For Quick Alerts
ALLOW NOTIFICATIONS  
For Daily Alerts

ಕೇಂದ್ರದಿಂದ ಜಿಎಸ್ ಟಿ ಪರಿಹಾರ ನೀಡದಿದ್ದಲ್ಲಿ ರಾಜ್ಯಗಳ ಸ್ಥಿತಿ ಏನು?

|

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಮುಂದಿನ ಕೆಲ ಸಮಯ ರಾಜ್ಯಗಳಿಗೆ ನೀಡಬೇಕಾದ ಜಿಎಸ್ ಟಿ ಪರಿಹಾರವನ್ನು ಕೊಡಲು ಕೇಂದ್ರಕ್ಕೆ ಸಾಧ್ಯ ಆಗದಿರಬಹುದು ಎಂದು ಮಂಗಳವಾರ ಸಂಸದೀಯ ಸಮಿತಿಗೆ ತಿಳಿಸಲಾಗಿದೆ ಎಂದು ವರದಿ ಆಗಿದೆ.ಹಾಗೊಂದು ವೇಳೆ ಆದರೆ ರಾಜ್ಯಗಳ ಸ್ಥಿತಿ ಏನು?

ಹಣಕಾಸು ಸ್ಥಾಯಿ ಸಮಿತಿಗೆ ಹಣಕಾಸು ಕಾರ್ಯದರ್ಶಿ ಅಜಯ್ ಭೂಷಣ್ ಪಾಂಡೆ ಇದನ್ನು ಹೇಳಿದ್ದಾರೆ: ಸದ್ಯದ ಆದಾಯ ಹಂಚಿಕೆ ಸೂತ್ರದಲ್ಲಿ ರಾಜ್ಯಗಳಿಗೆ ಜಿಎಸ್ ಟಿ ಪರಿಹಾರ ನೀಡುವ ಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇಲ್ಲ ಎಂಬುದು ಒಟ್ಟಾರೆ ಸಾರಾಂಶ.

ಲಾಕ್ ಡೌನ್ ಹಾಗೂ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ತೆರಿಗೆ ಸಂಗ್ರಹದಲ್ಲಿ ಗಮನಾರ್ಹ ಇಳಿಕೆ ಆಗಿದೆ ಅನ್ನೋದು ಈಗಿನ ಸ್ಥಿತಿಯ ಕಾರಣ. ಭಾರತದಲ್ಲಿ ಬೆಳವಣಿಗೆ ಸಾಧಿಸುತ್ತಿರುವ ಕಂಪೆನಿಗಳು ಹಾಗೂ ಆವಿಷ್ಕಾರಗಳಿಗೆ ಹಣಕಾಸು ನೆರವು ನೀಡುವ ಬಗ್ಗೆ ಒಂದು ಸಭೆ ಕರೆಯಲಾಗಿತ್ತು. ಆ ವೇಳೆ, ವಿರೋಧ ಪಕ್ಷಗಳ ಸದಸ್ಯರು ರಾಜ್ಯಗಳಿಗೆ ಜಿಎಸ್ ಟಿ ಪರಿಹಾರ ನೀಡುವ ವಿಚಾರ ಪ್ರಸ್ತಾವ ಮಾಡಿದಾಗ, ಸರ್ಕಾರ ಮೇಲ್ಕಂಡಂತೆ ತಿಳಿಸಿದೆ.

ರಾಜ್ಯಗಳಿಗೆ ಜಿಎಸ್ ಟಿ ಪರಿಹಾರ ಪಾವತಿ ಸಾಧ್ಯ ಆಗದಿರಬಹುದು ಎಂದ ಕೇಂದ್ರರಾಜ್ಯಗಳಿಗೆ ಜಿಎಸ್ ಟಿ ಪರಿಹಾರ ಪಾವತಿ ಸಾಧ್ಯ ಆಗದಿರಬಹುದು ಎಂದ ಕೇಂದ್ರ

ರಾಜ್ಯ ಸರ್ಕಾರಗಳಿಗೆ ಪರಿಹಾರ ಭರಿಸುವಷ್ಟರ ಮಟ್ಟದಲ್ಲಿ ಆರ್ಥಿಕತೆ ಇಲ್ಲ ಎಂದು ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿರುವುದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿತ್ತು. ಈ ಬೆಳವಣಿಗೆಯ ಬಗ್ಗೆ ಮಾಹಿತಿ ಹೊರಬಿದ್ದದ್ದು ಕೇಂದ್ರ ಸರ್ಕಾರವು ಮಾರ್ಚ್ ತಿಂಗಳ ಜಿಎಸ್ ಟಿ ಮೊತ್ತ 13,806 ಕೋಟಿ ರುಪಾಯಿ ಬಿಡುಗಡೆ ಮಾಡಿದ ಒಂದು ದಿನದ ನಂತರ.

