Englishहिन्दी മലയാളം தமிழ் తెలుగు

ನೆಮ್ಮದಿಯ ಜೀವನಕ್ಕಾಗಿ ಈ ಹವ್ಯಾಸಗಳನ್ನು ತಪ್ಪದೇ ಅಳವಡಿಸಿಕೊಳ್ಳಿ..

Written By: Siddu
Subscribe to GoodReturns Kannada

ಬಾಳಿನಲ್ಲಿ ಏನೇ ಸಾಧಿಸಿದರೂ ನೆಮ್ಮದಿಯ ನಾಳೆಗಾಗಿ ಮಾತ್ರ ಆರ್ಥಿಕ ಸದೃಢತೆ ತುಂಬಾ ಅಗತ್ಯ. ಬಾಳಿನ ಸಂಜೆ ಸುಖಕರವಾಗಿರಬೇಕೆಂದರೆ ಚಿಕ್ಕ ವಯಸ್ಸಿನಲ್ಲಿಯೇ ಉತ್ತಮ ಹವ್ಯಾಸಗಳನ್ನು ಅನುಸರಿಸುತ್ತಾ ಬರಬೇಕು. ಆರ್ಥಿಕ ಭದ್ರತೆಯೇ ಮನುಷ್ಯನನ್ನು ಹೆಚ್ಚು ಸದೃಢನನ್ನಾಗಿಸುತ್ತದೆ. ಅದಕ್ಕಾಗಿಯೇ ಖರ್ಚುವೆಚ್ಚಗಳನ್ನು ಹೇಗೆ ನಿಭಾಯಿಸುತ್ತೇವೆ ಎಂಬುದರ ಮೇಲೆ ಈ ಆರ್ಥಿಕ ಸ್ಥಿರತೆ ಹಾಗೂ ಸುರಕ್ಷತೆ ಅವಲಂಬಿಸಿದೆ.

ನಮಗೆ ಮೊದಲ ಕೆಲಸ ಸಿಕ್ಕಾಗ ಹೊರ ಜಗತ್ತಿನಲ್ಲಿ ನಮ್ಮ ವೈಯಕ್ತಿಕ ಖರ್ಚುಗಳು ಇಷ್ಟಾಗಬಹುದೆಂಬ ಅಂದಾಜು ನಮಗಾಗುವುದಿಲ್ಲ. ನಿಧಾನವಾಗಿ, ಈ ಖರ್ಚುಗಳು ಒಂದಾದ ಮೇಲೊಂದರಂತೆ ಆವರಿಸುತ್ತಾ ಬರುತ್ತವೆ ಹಾಗೂ ಹೊರ ಜಗತ್ತಿನ ಆಕರ್ಷಣೆಗಳಿಗೆ ಬಲಿಯಾಗುತ್ತೇವೆ. ಆದರೆ ಚಿಕ್ಕ ವಯಸ್ಸಿನಿಂದಲೇ ಅನಾವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕಿ ಸೂಕ್ತವಾದ ಆರ್ಥಿಕ ನೀತಿಗಳನ್ನು ಅನುಸರಿಸುತ್ತಾ ಬಂದರೆ ನಮ್ಮ ಭವಿಷ್ಯದಲ್ಲಿ ಎದುರಾಗುವ ಯಾವುದೇ ಪರಿಸ್ಥಿತಿ ಅಥವಾ ಅವಕಾಶಗಳನ್ನು ಎದುರಿಸಲು ಸಾಮರ್ಥ್ಯ ದೊರಕುವುದು ಮಾತ್ರವಲ್ಲ, ಮಾನಸಿಕವಾದ ಬೆಂಬಲವೂ ದೊರಕುತ್ತದೆ. ಜೀವನದಲ್ಲಿ ಸಿಕ್ಕಾಪಟ್ಟೆ ದುಡ್ಡು ಮಾಡಬೇಕು ಅಂತಿರಾ? ಈ 10 ಸಂಗತಿ ಮರಿಬೇಡಿ..

ಇದಕ್ಕೆ ಜಾದೂ ದಂಡ ಅಥವಾ ಅಲ್ಲಾವುದ್ದೀನನ ಮಾಯಾದೀಪವೇನೂ ಬೇಕಾಗಿಲ್ಲ. ನಿಮ್ಮ ಆದಾಯ ಮತ್ತು ಖರ್ಚುಗಳನ್ನು ಸರಿದೂಗಿಸುವ ಜಾಣ್ಮೆ ಹಾಗೂ ಅನಾವಶ್ಯಕ ಖರ್ಚುಗಳೂ ಬೇಡ ಎನ್ನುವ ಮನೋಬಲ ಇದ್ದರೆ ಸಾಕು. ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಖಕರವಾಗಿಸಬಹುದು.

