ ಕಾರ್ಯ ನಿರ್ವಹಿಸುವ ಘಟಕಗಳಿಗೆ ಸದ್ಯಕ್ಕೆ ಮಾರ್ಚ್ 1ರಿಂದ ಜೂನ್ 30ರ ತನಕದ ನಾಲ್ಕು ತಿಂಗಳ ಬಾಡಿಗೆ ಮನ್ನಾ ಮಾಡಲು ತೀರ್ಮಾನಿಸಲಾಗಿದೆ.
ಎಸ್ ಟಿಪಿಐ ಎಂಬುದು ಸ್ವಾಯತ್ತವಾದ ಸೊಸೈಟಿ. ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರ ನಿರ್ವಹಿಸುತ್ತದೆ. ದೇಶದಾದ್ಯಂತ ಬೆಂಗಳೂರು, ಚೆನ್ನೈ, ಮುಂಬೈ ಮತ್ತು ಕೋಲ್ಕತ್ತಾದಂಥ ಟಯರ್ 1 ನಗರಗಳು, ನಾಗ್ಪುರ್, ವಾರಂಗಲ್ ಮತ್ತು ಸೂರತ್ ನಂಥ ಟಯರ್ 2 ನಗರಗಳಲ್ಲಿ ಇಂಥ ಅರವತ್ತು ಕೇಂದ್ರಗಳಿವೆ.

ಈಗಿನ ನಿರ್ಧಾರದಿಂದ 60 ಎಸ್ ಟಿಪಿಐ ಕೇಂದ್ರಗಳಲ್ಲಿ ಇರುವ 200 ಐಟಿ, ITeS ಎಂಎಸ್ ಎಂಇಗಳಿಗೆ ಅನುಕೂಲ ಆಗಲಿದೆ. ಹೀಗೆ ನಾಲ್ಕು ತಿಂಗಳ ಕಾಲ ಬಾಡಿಗೆ ಮನ್ನಾ ಮಾಡುವುದರಿಂದ ಅಂದಾಜು 5 ಕೋಟಿ ರುಪಾಯಿ ಆಗುತ್ತದೆ ಎನ್ನಲಾಗಿದೆ.


Click it and Unblock the Notifications