ಯುಕೆ ರಾಣಿಗಿಂತ ನಾರಾಯಣಮೂರ್ತಿ ಮಗಳು ಸಿರಿವಂತೆ; ಅಳಿಯನಿಗೆ ಸಂಕಷ್ಟ
ಯುನೈಟೆಡ್ ಕಿಂಗ್ ಡಮ್ ನಲ್ಲಿ ಚಾನ್ಸೆಲರ್ ಆಗಿರುವ ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಅವರ ಅಳಿಯ ರಿಷಿ ಸುನಕ್ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಅವರ ಹೆಂಡತಿ ಅಕ್ಷತಾ ಮೂರ್ತಿ ಆಸ್ತಿ ವಿವರಗಳನ್ನು ಬಹಿರಂಗ ಮಾಡಿಲ್ಲ ಎಂಬ ಕಾರಣಕ್ಕೆ ರಿಷಿ ಈಗ ಆಕ್ಷೇಪಕ್ಕೆ ಗುರಿಯಾಗಿದ್ದಾರೆ.
ಬ್ರಿಟಿಷ್ ಪತ್ರಿಕೆ ಗಾರ್ಡಿಯನ್ ನಡೆಸಿರುವ ತನಿಖಾ ವರದಿ ಪ್ರಕಾರ, ರಿಷಿ ಸುನಕ್ ರಿಂದ ಹೆಂಡತಿ ಅಕ್ಷತಾರ ಆಸ್ತಿ ವಿವರ ಘೋಷಣೆ ಆಗಿಲ್ಲ. ಹತ್ತಾರು ಲಕ್ಷ ಪೌಂಡ್ ಆಸ್ತಿಯ ಒಡತಿ ಆಗಿರುವ ಅಕ್ಷತಾ, ರಾಣಿ ಎಲಿಜಬೆತ್ ಗಿಂತ ಶ್ರೀಮಂತರು. ಇನ್ಫೋಸಿಸ್ ನಲ್ಲಿ 4300 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಅಕ್ಷತಾ ಹೊಂದಿದ್ದಾರೆ.
ಇನ್ಫಿ ನಾರಾಯಣಮೂರ್ತಿ ಅಳಿಯ ಯು.ಕೆ. ಹೊಸ ಹಣಕಾಸು ಸಚಿವ
ಅಂದ ಹಾಗೆ, ರಾಣಿ ಎಲಿಜಬೆತ್ ಅವರ ವೈಯಕ್ತಿಕ ಆಸ್ತಿ ಅಂದಾಜು 3400 ಕೋಟಿ ರುಪಾಯಿ. ಯು.ಕೆ. ಕಾನೂನಿನ ಪ್ರಕಾರ, ಅಲ್ಲಿನ ಎಲ್ಲ ಸಚಿವರ ಹತ್ತಿರದ ಸಂಬಂಧಿಗಳ ಹಣಕಾಸು ವಿವರವನ್ನು ಸಾರ್ವಜನಿಕವಾಗಿ ಘೋಷಿಸಬೇಕು ಎಂದು ನಿರೀಕ್ಷಿಸಲಾಗುತ್ತದೆ.

ಸಂಬಂಧಿಗಳ ಆಸ್ತಿ ಘೋಷಣೆ ಮಾಡಬೇಕು
ಸಚಿವರೊಬ್ಬರಿಗೆ ಅನ್ವಯ ಆಗುವ ಎಲ್ಲ ನಿಯಮಗಳಿಗೆ ರಿಷಿ ಸುನಕ್ ಕೂಡ ಒಳಪಟ್ಟಿದ್ದಾರೆ. ಅವರ ಜವಾಬ್ದಾರಿ ವ್ಯಾಪ್ತಿಯೊಳಗೆ ಒಳಪಟ್ಟಿರುವ ಎಲ್ಲ ಮಾಹಿತಿಯನ್ನು ತಿಳಿಸಬೇಕಾದದ್ದು ರಿಷಿ ಕರ್ತವ್ಯ. ಹಾಗೆ ನೋಡಿದರೆ ಈಗ ಸಾರ್ವಜನಿಕ ಜೀವನದ ಜವಾಬ್ದಾರಿ ನಿರ್ವಹಿಸುವಲ್ಲಿ ಹಿತಾಸಕ್ತಿ ಸಂಘರ್ಷ ಎದುರಾಗಿದೆ. ಸಚಿವ ಸ್ಥಾನದಲ್ಲಿ ಇರುವವರು ಹತ್ತಿರದ ಕುಟುಂಬದ ಸೋದರರು, ಪೋಷಕರು, ಸಂಗಾತಿ, ಸಂಬಂಧಿಗಳ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಘೋಷಿಸಲೇಬೇಕು. ಅದೀಗ ಬಿಕ್ಕಟ್ಟಿಗೆ ಕಾರಣ ಆಗುವಂತಿದೆ. ಆದರೆ ಈಗಿನ ತನಿಖೆಯಿಂದ ಗೊತ್ತಾಗಿರುವುದು ಏನೆಂದರೆ, ಸುನಕ್ ಹಣಕಾಸಿನ ಹೇಳಿಕೆಯಲ್ಲಿ ತನ್ನ ಪತ್ನಿಗೆ ಯು.ಕೆ. ಮೂಲದ ಬಂಡವಾಳ ಹೂಡಿಕೆ ಸಂಸ್ಥೆ ಕ್ಯಾಟಮಾರನ್ ವೆಂಚರ್ಸ್ ಎಂಬುದರ ಮಾಲೀಕತ್ವ ಮಾತ್ರ ಇದೆ ಎಂದು ತಿಳಿಸಿದ್ದಾರೆ.

