ವಿಜಯ್ ಮಲ್ಯ ಬಳಿಕ ರಾಷ್ಟ್ರದ 2ನೇ ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿ ಗುರುತಿಸಿಕೊಂಡಿರುವ ನೀರವ್ ಮೋದಿಯ 2,400 ಕೋಟಿ ರುಪಾಯಿ ಬೆಲೆ ಬಾಳುವ ಆಸ್ತಿಯನ್ನು ಸದ್ಯದಲ್ಲೇ ಹರಾಜು ಹಾಕುವ ಸಾಧ್ಯತೆ ಇದೆ.
ಮುಂಬೈ ವಿಶೇಷ ನ್ಯಾಯಾಲಯವು ನೀರವ್ ಮೋದಿಯನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿದ ಬಳಿಕ ಈಗ ಅವನ ಎರಡು ಆಸ್ತಿಗಳಾದ ಕಲಾ ಘೋಡಾದಲ್ಲಿನ ರಿದಮ್ ಹೌಸ್ ಮತ್ತು ವರ್ಲಿ ನಿವಾಸವನ್ನು ಹರಾಜು ಹಾಕಲು ಇಡಿ ಮುಂದಾಗಿದೆ.

ವಿಶೇಷ ಮನಿ ಲಾಂಡರಿಂಗ್ ಕಾಯ್ದೆ ಅಡಿಯಲ್ಲಿ ನೀರವ್ ಮೋದಿಯನ್ನು ಆರ್ಥಿಕ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದ ಬಳಿಕ, 2,400 ಕೋಟಿ ಮೌಲ್ಯದ ನೀರವ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಇಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಈ ಅರ್ಜಿ ವಿಚಾರಣೆಯು ಜನವರಿ 10ಕ್ಕೆ ನಡೆಯಲಿದೆ.
49 ವರ್ಷದ ನೀರವ್ ಮೋದಿ ಮತ್ತು ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಮತ್ತು ಇತರರು ಪಿಎನ್‌ಬಿ ಬ್ಯಾಂಕಿನ 13,000 ಕೋಟಿ ರುಪಾಯಿ ವಂಚನೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ. ಕಳೆದ ವರ್ಷ ಜನವರಿ 1ರಂದು ಮೋದಿ ದೇಶ ತೊರೆದಿದ್ದು, ಹಿಂದಿರುಗಲು ಯಾವುದೇ ಒಲವು ತೋರಿಸದ ಕಾರಣ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯನ್ನು ಈ ಪ್ರಕರಣದಲ್ಲಿ ಅನ್ವಯಿಸಲಾಗಿದೆ.
ಇಡಿ ಆಸ್ತಿಯನ್ನು ಒಮ್ಮೆ ಮುಟ್ಟುಗೋಲು ಹಾಕಿಕೊಂಡ ಬಳಿಕ ಅದನ್ನು ಸರ್ಕಾರಕ್ಕೆ ಸೇರಿಸಲಾಗುತ್ತದೆ. ಹರಾಜಿನ ಮೊತ್ತವನ್ನು ವಂಚಿಸಿದ ಮೊತ್ತಕ್ಕೆ ಸರಿಹೊಂದಿಸಲಾಗುತ್ತದೆ.


Click it and Unblock the Notifications