ಈ ನಿಟ್ಟಿನಲ್ಲಿ ಆರ್ಥಿಕ ತಜ್ಞರು ನೀಡುವ ಆರು ಸೂತ್ರಗಳನ್ನು ಒಂದು ನಿಯಮದಂತೆ ಪಾಲಿಸಿಕೊಂಡು ಬರುತ್ತಿದ್ದರೆ, ನಿಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುವುದು ಮಾತ್ರವಲ್ಲ ನಿಮ್ಮ ಯೋಜನೆಗಳು ಸಫಲವೂ ಆಗುತ್ತವೆ.

1. ಬಜೆಟ್ ರೂಪಿಸಿ ಮತ್ತು ಅದಕ್ಕೆ ಬದ್ದರಾಗಿರಿ

ನೀವು ಬದ್ದರಾಗಬೇಕಾಗಿರುವ ಆರ್ಥಿಕ ಸೂತ್ರಗಳಲ್ಲಿ ಇದು ಪ್ರಥಮ ಆದ್ಯತೆಯ ಸೂತ್ರವಾಗಿದೆ. ಅರ್ಥಿಕ ಸ್ವಾತಂತ್ರ್ಯಕ್ಕೆ ಒಂದು ಆಯವ್ಯಯದ ಲೆಕ್ಕಾಚಾರ ಅಥವಾ ಬಜೆಟ್ ಒಂದನ್ನು ಹಮ್ಮಿಕೊಳ್ಳುವುದು ಅಡಿಪಾಯವಾಗಿದೆ. ಸರಳ ಶಬ್ದಗಳಲ್ಲಿ ಹೇಳಬೇಕೆಂದರೆ ಒಂದು ನಿಗದಿತ ಅವಧಿಯಲ್ಲಿ ನಿಮ್ಮ ಆದಾಯ ಮತ್ತು ಖರ್ಚುಗಳನ್ನು ಪರಿಗಣಿಸಿ ಇದರ ಸಾಧಕ ಬಾಧಕಗಳ ರೂಪುರೇಶೆಗಳನ್ನು ಹಾಕಿಕೊಳ್ಳುವುದು. ಒಂದು ಬಜೆಟ್ ಇದ್ದು ಆ ಪ್ರಕಾರವೇ ನಡೆದುಕೊಳ್ಳುತ್ತಾ ಬಂದರೆ ನಿಮ್ಮ ಅರ್ಥಿಕ ಗುರಿಗಳನ್ನು ಸುಲಭವಾಗಿ ಮುಟ್ಟಬಹುದು.

ನಿಮ್ಮ ಬಜೆಟ್ ಈ ವಿಷಯಗಳನ್ನು ಅವಲಂಬಿಸಿರುತ್ತದೆ:
ಮಾಸಿಕ ಆದಾಯ:
ನಿಮ್ಮ ನಿಯಮಿತವಾದ ಮಾಸಿಕ ವೇತನವೆಷ್ಟು? ನಿಮಗೆ ಇನ್ನೂ ಯಾವುದಾದರೂ ಪರ್ಯಾಯ ಆದಾಯ ಅಥವಾ ಪರೋಕ್ಷ ಗಳಿಕೆ ಇದೆಯೇ?
ಮಾಸಿಕ ಖರ್ಚು:
ಬಾಡಿಗೆ, ಮೊಬೈಲ್ ವೆಚ್ಚ, ವಿದ್ಯುತ್, ಸಾಲದ ಮಾಸಿಕ ಕಂತು, ದಿನಸಿ, ಬಟ್ಟೆಬರೆ, ಮನರಂಜನೆ ಇತ್ಯಾದಿಗಳು.
ಮಾಸಿಕ ಉಳಿತಾಯ: ಒಂದು ಸಾಮಾನ್ಯವಾದ ತಿಂಗಳಲ್ಲಿ ನಿಮ್ಮ ಉಳಿತಾಯ ಎಷ್ಟು?
ಯಾವುದೇ ಕುಟುಂಬಕ್ಕೆ ಮೇಲಿನ ಖರ್ಚುಗಳು ಎಲ್ಲಾ ತಿಂಗಳಲ್ಲಿ ಸರಿಸಮನಾಗಿರಲು ಸಾಧ್ಯವೇ ಇಲ್ಲ. ಕೊಂಚ ಹೆಚ್ಚು ಕಡಿಮೆ ಅನುಸರಿಸಿ, ವಾರ್ಷಿಕ ಸರಾಸರಿಯನ್ನು ಪರಿಗಣಿಸುವ ಮೂಲಕ ಈ ಲೆಕ್ಕಗಳನ್ನು ಒಂದು ಹಂತದಲ್ಲಿರುವಂತೆ ನೋಡಿಕೊಳ್ಳಬೇಕು. ಆ ಪ್ರಕಾರ ನಿಮ್ಮ ಬಜೆಟ್ ನಿಗದಿಪಡಿಸಬೇಕು. ಆದರೆ ಬಜೆಟ್ ಇಲ್ಲದೇ ಇರುವುದು ಮಾತ್ರ ಸಲ್ಲದು. ಪ್ರತಿದಿನ 100 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೆ ಓದಿ..