1.65 ಲಕ್ಷ ಕೋಟಿ ರುಪಾಯಿ ಬಿಡುಗಡೆ

1.65 ಲಕ್ಷ ಕೋಟಿ ರುಪಾಯಿ ಬಿಡುಗಡೆ

2019- 20ನೇ ಸಾಲಿನಲ್ಲಿ ಒಟ್ಟಾರೆಯಾಗಿ 1.65 ಲಕ್ಷ ಕೋಟಿ ರುಪಾಯಿ ಬಿಡುಗಡೆ ಮಾಡಿರುವುದಾಗಿ ಕೇಂದ್ರ ಹೇಳಿದೆ. ಈ ಅವಧಿಯಲ್ಲಿ ಸಂಗ್ರಹಿಸಲಾದ ಸೆಸ್ 95,444 ಕೋಟಿ ರುಪಾಯಿ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಜಿಎಸ್ ಟಿ ಸಂಗ್ರಹ 41% ಕಡಿಮೆ ಆಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಆದ ತೆರಿಗೆ ಸಂಗ್ರಹದ ಶೇಕಡಾ 59ರಷ್ಟು ಮಾತ್ರ ಆದಾಯವಾಗಿ ಕೇಂದ್ರಕ್ಕೆ ಬಂದಿದೆ. ಜಿಎಸ್ ಟಿ ಕಾನೂನಿನ ಪ್ರಕಾರ, ಜಿಎಸ್ ಟಿ ಜಾರಿಯಾದ 2017 ಜುಲೈ 1ರಿಂದ ಐದು ವರ್ಷಗಳ ಕಾಲ ಆಗುವ ಯಾವುದೇ ಆದಾಯ ನಷ್ಟವನ್ನು ಭರಿಸುವುದಾಗಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಭರವಸೆ ನೀಡಿತ್ತು. ಅಂದರೆ ಪರಿಹಾರ ನೀಡುವುದಾಗಿ ಹೇಳಿತ್ತು. 2015-16ನೇ ಆರ್ಥಿಕ ವರ್ಷವನ್ನು ಮೂಲ ವರ್ಷ ಎಂದು ಪರಿಗಣಿಸಿ, 14% ವಾರ್ಷಿಕ ಬೆಳವಣಿಗೆ ಅಂತ ಅಂದಾಜು ಮಾಡಿ, ಆದಾಯ ಕೊರತೆಯನ್ನು ಲೆಕ್ಕ ಹಾಕಲಾಗುತ್ತಿತ್ತು. ಆ ಲೆಕ್ಕದಂತೆ ಪ್ರತಿ ಎರಡು ತಿಂಗಳಿಗೊಮ್ಮೆ ಜಿಎಸ್ ಟಿ ಪರಿಹಾರವನ್ನು ಕೇಂದ್ರ ಸರ್ಕಾರ ಪಾವತಿಸಬೇಕು.