ಅಕ್ಷತಾ ಮೂರ್ತಿ ಅವರಿಂದ ಕನಿಷ್ಠ ಆರು ಕಂಪೆನಿಯಲ್ಲಿ ಹೂಡಿಕೆ
ಅಕ್ಷತಾ ಬಳಿ ಇನ್ಫೋಸಿಸ್ ಕಂಪೆನಿಯ ಷೇರುಗಳಿದ್ದು, ಆ ಕಂಪೆನಿಯು ಯು.ಕೆ. ಸರ್ಕಾರದಲ್ಲಿ ಕಾಂಟ್ರ್ಯಾಕ್ಟರ್ ಆಗಿದೆ. ಇದು ಸಂಘರ್ಷಕ್ಕೆ ಕಾರಣ ಆಗಿದೆ. ಗಾರ್ಡಿಯನ್ ವರದಿ ಪ್ರಕಾರ, ಅಕ್ಷತಾ ಮೂರ್ತಿ ಘೋಷಣೆ ಮಾಡದೆ ಇರುವಂಥ ಕನಿಷ್ಠ ಆರು ಕಂಪೆನಿಗಳ ಹೂಡಿಕೆ ಇದೆ. ಅವು ಯುನೈಟೆಡ್ ಕಿಂಗ್ ಡಮ್ ನಲ್ಲೇ ಇವೆ. ಮತ್ತು ಅಮೆಜಾನ್ ಇಂಡಿಯಾದ ಜತೆಗೆ 900 ಮಿಲಿಯನ್ ಪೌಂಡ್ ಹೂಡಿಕೆ ಇದೆ. ರಿಷಿ ಸುನಕ್ ನಿಯಮಾವಳಿಗಳ ಉಲ್ಲಂಘನೆ ಮಾಡಿರುವ ಬಗ್ಗೆ ತನಿಖೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಆದರೂ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಆಂತರಿಕ ಸಲಹೆಗಾರರು ರಿಷಿ ಸುನಕ್ ಹಣಕಾಸು ಮಾಹಿತಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಸಚಿವ ಸ್ಥಾನದ ನಿಯಮಾವಳಿಗಳನ್ನು ಅವರು ಪಾಲಿಸಿರುವುದಾಗಿ ತಿಳಿಸಿದ್ದಾರೆ.

ರಿಷಿ ಹಾಗೂ ಅಕ್ಷತಾ ಮದುವೆ 2009ರಲ್ಲಿ
ರಿಷಿ ಸುನಕ್ ಅವರು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ್ ಮೂರ್ತಿ ಅಳಿಯ. ಸ್ಟ್ಯಾನ್ ಫೋರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ ರಿಷಿ ಹಾಗೂ ನಾರಾಯಣ್ ಮೂರ್ತಿ ಮಗಳು ಅಕ್ಷತಾ ಸಹಪಾಠಿಗಳಾಗಿದ್ದರು. ಇವರಿಬ್ಬರು 2009ರಲ್ಲಿ ವಿವಾಹವಾದರು. ಈ ದಂಪತಿಗೆ ಕೃಷ್ಣ ಮತ್ತು ಅನೌಷ್ಕಾ ಎಂಬಿಬ್ಬರು ಮಕ್ಕಳಿದ್ದಾರೆ. ರಿಷಿ ಸುನಕ್ ಅವರು ರಿಚ್ಮಂಡ್ (ಯಾರ್ಕ್)ನಿಂದ ಕನ್ಸರ್ವೆಟಿವ್ ಸಂಸದರಾಗಿ 2015, 2017, 2019 ಹಾಗೂ ಈ ವರ್ಷದ 2020ರ ಫೆಬ್ರವರಿಯಲ್ಲಿ ಆಯ್ಕೆಯಾಗಿದ್ದಾರೆ. ಮುಖ್ಯ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಅವರಿಗೆ ಹಣಕಾಸು ಸಚಿವ ಹುದ್ದೆಗೆ ಸಮನಾದದ್ದಕ್ಕೆ ಪದೋನ್ನತಿ ನೀಡಲಾಗಿದೆ.