For Quick Alerts
ALLOW NOTIFICATIONS  
For Daily Alerts

ಕ್ರಿಪ್ಟೋ ಕರ್ಮಕಾಂಡ; ಎಫ್‌ಟಿಎಕ್ಸ್ ದಿವಾಳಿ ಹಂತಕ್ಕೆ ಬಂದ ಕಥೆ

|

ಇತ್ತೀಚಿನ ಕೆಲ ವರ್ಷಗಳಿಂದ ಕ್ರಿಪ್ಟೋಕರೆನ್ಸಿ ಬಹಳ ಸದ್ದು ಮಾಡುತ್ತಿದೆ. ಸರ್ಕಾರದ ನಿಯಂತ್ರಣ ಇಲ್ಲದೇ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ, ಯಾವ ಸೀಮೆಗೂ ನಿಲುಕದೇ ಮುಕ್ತವಾಗಿ ಕಾರ್ಯನಿರ್ವಹಿಸುವ ಡಿಜಿಟಲ್ ನಾಣ್ಯವಾಗಿ ಕ್ರಿಪ್ಟೋ ಎಲ್ಲರ ಗಮನ ಸೆಳೆಯಲು ಆರಂಭವಾಯಿತು. ಹಲವು ವರ್ಷಗಳ ಕಾಲ ನೆನೆಗುದಿಯಲ್ಲಿದ್ದಂತಿದ್ದ ಬಿಟ್‌ಕಾಯಿನ್ ಮೊದಲಾದ ಕ್ರಿಪ್ಟೋಕರೆನ್ಸಿಗಳು ಗರಿಗೆದರಿ ನಿಂತವು. ಕ್ರಿಪ್ಟೋ ಬಲೂನು ಊದಿಕೊಳ್ಳಲು ಆರಂಭಿಸಿತು. ಹಾಗೇ ಸುಮ್ಮನೆ ಒಂದಷ್ಟು ಬಿಟ್‌ಕಾಯಿನ್‌ಗಳನ್ನು ಖರೀದಿಸಿದ್ದವರು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದರು.

ಈಗ್ಗೆ ಒಂದು ವರ್ಷದಿಂದ ಕ್ರಿಪ್ಟೋ ಬಲೂನು ಠುಸ್ ಆಗತೊಡಗಿದೆ. ಬಹಳ ಸುರಕ್ಷಿತ ಡಿಜಿಟಲ್ ಹಣ ಎಂದೇ ಪರಿಗಣಿಸಲಾಗಿದ್ದ ಕ್ರಿಪ್ಟೋ ಅಂದುಕೊಂಡಷ್ಟು ಸುರಕ್ಷಿತ ವ್ಯವಸ್ಥೆಯಲ್ಲಿಲ್ಲ ಎಂಬುದು ಅರಿವಾಗತೊಡಗಿದೆ. ಬಿಟ್‌ಕಾಯಿನ್ ಸೇರಿದಂತೆ ಬಹುತೇಕ ಕ್ರಿಪ್ಟೋ ಹಣ ನಿರಂತರವಾಗಿ ಮೌಲ್ಯ ಕಳೆದುಕೊಳ್ಳುತ್ತಿವೆ. ಕ್ರಿಪ್ಟೋ ಅಸ್ತಿ ಇಟ್ಟುಕೊಂಡು ರಾತ್ರೋರಾತ್ರಿ ಕೋಟ್ಯಾಧಿಪತಿಗಳಾದವರು ಮತ್ತೆ ಎಲ್ಲಾ ಕಳೆದುಕೊಳ್ಳುವಂತಾಯಿತು.

ಕ್ರಿಪ್ಟೋ ರಾದ್ಧಾಂತ; ಎಫ್‌ಟಿಎಕ್ಸ್ ಕುಸಿತದಲ್ಲಿ ನಿಶಾದ್ ಸಿಂಗ್ ಹೆಸರು; ಯಾರೀತ?ಕ್ರಿಪ್ಟೋ ರಾದ್ಧಾಂತ; ಎಫ್‌ಟಿಎಕ್ಸ್ ಕುಸಿತದಲ್ಲಿ ನಿಶಾದ್ ಸಿಂಗ್ ಹೆಸರು; ಯಾರೀತ?

