ಚೀನಾದ ಫೋನ್ ಆಯ್ತು, ಪಟಾಕಿ ಆಯ್ತು ಈಗ ಭಾರತಕ್ಕೆ ಏನು ಬರ್ತಿದೆ ಗೊತ್ತಾ?
ಚೀನಾ ದೇಶದ ಅಗ್ಗದ ಫೋನ್, ಬೊಂಬೆ ಮತ್ತೊಂದು ಅಂತ ಭಾರತೀಯ ಮಾರುಕಟ್ಟೆಗೆ ಬಂದಾಗಿದೆ. ಇದೀಗ ಹೊಸ ವರ್ಷಕ್ಕೆ ಚೀನಾದ ಈರುಳ್ಳಿಯನ್ನು ಬರಮಾಡಿಕೊಳ್ಳುವ ಸರದಿ ಭಾರತೀಯರದು. ದೇಶೀ ಮಾರುಕಟ್ಟೆಯಲ್ಲಿ ಈರುಳ್ಳಿ ಕೇಜಿಗೆ ಎಂಬತ್ತರಿಂದ ನೂರು ರುಪಾಯಿ ಇದ್ದು, ಚೀನಾದಿಂದ ಈರುಳ್ಳಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ಎಂಎಂಟಿಸಿ ಮೂಲಕ 'ದಿ ಪ್ರಿಂಟ್'ಗೆ ದೊರೆತಿರುವ ಮಾಹಿತಿಯ ಪ್ರಕಾರ, ಜಾಗತಿಕವಾಗಿ ಹನ್ನೊಂದು ಸಾವಿರ ಮೆಟ್ರಿಕ್ ಟನ್ ಗೆ ಟೆಂಡರ್ ನೀಡಲಾಗಿತ್ತು. ಅದರಲ್ಲಿ ಚೀನಾಗೆ ನಾಲ್ಕು ಸಾವಿರ ಮೆಟ್ರಿಕ್ ಟನ್ ಹಾಗೂ ಟರ್ಕಿಗೆ ಏಳು ಸಾವಿರ ಮೆಟ್ರಿಕ್ ಟನ್ ರಫ್ತು ಮಾಡಲು ಅವಕಾಶ ಸಿಕ್ಕಿತ್ತು.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಮಾತನಾಡಿ, ಜನವರಿ ಕೊನೆ ಹೊತ್ತಿಗೆ ಈರುಳ್ಳಿ ಭಾರತಕ್ಕೆ ಬರಬೇಕಿದೆ. ಆ ಈರುಳ್ಳಿಯ ಬೆಲೆ ಭಾರತದಲ್ಲಿ ಕೇಜಿಗೆ ಎಪ್ಪತ್ತರಿಂದ ಎಂಬತ್ತು ರುಪಾಯಿ ಇರಲಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಾಗಲೇ ನೆದರ್ಲ್ಯಾಂಡ್ಸ್, ಈಜಿಪ್ಟ್, ಇರಾನ್, ಟರ್ಕಿ ಮತ್ತು ರಷ್ಯಾದಿಂದ ಆಮದು ಮಾಡಿಕೊಳ್ಳಲು ಆರ್ಡರ್ ಮಾಡಲಾಗಿದೆ.

ಎಂಎಂಟಿಸಿಯಿಂದ ಮುಖ್ಯವಾಗಿ ಲೋಹಗಳು ಮತ್ತು ಖನಿಜಗಳನ್ನು ಆಮದು- ರಫ್ತು ಮಾಡಲಾಗುತ್ತದೆ. ಆದರೆ ಈರುಳ್ಳಿ ಬೆಳೆ ಕಡಿಮೆಯಾಗಿ, ಬೆಲೆ ಕೇಜಿಗೆ ನೂರಾ ಇಪ್ಪತ್ತು ರುಪಾಯಿ ದಾಟಿದ ಮೇಲೆ ಈರುಳ್ಳಿ ಖರೀದಿಗೆ ಸೂಚನೆ ನೀಡಲಾಗಿದೆ. "ಮಹಾರಾಷ್ಟ್ರ ಹಾಗೂ ಗುಜರಾತ್ ಈರುಳ್ಳಿ ಬೆಳೆಯುವ ಮುಖ್ಯ ರಾಜ್ಯಗಳು. ಅಲ್ಲಿ ವಿಪರೀತ ಮಳೆಯಾಗಿದ್ದರಿಂದ ಬೆಳೆ ನಷ್ಟವಾಗಿ, ಪೂರೈಕೆಯಲ್ಲಿ ವ್ಯತ್ಯಯವಾಗಿದೆ" ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.