ಹೂಡಿಕೆಗೆ ಚಿನ್ನಕ್ಕಿಂತ ಕ್ರಿಪ್ಟೊ ಬೆಸ್ಟ್? ಅಂಕಿ-ಅಂಶಗಳು ಏನು ಹೇಳುತ್ತವೆ?
ಪುರಾತನ ಕಾಲದಿಂದಲೂ ಭಾರತೀಯರು ಚಿನ್ನದ ಬಗ್ಗೆ ಅತ್ಯಾಪ್ತ ಒಲವನ್ನು ಹೊಂದಿದ್ದಾರೆ. ಪ್ರತಿಯೊಂದು ಮನೆಯಲ್ಲೂ ಒಂದಿಷ್ಟಾದರೂ ಚಿನ್ನ ಇರಲೇಬೇಕು ಎಂಬುದು ಅಲಿಖಿತ ನಿಯಮವೇ ಆಗಿದೆ. ಭಾರತ ಬಿಟ್ಟರೆ ಚೀನಾ ದೇಶದಲ್ಲೂ ಚಿನ್ನದ ಬಳಕೆ ಅಧಿಕವಾಗಿದೆ. ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಚಿನ್ನದ ಆಭರಣಗಳ ಮಾರುಕಟ್ಟೆ ವಿಸ್ತಾರವಾಗುತ್ತಿದ್ದು, ಈ ವಿಷಯದಲ್ಲಿ ನಮ್ಮ ದೇಶ ಚೀನಾಗೆ ಪೈಪೋಟಿ ನೀಡುತ್ತಿದೆ.

ಭಾರತೀಯರಿಗೆ ಚಿನ್ನವೆಂದರೆ ಏಕೆ ಅಚ್ಚುಮೆಚ್ಚು?
ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ ಹಣದುಬ್ಬರದ ಪರಿಣಾಮಗಳನ್ನು ಮೀರಿಸಿ ಪ್ರತಿಫಲ ಪಡೆಯಬಹುದು, ಅಗತ್ಯವಿದ್ದಾಗ ತಕ್ಷಣ ಚಿನ್ನ ಅಡವಿಟ್ಟು ಸುಲಭವಾಗಿ ಸಾಲ ಪಡೆಯುವುದು ಹಾಗೂ ತೀರಾ ಕಷ್ಟವಿದ್ದರೆ ತಕ್ಷಣ ಚಿನ್ನವನ್ನು ಮಾರಿ ನಗದು ಪಡೆಯುವ ಸೌಕರ್ಯ ಇವೇ ಮುಂತಾದ ಕಾರಣಗಳಿಂದ ಭಾರತೀಯರು ಹೆಚ್ಚಾಗಿ ಚಿನ್ನ ಖರೀದಿಸಿ ಇಟ್ಟುಕೊಳ್ಳುತ್ತಾರೆ. ಇನ್ನು ಚಿನ್ನದ ಮೇಲೆ ಹೂಡಿಕೆ ಮಾಡಲು ಯಾವುದೇ ಬ್ಯಾಂಕಿಂಗ್ ಪ್ರಕ್ರಿಯೆ ಅಗತ್ಯವಿಲ್ಲ ಎಂಬುದು ಗಮನಾರ್ಹ.