ಇದೇ ಹೊತ್ತಲ್ಲಿ ಕ್ರಿಪ್ಟೋ ಬಲೂನು ಠುಸ್ ಆಗಿದೆ ಎಂಬುದಕ್ಕೆ ತಾಜಾ ನಿದರ್ಶನವಾಗಿ ಎಫ್‌ಟಿಎಕ್ಸ್ ಹೊರಹೊಮ್ಮಿದೆ. ಒಂದು ಕಾಲದಲ್ಲಿ ವಿಶ್ವದ ಅತಿದೊಡ್ಡ ಕ್ರಿಪ್ಟೋ ಎಕ್ಸ್‌ಚೇಂಜ್ ಸಂಸ್ಥೆಗಳಲ್ಲಿ ಒಂದೆನಿಸಿದ ಎಫ್‌ಟಿಎಕ್ಸ್ ಇದೀಗ ದಿವಾಳಿ ಹಂತಕ್ಕೆ ಬಂದಿದೆ.

ಏನಿದು ಎಫ್‌ಟಿಎಕ್ಸ್ ಕರ್ಮಕಾಂಡ?

ಏನಿದು ಎಫ್‌ಟಿಎಕ್ಸ್ ಕರ್ಮಕಾಂಡ?

ಎಫ್‌ಟಿಎಕ್ಸ್ ಮಾಲೀಕ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ವಯಸ್ಸು ಕೇವಲ 30 ವರ್ಷ. ಎಫ್‌ಟಿಎಕ್ಸ್ ಎಂಬ ಕ್ರಿಪ್ಟೋ ಎಕ್ಸ್‌ಚೇಂಜ್ ಕಂಪನಿ ಸ್ಥಾಪಿಸಿ ವಂಡರ್ ಕಿಡ್ ಎನಿಸಿದ್ದ. ಬೈನಾನ್ಸ್ ಬಿಟ್ಟರೆ ಅತಿದೊಡ್ಡ ಕ್ರಿಪ್ಟೋ ಎಕ್ಸ್‌ಚೇಂಜ್ ಕಂಪನಿ ಅದಾಗಿತ್ತು. ಅದರ ಮೌಲ್ಯ 30 ಬಿಲಿಯನ್ ಡಾಲರ್ (2.4 ಲಕ್ಷ ಕೋಟಿ ರೂಪಾಯಿ) ಎನ್ನಲಾಗಿತ್ತು.

ಆದರೆ, ಯಾವಾಗ ಬೈನಾನ್ಸ್ ಕಂಪನಿ ತನ್ನ ಸಮೀಪ ಸ್ಪರ್ಧಿ ಎಫ್‌ಟಿಎಕ್ಸ್ ಅನ್ನು ಖರೀದಿಸಲು ಮುಂದಾಯಿತೋ ಆಗ ಎಲ್ಲವೂ ಕುಸಿಯಲು ಆರಂಭವಾಯಿತು. ಎಫ್‌ಟಿಎಕ್ಸ್‌ನ ಕರ್ಮಕಾಂಡಗಳ ಬಗ್ಗೆ ವದಂತಿ ರೂಪದಲ್ಲಿ ಸುದ್ದಿಗಳು ಹರಡಲು ಆರಂಭವಾಗಿವೆ. ಎಫ್‌ಟಿಎಕ್ಸ್‌ನಿಂದ ಕ್ರಿಪ್ಟೋ ಹಣವನ್ನು ಲಪಟಾಯಿಸಲಾಗಿದೆ. ಅದರ ಅಂಗ ಸಂಸ್ಥೆಯಾದ ಅಲಾಮೆಡಾ ರೀಸರ್ಚ್ ಕಂಪನಿಗೆ ಫಂಡ್‌ಗಳನ್ನು ರವಾನಿಸಲಾಗಿದೆ ಎಂಬಂತಹ ಸುದ್ದಿ ಬಂದವು. ಈ ಪ್ರಕರಣದಲ್ಲಿ ನಿಶಾದ್ ಸಿಂಗ್ ಎಂಬ ಭಾರತೀಯ ಮೂಲದ ವ್ಯಕ್ತಿಯ ಹೆಸರೂ ಕೇಳಿಬರುತ್ತಿದೆ.

ಎಫ್‌ಟಿಎಕ್ಸ್‌ನಲ್ಲಿ ತಮ್ಮ ಕ್ರಿಪ್ಟೋ ಹಣವನ್ನು ಜನರು ವಾಪಸ್ ಪಡೆಯಲು ಮುಗಿಬಿದ್ದರು. ಆದರೆ, ಎಫ್‌ಟಿಎಕ್ಸ್‌ನಲ್ಲಿ ಹಣ ಎಲ್ಲಿರಬೇಕು? ಜನರ ಹಣ ಹಿಂದಿರುಗಿಸಲು ಆಗುತ್ತಿಲ್ಲ ಎಂದು ಎಫ್‌ಟಿಎಕ್ಸ್ ಹೇಳುತ್ತಿದೆ. ಫಂಡಿಂಗ್‌ಗಾಗಿ ಹತಾಶೆಯ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಯಾರೂ ಕೂಡ ಎಫ್‌ಟಿಎಕ್ಸ್‌ಗೆ ಫಂಡಿಂಗ್ ಕೊಡಲು ಮುಂದಾಗುತ್ತಿಲ್ಲ.

