ಲಕ್ಷ್ಮೀವಿಲಾಸ್ ಬ್ಯಾಂಕ್ ಠೇವಣಿದಾರರೇನೋ ಸೇಫ್; ಷೇರುದಾರರ ಸ್ಥಿತಿ ಏನು ಗೊತ್ತಾ?
ನಿರಂತರವಾಗಿ ಆರ್ಥಿಕವಾಗಿ ಒತ್ತಡಕ್ಕೆ ಸಿಲುಕಿಕೊಂಡಿದ್ದರಿಂದ ಲಕ್ಷ್ಮೀ ವಿಲಾಸ್ ಬ್ಯಾಂಕ್ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಂಗಳವಾರ (ನವೆಂಬರ್ 17, 2020) ಒಂದು ತಿಂಗಳು ಹಣ ವಿಥ್ ಡ್ರಾ ಮೇಲೆ ನಿರ್ಬಂಧ ವಿಧಿಸಲಾಗಿದೆ. ಬ್ಯಾಂಕ್ ನಲ್ಲಿ ಹಣ ಹಾಕಿದ್ದ ಹೂಡಿಕೆದಾರರ ಹಿತಾಸಕ್ತಿಯನ್ನು ಸಂಪೂರ್ಣ ರಕ್ಷಿಸಲಾಗುತ್ತದೆ.
ಆದರೆ, ಲಕ್ಷ್ಮೀವಿಲಾಸ್ ಬ್ಯಾಂಕ್ ಷೇರುದಾರರ ಸ್ಥಿತಿ ಮಾತ್ರ ಬಹಳ ಕಷ್ಟದಲ್ಲಿದೆ. ಬ್ಯಾಂಕ್ ಮೇಲೆ ಹಣ ವಿಥ್ ಡ್ರಾಗೆ ನಿರ್ಬಂಧ ಹಾಕಿದ ಮೇಲೆ ಆರ್ ಬಿಐನಿಂದಲೇ ಡಿಬಿಎಸ್ ಬ್ಯಾಂಕ್ ಇಂಡಿಯಾ ಜತೆಗೆ ಎಲ್ ವಿಬಿ ವಿಲೀನಕ್ಕೆ ಪ್ರಸ್ತಾವ ಮಾಡಿದೆ. ಈ ವಿಲೀನ ಪ್ರಕ್ರಿಯೆಗೆ ಕರಡು ಯೋಜನೆ ಸಿದ್ಧಪಡಿಸಲಾಗಿದೆ.
ಲಕ್ಷ್ಮೀವಿಲಾಸ್ ಬ್ಯಾಂಕ್ ಗೆ RBI ನಿರ್ಬಂಧ: ಠೇವಣಿ ವಾಪಸ್ ಸಿಗುತ್ತಾ?
ಅದರ ಪ್ರಕಾರ, ಡಿಬಿಎಸ್ ಬ್ಯಾಂಕ್ ನೇಮಕವಾದ ದಿನದಿಂದ ಲಕ್ಷ್ಮೀ ವಿಲಾಸ್ ಬ್ಯಾಂಕ್ ನ ಸಂಪೂರ್ಣ ಪೇಯ್ಡ್ ಅಪ್ ಷೇರು ಬಂಡವಾಳ, ಮೀಸಲು ಹಾಗೂ ಸರ್ಪ್ಲಸ್, ಷೇರು/ಸೆಕ್ಯೂರಿಟೀಸ್ ಪ್ರೀಮಿಯಂ ಖಾತೆಯು ರೈಟ್ ಆಫ್ ಮಾಡಬಹುದಾಗಿದೆ.
ಅದರ ಹೊರತಾಗಿ, ನೇಮಕವಾದ ದಿನದಿಂದಲೇ ವರ್ಗಾವಣೆ ಮಾಡಿದ ಬ್ಯಾಂಕ್ (ಎಲ್ ವಿಬಿ) ಕಾರ್ಯ ನಿರ್ವಹಣೆ ನಿಲ್ಲಿಸುತ್ತದೆ. ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಲಿಸ್ಟ್ ಆಗಿರುವ ಬ್ಯಾಂಕ್ ನ ಷೇರು ಅಥವಾ ಡಿಬೆಂಚರ್ ಡೀಲಿಸ್ಟ್ ಆಗುತ್ತವೆ. ಇನ್ನು ಮುಂದೆ ಲಕ್ಷ್ಮೀವಿಲಾಸ್ ಬ್ಯಾಂಕ್ ನಿಂದಾಗಲಿ ಅಥವಾ ಅದು ವಿಲೀನ ಆಗುವ ಬ್ಯಾಂಕ್ ನಿಂದಾಗಲೀ ಅಥವಾ ಬೇರೆ ಯಾವುದೇ ಅಧಿಕಾರಿಗಳ ಆದೇಶದಿಂದಾಗಲಿ ಇವುಗಳಿಗೆ ಸಂಬಂಧಿಸಿದಂತೆ ಯಾವ ಕಾರ್ಯ ಚಟುವಟಿಕೆ ಇರುವುದಿಲ್ಲ.