ಕಣ್ಣಿಗೆ ಕಾಣದ ಕ್ರಿಪ್ಟೊಕರೆನ್ಸಿಗೂ ಬಂತು ಬೇಡಿಕೆ
ಕಣ್ಣಿಗೆ ಕಾಣಿಸದ ಕೇವಲ ಡಿಜಿಟಲ್ ರೂಪದಲ್ಲಿರುವ ಕ್ರಿಪ್ಟೊಕರೆನ್ಸಿಯೂ ಈಗ ಭಾರತದಲ್ಲಿ ಭಾರಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಕ್ರಿಪ್ಟೊಕರೆನ್ಸಿ ಮಾರುಕಟ್ಟೆ ಬಂಡವಾಳದ ದೃಷ್ಟಿಯಿಂದ ಅಗ್ರಗಣ್ಯವಾಗಿರುವ ಚಿನ್ನ 2.0 (ಚಿನ್ನದ ಎರಡನೇ ಅವತಾರ) ಅಥವಾ ಬಿಟ್ ಕಾಯಿನ್ ಕರೆನ್ಸಿ ಮೌಲ್ಯವು 2021 ಆರಂಭದಿಂದ ಭಾರಿ ಏರಿಕೆ ಕಾಣುತ್ತಿದ್ದು, ಇದು 2022 ರವರೆಗೂ ಹೀಗೇ ಮುಂದುವರಿಯಬಹುದು ಎನ್ನಲಾಗುತ್ತಿದೆ. ಪ್ರಸ್ತುತ ಭಾರತದಲ್ಲಿ ಹತ್ತು ಮಿಲಿಯನ್ಗೂ ಅಧಿಕ ಜನ ಬಿಟ್ ಕಾಯಿನ್ ನಲ್ಲಿ ಹೂಡಿಕೆ ಮಾಡಿದ್ದಾರೆ. ಕ್ರಿಪ್ಟೊನಲ್ಲಿ ಹೂಡಿಕೆ ಮಾಡುವುದು ಕಾನೂನು ಬದ್ಧವಾಗಿದ್ದು, ಕೇಂದ್ರ ಸರ್ಕಾರವು ಇದಕ್ಕಾಗಿ ಶೀಘ್ರದಲ್ಲೇ ಸೂಕ್ತ ಮಾನದಂಡಗಳನ್ನು ಜಾರಿಗೊಳಿಸಲಿದೆ.

ಚಿನ್ನ ಅಥವಾ ಕ್ರಿಪ್ಟೊ.. ಯಾವುದು ಬೆಸ್ಟ್?
ಇತ್ತೀಚಿನ ತಿಂಗಳುಗಳಲ್ಲಿ ಕ್ರಿಪ್ಟೊಗೆ ಮೌಲ್ಯ ಹೆಚ್ಚಾಗುತ್ತಿರುವ ಕಾರಣ ಚಿನ್ನ ಹಾಗೂ ಇದರ ಮಧ್ಯ ಹೋಲಿಕೆ ಮಾಡುವ ಸಂದರ್ಭ ಬಂದಿದೆ. ಪ್ರಸ್ತುತ ಸ್ಥಿತಿಯಲ್ಲಿ ಇವೆರಡರಲ್ಲಿ ಯಾವುದರ ಮೇಲೆ ಹೂಡಿಕೆ ಮಾಡುವುದು ಲಾಭದಾಯಕ ಎಂಬುದು ಚರ್ಚೆಯ ವಿಷಯವಾಗಿದೆ. ಆದರೆ ಹೂಡಿಕೆಗೂ ಮುನ್ನ ಈ ವಿಷಯದ ಬಗ್ಗೆ ಕೂಲಂಕುಷವಾಗಿ ತಿಳಿಯುವುದು ಅಗತ್ಯ.