2. ಹಾಸಿಗೆ ಇದ್ದಷ್ಟು ಕಾಲು ಚಾಚುವುದು

ಇದು ನಮ್ಮ ಹಿರಿಯರು ಸದಾ ಹೇಳುತ್ತಾ ಬಂದಿರುವ ಅನುಭವದ ಮಾತು. ಇದನ್ನು ಕಡೆಗಣಿಸುವ ಮೂಲಕ ಭಾರಿ ಆರ್ಥಿಕ ಗಂಡಾಂತರವೇ ಎದುರಾಗಬಹುದು. ಇದರ ಪರಿಣಾಮ ಪ್ರಾರಂಭದಲ್ಲಿ ಚಿಕ್ಕದಾಗಿ ತೋರಿದ್ದು ಹೆಚ್ಚಿನವರು ಕಡೆಗಣಿಸುತ್ತಾರೆ. ಆದರೆ ಮುಂದೊಂದು ದಿನ ಇದು ಬುಡವನ್ನೇ ಕಡಿದು ಬಿಡುವಷ್ಟು ಭಾರಿಯಾದ ಭಾರವಾಗಿ ಪರಿಗಣಿಸಬಹುದು. ಹಿರಿಯರ ಈ ಮಾತನ್ನು ನಾವು ಎಷ್ಟು ಬೇಗ ಕಲಿತು ಮನಗಾಣುತ್ತೇವೋ ಅಷ್ಟೇ ಉತ್ತಮ ಹಾಗೂ ನೆಮ್ಮದಿಯ ಜೀವನ ಸಾಗಿಸಬಹುದು.

ಈ ಬಗ್ಗೆ ಬೆಂಜಮಿನ್ ಫ್ರಾಂಕ್ಲಿನ್ ರವರು ಹೀಗೆ ಹೇಳುತ್ತಾರೆ: "ನಿಮ್ಮ ಚಿಕ್ಕ ಚಿಕ್ಕ ಖರ್ಚುಗಳ ಬಗ್ಗೆಯೂ ಕಾಳಜಿ ಇರಲಿ. ನೆನಪಿರಲಿ, ಒಂದು ಚಿಕ್ಕ ತೂತು ಸಹಾ ದೊಡ್ಡ ಹಡಗನ್ನೇ ಮುಳುಗಿಸಿಬಿಡಬಲ್ಲುದು"

ಈ ಮಾತನ್ನು ಸಮರ್ಥಿಸಲು ಕೆಲವು ಉದಾಹರಣೆಗಳನ್ನು ನೋಡೋಣ:
* ಜಾಹೀರಾತುಗಳಿಗೆ ಭಾವನಾತ್ಮಕವಾಗಿ ಬಲಿಯಾಗದೆ ನಿಮಗೆ ಅಗತ್ಯವಿದ್ದರೆ ಮಾತ್ರ, ಉತ್ತಮ ಗುಣಮಟ್ಟದ್ದನ್ನು ಕೊಳ್ಳಿ.
* ನಿಮ್ಮ ಕ್ರೆಡಿಟ್ ಕಾರ್ಡ್ ನಿಂದ ಕೊಳ್ಳುವಾಗ ನಿಮ್ಮ ಮಿತಿಗಳನ್ನು ಅರಿತೇ ಮುಂದುವರೆಯಿರಿ.
* ನಿಯಮಿತವಾಗಿ ನಿಮ್ಮ ಖರ್ಚುವೆಚ್ಚಗಳ ಬಗ್ಗೆ ಗಮನ ಹರಿಸಿ.
* ನಿಮ್ಮ ಆದಾಯದ ಮಿತಿಯೊಳಗೇ ಖರ್ಚು ಮಾಡಲು ಕಲಿತಾಗ, ಭವಿಷ್ಯ ಭದ್ರತೆಗಾಗಿ ಉಳಿತಾಯ ಮಾಡುತ್ತಿರಿ.

