ಮುಂದುವರಿದ ಉದ್ಯೋಗ ನಷ್ಟ: ಓಲಾ, ಕ್ರಿಪ್ಟೋ ಡಾಟ್ ಕಾಮ್‌ನಲ್ಲಿ ಉದ್ಯೋಗ ಕಡಿತ
ಜಾಗತಿಕವಾಗಿ ಉದ್ಯೋಗ ಕಡಿತ ಮುಂದುವರಿದಿದೆ. ಈಗಾಗಲೇ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತ ಮಾಡುತ್ತಿದೆ. ಈಗ ಓಲಾ ಹಾಗೂ ಕ್ರಿಪ್ಟೋ ಡಾಟ್ ಕಾಮ್‌ನಲ್ಲಿಯೂ ಉದ್ಯೋಗ ಕಡಿತ ಮುಂದುವರಿದಿದೆ. ಕ್ರೀಪ್ಟೋ ಡಾಟ್ ಕಾಮ್ ಸುಮಾರು ಶೇಕಡ 20ರಷ್ಟು ಹಾಗೂ ಓಲಾದಲ್ಲಿ ಸುಮಾರು 200 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುವುದು ಎಂದು ಘೋಷಣೆ ಮಾಡಲಾಗಿದೆ.
ಪ್ರಸ್ತುತ ಹಲವಾರು ಸಂಸ್ಥೆಗಳು ನಷ್ಟದಲ್ಲಿದೆ. ಎಫ್‌ಟಿಎಕ್ಸ್ ಕುಸಿತವಾದ ಬಳಿಕ ಕ್ರಿಪ್ಟೋ ಸಂಸ್ಥೆಗಳು ಕೂಡಾ ನಷ್ಟವನ್ನು ಕಂಡಿದೆ. ತಮ್ಮ ಸಂಸ್ಥೆಯಲ್ಲಿ ಸುಮಾರು ಶೇಕಡ 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗುವುದು ಎಂದು ಶುಕ್ರವಾರ ಹೇಳಿದೆ. ಸಿಂಗಾಪುರ ಮೂಲಕದ ಸಂಸ್ಥೆಯು ಮಾರುಕಟ್ಟೆಯಲ್ಲಿ ಉಂಟಾದ ನಷ್ಟದ ಕಾರಣದಿಂದಾಗಿ ಈ ಘೋಷಣೆಯನ್ನು ಮಾಡಿದೆ.
ಕಾಯಿನ್‌ಬೇಸ್ ಗ್ಲೋಬಲ್ ಇನ್ಕ್ ಮತ್ತು ಹೌಬಿ ತಮ್ಮ ಸಂಸ್ಥೆಯಲ್ಲಿ ಶೇಕಡ 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಲಾಗುವುದು ಎಂದು ಘೋಷಣೆ ಮಾಡಿದೆ. ಇದಾದ ಬಳಿಕ ಸಿಂಗಾಪುರ ಮೂಲದ ಈ ಸಂಸ್ಥೆಯು ಕ್ರೀಪ್ಟೋ ಡಾಟ್ ಕಾಮ್ ಸಂಸ್ಥೆಯು ಉದ್ಯೋಗ ಕಡಿತವನ್ನು ಘೋಷಿಸಿದೆ. ಇನ್ನು ಜೆನೆಸೀಸ್ ಸುಮಾರು ಶೇಕಡ 30ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಘೋಷಣೆ ಮಾಡಿದೆ.

ಇನ್ನು ಕಳೆದ ಬಾರಿ ಆರು ತಿಂಗಳಿಗೂ ಮುನ್ನ ಕ್ರಿಪ್ಟೋ ಡಾಟ್ ಕಾಮ್ ಉದ್ಯೋಗ ಕಡಿತ ಮಾಡಿತ್ತು. ಈ ಬಗ್ಗೆ ಮಾಹಿತಿ ನೀಡಿದ ಕ್ರಿಪ್ಟೋ ಡಾಟ್ ಕಾಮ್‌ನ ಸಿಇಒ ಕ್ರಿಸ್ ಮಾರ್ಸ್‌ಝಲೆಕ್, "ಇತ್ತೀಚೆಗೆ ಎಫ್‌ಟಿಎಕ್ಸ್ ಕುಸಿತವಾಗಿರುವುದು ಇಂಡಸ್ಟ್ರಿಯಲ್ಲಿ ಭಾರೀ ನಷ್ಟ ಉಂಟಾಗಿದೆ," ಎಂದು ತಿಳಿಸಿದ್ದಾರೆ. ಸ್ಯಾಮ್ ಬ್ಯಾಂಕ್‌ಮನ್ ಫ್ರೆಡ್ಸ್ ವಿರುದ್ಧ ಆರೋಪಗಳ ಬಳಿಕ 2022ರಲ್ಲಿ ಕ್ರಿಪ್ಟೋ ಇಂಡಸ್ಟ್ರಿ ಭಾರೀ ಕುಗ್ಗಿದೆ.
ಓಲಾದಲ್ಲಿ 200 ಉದ್ಯೋಗಿಗಳ ವಜಾ
ಓಲಾದಲ್ಲಿಯೂ ಉದ್ಯೋಗ ಕಡಿತ ಮುಂದುವರಿದಿದೆ. ಓಲಾ ಕ್ಯಾಬ್, ಓಲಾ ಎಲೆಕ್ಟ್ರಿಕ್, ಓಲಾ ಹಣಕಾಸು ಸೇವೆ ಸಂಸ್ಥೆಯು 200 ಮಂದಿಯನ್ನು ಉದ್ಯೋಗದಿಂದ ಕಡಿತ ಮಾಡುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸಂಸ್ಥೆಯಲ್ಲಿ ಉದ್ಯೋಗ ಕಡಿತ ಮುಂದುವರಿದಿದೆ. "ಪ್ರಸ್ತುತ ಸಂಸ್ಥೆಯಲ್ಲಿ 2 ಸಾವಿರ ಇಂಜಿನಿಯರ್‌ಗಳು ಇದ್ದಾರೆ. ಮುಂದಿನ 18 ತಿಂಗಳಲ್ಲಿ 5000 ಮಂದಿಯನ್ನು ನೇಮಕಾತಿ ಮಾಡುವ ಚಿಂತನೆಯಿದೆ," ಎಂದು ತಿಳಿಸಿದ್ದಾರೆ.
ಈಗಾಗಲೇ ಟ್ವಿಟ್ಟರ್, ಅಮೆಜಾನ್, ಗೋಲ್ಡ್‌ಮ್ಯಾನ್ ಸ್ಯಾಚ್ಸ್, ಗೂಗಲ್, ಮೆಟಾ ಮೊದಲಾದ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ನಡೆದಿದೆ. ಅಮೆಜಾನ್‌ನಲ್ಲಿ ಸುಮಾರು 18 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ, ಈ ಪೈಕಿ ಭಾರತದಲ್ಲಿ ಒಂದು ಸಾವಿರ ಮಂದಿಯನ್ನು ಉದ್ಯೋಗದಿಂದ ತೆಗೆದುಹಾಕಲಾಗುತ್ತಿದೆ.