ಕ್ರಿಪ್ಟೋಕರೆನ್ಸಿ ಬಗ್ಗೆ ಕುತೂಹಲದ ಹೇಳಿಕೆ ಕೊಟ್ಟ ಸಚಿವ ಠಾಕೂರ್
ನವದೆಹಲಿ, ಮಾರ್ಚ್ 7: ಡಿಜಿಟಲ್ ದುಡ್ಡು ಕ್ರಿಪ್ಟೋಕರೆನ್ಸಿ ಪರ ವಿರೋಧ ಚರ್ಚೆ ಜಾರಿಯಲ್ಲಿರುವಾಗಲೇ ಭಾರತದ ಹಣಕಾಸು ಇಲಾಖೆ ರಾಜ್ಯ ಸಚಿವ ಅನುರಾಗ್ ಠಾಕೂರ್ ವರ್ಚುವಲ್ ಕರೆನ್ಸಿಯ ಬಗ್ಗೆ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಬ್ಲಾಕ್‌ಚೈನ್ ಉದಯೋನ್ಮುಖ ತಂತ್ರಜ್ಞಾನವಾಗಿದೆ, ತಂತ್ರಜ್ಞಾನ ಬಳಸಿ ಆಡಳಿತ ಸುಧಾರಣೆಗೆ ಪ್ರಧಾನಿ ಮೋದಿ ಅವರು ಒತ್ತು ನೀಡಲು ನಿರ್ದೇಶಿಸಿದ್ದಾರೆ ಎಂದಿದ್ದಾರೆ.
ಹೊಸ ಆಲೋಚನೆಗಳನ್ನು ಮೌಲ್ಯಮಾಪನ ಮಾಡಬೇಕು, ಅನ್ವೇಷಿಸಬೇಕು ಮತ್ತು ಮುಕ್ತ ಮನಸ್ಸಿನಿಂದ ಪ್ರೋತ್ಸಾಹಿಸಬೇಕು ಎಂದು ಹೇಳಿದ್ದಾರೆ. ಡಿಜಿಟಲ್ ಕರೆನ್ಸಿ ಸಾಧ್ಯಾಸಾಧ್ಯತೆ ಬಗ್ಗೆ ಉನ್ನತ ಮಟ್ಟದ ಅಂತರ್ ಸಚಿವಾಲಯ ಸಮಿತಿ(ಐಎಂಸಿ) ರಚಿಸಲಾಗಿದ್ದು, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಗಳು ಈ ಬಗ್ಗೆ ಚರ್ಚೆ ನಡೆಸಿ ವರದಿ ನೀಡಲಿದ್ದಾರೆ. ಇದನ್ನು ಆಧಾರವಾಗಿಟ್ಟುಕೊಂಡು ಸರ್ಕಾರ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಠಾಕೂರ್ ಹೇಳಿದ್ದಾರೆ.
''ಬ್ಲಾಕ್‌ಚೈನ್ ಪ್ರಗತಿ ಹೊಂದುತ್ತಿರುವ ತಂತ್ರಜ್ಞಾನವಾಗಿದ್ದು, ವರ್ಚ್ಯುಯಲ್ ಕರೆನ್ಸಿಯಾಗಿರುವ ಎಲ್ಲಾ ಕ್ರಿಪ್ಟೋಕರೆನ್ಸಿಗಳ ಮೌಲ್ಯಮಾಪನ ಮಾಡಿ, ಹೊಸ ಐಡಿಯಾಗಳನ್ನು ಮುಕ್ತ ಮನಸ್ಸಿನಿಂದ ಪರಿಶೀಲಿಸಲಾಗುವುದು'' ಎಂದಿದ್ದಾರೆ. ಈ ಮೂಲಕ ಬಿಟ್ ಕಾಯಿನ್ ಸೇರಿದಂತೆ ಕ್ರಿಪ್ಟೋಕರೆನ್ಸಿಗಳ ಮೇಲೆ ಸಂಪೂರ್ಣ ನಿಷೇಧ ಹೇರುವ ಬಗ್ಗೆ ಕಾಯ್ದೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ ಎಂಬ ಸುದ್ದಿಯ ಬೆನ್ನಲ್ಲೇ ಠಾಕೂರ್ ಹೇಳಿಕೆ ಕುತೂಹಲ ಮೂಡಿಸಿದೆ.
