Englishहिन्दी മലയാളം தமிழ் తెలుగు

PPF v/s EPF v/s VPF: ಇದರಲ್ಲಿ ಯಾವ ಆಯ್ಕೆ ಉತ್ತಮ ಗೊತ್ತೆ? ಇಲ್ಲಿ ನೋಡಿ..

Written By: Siddu
Subscribe to GoodReturns Kannada

ಹದಿಹರೆಯ ದಾಟಿ 20-25 ವರ್ಷದ ತಾರುಣ್ಯದಲ್ಲಿರುವರೂ ಇಂದು ನಿವೃತ್ತಿಯ ಬಗ್ಗೆ ಚರ್ಚಿಸುತ್ತಿದ್ದಾರೆ. ಹಿಂದಿನಂತೆ ಹಿರಿಯರ ಭರವಸೆಯ ಮೇಲೆ ಜೀವನ ಸಾಗಿಸುತ್ತಿದ್ದುದು ಇಂದು ಸಾಧ್ಯವಿಲ್ಲ. ನಿವೃತ್ತಿಯ ಬಳಿಕ ನಮ್ಮ ಜೀವನ ಯಾರನ್ನೂ ಅವಲಂಬಿಸದೇ ಸ್ವತಂತ್ರವಾಗಿರಬೇಕೆಂದು ಎಲ್ಲರೂ ಇಚ್ಛಿಸುತ್ತಾರೆ. ಇದಕ್ಕಾಗಿ ಹಲವಾರು ಆಯ್ಕೆಗಳಿವೆ. ಮ್ಯೂಚುವಲ್ ಫಂಡ್, ಈಕ್ವಿಟಿ, ಯೂಲಿಪ್, ರಾಷ್ಟ್ರೀಯ ಪಿಂಚಣಿ ಯೋಜನೆ, ಅಂಚೆ ಕಛೇರಿ ಯೋಜನೆಗಳು, PPF, EPF ಭವಿಷ್ಯ ನಿಧಿ ಯೋಜನೆಗಳು ಇತ್ಯಾದಿ. ಆಯ್ಕೆಗಳು ಹೆಚ್ಚಿದಂತೆಲ್ಲಾ ಸೂಕ್ತ ಯೋಜನೆಯನ್ನು ಆಯ್ದುಕೊಳ್ಳುವುದೂ ಯುವಜನತೆಗೆ ತ್ರಾಸದಾಯಕವೇ ಹೌದು.

ಕಡಿಮೆ ರಿಸ್ಕ್, ಸಾಮಾನ್ಯ ಆದಾಯ ಹಾಗೂ ಇದಕ್ಕೆ ವಿರುದ್ದವಾದ ಅಂದರೆ ಹೆಚ್ಚಿನ ರಿಸ್ಕ್ ಹೆಚ್ಚಿನ ಆದಾಯವಿರುವ ಯೋಜನೆಗಳು ಇಂದು ಲಭ್ಯವಿದ್ದು, ಯುವಜನತೆ ಇವೆರಡರ ನಡುವೆ ಇರುವ ಸುರಕ್ಷಿತ ಯೋಜನೆಗಳನ್ನು ಆಯ್ದುಕೊಳ್ಳುವುದೇ ಜಾಣತನದ ಕ್ರಮವಾಗಿದೆ. ಇದರಲ್ಲಿ EPF, VPF ಹಾಗೂ PPF ಯೋಜನೆಗಳು ಅತ್ಯುತ್ತಮ ಆಯ್ಕೆಯಾಗಿದ್ದು ಉಳಿದೆಲ್ಲಾ ಯೋಜನೆಗಳಿಗಿಂತ ಮಿಗಿಲಾಗಿವೆ. ಏಕೆ ಮಿಗಿಲಾಗಿವೆ? ಅರ್ಥೈಸಿಕೊಳ್ಳಲು ಕೆಳಗಿನ ಮಾಹಿತಿಗಳನ್ನು ನೋಡೋಣ... ನಿಮಗೆ ಗೊತ್ತಿರದ ಇಪಿಎಫ್(EPF) ನಿಯಮಗಳು