ಕ್ರಿಪ್ಟೊಗಳ ಮಾರುಕಟ್ಟೆ ಬಂಡವಾಳ ಮೌಲ್ಯ
ಪ್ರಸಕ್ತ ವರ್ಷಾರಂಭದಲ್ಲಿ ಬಿಟ್ ಕಾಯಿನ್ ದಾಖಲೆಯ 65,000 ಡಾಲರ್ (48 ಲಕ್ಷ ರೂಪಾಯಿ) ಮಟ್ಟಕ್ಕೆ ಜಿಗಿದಿತ್ತು. ನಂತರ ಮತ್ತೆ ಇಳಿಮುಖವಾದ ಇದರ ಮೌಲ್ಯ ಸದ್ಯ 30,000 ಡಾಲರ್ ಆಸುಪಾಸಿನಲ್ಲಿದೆ. ಚೀನಾ ದೇಶದ ಗಣಿಗಾರಿಕೆ ನೀತಿಯು ಇದರ ಮೌಲ್ಯ ಕುಸಿಯಲು ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ. ಆದರೆ, ಬಿಟ್ ಕಾಯಿನ್ ಮತ್ತೆ ಸ್ಥಿರವಾಗಿ ಏರಿಕೆ ಕಾಣುತ್ತಿದ್ದು, ಜಾಗತಿಕವಾಗಿ ಹೂಡಿಕೆದಾರರ ಅಚ್ಚುಮೆಚ್ಚಿನ ಹೂಡಿಕೆ ಆಸ್ತಿಯಾಗಿ ಬದಲಾಗುತ್ತಿದೆ. ಮಾರುಕಟ್ಟೆಯ ಊಹಾಪೋಹಗಳು ಹಾಗೂ ಭಾರಿ ಏರಿಳಿತಗಳ ಮಧ್ಯೆಯೂ ಕೆಲ ದೀರ್ಘಾವಧಿ ಹೂಡಿಕೆದಾರರು ಬಿಟ್ ಕಾಯಿನ್ಗಳಲ್ಲಿ ಹೂಡಿಕೆ ಮಾಡುತ್ತಲೇ ಇದ್ದಾರೆ. ಸದ್ಯ ಬಿಟ್ ಕಾಯಿನ್ ಹಾಗೂ ಎಥಿರಿಯಮ್ ಕ್ರಿಪ್ಟೊಗಳು ಹೂಡಿಕೆದಾರರಿಗೆ ಭಾರಿ ಲಾಭವನ್ನೇ ತಂದು ಕೊಟ್ಟಿವೆ.
ಕ್ರಿಪ್ಟೊ ಹಾಗೂ ಇತರ ಅಸೆಟ್ಗಳಲ್ಲಿ 1000 ರೂಪಾಯಿ ಹೂಡಿಕೆ ಮಾಡಿದ್ದರೆ ಈಗ ಅದರ ಮೌಲ್ಯ ಎಷ್ಟಾಗಬಹುದಿತ್ತು ಎಂಬುದರ ಒಂದು ಹೋಲಿಕೆ ಇಲ್ಲಿದೆ.
ಅಸೆಟ್ 1 ವರ್ಷದ ಹಿಂದೆ 3 ವರ್ಷದ ಹಿಂದೆ 5 ವರ್ಷದ ಹಿಂದೆ
ಬಿಟ್ ಕಾಯಿನ್ 4159 6640 83549
ಎಥಿರಿಯಮ್ 8094 12441 303270
ಚಿನ್ನ 920 1520 1382
ಬೆಳ್ಳಿ 849 1699 1267
(ಎಲ್ಲ ಅಂಕಿಗಳು ಭಾರತೀಯ ರೂಪಾಯಿಗಳಲ್ಲಿವೆ. ಮಾಹಿತಿ: ಸೆಪ್ಟೆಂಬರ್ 1, 2021 ರಲ್ಲಿದ್ದಂತೆ)
(ಮೂಲ: Giottus, coinmarketcap.com ಮತ್ತು goldprice.org)

ಬಿಟ್ ಕಾಯಿನ್ ಒಂದೇ ಅಲ್ಲ.. ಇನ್ನೂ ಹಲವಾರು ಕ್ರಿಪ್ಟೊಗಳಿವೆ
ಹೀಗೆ ಕ್ರಿಪ್ಟೊಗಳ ಮೌಲ್ಯದಲ್ಲಿ ಭಾರಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಬಿಟ್ ಕಾಯಿನ್ ಹೊರತುಪಡಿಸಿ ಇನ್ನೂ ಹಲವಾರು ಪರ್ಯಾಯ ಕ್ರಿಪ್ಟೊಕರೆನ್ಸಿಗಳು ಮಾರುಕಟ್ಟೆಗೆ ಬಂದವು. ಆದರೂ ಅವೆಲ್ಲವೂ ಇನ್ನೂ ಜಾಗತಿಕ ಮಟ್ಟಕ್ಕೆ ಬೆಳೆದಿಲ್ಲ ಮತ್ತು ಭಾರಿ ಮೌಲ್ಯ ಏರಿಳಿತಗಳನ್ನು ಹೊಂದಿವೆ.