3. ಬಿಲ್ ಗಳನ್ನು ದಿನಾಂಕ ಮೀರುವ ಮುನ್ನ ಪಾವತಿಸಿ

ನಿಮ್ಮ ಆರ್ಥಿಕ ಬದ್ದತೆಗೆ ಇದು ತುಂಬಾ ಅಗತ್ಯವಾಗಿದೆ. ನಿತ್ಯ ಜೀವನದ ಅಗತ್ಯಗಳಾದ ವಿದ್ಯುತ್, ನೀರು, ಮೊಬೈಲ್, ಇಎಂಐ ಮೊದಲಾದ ಕೆಲವಾರು ಸೇವೆಗಳಿಗೆ ನಾವು ಪಾವತಿಸಬೇಕಾದ ಬಿಲ್ಲುಗಳಿಗೆ ಕಡೆಯ ದಿನಾಂಕ ಎಂದೊಂದಿರುತ್ತದೆ. ಸಾಮಾನ್ಯವಾಗಿ ನಾವೆಲ್ಲರೂ ಈ ಕಡೆಯ ದಿನಾಂಕಕ್ಕೆ ಮುನ್ನ ಕಟ್ಟಿಬಿಟ್ಟರೆ ಸಾಕಲ್ಲ, ಅರ್ಜೆಂಟ್ ಏನಿದೆ ಎಂದೇ ಪ್ರತಿಕ್ರಿಯಿಸುತ್ತೇವೆ. ಆದರೆ ಈ ಕಡೆಗಣನೆ ನಮಗೆ ದುಭಾರಿಯಾಗಬಹುದು. ಅಂತಿಮ ದಿನಾಂಕ ದಾಟಿ ಹೋದರೂ ಈ ಬಿಲ್ಲು ಪಾವತಿಯಾಗಲಿಲ್ಲ ಎಂಬ ಕಾರಣಕ್ಕೆ ವಿದ್ಯುತ್ ನಿಲುಗಡೆ, ಪರಿಣಾಮವಾಗಿ ಸುತ್ತಮುತ್ತಲಿನವರಿಂದ ಭಾರೀ ಮುಜುಗರಕ್ಕೆ ಒಳಗಾಗಬಹುದು. ತಡವಾಗಿ ಹಣ ಕಟ್ಟಿದರೂ ದಂಡ ಕಟ್ಟಬೇಕಾಗಿ ಬಂದು ಹೆಚ್ಚು ಹಣ ತೆರಬೇಕಾಗಬಹುದು. ಆದ್ದರಿಂದ ಅಂತಿಮ ದಿನಾಂಕಕ್ಕಾಗಿ ಕಾಯದೆ ಯಾವಾಗ ಸಾಧ್ಯವೋ ಅಷ್ಟು ಬೇಗನೇ ಕಟ್ಟಿ ಬಿಡುವುದೇ ಮೇಲು. ಅಷ್ಟಿಲ್ಲದೇ ನಮ್ಮ ಹಿರಿಯರು "ಸುಡಬೇಕಾದ ಹೆಣ, ಕೊಡಬೇಕಾದ ಹಣ ಎಷ್ಟು ಬೇಗ ಮುಗಿಸಿದರೆ ಅಷ್ಟೂ ಒಳ್ಳೆಯದು" ಎಂದು ಹೇಳಿಲ್ಲವೇ!

