ಐ.ಟಿ. ಸೇವೆ ಒದಗಿಸುವ, ಬೆಂಗಳೂರು ಮೂಲದ ಕಂಪೆನಿ ವಿಪ್ರೋ ನೀಡಿರುವ ಮಾಹಿತಿ ಪ್ರಕಾರ, ಡಿಸೆಂಬರ್ 29ರಿಂದ ಷೇರು ಮರುಖರೀದಿ (ಬೈಬ್ಯಾಕ್) ಆರಂಭವಾಗಲಿದೆ. ಜನವರಿ 11, 2021ಕ್ಕೆ ಕೊನೆ ಆಗಲಿದೆ ಎಂದು ತಿಳಿಸಲಾಗಿದೆ. ವಿಪ್ರೋದ 23.75 ಕೋಟಿ ಷೇರುಗಳನ್ನು ತಲಾ 400 ರುಪಾಯಿಯಂತೆ ಮರು ಖರೀದಿಸಲು ಒಟ್ಟಾರೆ 9500 ಕೋಟಿ ರುಪಾಯಿಗೆ ಷೇರುದಾರರು ಕಳೆದ ತಿಂಗಳು ಒಪ್ಪಿಗೆ ಸೂಚಿಸಿದ್ದರು.
"ಈ ಹಿಂದೆ ಬೈಬ್ಯಾಕ್ ಕುರಿತು ಕಳಿಸಿದ್ದ ಮನವಿಗೆ ಸೆಕ್ಯೂರಿಟೀಸ್ ಅಂಡ್ ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾದಿಂದ ಡಿಸೆಂಬರ್ 21, 2020ಕ್ಕೆ ಅಂತಿಮ ಅಭಿಪ್ರಾಯ ಬಂದಿದೆ. ಅರ್ಹ ಷೇರುದಾರರಿಗೆ ಕಂಪೆನಿಯಿಂದ ಲೆಟರ್ ಆಫ್ ಆಫರ್ (ಮರುಖರೀದಿ ಪ್ರಸ್ತಾವ ಪತ್ರ) ಕಳುಹಿಸಲಾಗುವುದು," ಎಂದು ಕಂಪೆನಿ ಹೇಳಿದೆ.
ಷೇರು ಮರುಖರೀದಿಗೆ ಡಿಸೆಂಬರ್ 11, 2020 ಅನ್ನು ಅರ್ಹತೆ ನಿರ್ಧರಿಸುವುದಕ್ಕೆ ರೆಕಾರ್ಡ್ ದಿನಾಂಕ ಎಂದು ನಿಗದಿ ಮಾಡಲಾಗಿದೆ. ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಬಿಡ್ ಗಳ ತೀರುವಳಿ ಜನವರಿ 20, 2021 ಅಥವಾ ಅದಕ್ಕಿಂತ ಮುಂಚೆ ಆಗಬೇಕು.

ಕಳೆದ ವರ್ಷ ವಿಪ್ರೋದಿಂದ 32.31 ಕೋಟಿ ಷೇರುಗಳನ್ನು ತಲಾ 325 ರುಪಾಯಿಯಂತೆ ಒಟ್ಟಾರೆ 10,500 ಕೋಟಿ ರುಪಾಯಿಗೆ ಮರುಖರೀದಿ ಮಾಡಲಾಗಿತ್ತು. ಅದಕ್ಕೂ ಮುಂಚೆ 2017ರಲ್ಲಿ 11,000 ಕೋಟಿ ರುಪಾಯಿ ಮತ್ತು 2016ರಲ್ಲಿ 2500 ಕೋಟಿ ರುಪಾಯಿಗೆ ಬೈಬ್ಯಾಕ್ ಮಾಡಿತ್ತು.


Click it and Unblock the Notifications