ಜಾಗತಿಕ ಸಾಂಸ್ಥಿಕ ಹೂಡಿಕೆದಾರ ಕಂಪನಿಗಳಾದ ವೀಸಾ, ಪೇಪಾಲ್ ಮತ್ತು ಟೆಸ್ಲಾ ಮುಂತಾದುವು ಸಹ ಈ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವುದರಿಂದ ಕ್ರಿಪ್ಟೊ ಜಗತ್ತು ವಿಸ್ತಾರವಾಗಲಿದೆ ಎಂದೇ ನಂಬಲಾಗಿದೆ. ಸದ್ಯ ಚಿನ್ನದ ಒಟ್ಟಾರೆ ಜಾಗತಿಕ ಮಾರುಕಟ್ಟೆ ಬಂಡವಾಳ ಮೌಲ್ಯವು 10 ಬಿಲಿಯನ್ ಡಾಲರ್ ಆಗಿದ್ದರೆ, ಕ್ರಿಪ್ಟೊ ಮಾರುಕಟ್ಟೆ ಬಂಡವಾಳ ಮೌಲ್ಯ 2 ಬಿಲಿಯನ್ ಡಾಲರ್ ಆಗಿದೆ. ಬರುವ ಐದು ವರ್ಷಗಳಲ್ಲಿ ಕ್ರಿಪ್ಟೊ ಚಿನ್ನದ ಬಂಡವಾಳ ಮೌಲ್ಯಕ್ಕೆ ಹತ್ತಿರ ಬಂದರೂ ಅಚ್ಚರಿಯಿಲ್ಲ.
ಬೆಳವಣಿಗೆಯ ಸಾಮರ್ಥ್ಯದ ದೃಷ್ಟಿಯಿಂದ ನೋಡಿದರೆ ಕ್ರಿಪ್ಟೊ ಸದ್ಯ ನಿಸ್ಸಂಶಯವಾಗಿಯೂ ಅತ್ಯುತ್ತಮ ಹೂಡಿಕೆ ಆಸ್ತಿಯಾಗಿದೆ. ಅತಿ ಸುಲಭವಾಗಿ ಕೆವೈಸಿ ಮಾಡುವ ಮೂಲಕ ಭಾರತೀಯರು ಸಹ ಈಗ ಕೇವಲ 10 ರೂಪಾಯಿಗಳಿಂದ ಆರಂಭಿಸಿ ಕ್ರಿಪ್ಟೊನಲ್ಲಿ ಹೂಡಿಕೆ ಮಾಡಬಹುದಾಗಿದೆ.

ಕ್ರಿಪ್ಟೊ ಸುರಕ್ಷತೆ ಹೇಗಿದೆ?
ಚಿನ್ನವು ಭೌತಿಕ ರೂಪದಲ್ಲಿದ್ದಾಗ ಅದನ್ನು ಮನೆಯಲ್ಲಿ ಅಥವಾ ಬ್ಯಾಂಕ್ ಲಾಕರುಗಳಲ್ಲಿ ಸುರಕ್ಷಿತವಾಗಿ ಇಡಬಹುದು. ಆದರೆ ಇದನ್ನು ಒಂದು ಊರಿನಿಂದ ಮತ್ತೊಂದು ಊರಿಗೆ ಸಾಗಿಸುವಾಗ ಸುರಕ್ಷತೆಯ ಪ್ರಶ್ನೆ ಉದ್ಭವಿಸುತ್ತದೆ. ಸಂಗ್ರಹಿಸಿ ಇಟ್ಟ ಚಿನ್ನಕ್ಕೆ ಯಾವುದೇ ವಿಮಾ ಕಂಪನಿಯು ವಿಮಾ ಸುರಕ್ಷತೆ ನೀಡುವುದಿಲ್ಲವಾದ್ದರಿಂದ ಮನೆಯಲ್ಲಿ ಇದನ್ನು ಇಟ್ಟುಕೊಳ್ಳುವುದು ಒಂದು ರೀತಿಯ ರಿಸ್ಕ್ ಇದ್ದೇ ಇರುತ್ತದೆ.