ಸೆಸ್ ನಿಂದ ಬಂದ ಮೊತ್ತದಲ್ಲಿ ಪರಿಹಾರ ಪಾವತಿ

ಸೆಸ್ ನಿಂದ ಬಂದ ಮೊತ್ತದಲ್ಲಿ ಪರಿಹಾರ ಪಾವತಿ

ಜಿಎಸ್ ಟಿ ರಚನೆ ಪ್ರಕಾರ, 5, 12, 18 ಹಾಗೂ 28 ಈ ರೀತಿ ತೆರಿಗೆಯ ನಾಲ್ಕು ಸ್ಲ್ಯಾಬ್ ಗಳಿವೆ. ಅತಿ ಹೆಚ್ಚಿನ ತೆರಿಗೆ ಸ್ಲ್ಯಾಬ್ ಮೇಲೆ ಸೆಸ್ ಹಾಕಲಾಗುತ್ತದೆ. ಆ ಸೆಸ್ ನಿಂದ ಬರುವ ಮೊತ್ತವನ್ನು ರಾಜ್ಯಗಳ ಆದಾಯ ನಷ್ಟವನ್ನು ಭರಿಸಲು ಬಳಸಲಾಗುತ್ತದೆ. ಇನ್ನು ಆಮದು ಮಾಡಿಕೊಂಡ ಉತ್ಪನ್ನಗಳ ಮೇಲೆ ಹಾಕುವ ಸೆಸ್ ಅನ್ನು ಜಿಎಸ್ ಟಿ ಜಾರಿ ಮಾಡಿದ್ದರಿಂದ ಆಗುವ ಆದಾಯ ನಷ್ಟವನ್ನು ಭರಿಸಲು ಬಳಸಲಾಗುತ್ತದೆ. ಈ ರೀತಿ ಸೆಸ್ ನಿಂದ ಸಂಗ್ರಹ ಆಗುವ ಮೊತ್ತವು ರಾಜ್ಯಗಳಿಗೆ ಆದಾಯ ನಷ್ಟ ಭರಿಸುವುದಕ್ಕೆ ಸಾಕಾಗುತ್ತದೆ ಎಂಬ ನಿರೀಕ್ಷೆ ಇರಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಸರ್ಕಾರ ಈಚೆಗೆ ಪರಿಹಾರ ಬಿಡುಗಡೆ ಮಾಡಿತ್ತು. ಆ ಕಂತಿನ ಮೊತ್ತ ಪಾವತಿಗೆ 42% ಕೊರತೆ ಬಂದಿತ್ತು. ಈ ಹಿಂದಿನ ವರ್ಷಗಳ ಸೆಸ್ ಬಾಕಿ ಹಾಗೂ ಭಾರತದ ಸಮಗ್ರ ನಿಧಿಯಿಂದ ಪರಿಹಾರ ಮೊತ್ತವನ್ನು ರಾಜ್ಯಗಳಿಗೆ ವರ್ಗಾವಣೆ ಮಾಡಲಾಯಿತು. ಜಿಎಸ್ ಟಿ ಪರಿಹಾರವನ್ನು ಸರಿಯಾದ ಸಮಯಕ್ಕೆ ಪಾವತಿಸಬೇಕು ಎಂದು ಹಲವು ರಾಜ್ಯಗಳು ಧ್ವನಿ ಎತ್ತಿದ್ದವು. ಈ ಅಸಮಾಧಾನವು ಕಳೆದ ವರ್ಷದಿಂದ ಜಾಸ್ತಿ ಆಗಿದೆ.