 

ಕಾನೂನು ಕ್ರಮ

ಕಾನೂನು ಕ್ರಮ

ಪರಿಣಾಮವಾಗಿ, ಅಮೆರಿಕದಲ್ಲಿ ಕಾನೂನು ಕ್ರಮವನ್ನು ಎಫ್‌ಟಿಎಕ್ಸ್ ಎದುರಿಸಬೇಕಾಗುತ್ತದೆ. ಎಫ್‌ಟಿಎಕ್ಸ್ ಕೇಂದ್ರ ಕಚೇರಿ ಬಹಾಮಸ್‌ನಲ್ಲಿದೆ. ರಾಯಲ್ ಬಹಾಮಸ್ ಪೊಲೀಸ್ ಪಡೆ ಎಫ್‌ಟಿಎಕ್ಸ್‌ನ ಹಗರಣದ ತನಿಖೆ ನಡೆಸುತ್ತಿದೆ. ಅಮೆರಿಕದ ನ್ಯಾಯ ಮತ್ತು ಸೆಕ್ಯೂರಿಟಿ ಎಂಡ್ ಎಕ್ಸ್‌ಚೇಂಜ್ ಕಮಿಷನ್ ಇಲಾಖೆ ಕೂಡ ತನಿಖೆ ನಡೆಸುತ್ತಿದೆ.

ಈ ತನಿಖೆ ಕಾರಣದಿಂದಲೇ ಬೈನಾನ್ಸ್ ಸಂಸ್ಥೆ ಎಫ್‌ಟಿಎಕ್ಸ್ ಅನ್ನು ಖರೀದಿಸುವ ಪ್ರಕ್ರಿಯೆಯಿಂದ ಹಿಂದಕ್ಕೆ ಸರಿದಿದ್ದು ಎನ್ನಲಾಗುತ್ತಿದೆ. ಈಗ ಎಫ್‌ಟಿಎಕ್ಸ್ ನೆರವಿಗೆ ಯಾವ ಹೂಡಿಕೆದಾರರೂ ಬರುತ್ತಿಲ್ಲ. ರಾಜಕಾರಣಿಗಳೂ ಕೂಡ ಎಫ್‌ಟಿಎಕ್ಸ್ ಮೇಲೆ ಕೆಂಗಣ್ಣು ಬೀರುತ್ತಿದ್ದಾರೆ.

ಎಫ್‌ಟಿಎಕ್ಸ್ ಈಗ ತನ್ನಲ್ಲಿರುವ ಎಲ್ಲಾ ಡಿಜಿಟಲ್ ಆಸ್ತಿಗಳನ್ನೂ ಕೋಲ್ಡ್ ವ್ಯಾಲೆಟ್‌ನಲ್ಲಿ ಇರಿಸುತ್ತಿರುವುದಾಗಿ ಹೇಳಿದೆ. ಕೋಲ್ಡ್ ವ್ಯಾಲಟ್ ಎಂದರೆ ಆನ್‌ಲೈನ್‌ನಲ್ಲಿ ಯಾರಿಗೂ ಸಿಗದ ರೀತಿಯಲ್ಲಿ ಆಫ್‌ಲೈನ್‌ನಲ್ಲಿ ಇರಿಸುವ ವ್ಯವಸ್ಥೆ. ಹ್ಯಾಕರ್ಸ್‌ನಿಂದ ತಪ್ಪಿಸಿಕೊಳ್ಳಲು ಈ ಕ್ರಮ ಇರಬಹುದು.