ಮಾರ್ಚ್ 7ರಂದು ಈ ಸಮಯಕ್ಕೆ ಬಿಟ್ ಕಾಯಿನ್ ಮೌಲ್ಯ:
ಒಟ್ಟಾರೆ ಮಾರುಕಟ್ಟೆ ಮೌಲ್ಯ: $943,488,691,158
ಒಂದು ಬಿಟ್ ಕಾಯಿನ್ ಬೆಲೆ = 36,97,289.34 ರು
ಬಿಟ್ ಕಾಯಿನ್ ಬೆಲೆ: $50,597.13
ಬಿಟ್‌ಕಾಯಿನ್: ಇದು ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿಯಾಗಿದೆ. ಡಿಜಿಟಲ್ ಕರೆನ್ಸಿಯಾಗಿರುವುದರಿಂದ ಯಾವುದೇ ರೀತಿಯಲ್ಲಿ ಮುದ್ರಣ ರೂಪದಲ್ಲಿ ಸಿಗುವುದಿಲ್ಲ. ರೂಪಾಯಿ, ಡಾಲರ್, ಯುರೋ ಗಳಂತೆ ಭೌತಿಕ ರೂಪದಲ್ಲಿ ಇರುವುದಿಲ್ಲ. ಯಾವುದೇ ದೇಶ, ಭಾಷೆ, ಬ್ಯಾಂಕುಗಳಿಗೆ ಇದು ಸೀಮಿತವಾಗಿಲ್ಲ.
ಭಾರತ, ಸೌದಿ ಅರೇಬಿಯಾ, ಅಲ್ಜೀರಿಯಾ, ಬೊಲಿವಿಯಾ ಅನೇಕ ದೇಶಗಳಲ್ಲಿ ನಿಷೇಧವಾಗಿರುವ ಕ್ರಿಪ್ಟೋ ಕರೆನ್ಸಿ ಇತ್ತೀಚೆಗೆ ಭಾರಿ ಬೇಡಿಕೆ ಪಡೆದು ತನ್ನ ಮೌಲ್ಯ ಹೆಚ್ಚಿಸಿಕೊಂಡಿದೆ. ಆದರೆ, ಡಿಜಿಟಲ್ ಆಸ್ತಿ ರೂಪದಲ್ಲಿ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದೇ ಹೊರತೂ ಸಾಮಾನ್ಯ ವ್ಯವಹಾರಕ್ಕೆ ಸೂಕ್ತವಲ್ಲ ಎಂದು ತಜ್ಞರು ಕೂಡಾ ಅಭಿಪ್ರಾಯಪಟ್ಟಿದ್ದಾರೆ.
2018ರಲ್ಲಿ ಕ್ರಿಪ್ಟೋಕರೆನ್ಸಿ ಟ್ರೇಡಿಂಗ್ ಮೇಲೆ ಆರ್ ಬಿಐ ನಿರ್ಬಂಧ ವಿಧಿಸಿದೆ. 2019ರಲ್ಲಿ ಸುಪ್ರೀಂಕೋರ್ಟ್ ಕೂಡಾ ಕ್ರಿಪ್ಟೋ ಬಳಕೆ ಬಗ್ಗೆ ಸೂಕ್ತ ನೀತಿ ನಿಯಮ ರೂಪಿಸಿ ಇಲ್ಲವೇ ನಿಷೇಧಿಸಿ ಎಂದು ಸರ್ಕಾರಕ್ಕೆ ಸೂಚಿಸಿತ್ತು. ಸದ್ಯಕ್ಕೆ ಕಾನೂನಾತ್ಮಕವಾಗಿ ಕ್ರಿಪ್ಟೋಕರೆನ್ಸಿ ಬಳಕೆ ಭಾರತದಲ್ಲಿ ಸಾಧ್ಯವಿಲ್ಲ.