ಈ ಬದ್ದತೆಯನ್ನು ಸಾಧಿಸುವುದೇನೂ ಕಷ್ಟಕರವಾದ ವಿಷಯವಲ್ಲ. ನಿಮ್ಮ ಬಿಲ್ಲುಗಳನ್ನು ಕಾಲಕಾಲಕ್ಕೆ ಸರಿಯಾಗಿ ಪರೀಕ್ಷಿಸಿ ಸರಿಯಾಗಿ ಪಾವತಿಸುತ್ತಾ ಬಂದಿದ್ದೀರೋ ಎಂದು ಪರಿಶೀಲಿಸುವುದು. ಹಣ ಉಳಿತಾಯ ಮಾಡಲು ಬಯಸುವವರು ಈ ತಪ್ಪುಗಳನ್ನು ಮಾಡಲೇಬೇಡಿ

4. ಸಾಲ ಪಡೆಯದಿರುವುದು ಅಥವಾ ಸಾಲ ನೀಡದಿರುವುದು

ಸಾಲ ಪಡೆದಾಗ ಮೇಲೋಗರವುಂಡಂತೆ ಸಾಲಿಗರು ಬಂದಾಗ ಕಿಬ್ಬದಿಯ ಕೀಲು ಮುರಿದಂತೆ ಎಂದು ಸರ್ವಜ್ಞ ಆ ಕಾಲದಲ್ಲಿಯೇ ಹೇಳಿದ್ದಾನೆ. ನಿಮ್ಮ ಆದಾಯಕ್ಕೆ ಮೀರಿದ ಖರ್ಚು ನಿಮ್ಮದಾಗಿದ್ದರೆ ಇದನ್ನು ಸರಿದೂಗಿಸಲು ಸಾಲ ಮಾಡದೇ ನಿರ್ವಾಹವಿಲ್ಲ. ಪ್ರಾರಂಭದಲ್ಲಿ ಆತ್ಮೀಯರ, ಸ್ನೇಹಿತರ ಹತ್ತಿರ ಪಡೆಯುವ ಕೈಸಾಲ ಬರುತ್ತಾ ಬರುತ್ತಾ ಬ್ಯಾಂಕಿನಲ್ಲಿ ದೊಡ್ಡ ಮೊತ್ತದ ಸಾಲಕ್ಕೆ ನಾಂದಿಯಾಗುತ್ತದೆ. ಮೇಲೆ ಹೇಳಿದಂತೆ ಹಾಸಿಗೆ ಇದ್ದಷ್ಟು ಕಾಲು ಚಾಚದೇ ಇದ್ದರೆ ಈ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಅನಿವಾರ್ಯ ಕಾರಣಗಳ ಹೊರತಾಗಿ ಸಾಲ ಪಡೆಯದಿರುವುದೇ ಒಳ್ಳೆಯದು. ಒಂದು ವೇಳೆ ಕೈಸಾಲ ಪಡೆದರೂ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೇ ಹಿಂದಿರುಗಿಸಿಬಿಡಬೇಕು. ಇಲ್ಲದಿದ್ದರೆ ಸ್ನೇಹ, ಆತ್ಮೀಯತೆಯನ್ನೂ ಈ ಪುಡಿಗಾಸಿಗೆ ಕಳೆದುಕೊಳ್ಳಬೇಕಾಗಬಹುದು.

ಸಾಲ ನೀಡದೇ ಇರುವುದು ಸಹಾ ಆರ್ಥಿಕ ಬದ್ದತೆಗೆ ಇನ್ನೊಂದು ಅಗತ್ಯವಾಗಿದೆ. ನಮ್ಮ ಸುತ್ತಮುತ್ತ ನೂರಾರು ನಯವಂಚಕರಿರುತ್ತಾರೆ. ಇವರಿಗೆ ಸಾಲ ಪಡೆಯುವ ವಿದ್ಯೆ ಕರತಲಾಮಲಕವಾಗಿರುತ್ತದೆ. ಇವರು ವಿವಿಧ ಅಸ್ತ್ರಗಳನ್ನು ಪ್ರಯೋಗಿಸಿ ನಿಮ್ಮಿಂದ ಸಾಲ ಪಡೆಯುತ್ತಾರೆ. ಇದರಲ್ಲಿ ಪ್ರಮುಖವಾದ ಅಸ್ತ್ರವೆಂದರೆ "ಯಾವುದೋ ಕೆಲಸಕ್ಕೆ ಕೊಂಚ ಹಣ ಕಡಿಮೆಯಾಗಿದೆ, ಅರ್ಜೆಂಟಾಗಿ ಹಣ ಬೇಕು, ನಾಳೆ ನಾಡಿದ್ದರಲ್ಲಿ ನನಗೆ ಇನ್ನೊಂದು ಕಡೆಯಿಂದ ಹಣ ಬರಲಿಕ್ಕಿದೆ, ತಕ್ಷಣ ಕೊಟ್ಟು ಬಿಡುತ್ತೇನೆ" ಈ ನಾಳೆ ನಾಡಿದ್ದು ಎನ್ನುವುದು ಎಷ್ಟು ವರ್ಷಗಳ ಬಳಿಕ ಬರುತ್ತದೆ ಎಂದು ಅವರಿಗೇ ಗೊತ್ತಿಲ್ಲ. ಇನ್ನು ನಿಮಗೆ ಎಲ್ಲಿಂದ ಗೊತ್ತಾಗಬೇಕು?

