1 ಲಕ್ಷ ಕೋಟಿ ದಾಟಿದ ನವೆಂಬರ್ ತಿಂಗಳ GST ಸಂಗ್ರಹ
ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹ ಕಳೆದ ಎರಡು ತಿಂಗಳಿಂದ ಕುಗ್ಗುತ್ತಾ ಸಾಗಿತ್ತು. ಆದರೆ ನವೆಂಬರ್ ತಿಂಗಳಿನಲ್ಲಿ 1 ಲಕ್ಷ ಕೋಟಿ ದಾಟಿದೆ ಎಂದು ಭಾನುವಾರ ಅಧಿಕೃತ ದತ್ತಾಂಶಗಳು ತಿಳಿಸಿವೆ. ಪರೋಕ್ಷ ತೆರಿಗೆ ಸಂಗ್ರಹದಲ್ಲಿ ಚೇತರಿಕೆ ಕಂಡಿರುವುದು ಸರ್ಕಾರದ ಪಾಲಿಗೆ ಉತ್ತಮ ಬೆಳವಣಿಗೆಯಾಗಿದೆ. ವ್ಯವಸ್ಥೆಯೊಳಗೆ ನಗದು ಪೂರೈಕೆ ಹೆಚ್ಚು ಮಾಡುವ ಸರ್ಕಾರದ ಕ್ರಮಕ್ಕೆ ಇದು ಪೂರಕವಾಗಿದೆ.
ಆರ್ಥಿಕ ಹಿಂಜರಿತದ ಈಗಿನ ಸನ್ನಿವೇಶದಲ್ಲಿ ಇದರಿಂದ ಅನುಕೂಲವಾಗುತ್ತದೆ ಎಂದು ನಂಬಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನವೆಂಬರ್ ನಲ್ಲಿ 1.03 ಲಕ್ಷ ರುಪಾಯಿ ಸಂಗ್ರಹವಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಸಂಗ್ರಹವಾದ ಮೊತ್ತಕ್ಕೆ ಹೋಲಿಸಿದರೆ 6% ಹೆಚ್ಚು ಮೊತ್ತ ಸಂಗ್ರಹವಾಗಿದೆ.
ಜಿಎಸ್ಟಿ ತೆರಿಗೆ ಬದಲಾವಣೆಗೆ ಕೇಂದ್ರ ನಿರ್ಧಾರ
GST ಜಾರಿಯಾದ ಮೇಲೆ ಅತಿ ಹೆಚ್ಚು GST ಮೊತ್ತ ಸಂಗ್ರಹವಾದ ಮೂರನೇ ತಿಂಗಳು ಇದು ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಆಯಾ ಅಂತರರಾಜ್ಯ ಮಾರಾಟದ ತೆರಿಗೆ ಸೆಟ್ಲ್ ಮಾಡಿದ ಮೇಲೆ ಕೇಂದ್ರ ಸರ್ಕಾರದ ಆದಾಯ 44,742 ಕೋಟಿ ಹಾಗೂ ರಾಜ್ಯ ಸರ್ಕಾರ 44,576 ಕೋಟಿ ರುಪಾಯಿಯನ್ನು ನವೆಂಬರ್ ನಲ್ಲಿ ಸಂಗ್ರಹವಾಗಿದೆ.
ನವೆಂಬರ್ ಕೊನೆಗೆ 78 ಲಕ್ಷಕ್ಕಿಂತ ಹೆಚ್ಚು ತೆರಿಗೆ ರಿಟರ್ನ್ಸ್ ಫೈಲ್ ಮಾಡಲಾಗಿದೆ. "ಎರಡು ತಿಂಗಳ ನಕಾರಾತ್ಮಕ ಬೆಳವಣಿಗೆ ನಂತರ GST ಆದಾಯದಲ್ಲಿ ಉತ್ತಮ ಬೆಳವಣಿಗೆ ಆಗಿದೆ. ನವೆಂಬರ್ 2018ಕ್ಕೆ ಹೋಲಿಸಿದರ್ 2019ರ ನವೆಂಬರ್ ನಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ 6% ಏರಿಕೆಯಾಗಿದೆ. ದೇಶೀಯ ವ್ಯವಹಾರದ ಜಿಎಸ್ ಟಿ ಸಂಗ್ರಹದಲ್ಲಿ 12% ಏರಿಕೆ ಆಗಿದೆ. ಇದು ವರ್ಷದಲ್ಲೇ ಅತಿ ಹೆಚ್ಚು.
"ಆಮದಿನ ಮೇಲಿನ ಜಿಎಸ್ ಟಿ ಸಂಗ್ರಹ ನಕಾರಾತ್ಮಕ ಬೆಳವಣಿಗೆ 13% ಆಗಿದೆ. ಆದರೆ ಕಳೆದ ತಿಂಗಳು ನಕಾರಾತ್ಮಕ ಬೆಳವಣಿಗೆ 20% ಆಗಿತ್ತು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕಳೆದ ಎರಡು ತಿಂಗಳು GST ಸಂಗ್ರಹದಲ್ಲಿ ಇಳಿಕೆಯಾಗಿದ್ದ ಕಾರಣಕ್ಕೆ ಕೇಂದ್ರ- ರಾಜ್ಯ ಸರ್ಕಾರದ ಮಧ್ಯೆ ಸಂಬಂಧದಲ್ಲಿ ತಿಕ್ಕಾಟವಾಗಿತ್ತು. ಕೇಂದ್ರ ಸರ್ಕಾರದಿಂದ GST ಪರಿಹಾರ ಹಣ ಬರುವುದು ವಿಳಂಬವಾಗುತ್ತಿದೆ ಎಂದು ಸಾರ್ವಜನಿಕವಾಗಿಯೇ ರಾಜ್ಯ ಸರ್ಕಾರಗಳು ಆರೋಪ ಮಾಡಿವೆ.