EPF, VPF ಹಾಗೂ PPF: ಪ್ರಾಥಮಿಕ ಮಾಹಿತಿ

EPF (Employee Provident Fund)

ಹೆಸರೇ ಸೂಚಿಸುವಂತೆ ಇದು ಉದ್ಯೋಗಿಯ ಭವಿಷ್ಯ ನಿಧಿಯಾಗಿದೆ. ಇದರ ಪ್ರಮುಖ ಉದ್ದೇಶವೆಂದರೆ ಭವಿಷ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವುದು. ಈ ಯೋಜನೆಯಲ್ಲಿ ಪ್ರತಿ ತಿಂಗಳೂ ಉದ್ಯೋಗಿ ತನ್ನ ವೇತನದ ಒಂದು ಭಾಗವನ್ನು ಈ ಯೋಜನೆಯಲ್ಲಿ ವಿನಿಯೋಗಿಸುತ್ತಾ ಹೋಗುವುದು ಹಾಗೂ ನಿವೃತ್ತಿಯ ಸಮಯದಲ್ಲಿ ದೊಡ್ಡ ಮೊತ್ತವನ್ನು ಪಡೆಯಬಹುದು. ಅಲ್ಲದೇ ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಈ ಯೋಜನೆ ಕಡ್ಡಾಯವೂ ಹೌದು. ಈ ನಿಧಿಯನ್ನು ಉದ್ಯೋಗಿಗಳ ಪಿಂಚಣಿ ನಿಧಿ ಸಂಘಟನೆ ಅಥವಾ Employees' Provident fund Organization (EPFO) ಸಂಸ್ಥೆಯಲ್ಲಿ ಪ್ರತಿ ಉದ್ಯೋಗಿಯನ್ನೂ ನೋಂದಣಿ ಮಾಡಿಸಬೇಕು. ಬಳಿಕ ಪ್ರತಿ ತಿಂಗಳೂ ಆತನ ಮೂಲವೇತನದ 12% + ತುಟ್ಟಿಭತ್ಯೆ ಎಂದು ರೂ. 780 ಗಳನ್ನು ಪ್ರತಿ ತಿಂಗಳೂ ಉದ್ಯೋಗಿಯ ಖಾತೆಯಲ್ಲಿ ಇರಿಸಲಾಗುತ್ತದೆ. ಈ ಮೊತ್ತವನ್ನು ಉದ್ಯೋಗಿ ಸ್ವತಃ ಕಟ್ಟುವಂತಿಲ್ಲ. ಬದಲಿಗೆ ಉದ್ಯೋಗದಾರನೇ (ಅಥವಾ ಉದ್ಯೋಗ ನೀಡಿರುವ ಸಂಸ್ಥೆ) ಈ ಖಾತೆಯಲ್ಲಿ ಸಂಬಳದಿಂದ ಮುರಿದುಕೊಂಡು ಸೇರಿಸಬೇಕಾಗುತ್ತದೆ. ಅಷ್ಟೇ ಮೊತ್ತದ ಹಣವನ್ನು ಉದ್ಯೋಗದಾರನೂ ಖಾತೆಗೆ ಜಮಾ ಮಾಡಬೇಕಾಗುತ್ತದೆ. ಯಾವುದೇ ಸಂಸ್ಥೆಯಲ್ಲಿ ಕನಿಷ್ಟ ಇಪ್ಪತ್ತು ಜನರು ಉದ್ಯೋಗಿಗಳಿದ್ದರೆ, ಹಾಗೂ ಪ್ರತಿ ಉದ್ಯೋಗಿಗೆ ಮೂಲ ವೇತನ ಕನಿಷ್ಟ ರೂ. 6,291 ಇದ್ದರೆ ಈ ಯೋಜನೆ ಕಡ್ಡಾಯವಾಗಿದೆ. ಈ ಯೋಜನೆಯಲ್ಲಿ ತೊಡಗಿಸಿದ ಹಣಕ್ಕೆ ಕಾಲಕಾಲಕ್ಕೆ ಬಡ್ಡಿ ಸಹಾ ಬರುತ್ತದೆ ಹಾಗೂ ಈ ಬಡ್ಡಿ ಆದಾಯ ತೆರಿಗೆಯಿಂದ ಮುಕ್ತವಾಗಿದೆ. ಈ ಯೋಜನೆಯ ಅತ್ಯಂತ ಆಕರ್ಷಕ ಅಂಶವೆಂದರೆ ಇದರಲ್ಲಿ ರಿಸ್ಕ್ ಅತಿ ಕಡಿಮೆ ಇರುತ್ತದೆ ಹಾಗೂ ಸಾಮಾನ್ಯ ಬಡ್ಡಿಯೂ ದೊರಕುತ್ತದೆ. ನಿವೃತ್ತಿಯ ವೇಳೆಗೆ ಸುಭದ್ರ ಮೊತ್ತವನ್ನು ಪಡೆಯುವುದು ಖಾತರಿಯಾಗಿದ್ದು, ಈ ಯೋಜನೆಯಲ್ಲಿ ತೊಡಗಿಕೊಳ್ಳಲು ಉತ್ತಮ ಆಯ್ಕೆಯಾಗಿದೆ. ಪಿಎಫ್(PF) ವಿತ್ ಡ್ರಾ ಯಾವಾಗ ಮಾಡಬಹುದು?