ರಾಜ್ಯಗಳ ಆದಾಯದಲ್ಲಿ ದೊಡ್ಡ ಮಟ್ಟದ ಕುಸಿತ

ರಾಜ್ಯಗಳ ಆದಾಯದಲ್ಲಿ ದೊಡ್ಡ ಮಟ್ಟದ ಕುಸಿತ

"ನಮ್ಮ ರಾಜ್ಯದ ಆದಾಯದಲ್ಲಿ ದೊಡ್ಡ ಮಟ್ಟದ ಕುಸಿತವಾಗಿದೆ. ಕೇಂದ್ರದಿಂದ ಜಿಎಸ್ ಟಿ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಬೇಕು" ಎಂದು ತೆಲಂಗಾಣ ಹಣಕಾಸು ಸಚಿವ ಹರೀಶ್ ರಾವ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ ಹೇಳಿದ್ದರು. ಜಿಎಸ್ ಟಿ ಪರಿಹಾರ ಪಾವತಿ ವಿಚಾರವಾಗಿಯೇ ಕೇರಳ ಸರ್ಕಾರವು ಧ್ವನಿ ಎತ್ತಿತ್ತು. ಈ ವರ್ಷದ ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್ (GSDP) ನಿರೀಕ್ಷೆ ಮಾಡಿದ್ದಕ್ಕಿಂತ ಇಪ್ಪತ್ತು ಪರ್ಸೆಂಟ್ ಕಡಿಮೆ ಆಗುತ್ತದೆ ಎಂದು ಅಲ್ಲಿನ ಹಣಕಾಸು ಸಚಿವರು ಹೇಳಿದ್ದಾರೆ. ಯಾವಾಗ ಲಾಕ್ ಡೌನ್ ಕಾರಣಕ್ಕೆ ಜಿಎಸ್ ಟಿ ಆದಾಯ ಗಣನೀಯವಾಗಿ ಕುಸಿಯಿತೋ ಆಗ ರಾಜ್ಯ ಸರ್ಕಾರಗಳ ಗಮನ ಇತ್ತ ಹರಿಯಿತು. ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ರಾಜ್ಯ ಸರ್ಕಾರಗಳ ಪಾಲಿನ ಖರ್ಚು ಹೆಚ್ಚಾಗಿದೆ. ಇಂಥ ಸಂದರ್ಭದಲ್ಲಿ ಹಣಕಾಸಿನ ಅಗತ್ಯ ಹೆಚ್ಚಾಯಿತು. ಮಾರ್ಚ್ ತಿಂಗಳ ಪರಿಹಾರ ಪಾವತಿ ಮಾಡಿರುವುದು ಸ್ವಲ್ಪ ನಿರಾಳ ಆಗುವಂತೆ ಮಾಡಿದೆ. ಇನ್ನು ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ಸಹ ಸ್ಥಳೀಯ ಕೆಲಸಗಳಿಗೆ ಬಳಸಲು ಭಾರತದ ಸಮಗ್ರ ನಿಧಿಗೆ ವರ್ಗಾವಣೆ ಮಾಡಲಾಗುತ್ತಿದೆ. ಈ ಮಧ್ಯೆ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಮಾತನಾಡಿ, ಈಗಿನ ಸನ್ನಿವೇಶಕ್ಕೆ ಕೇಂದ್ರ ಬಜೆಟ್ ಪ್ರಸ್ತುತ ಅಲ್ಲ. ಏಕೆಂದರೆ ಆದಾಯದ ಅಂದಾಜಿನ ಮೇಲೆ ಅದನ್ನು ಸಿದ್ಧಪಡಿಸಲಾಗಿರುತ್ತದೆ ಎಂದಿದ್ದಾರೆ.

ಕರ್ನಾಟಕದಿಂದ 12,000 ವಸತಿ ನಿವೇಶನ ಹರಾಜು

ಕರ್ನಾಟಕದಿಂದ 12,000 ವಸತಿ ನಿವೇಶನ ಹರಾಜು

ಒಂದು ರಾಜ್ಯಕ್ಕೆ ಬರುವ ಆದಾಯ ಮೂಲದಲ್ಲಿ ಜಿಎಸ್ ಟಿ ಪಾಲು 60%. ಆದ್ದರಿಂದಲೇ ಜಿಎಸ್ ಟಿ ಪರಿಹಾರವು ಮುಖ್ಯ ಪಾತ್ರವನ್ನು ವಹಿಸುತ್ತದೆ. ಆರ್ಥಿಕ ಹಿಂಜರಿತದಿಂದ ರಾಜ್ಯಗಳು ಸಂಕಷ್ಟದಲ್ಲಿ ಇದ್ದವು. ಅದರ ಜತೆಗೆ ಬಂದ ಕೊರೊನಾ ಬಿಕ್ಕಟ್ಟು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿತು. ರಾಜ್ಯಗಳಿಗೆ ಇರುವ ಮುಖ್ಯ ಆದಾಯ ಮೂಲಗಳೆಂದರೆ ಜಿಎಸ್ ಟಿ, ಮಾರಾಟ ತೆರಿಗೆ, ಮೋಟಾರ್ ವಾಹನ ತೆರಿಗೆ ಹಾಗೂ ಅಬಕಾರಿ ಸುಂಕ. ಲಾಕ್ ಡೌನ್ ಕಾರಣದಿಂದಾಗಿ ಅಬಕಾರಿ ಸುಂಕ, ಮೋಟಾರು ವಾಹನ ತೆರಿಗೆ ಮುಂತಾದವು ಸಂಗ್ರಹ ಆಗಿಲ್ಲ. ಮದ್ಯ ಮಾರಾಟ ಆರಂಭಿಸಿದಾಗ ರಾಜ್ಯ ಸರ್ಕಾರಕ್ಕೆ ಆದಾಯ ಬಂತು. ಆರಂಭದಲ್ಲಿ ಬೇಡಿಕೆ ಬಂದು, ಆ ನಂತರ ಇಳಿಯಿತು. ಈಗಾಗಲೇ ಪೆಟ್ರೋಲ್- ಡೀಸೆಲ್ ಮೇಲೆ ಕೇಂದ್ರ ಸರ್ಕಾರ ಭಾರೀ ಪ್ರಮಾಣದಲ್ಲಿ ಅಬಕಾರಿ ಸುಂಕ ಹಾಕಿರುವುದರಿಂದ ರಾಜ್ಯ ಸರ್ಕಾರಗಳಿಗೆ ಇನ್ನೂ ಹೆಚ್ಚಿನ ತೆರಿಗೆ ಹಾಕಲು ಸಾಧ್ಯವಿಲ್ಲ. ಆದರೆ ಇವುಗಳಿಂದ ರಾಜ್ಯಗಳಿಗೆ ಬರುವ ತೆರಿಗೆ ಏನೇನೂ ಸಾಕಾಗುತ್ತಿಲ್ಲ. ರಾಜ್ಯಗಳು ವೇತನ ಪಾವತಿ ಮುಂದಕ್ಕೆ ಹಾಕಿವೆ. ಮದ್ಯದ ಮೇಲೆ ತೆರಿಗೆ ಹೆಚ್ಚಿಸಿವೆ. ಕರ್ನಾಟಕದಲ್ಲಿ ಆದಾಯ ಸಂಗ್ರಹಿಸಲು 12,000 ವಸತಿ ನಿವೇಶನಗಳನ್ನು ಹರಾಜು ಹಾಕಲು ಮುಂದಾಗಿದೆ.