 

5. ತುರ್ತು ನಿಧಿ ಕೂಡಿಡುವುದು

ಇದನ್ನೊಂದು ಆರ್ಥಿಕ ಅಭ್ಯಾಸವೆಂದು ಮಾತ್ರ ಪರಿಗಣಿಸಬೇಡಿ. ಇದು ನಿಮ್ಮ ತುರ್ತು ಅಗತ್ಯಕ್ಕಿರುವ ಅನಿವಾರ್ಯತೆ ಎಂದೇ ಪರಿಗಣಿಸಿ ಪ್ರಥಮ ಆದ್ಯತೆ ನೀಡಬೇಕು. ಯಾರಿಗೂ, ಯಾವುದೋ ಕ್ಷಣದಲ್ಲಿ ತಕ್ಷಣ ಹಣದ ಅಗತ್ಯ ಒದಗಿಬರಬಹುದು. ಆ ಸಮಯದಲ್ಲಿ ಈ ಆಪತ್ಕಾಲದ ನಿಧಿ ನೀಡುವಷ್ಟು ಮಾನಸಿಕ ಸ್ಥೈರ್ಯವನ್ನು ಯಾರೂ ನೀಡಲಾರರು. ಆ ಅಗತ್ಯಕ್ಕೆ ಸಾಲ ದೊರಕುವುದಾದರೂ, ಇದು ಸಾಲವೇ ಹೊರತು ನೆರವಲ್ಲ. ಅಷ್ಟೇ ಅಲ್ಲ, ಈ ಸಮಯಕ್ಕೆ ಸಾಲ ನೀಡಿದವರು ಇದೇ ವಿಷಯವನ್ನು ನಿಮ್ಮನ್ನು ಮಣಿಸಲು ಮುಂದೊಂದು ದಿನ ಅಸ್ತ್ರವಾಗಿಯೂ ಪರಿಗಣಿಸುತ್ತಾರೆ. 'ನಾನು ಅಂದು ಅವನಿಗೆ ಹಣ ಕೊಟ್ಟಿರದೇ ಹೋಗಿದ್ದರೆ ನೇಣು ಹಾಕಿಕೊಳ್ತಾ ಇದ್ದ' ಎಂಬ ಮಾತುಗಳು ನಿಮ್ಮನ್ನು ನೇಣು ಹಾಕಿಕೊಳ್ಳಲೂ ಪ್ರೇರೇಪಿಸಬಹುದು! ಆದ್ದರಿಂದ ಆಪತ್ಕಾಲದ ನಿಧಿಯನ್ನು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸ್ಥಾಪಿಸಿಕೊಳ್ಳುವುದು ನಿಮಗೇ ಒಳ್ಳೆಯದು.

ಹೆಚ್ಚಿನ ಸಂದರ್ಭಗಳಲ್ಲಿ ಈ ನಿಧಿ ವೈದ್ಯಕೀಯ ತುರ್ತು ಸಂದರ್ಭ, ಯಾವುದಾದರೊಂದು ಅಮೂಲ್ಯ ವಸ್ತು ಕೈಗೆ ಸಿಗುವ ಅವಕಾಶ ಮೊದಲಾದ ಕಡೆಗಳಲ್ಲಿ ಬಳಕೆಯಾಗುತ್ತದೆ. ಇದನ್ನು ಸಾಧಿಸಲು ಮನೆಯಲ್ಲಿಯೇ ಹಣವನ್ನು ಕೂಡಿಡುವ ಬದಲು ಬ್ಯಾಂಕಿನ ಫಿಕ್ಸೆಡ್ ಡಿಪಾಸಿಟ್ ಅಥವಾ ಲಿಕ್ವಿಡ್ ಡೆಬ್ಟ್ ಮ್ಯೂಚುವಲ್ ಫಂಡ್ ಮೊದಲಾದವುಗಳಲ್ಲಿ ತೊಡಗಿಸಿಕೊಳ್ಳಬಹುದು.