VPF (Voluntary Provident Fund)- ಸ್ವಯಂಪ್ರೇರಿತ ಭವಿಷ್ಯ ನಿಧಿ

ಹೆಸರೇ ತಿಳಿಸುವಂತೆ ಇದು ಉದ್ಯೋಗಿ ತನ್ನ ವೇತನದಲ್ಲಿ ತನಗಿಷ್ಟ ಬಂದಷ್ಟು ಮೊತ್ತವನ್ನು ನಿವೃತ್ತಿಗಾಗಿ ಪಿಂಚಣಿ ನಿಧಿಯಲ್ಲಿ ಮೀಸಲಿರಿಸಿರುವುದಾಗಿದೆ. ಆದರೆ ಕೇಂದ್ರ ಸರ್ಕಾರ ಇದಕ್ಕೆ ಕನಿಷ್ಟ ಮೊತ್ತವನ್ನು ನಿಗದಿಪಡಿಸಿದೆ. ಆ ಪ್ರಕಾರ ಮೂಲ ವೇತನದ ಕನಿಷ್ಟ ಶೇ. 12ರಷ್ಟನ್ನಾದರೂ ತೊಡಗಿಸಲೇಬೇಕು. ಆದರೆ ಈ ಯೋಜನೆಯಲ್ಲಿ ಉದ್ಯೋಗದಾರ ಅಥವಾ ಸಂಸ್ಥೆಯ ಯಾವುದೇ ಪಾಲ್ಗೊಳ್ಳುವಿಕೆ ಇಲ್ಲ. ಉದ್ಯೋಗಿ ತನ್ನ ಮೂಲ ವೇತನದ ಪೂರ್ಣ ಪ್ರಮಾಣ ಹಾಗೂ ದಿನದ ಭತ್ಯೆಯನ್ನು ಈ ಯೋಜನೆಯಲ್ಲಿ ಗರಿಷ್ಟ ಮೊತ್ತವಾಗಿ ವಿನಿಯೋಗಿಸಬಹುದು. ಈ ಯೋಜನೆಯಲ್ಲಿ ತೊಡಗಿಸಿದ ಹಣಕ್ಕೂ EPFನಷ್ಟೇ ಬಡ್ಡಿ ಲಭಿಸುತ್ತದೆ ಹಾಗೂ ಈ ಮೊತ್ತವೂ EPF ಖಾತೆಯಲ್ಲಿಯೇ ಜಮೆಯಾಗುತ್ತದೆ. VPF ಗಾಗಿ ಪ್ರತ್ಯೇಕ ಖಾತೆ ಇಲ್ಲ.