ಹೆಚ್ಚಿನ ಸಾಲ ಮಾಡಬಹುದು, ಆದರೆ ಷರತ್ತುಗಳಿವೆ

ಹೆಚ್ಚಿನ ಸಾಲ ಮಾಡಬಹುದು, ಆದರೆ ಷರತ್ತುಗಳಿವೆ

ಏಪ್ರಿಲ್ ನಿಂದ ಈಚೆಗೆ ಕರ್ನಾಟಕದ ಆದಾಯದಲ್ಲಿ 40% ಇಳಿಕೆ ಆಗಿದೆ. ಆದರೆ ಈಗಲೂ ಉಳಿದ ರಾಜ್ಯಗಳಿಗಿಂತ ಕರ್ನಾಟಕದ ನಿರ್ವಹಣೆ ರೀತಿ ಅತ್ಯುತ್ತಮವಾಗಿದೆ. ಏಪ್ರಿಲ್ ನಿಂದ ಜುಲೈ ತನಕ ಕರ್ನಾಟಕದ ಜಿಎಸ್ ಟಿ ಸಂಗ್ರಹ 18,737 ಕೋಟಿ ರುಪಾಯಿ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 27,766 ಕೋಟಿ ಸಂಗ್ರಹ ಆಗಿತ್ತು. ಅದೇ ರೀತಿ ತೆಲಂಗಾಣಕ್ಕೆ ಈ ವರ್ಷ 1080 ಕೋಟಿ ಸಂಗ್ರಹ ಆಗಿದ್ದರೆ, ಕಳೆದ ವರ್ಷದ ಇದೇ ಅವಧಿಯಲ್ಲಿ 5,226.90 ಕೋಟಿ ರುಪಾಯಿ ಸಂಗ್ರಹವಾಗಿತ್ತು. ಕೇಂದ್ರ ಸರ್ಕಾರ ಹೇಳಿರುವ ಪ್ರಕಾರ, ಕಳೆದ ವರ್ಷದ ಜೂನ್ ಗೆ ಹೋಲಿಸಿದರೆ ಈ ವರ್ಷ ಜಿಎಸ್ ಟಿ ಸಂಗ್ರಹ 9% ಕಡಿಮೆ ಆಗಿದೆ. ಮೇ ತಿಂಗಳಲ್ಲಿ 62% ಹಾಗೂ ಏಪ್ರಿಲ್ ನಲ್ಲಿ 28% ಕಡಿಮೆ ಆಗಿದೆ. ಆಂದ್ರಪ್ರದೇಶ, ತೆಲಂಗಾಣ, ಕರ್ನಾಟಕ, ಪಂಜಾಬ್, ಛತ್ತೀಸ್ ಗಢ, ಮಧ್ಯಪ್ರದೇಶ, ಬಿಹಾರ ಹಾಗೂ ಅಸ್ಸಾಮ್ ನಂಥ ರಾಜ್ಯಗಳಲ್ಲಿ ಕಳೆದ ವರ್ಷ ಜೂನ್ ಗೆ ಹೋಲಿಸಿದರೆ ಸಂಗ್ರಹದಲ್ಲಿ ಏರಿಕೆಯಾಗಿದೆ. ಇತರ ಹಲವು ರಾಜ್ಯಗಳಲ್ಲಿ ಇಳಿಕೆಯಾಗಿದೆ. ಒಂದು ವೇಳೆ ರಾಜ್ಯಗಳು ಸಾಲ ಪಡೆಯಬೇಕು ಅಂದರೆ, ಆ ರಾಜ್ಯಗಳ ಗ್ರಾಸ್ ಸ್ಟೇಟ್ ಡೊಮೆಸ್ಟಿಕ್ ಪ್ರಾಡಕ್ಟ್ (GSDP) 5% ಮೀರುವಂತಿಲ್ಲ. ಅದು ಕೂಡ ಕೇಂದ್ರ ಸರ್ಕಾರವು ಹಣಕಾಸು ವರ್ಷ 2021ಕ್ಕೆ ಮಾತ್ರ ನೀಡಿರುವ ಅನುಮತಿ ಇದು. ಈ ಹಿಂದೆ ಅದು 3% ಇತ್ತು. ಅದನ್ನು 5%ಗೆ ಹೆಚ್ಚಿಸಲಾಯಿತು. ಒಂದು ವೇಳೆ ಸಾಲ ಪ್ರಮಾಣ 3.5% ದಾಟಿದಲ್ಲಿ ಕೆಲವು ಷರತ್ತುಗಳಿವೆ.