ಕ್ರಿಪ್ಟೊಕರೆನ್ಸಿಗಳು ಯಾವಾಗಲೂ ಡಿಜಿಟಲ್ ವ್ಯಾಲೆಟ್ ರೂಪದಲ್ಲಿದ್ದು, ಇದಕ್ಕೆ ಎರಡು ಹಂತದ ಸುರಕ್ಷತೆಯಿರುತ್ತದೆ. ಇವನ್ನು ಸಹ ಭೌತಿಕ ರೂಪದಲ್ಲಿ ಸಂಗ್ರಹಿಸಬಹುದು. ಕೆಲ ಜಾಗತಿಕ ಕಂಪನಿಗಳು ಕ್ರಿಪ್ಟೊಗೆ ಭಾಗಶಃ ವಿಮೆಯನ್ನೂ ನೀಡುತ್ತಿವೆ. ಇನ್ನು ಕೆಲ ಕ್ರಿಪ್ಟೊ ಕಂಪನಿಗಳು ಕ್ರಿಪ್ಟೊ ಕರೆನ್ಸಿಯನ್ನು ತಮ್ಮ ಕೋಲ್ಡ್ ವ್ಯಾಲೆಟ್ನಲ್ಲಿ ಸಂಗ್ರಹಿಸಿ ಇಟ್ಟರೆ ಅದಕ್ಕೆ ವಿಮೆಯನ್ನೂ ನೀಡುತ್ತಿವೆ.
ಏನೇ ಆದರೂ ಸುರಕ್ಷತೆಯ ವಿಷಯ ಬಂದಾಗ ಚಿನ್ನ ಅಥವಾ ಕ್ರಿಪ್ಟೊ ಯಾವುದು ಹೆಚ್ಚು ಸುರಕ್ಷಿತ ಎಂಬುದನ್ನು ಕಡ್ಡಿ ತುಂಡು ಮಾಡಿದಂತೆ ಹೇಳಲಾಗದು. ಹೂಡಿಕೆದಾರರು ಈ ಬಗ್ಗೆ ಸ್ವಯಂ ನಿರ್ಧರಿಸುವುದು ಉತ್ತಮ.

ನಗದೀಕರಣ ಮತ್ತು ಸಾಲ ಪಡೆಯುವ ಆಯ್ಕೆಗಳು
ಕ್ರಿಪ್ಟೊಕರೆನ್ಸಿಗಳನ್ನು ಸುಲಭವಾಗಿ ಬೇರೆ ಕ್ರಿಪ್ಟೊಗೆ ಬದಲಾಯಿಸಬಹುದು ಅಥವಾ ಭಾರತೀಯ ರೂಪಾಯಿಗೂ ಬದಲಾಯಿಸಬಹುದು. ಅಂತಾರಾಷ್ಟ್ರೀಯ ಎಕ್ಸಚೇಂಜ್ಗಳಲ್ಲೂ ಕ್ರಿಪ್ಟೊ ಖರೀದಿಸಬಹುದು. ಈ ಆಯ್ಕೆ ಚಿನ್ನಕ್ಕೆ ಲಭ್ಯವಿಲ್ಲ. ವರ್ಷದ ಎಲ್ಲ ದಿನಗಳು ಹಾಗೂ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಜಾಗತಿಕ ಮಾರುಕಟ್ಟೆಯನ್ನು ಕ್ರಿಪ್ಟೊ ಹೊಂದಿದೆ. ಭಾರತೀಯ ಬ್ಯಾಂಕುಗಳ ಕೆಲಸದ ಸಮಯಗಳ ಮಿತಿ ಇದರಲ್ಲಿ ಇಲ್ಲದಿರುವುದರಿಂದ ಹೂಡಿಕೆದಾರರು ಹಾಗೂ ವ್ಯಾಪಾರಿಗಳಿಗೆ ಹೊಸ ಅವಕಾಶಗಳನ್ನೇ ಇದು ತೆರೆದಿಟ್ಟಿದೆ.