ಕನಿಷ್ಟ ಆರು ತಿಂಗಳಾದರೂ ಈ ನಿಧಿಯಲ್ಲಿ ನಿಯಮಿತವಾಗಿ ಹಣ ಹೂಡಬೇಕು. ಬಳಿಕ ಈ ಮೊತ್ತವನ್ನು ಹಾಗೇ ಬೆಳೆಯಲು ಬಿಡುವುದು ಹಾಗೂ ದೀರ್ಘಾವಧಿಯ ಹೂಡಿಕೆಯ ಬಗ್ಗೆ ಚಿಂತಿಸಲು ಸಾಧ್ಯವಾಗುತ್ತದೆ.

6. ನಿವೃತ್ತಿಯ ಬಗ್ಗೆ ಯೋಜನೆ

ಆರ್ಥಿಕ ಶಿಸ್ತಿನಲ್ಲಿ ಅತ್ಯಂತ ಪ್ರಮುಖವಾದ ಘಟ್ಟವೆಂದರೆ ನಿವೃತ್ತಿಯ ಬಗ್ಗೆ ಯೋಜನೆ ರೂಪಿಸುವುದು. ಇದು ಕೇವಲ ಶಿಸ್ತು ಮಾತ್ರವಲ್ಲ, ಬದಲಿಗೆ ಜೀವಮಾನದ ಆರ್ಥಿಕ ವ್ಯವಸ್ಥೆಯ ನಿರ್ಣಾಯಕ ಸ್ಥಂಭವೂ ಆಗಿದೆ. ನಿವೃತ್ತಿ ಯೋಜನೆ ಯಾವಾಗಲೂ ದೀರ್ಘಾವಧಿಯದ್ದಾಗಿರಬೇಕು ಹಾಗೂ ಇದನ್ನು ನಿಮ್ಮ ಚಿಕ್ಕ ವಯಸ್ಸಿನಿಂದಲೇ ಪ್ರಾರಂಭಿಸಬೇಕು. ಈಗಾಗಲೇ ನಡುವಯಸ್ಸು ದಾಟಿರುವವರಿಗೆ ಈ ಮಾತನ್ನು ಅವರ ತಾರುಣ್ಯದಲ್ಲಿ ಯಾರೂ ಹೇಳಿರದೇ ಇದ್ದ ಕಾರಣ ಇಂದು ಇವರಿಗೆ ನಿವೃತ್ತಿಯ ಬಗ್ಗೆ ಯೋಚನೆ ಪ್ರಾರಂಭವಾಗುತ್ತದೆ. ಈಗಲೂ ತಡವಾಗಿಲ್ಲ, ನಿವೃತ್ತಿಗೆ ಉಳಿದಿರುವ ವರ್ಷಗಳಲ್ಲಿ ಸಾಧ್ಯವಾದಷ್ಟು ನಿವೃತ್ತಿಗಾಗಿ ನಿಯೋಜಿಸುವುದೂ ಅಸಾಧ್ಯವೇನಲ್ಲ. ಆದರೂ, ಚಿಕ್ಕವಯಸ್ಸಿನಿಂದ ಯೋಜನೆ ಪ್ರಾರಂಭಿಸಿದರೆ ನಿವೃತ್ತಿಯ ಸಮಯದಲ್ಲಿ ನಿರಾಳವಾದ ಜೀವನ ಪಡೆಯಬಹುದು.