ಹಣದ, ಸಂಪನ್ಮೂಲದ ಕೊರತೆ ಕಾಡುತ್ತದೆ

ಹಣದ, ಸಂಪನ್ಮೂಲದ ಕೊರತೆ ಕಾಡುತ್ತದೆ

ಕೇರಳ ಹಣಕಾಸು ಸಚಿವರು ಮೇ ತಿಂಗಳಲ್ಲಿ ಹೇಳಿದ ಪ್ರಕಾರ, ಕೊರೊನಾದಿಂದ ಆ ರಾಜ್ಯಕ್ಕೆ 35,000 ಕೋಟಿಗೂ ಹೆಚ್ಚು ನಷ್ಟವಾಗಿದೆ. ಇನ್ನು ಸಾಲದ ರೂಪದಲ್ಲಿ ಪಡೆದರೆ 18,000 ಕೋಟಿ ಮಾತ್ರ ಸಿಗುತ್ತದೆ. "ಇದು ನಮ್ಮ ನಷ್ಟದಲ್ಲಿನ ಅರ್ಧ ಮಾತ್ರ. ಆದ್ದರಿಂದ ರಾಜ್ಯದ ಜಿಎಸ್ ಟಿ ಪಾಲು ಪೂರ್ತಿಯಾಗಿ ನೀಡಬೇಕು ಎಂದು ಒತ್ತಾಯಿಸಿದ್ದೇವೆ" ಎಂದು ಅವರು ಹೇಳಿದ್ದಾರೆ. ಆದರೆ ಹೆಚ್ಚುವರಿ ಸಾಲ ಪಡೆಯುವುದಕ್ಕೆ ಇರುವ ನಿಬಂಧನೆಗಳನ್ನು ಪೂರೈಸುವುದು ರಾಜ್ಯ ಸರ್ಕಾರಗಳಿಗೆ ಸುಲಭ ಇಲ್ಲ ಎನ್ನುತ್ತಾರೆ ಹದಿನಾಲ್ಕನೇ ಹಣಕಾಸು ಆಯೋಗದ ಸದಸ್ಯ ಎಂ. ಗೋವಿಂದ ರಾವ್. ಒಂದು ವೇಳೆ ಸಾಲ ಪಡೆದುಕೊಳ್ಳಬೇಕು ಎಂಬ ನಿಬಂಧನೆ ಪೂರೈಸಲು ಮುಂದಾದರೆ ಬಂಡವಾಳ ವೆಚ್ಚ ತಗ್ಗುತ್ತದೆ ಎನ್ನುತ್ತಾರೆ. ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ರಾಜ್ಯ ಸರ್ಕಾರಗಳಿಗೆ ಹಣದ ಹಾಗೂ ಸಂಪನ್ಮೂಲದ ಅಗತ್ಯ ಕೂಡ ಹೆಚ್ಚಾಗುತ್ತದೆ.

English summary

What If Central Government Not Able To Pay GST Compensation To States

According to report, central government said, it is not in a position to pay GST compensation. How it will impact on states?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X