 

ದಿವಾಳಿ ಅರ್ಜಿ

ದಿವಾಳಿ ಅರ್ಜಿ

ಈಗ ಜನರ ಕ್ರಿಪ್ಟೋ ಹಣವನ್ನು ಮರಳಿಸಲು ಎಫ್‌ಟಿಎಕ್ಸ್‌ಗೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಮತ್ತು ಹೂಡಿಕೆದಾರರ ಸಹಾಯ ಪಡೆಯಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಅಮೆರಿಕದ ಕೋರ್ಟ್‌ನ್ಲಿ ಬ್ಯಾಂಕ್ರಪ್ಟ್ಸಿ ಫೈಲ್ ಮಾಡಿದ್ದಾರೆ. ತನ್ನ ಬಳಿ 10ರಿಂದ 50 ಬಿಲಿಯನ್ ಡಾಲರ್‌ವರೆಗೆ ಆಸ್ತಿ ಮತ್ತು ಸಾಲ ಇದೆ. ಒಂದು ಲಕ್ಷಕ್ಕೂ ಹೆಚ್ಚು ಸಾಲಗಾರರಿದ್ದಾರೆ ಎಂದು ಎಫ್‌ಟಿಎಕ್ಸ್ ತನ್ನ ಬ್ಯಾಂಕ್ರಪ್ಟ್ಸಿ ಫೈಲಿಂಗ್‌ನಲ್ಲಿ ತಿಳಿಸಿದೆ.

ಇದೀಗ ಕೋರ್ಟ್ ಉಸ್ತುವಾರಿಯಲ್ಲಿ ಎಫ್‌ಟಿಎಕ್ಸ್‌ನ ಎಲ್ಲಾ ಆಸ್ತಿಗಳ ಪರಿಶೀಲನೆಯಾಗಲಿದೆ. ಎಫ್‌ಟಿಎಕ್ಸ್‌ನಲ್ಲಿ ಕ್ರಿಪ್ಟೋ ಹಣ ಇರಿಸಿದ್ದ ಜನರಿಗೆ ಅವರ ಪಾಲಿನ ಆಸ್ತಿಯನ್ನು ಮರಳಿಸುವ ನಿಟ್ಟಿನಲ್ಲಿ ಪ್ರಯತ್ನಳಾಗಬಹುದು.

"ಎಫ್‌ಟಿಎಕ್ಸ್ ಗ್ರೂಪ್‌ನಲ್ಲಿ ಬಹಳಷ್ಟು ಮೌಲ್ಯದ ಆಸ್ತಿಗಳಿವೆ. ಸಂಘಟಿತವಾಗಿ ಮತ್ತು ಜಂಟಿ ಪ್ರಕ್ರಿಯೆ ಮೂಲಕ ಈ ಆಸ್ತಿಯನ್ನು ಬಳಸಿಕೊಳ್ಳಬಹುದು" ಎಂದು ಎಫ್‌ಟಿಎಕ್ಸ್‌ನ ನೂತನ ಸಿಇಒ ಜಾನ್ ಜೆ ರೇ ಹೇಳಿದ್ದಾರೆ.

ಕುತೂಹಲವೆಂದರೆ ಜಾನ್ ರೇ ಅವರು ಹಿಂದೆಲ್ಲಾ ದಿವಾಳಿ ಪ್ರಕರಣಗಳಲ್ಲಿ ಕೆಲಸ ಮಾಡುತ್ತಿದ್ದ ಲಾಯರ್. ಎಫ್‌ಟಿಎಕ್ಸ್ ಕುಸಿತ ಆದ ಬಳಿಕ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್ ಸಿಇಒ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಅದಾದ ಬಳಿಕ ಜಾನ್ ರೇ ಸಿಇಒ ಆಗಿದ್ದಾರೆ.

 

ಕ್ರಿಪ್ಟೋ ಎಕ್ಸ್‌ಚೇಂಜ್ ಎಂದರೇನು?

ಕ್ರಿಪ್ಟೋ ಎಕ್ಸ್‌ಚೇಂಜ್ ಎಂದರೇನು?

ಎಫ್‌ಟಿಎಕ್ಸ್, ಬೈನಾನ್ಸ್ ಮುಂತಾದವರು ಕ್ರಿಪ್ಟೋಕರೆನ್ಸಿಯಲ್ಲ. ಅವು ಕ್ರಿಪ್ಟೋ ಎಕ್ಸ್‌ಚೇಂಜ್ ಕಂಪನಿಗಳು. ಅಂದರೆ ಕ್ರಿಪ್ಟೋಕರೆನ್ಸಿಯ ವಹಿವಾಟು ನಡೆಸಲು ಇರುವ ವೇದಿಕೆ. ಸ್ಟಾಕ್ ಮಾರ್ಕೆಟ್‌ನಲ್ಲಿ ಸೆನ್ಸೆಕ್ಸ್ ಇತ್ಯಾದಿ ಇರುವ ಹಾಗೆ. ಆದರೆ, ಷೇರುಪೇಟೆಗೆ ಹೋಲಿಸಿದರೆ ಕ್ರಿಪ್ಟೋ ಎಕ್ಸ್‌ಚೇಂಜ್ ಸುರಕ್ಷಿತ ತಾಣವಲ್ಲ.