PPF (Personal Provident Fund) ವೈಯಕ್ತಿಕ ಭವಿಷ್ಯ ನಿಧಿ

ಈ ಯೋಜನೆ ಕೇಂದ್ರ ಸರ್ಕಾರದ ಖಾತ್ರಿ ಇರುವ ನಿಗದಿತ ಆದಾಯ ಸುರಕ್ಷಾ ಯೋಜನೆಯಾಗಿದ್ದು, ಖಾಸಗಿ ವಲಯ, ಸ್ವ ಉದ್ಯೋಗಿ ಅಥವಾ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳಿಗೆ ನಿವೃತ್ತಿ ಸಮಯದಲ್ಲಿ ಭವಿಷ್ಯ ನಿಧಿಯನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾರಂಭಿಸಲಾಗಿದೆ. ಈ ಯೋಜನೆಯಲ್ಲಿ ರಿಸ್ಕ್ ಇಲ್ಲದೇ ಇರುವ ಹಾಗೂ ಖಾತರಿಯ ಮೊತ್ತ ಲಭಿಸುವ ಕಾರಣ ಯಾವುದೇ ಭಾರತೀಯ ನಾಗರಿಕರು ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದು. ಈ ಯೋಜನೆಯಲ್ಲಿ ತೊಡಗಿಸಿದ ಮೊತ್ತಕ್ಕೆ ಚಕ್ರಬಡ್ಡಿ ಲಭಿಸುತ್ತದೆ, ಅಂದರೆ ಉದ್ಯೋಗಿ ಹೂಡಿರುವ ಹಣಕ್ಕೆ ಮಾತ್ರವಲ್ಲ. ಇದರಿಂದ ಲಭಿಸಿದ ಬಡ್ಡಿಗೂ ಬಡ್ಡಿ ಲಭಿಸುತ್ತದೆ. ವರ್ಷಗಳ ಅವಧಿಯಲ್ಲಿ ಈ ಮೂಲಕ ಲಭಿಸಿದ ಒಟ್ಟಾರೆ ಬಡ್ಡಿ ಆದಾಯ ತೆರಿಗೆಯಿಂದ ಮುಕ್ತವಾಗಿದೆ.

ಈ ಮೂರು ಯೋಜನೆಗಳಲ್ಲಿ ಯಾವುದು ಸೂಕ್ತ?

EPF, VPF ಹಾಗೂ PPF ಯೋಜನೆಗಳೆಂದರೇನು ಎಂಬುದನ್ನು ಈಗ ನಾವು ಅರಿತುಕೊಂಡಿದ್ದೇವೆ. ಮೂರೂ ಯೋಜನೆಗಳು ಉತ್ತಮವೇ ಆಗಿದ್ದರೂ ನಿಮಗೆ ಯಾವ ಯೋಜನೆ ಸೂಕ್ತ ಎಂಬುದನ್ನು ಆಯ್ದುಕೊಳ್ಳುವುದು ಮುಖ್ಯ. ಇದಕ್ಕಾಗಿ ಮೂರೂ ಯೋಜನೆಗಳನ್ನು ಕೆಲವು ಅಂಶಗಳನ್ನು ಆಧರಿಸಿ ಹೋಲಿಸಿ ನೋಡಬೇಕಾಗುತ್ತದೆ. ಉದಾಹರಣೆಗೆ ಯೋಜನೆಗೆ ಬೇಕಾದ ಅರ್ಹತೆ, ಹೂಡುವ ಹಣದ ಮೊತ್ತ, ತೆರಿಗೆ ವಿನಾಯಿತಿ, ನಡುವೆ ಹಣ ಪಡೆಯುವ ಸೌಲಭ್ಯ ಇತ್ಯಾದಿ. ಇದರಿಂದ ಮೂರು ಯೋಜನೆಗಳ ಸಾಧಕ ಬಾಧಕಗಳನ್ನು ತಾಳೆ ನೋಡಿ ನಿಮಗೆ ಸೂಕ್ತವಾದುದನ್ನು ಆರಿಸಿಕೊಳ್ಳಬಹುದು.