ನೋಂದಾಯಿತ ಅಧಿಕೃತ ವಿನಿಮಯ ಕೇಂದ್ರಗಳ ಮೂಲಕ ಭಾರತೀಯರು ರೂಪಾಯಿ ರೂಪದಲ್ಲಿ ನಗದು ವರ್ಗಾಯಿಸಿ ಕ್ರಿಪ್ಟೊ ಖರೀದಿಸಬಹುದು. ಹಾಗೆಯೇ ಅವನ್ನು ಮಾರಿ ಭಾರತೀಯ ರೂಪಾಯಿಗಳಲ್ಲಿ ನಗದು ಪಡೆಯಬಹುದು. ಒಟ್ಟಾರೆಯಾಗಿ ಚಿನ್ನಕ್ಕೆ ಹೋಲಿಸಿದರೆ ಕ್ರಿಪ್ಟೊ ಬಹಳ ಶೀಘ್ರವಾಗಿ ನಗದೀಕರಿಸಬಹುದಾದ ಆಸ್ತಿಯಾಗಿದೆ.

ಕ್ರಿಪ್ಟೊಗಳಲ್ಲಿ ಹೂಡಿಕೆ- ತಾಳ್ಮೆ ಮತ್ತು ಸ್ಥಿರತೆ ಮುಖ್ಯ
ಹಿಂದಿನ ಮಾರುಕಟ್ಟೆ ಬೆಳವಣಿಗೆಗಳ ಬಗ್ಗೆ ನೀವು ಆಶಾಭಾವನೆ ಹೊಂದಿದ್ದರೆ, ದೀರ್ಘಾವಧಿಯಲ್ಲಿ ಕ್ರಿಪ್ಟೊಗಳ ಮೇಲಿನ ಹೂಡಿಕೆ ಸೂಕ್ತವಾಗಿದೆ. ಇನ್ನು, ಚಿನ್ನದ ಮೇಲಿನ ಹೂಡಿಕೆ ಸಾಂಪ್ರದಾಯಿಕವಾಗಿದ್ದು, ಅದು ಮುಂದುವರಿಯಬಹುದು.
ಕ್ರಿಪ್ಟೊ ಕರೆನ್ಸಿಗಳು ಅಲ್ಪಕಾಲದಲ್ಲಿ ಭಾರಿ ಪ್ರತಿಫಲ ನೀಡುತ್ತಿರುವುದರಿಂದ ಭಾರತೀಯ ಕುಟುಂಬಗಳಿಗೆ ಹೂಡಿಕೆ ಮಾಡಲು ಸೂಕ್ತವಾಗಿವೆ. ಚಿನ್ನಾಭರಣಗಳನ್ನು ಧರಿಸಿ ನಿಮ್ಮ ಶ್ರೀಮಂತಿಕೆ ಪ್ರದರ್ಶಿಸಿದಂತೆ ಕ್ರಿಪ್ಟೊಗಳನ್ನು ಧರಿಸಲು ಸಾಧ್ಯವಿಲ್ಲವಾದರೂ, ಇವು ನಿಮಗೆ ಶ್ರೀಮಂತಿಕೆ ತರಬಲ್ಲವು. ಆದರೂ ನಿಮ್ಮ ಕೆಲ ಭಾಗ ಹೂಡಿಕೆಯನ್ನು ಚಿನ್ನದ ಮೇಲೆ ಮುಂದುವರಿಸಬಹುದು.
ಡಿಸಕ್ಲೇಮರ್: ಅಪಾಯದ ಅಂಶಗಳನ್ನು ಆಧರಿಸಿ ನೋಡಿದರೆ, ಆರಂಭದಲ್ಲಿ ಕ್ರಿಪ್ಟೊನಲ್ಲಿ ಹೂಡಿಕೆಯು ನಿಮ್ಮ ಒಟ್ಟಾರೆ ಹೂಡಿಕೆಯ ಶೇ 5 ರಷ್ಟನ್ನು ಮೀರಕೂಡದು. ಆದಾಗ್ಯೂ ರಿಸ್ಕ್ ತಡೆಯುವ ನಿಮ್ಮ ಸಾಮರ್ಥ್ಯಕ್ಕನುಗುಣವಾಗಿ ಈ ಮೌಲ್ಯ ವ್ಯತ್ಯಾಸವಾಗಬಹುದು.