ಷೇರುಪೇಟೆಯಲ್ಲಿ ಹೂಡಿಕೆದಾರರ ಹಣ ಅವರ ನಿಯಂತ್ರಣದಲ್ಲಿಯೇ ಇರುತ್ತದೆ. ಆದರೆ, ಕ್ರಿಪ್ಟೋ ಎಕ್ಸ್‌ಚೇಂಜ್‌ನಲ್ಲಿ ಎಲ್ಲವೂ ಸಂಸ್ಥೆಯ ನಿಯಂತ್ರಣದಲ್ಲಿರುತ್ತದೆ. ಎಕ್ಸ್‌ಚೇಂಜ್‌ಗೆ ಬಂದಿರುವ ಫಂಡಿಂಗ್ ಅನ್ನು ಏನು ಬೇಕಾದರೂ ಮಾಡಲು ಅವಕಾಶ ಇರುತ್ತದೆ.

 

ಎಫ್‌ಟಿಟಿ ಕುಸಿತ

ಎಫ್‌ಟಿಟಿ ಕುಸಿತ

ಎಫ್‌ಟಿಎಕ್ಸ್‌ನ ಅಂಗಸಂಸ್ಥೆ ಅಲಾಮೆಡಾ ರೀಸರ್ಚ್‌ನಲ್ಲಿ ಎಫ್‌ಟಿಟಿ ಕ್ರಿಪ್ಟೋ ಆಸ್ತಿಯೇ ಹೆಚ್ಚಿತ್ತು. ಒಂದು ವಾರದ ಹಿಂದೆ ಎಫ್‌ಟಿಟಿ ಮೌಲ್ಯ 24 ಡಾಲರ್ ಇತ್ತು. ಈಗ ವಿವಾದ ಹೊರಬಂದ ಬಳಿಕ ಅದರ ಮೌಲ್ಯ 4 ಡಾಲರ್‌ಗೆ ಕುಸಿದುಹೋಗಿದೆ.

ಕ್ರಿಪ್ಟೋ ಆಸ್ತಿ ಬಲೂನಿನಂತೆಯೇ ಎಂದು ಕೆಲ ತಜ್ಞರು ಹೇಳುತ್ತಾರೆ. ಕ್ರಿಪ್ಟೋಕರೆನ್ಸಿಯನ್ನು ಸದ್ಯಕ್ಕೆ ನೈಜ ಆಸ್ತಿ ಎಂದು ಕರೆಯಲು ಸಾಧ್ಯ ಇಲ್ಲ. ಭೂಮಿ, ಚಿನ್ನ ಇತ್ಯಾದಿ ಆಸ್ತಿಗಳಿಗೆ ನಿರ್ದಿಷ್ಟ ಮೌಲ್ಯ ಇದೆ. ದೇಶದ ಕರೆನ್ಸಿಗಳಿಗೆ ನಿರ್ದಿಷ್ಟ ಮೌಲ್ಯ ಇದೆ. ಆದರೆ, ಕ್ರಿಪ್ಟೋ ನಾಣ್ಯಗಳಿಗೆ ಅಂಥ ಯಾವುದೇ ಮೌಲ್ಯ ಇರುವುದಿಲ್ಲ. ನೀರ ಮೇಲಿನ ಗುಳ್ಳೆಯಂತೆ ಇವು ಇರುತ್ತವೆ. ಯಾವಾಗ ಬೇಕಾದರೂ ಇವು ಮಾಯವಾಗಬಹುದು. ಯಾವುದೇ ನಿಯಂತ್ರಕ ವ್ಯವಸ್ಥೆ ಇಲ್ಲದೇ ಬೆಳೆಯುತ್ತಿರುವ ಕ್ರಿಪ್ಟೋ ಹಣ ಅಕ್ಷರಶಃ ಮಾಯಾಂಗನೆ ಎನ್ನಲು ಅಡ್ಡಿ ಇಲ್ಲ. ತಜ್ಞರು ಕೂಡ ಇದನ್ನೇ ಹೇಳುತ್ತಾರೆ.

 

English summary

Know Why Crypto Market Shaking, Why FTX Filed Bankruptcy In US Court

Crypto exchange company FTX has filed bankruptcy in the US court. Here is some explanation on how FTX has crashed to this stage.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X