ವೇಗದ ಡೇಟಾ ನೀಡುವ ಏರ್ ಟೆಲ್, ವೊಡಾಫೋನ್ ಪ್ಲ್ಯಾನ್ ಗಳಿಗೆ ಟ್ರಾಯ್ ತಡೆ
ಭಾರ್ತಿ ಏರ್ ಟೆಲ್ ಟೆಲಿಕಾಂ ಕಂಪೆನಿಯ ಪ್ಲಾಟಿನಂ ಹಾಗೂ ವೊಡಾಫೋನ್ ಐಡಿಯಾದ RedX ಪ್ಲಾನ್ ಗಳಿಗೆ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (ಟ್ರಾಯ್) ತಡೆಯೊಡ್ಡಿದೆ. ಈ ಪ್ಲ್ಯಾನ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಗ್ರಾಹಕರಿಗೆ ವೇಗದ ಡೇಟಾ ಮತ್ತು ಆದ್ಯತೆಯ ಸೇವೆ ಒದಗಿಸುವ ಉದ್ದೇಶ ಇತ್ತು. ಹೆಚ್ಚಿನ ದರ ಪಾವತಿಸುವ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಈ ರೀತಿ ಸೇವೆ ಒದಗಿಸುವ ಪ್ರಸ್ತಾವ ಇಡಲಾಗಿತ್ತು.
ಏರ್ ಟೆಲ್ ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ವೇಗದ 4G ಡೇಟಾ ಸೇವೆ
ಆದರೆ, ಈ ರೀತಿ ಮಾಡುವುದರಿಂದ ನಿಯಮ ಉಲ್ಲಂಘಿಸಿದಂತಾಗುತ್ತದೆ. ಇಂಥ ಪ್ಲ್ಯಾನ್ ಗಳ ಆಚೆ ಇರುವ ಗ್ರಾಹಕರಿಗೆ ಸಿಗುವ ಸೇವೆಯ ಗುಣಮಟ್ಟದ ಮೇಲೆ ಪ್ರಭಾವ ಆಗುತ್ತದೆ ಎಂದು ಟ್ರಾಯ್ ಹೇಳಿದೆ. ಆದರೆ ಹಿರಿಯ ಟೆಲಿಕಾಂ ಅನಲಿಸ್ಟ್ ವೊಬ್ಬರು ಈ ಬಗ್ಗೆ ಮಾತನಾಡಿ, ಇದರಿಂದ ನೆಟ್ ನ್ಯೂಟ್ರಾಲಿಟಿಯ ಯಾವ ನಿಯಮವನ್ನು ಉಲ್ಲಂಘಿಸಿದಂತೆ ಆಗುವುದಿಲ್ಲ. ದುಬಾರಿ ಸಬ್ ಸ್ಕ್ರಿಪ್ಷನ್ ಗೆ ಉತ್ತಮ ಸೇವೆಯನ್ನು ಯಾವಾಗಲೂ ನೀಡಬಹುದು ಎಂದಿದ್ದಾರೆ.
ಭಾರ್ತಿ ಏರ್ ಟೆಲ್ ಜುಲೈ 6ನೇ ತಾರೀಕು ಘೋಷಣೆಯೊಂದನ್ನು ಮಾಡಿತ್ತು. 499 ರುಪಾಯಿ ಹಾಗೂ ಅದಕ್ಕೆ ಮೇಲ್ಪಟ್ಟ ಪ್ರೀಮಿಯಂ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ 4G ವೇಗದ ಡೇಟಾ ಹಾಗೂ ಇನ್ನಿತರ ಆದ್ಯತೆ ಸೇವೆಗಳನ್ನು ಒದಗಿಸುವುದಾಗಿ ಹೇಳಿತ್ತು. ಅದೇ ರೀತಿ ವೊಡಾಫೋನ್ ನಿಂದ 2019ರ ನವೆಂಬರ್ ನಲ್ಲಿ 999 ರುಪಾಯಿ ಪ್ಲ್ಯಾನ್ ಪರಿಚಯಿಸಲಾಗಿತ್ತು. ಅದರಲ್ಲಿ 50% ಹೆಚ್ಚು ವೇಗ ಮತ್ತು ವಿಶೇಷ ಸೇವೆಗಳನ್ನು ನೀಡುವ ಆಫರ್ ನೀಡಲಾಗಿತ್ತು. ಈ ಪ್ಲ್ಯಾನ್ ದರವನ್ನು ಮೇ ತಿಂಗಳಲ್ಲಿ 100 ರುಪಾಯಿ ಹೆಚ್ಚಿಸಲಾಯಿತು.
ಎರಡೂ ಕಂಪೆನಿಗಳು ಆವರೇಜ್ ರೆವೆನ್ಯೂ ಪರ್ ಯೂಸರ್ (ARPU) ಹೆಚ್ಚಿಸಿಕೊಳ್ಳುವ ಪ್ರಯತ್ನವಾಗಿ ಇದನ್ನು ಮಾಡಿದ್ದವು.