ಆದ್ದರಿಂದ ಈಗಿನ ಕರಡಿನ ಪ್ರಕಾರವೇ ಎಲ್ಲವೂ ನಡೆದಲ್ಲಿ ಡಿಬಿಎಸ್ ಬ್ಯಾಂಕ್ ಇಂಡಿಯಾದೊಳಗೆ ಲಕ್ಷ್ಮೀವಿಲಾಸ್ ಬ್ಯಾಂಕ್ ವಿಲೀನ ಆಗುತ್ತದೆ. ಆ ನಂತರ ಅದರ ಅಸ್ತಿತ್ವ ಅಲ್ಲಿಗೆ ಮುಗಿಯುತ್ತದೆ. ಇನ್ನು ಆರಂಭದಲ್ಲೇ ಹೇಳಿದಂತೆ ಲಕ್ಷ್ಮೀವಿಲಾಸ್ ಬ್ಯಾಂಕ್ ಷೇರು ಭಾರತೀಯ ಷೇರು ಮಾರ್ಕೆಟ್ ನಿಂದ ವಹಿವಾಟು ನಿಲ್ಲಿಸುತ್ತದೆ. ಬುಧವಾರದಂದು ಷೇರಿನ ಬೆಲೆ ಇಪ್ಪತ್ತು ಪರ್ಸೆಂಟ್ ಇಳಿಕೆ ಕಂಡಿತು. ಅದು ಹೀಗೇ ಕ್ರಮೇಣ ಶೂನ್ಯ ಆಗುತ್ತದೆ.
ಹಾಗೆ ನೋಡಿದರೆ ಈಕ್ವಿಟಿ ಷೇರುದಾರರು ಯಾವುದೇ ಕಂಪೆನಿಯ ನಿಜವಾದ ಮಾಲೀಕರು. ಆ ಕಂಪೆನಿ ಮುಳುಗಿದಾಗ ಅತಿ ಹೆಚ್ಚು ನಷ್ಟ ಆಗುವುದು ಸಹ ಅವರಿಗೇ. ಏಕೆಂದರೆ ಕಂಪೆನಿಯ ಉಳಿದೆಲ್ಲ ಜವಾಬ್ದಾರಿ ಪೂರೈಸಿದ ನಂತರ, ಏನಾದರೂ ಉಳಿದಲ್ಲಿ ಅದನ್ನು ಈಕ್ವಿಟಿ ಷೇರುದಾರರಿಗೆ ಹಂಚಲಾಗುತ್ತದೆ.
ಈಗ ಲಕ್ಷ್ಮೀವಿಲಾಸ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟವರಿಗೆ ಐದು ಲಕ್ಷ ರುಪಾಯಿ ತನಕ ಇನ್ಷೂರೆನ್ಸ್ ಕವರ್ ಆಗುತ್ತದೆ. ಅವರ ಹಣ ಸುರಕ್ಷಿತವಾಗಿದೆ ಎಂದು ಸ್ವತಃ ಆರ್ ಬಿಐ ಹೇಳಿದೆ. ಆದರೆ ಲಕ್ಷ್ಮೀವಿಲಾಸ್ ಬ್ಯಾಂಕ್ ಷೇರುಗಳಲ್ಲಿ ಹಣ ಹೂಡಿದ್ದವರ ಸ್ಥಿತಿ ಮಾತ್ರ ಚಿಂತಾಜನಕ. ಏಕೆಂದರೆ, ಅವರಿಗೆ ನಯಾ ಪೈಸೆ ಹಣ ಸಿಗುವುದಿಲ್ಲ.
ಕಳೆದ ಮಾರ್ಚ್ ನಲ್ಲಿಯೆಸ್ ಬ್ಯಾಂಕ್ ಸ್ಥಿತಿಯೂ ಹೀಗೇ ಇತ್ತು. ಆಗ ಅದರ ನೆರವಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತಿತರ ಸಂಸ್ಥೆಗಳು ಬಂದವು. ಹಾಗೂ ಬಂಡವಾಳ ಪೂರೈಸಲು ಷೇರು ಖರೀದಿ ಮಾಡಿದವು. ಆ ಕಾರಣಕ್ಕೆ ಯೆಸ್ ಬ್ಯಾಂಕ್ ಮತ್ಯಾವುದೇ ಹಣಕಾಸು ಸಂಸ್ಥೆಯೊಂದಿಗೆ ವಿಲೀನ ಆಗಿಲ್ಲ. ಅದರ ಅಸ್ತಿತ್ವವನ್ನೂ ಉಳಿಸಿಕೊಂಡಿತು. ಅದರ ಜತೆಗೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಯೆಸ್ ಬ್ಯಾಂಕ್ ಷೇರು ವಹಿವಾಟು ಸಹ ಮುಂದುವರಿಯಿತು.