ಪ್ರತಿ ತಿಂಗಳೂ ಚಿಕ್ಕದಾದ ಮೊತ್ತವನ್ನು ನಿವೃತ್ತಿಗಾಗಿ ಮೀಸಲಿಡುವುದು ಇದರ ಪ್ರಮುಖ ಅಂಗವಾಗಿದೆ. ಇದರಲ್ಲಿ ಪ್ರಮುಖವಾದುದೆಂದರೆ ಈ ಹೂಡಿಕೆಯನ್ನು ನಡುವಿನಲ್ಲಿ ತುಂಡರಿಸದೇ ಇರುವುದು. ನೀವೇ ನಿಮ್ಮ ಸ್ವಂತ ಯೋಜನೆಯಿಂದ ನಿವೃತ್ತಿಗಾಗಿ ಆರ್ಡಿ ಖಾತೆಯೊಂದನ್ನು ತೆರೆದು (ರಿಕರೆಂಟ್ ಡಿಪಾಸಿಟ್) ನಿಮ್ಮ ಖಾತೆಯ ಮೂಲಕ ಪ್ರತಿ ತಿಂಗಳೂ ನಿರ್ದಿಷ್ಟ ಮೊತ್ತ ಸೇರುವಂತೆ ಮಾಡಬಹುದು. ಅಥವಾ ಆರ್ಥಿಕ ತಜ್ಞರ ಸಲಹೆ ಪಡೆದು ಅದರಂತೆ ನಡೆದುಕೊಳ್ಳಬಹುದು. ಸಾಮಾನ್ಯವಾಗಿ ಆರ್ಥಿಕ ತಜ್ಞರ ಅನುಭವ ನಿಮಗೆ ಹೆಚ್ಚು ಲಾಭಕರವಾಗಿರುತ್ತದೆ. ಯೋಜನೆ ಯಾವುದಾದರೂ ಸರಿ, ನಿವೃತ್ತಿಯವರೆಗೂ ಈ ಮೊತ್ತವನ್ನು ನಗದೀಕರಿಸುವ ಕುರಿತು ಯೋಚಿಸಲೇ ಬಾರದು.

ಕೊನೆ ಮಾತು

ಆರ್ಥಿಕವಾಗಿ ಸಬಲರಾಗುವುದು ಇಂದಿನ ಎಲ್ಲರ ಕನಸಾಗಿದೆ. ಆದರೆ ಇದನ್ನು ಸಾಧ್ಯವಾಗಿಸುವುದು ಮಾರ್ತ ಆರ್ಥಿಕ ಶಿಸ್ತು. ಇದು ದೂರದಿಂದ ನೋಡಲು ಕೊಂಚ ಕಷ್ಟಕರ ಎಂದು ಕಂಡು ಬಂದರೂ ಸತತವಾಗಿ ಅನುಸರಿಸುವುದನ್ನು ಪ್ರಾರಂಭಿಸಿದರೆ ಮತ್ತೇನೂ ಕಷ್ಟವಾಗಲಾರದು. ಇದಕ್ಕೆ ಅಗತ್ಯವಿರುವುದು ದೃಢವಾದ ಮನೋಬಲ ಹಾಗೂ ಯೋಜನೆಯನ್ನು ಸರಿಯಾಗಿ, ಎಲ್ಲಿಯೂ ನಿಲ್ಲಿಸದೇ, ಯಾವ ತಿಂಗಳೂ ತಪ್ಪದೇ ಅನುಸರಿಸಿಕೊಂಡು ಹೋಗುವ ಬದ್ದತೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿಗೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

ನಿಮಗೀಗ ಎಷ್ಟೇ ವಯಸ್ಸಾಗಿರಬಹುದು, ನಿಮ್ಮ ಆರ್ಥಿಕ ಸ್ಥಿತಿ ಏನೇ ಇರಲಿ ಆರ್ಥಿಕ ಶಿಸ್ತನ್ನು ಪ್ರಾರಂಭಿಸಲು ಎಂದೂ ತಡವಾಗುವುದಿಲ್ಲ. ಇದುವರೆಗೆ ನೀವು ಸಾಧಿಸದೇ ಹೋದ ಎಷ್ಟೋ ವಿಷಯಗಳನ್ನು ಆರ್ಥಿಕ ಶಿಸ್ತಿನ ಮೂಲಕ ಸಾಧಿಸಬಹುದು ಹಾಗೂ ನಿಮ್ಮ ಕಷ್ಟಪಟ್ಟು ಗಳಿಸಿದ ಹಣವನ್ನು ಇನ್ನೂ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ಆರ್ಥಿಕ ಸ್ವಾತಂತ್ರ್ಯದೆಡೆಗೆ ಸುಲಲಿತವಾಗಿ ಸಾಗಿ ಗಮ್ಯಸ್ಥಾನ ತಲುಪಬಹುದು.

 

English summary

Financial Tips: These Financial Habits you should start today

Good financial habits are the building blocks of your financial stability and financial security. Financial habits simply implies to making small changes in the way you manage your personal finances.
Story first published: Saturday, November 11, 2017, 14:31 [IST]
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns