ರೈಲು ಪ್ರಯಾಣ ದರ ಏರಿಕೆ ಜನವರಿ 1ರಿಂದ ಜಾರಿಗೆ; ಎಷ್ಟು ಜಾಸ್ತಿ ಎಂಬ ಲೆಕ್ಕಾಚಾರ ಇಲ್ಲಿದೆ
2020ರ ಜನವರಿ 1ರಿಂದ ರೈಲು ಪ್ರಯಾಣ ದರವು ದುಬಾರಿಯಾಗಲಿದೆ. ಆಯಾ ವರ್ಗಕ್ಕೆ ತಕ್ಕಂತೆ ಪ್ರತಿ ಕಿಲೋಮೀಟರ್ ಗೆ ಒಂದರಿಂದ ನಾಲ್ಕು ಪೈಸೆ ದರ ಏರಿಕೆ ಮಾಡಲಾಗಿದೆ.
"ರೈಲು ನಿಲ್ದಾಣದಲ್ಲಿ ಹಾಗೂ ರೈಲಿನೊಳಗೆ ಪ್ರಯಾಣಿಕರಿಗೆ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬೆಲೆ ಏರಿಕೆ ಅನಿವಾರ್ಯ ಆಗಿತ್ತು. ಬಳಕೆದಾರರಿಗೆ ಹೆಚ್ಚಿನ ಹೊರೆ ಆಗದಂತೆ ಸ್ವಲ್ಪ ಪ್ರಮಾಣದಲ್ಲಿ ಏರಿಸಲಾಗಿದೆ. ಈ ಮೂಲಕ ಸಂಗ್ರಹವಾಗುವ ಹಣದ ಮೂಲಕ ಆಧುನೀಕರಣ ಮಾಡಲಾಗುವುದು" ಎಂದು ರೈಲ್ವೆ ಸಚಿವಾಲಯದ ಟ್ವೀಟ್ ನಲ್ಲಿ ತಿಳಿಸಲಾಗಿದೆ.

ಅಂದ ಹಾಗೆ, 2014-15ರಲ್ಲಿ ಕೊನೆ ಬಾರಿಗೆ ದರ ಪರಿಷ್ಕರಣೆ ಮಾಡಲಾಗಿತ್ತು. ಈಗಿನ ದರ ಹೆಚ್ಚಳದ ಬಗ್ಗೆ ನಿಮಗೆ ಗೊತ್ತಿರಬೇಕಾದ ಮಾಹಿತಿಗಳು ಹೀಗಿವೆ:
* ಎಲ್ಲ ಏಸಿ ಕ್ಲಾಸ್ ಗಳಿಗೆ ಪ್ರಯಾಣಿಸುವ ಪ್ರತಿ ಕಿಲೋಮೀಟರ್ ಗೆ ನಾಲ್ಕು ಪೈಸೆ ಏರಿಕೆ
* ನಾನ್ ಏಸಿ ಹಾಗೂ ಮೀಸಲು ಅಲ್ಲದ ವಿಭಾಗದಲ್ಲಿ ಪ್ರತಿ ಕಿಲೋಮೀಟರ್ ಗೆ ಒಂದು ಪೈಸೆ ಏರಿಕೆ
* ದೂರ ಪ್ರಯಾಣದ ಮೇಲ್/ಎಕ್ಸ್ ಪ್ರೆಸ್ ರೈಲುಗಳಿಗೆ ಪ್ರತಿ ಕಿಲೋಮೀಟರ್ ಗೆ ಎರಡು ಪೈಸೆ ಏರಿಕೆ
* ಸಬರ್ಬನ್ ಕ್ಲಾಸಸ್ ನ ದರದಲ್ಲಿ ಯಾವುದೇ ದರ ಬದಲಾವಣೆ ಮಾಡದಿರಲು ರೈಲ್ವೆ ಇಲಾಖೆ ನಿರ್ಧರಿಸಿದೆ.
* ಶತಾಬ್ದಿ, ರಾಜಧಾನಿ ಮತ್ತು ತುರಂತ್ ದಂಥ ಪ್ರೀಮಿಯಂ ರೈಲುಗಳಿಗೂ ಪ್ರಯಾಣ ದರ ಏರಿಕೆ ಅನ್ವಯ ಆಗುತ್ತದೆ.
* ಆದೇಶದ ಪ್ರಕಾರ, ರಿಸರ್ವೇಷನ್ ಶುಲ್ಕ ಮತ್ತು ಸೂಪರ್ ಫಾಸ್ಟ್ ದರದಲ್ಲಿ ಯಾವ ಬದಲಾವಣೆಯೂ ಇಲ್ಲ.
* ಜನವರಿ ಒಂದನೇ ತಾರೀಕಿನಿಂದ ಈ ಹೊಸ ದರ ಜಾರಿಗೆ ಬರಲಿದೆ. ಆ ದಿನಕ್ಕೂ ಮುನ್ನವೇ ಟಿಕೆಟ್ ಬುಕ್ ಮಾಡಿದವರಿಗೆ ಬೆಲೆ ಏರಿಕೆ ಅನ್ವಯಿಸುವುದಿಲ್ಲ.
* ಕ್ಯಾಟರಿಂಗ್ ಚಾರ್ಜ್ ಗಳ ಮೇಲೆ ಈ ಬೆಲೆ ಏರಿಕೆ ಯಾವ ರೀತಿಯ ಪರಿಣಾಮವನ್ನೂ ಬೀರಲ್ಲ.