ಯೋಜನೆಗೆ ಬೇಕಾದ ಅರ್ಹತೆಯ ಮಾನದಂಡ

ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಹಾಗೂ ಸ್ಥಿರವೇತನ ಇಲ್ಲದ ವ್ಯಕ್ತಿಗಳೂ ತಮಗೆ ಹತ್ತಿರ ಇರುವ ಬ್ಯಾಂಕ್ ಅಥವಾ ಅಂಚೆ ಕಛೇರಿಯಲ್ಲಿ ಪಿಪಿಎಫ್ ಖಾತೆ ತೆರೆಯಬಹುದು ಹಾಗೂ ನಿವೃತ್ತಿಯ ವೇಳೆಯಲ್ಲಿ ಹೆಚ್ಚಿನ ಆದಾಯ ಪಡೆಯಬಹುದು. ಆದರೆ VPF ಮತ್ತು EPF ಯೋಜನೆಗಳು ಕೇವಲ ವೇತನದಾರರಿಗೆ ಮಾತ್ರವೇ ಅನ್ವಯವಾಗುತ್ತದೆ. VPF ಯೋಜನೆಯಲ್ಲಿ ಉದ್ಯೋಗಿಗಳು ಕನಿಷ್ಟ ಮೊತ್ತವಾದ ಮೂಲವೇತನದ 12% ಅಥವಾ ಇದಕ್ಕೂ ಮಿಗಿಲಾದ ಯಾವುದೇ ಮೊತ್ತವನ್ನು ತೊಡಗಿಸಬಹುದು, ಈ ಮೊತ್ತ ಅವರ EPF ಖಾತೆಯಲ್ಲಿ ಜಮೆಯಾಗುತ್ತದೆ.

ಹೂಡುವ ಹಣದ ಮೊತ್ತ

EPF ಹೊರತುಪಡಿಸಿ VPF ಮತ್ತು PPF ಯೋಜನೆಗಳಲ್ಲಿ ತೊಡಗಿಸುವ ಹಣ ಸ್ವಯಂಪ್ರೇರಿತವಾಗಿರುತ್ತದೆ. VPFನಲ್ಲಿ ಕೇವಲ ವೇತನ ಪಡೆಯುವ ಉದ್ಯೋಗಿಗಳು ಮಾತ್ರವೇ ಪಾಲ್ಗೊಳ್ಳಬಹುದು. ಆದರೆ PPF ನಲ್ಲಿ ಸ್ಥಿರವೇತನ ಪಡೆಯುವ ಅಥವಾ ಇತರ ಉದ್ಯೋಗಿಗಳೂ ಪಾಲ್ಗೊಳ್ಳಬಹುದು. ಒಂದು ವೇಳೆ ಉದ್ಯೋಗಿ ತನ್ನ ಮೂಲ ವೇತನದ 12%ಕ್ಕೂ ಹೆಚ್ಚಿನ ಮೊತ್ತ ಹಾಗೂ ತುಟ್ಟಿಭತ್ಯೆಯನ್ನೂ ಭವಿಷ್ಯ ನಿಧಿಯಲ್ಲಿ ತೊಡಗಿಸಬಯಸಿದರೆ ಉದ್ಯೋಗದಾರರು ಈ ಒಟ್ಟು ಮೊತ್ತವನ್ನು EPF ಖಾತೆಗೆ ಜಮಾ ಮಾಡುತ್ತಾರೆ. ಉದ್ಯೋಗಿ ತನ್ನ ಮೂಲ ವೇತನವನ್ನಷ್ಟೂ ಹಾಗೂ ತುಟ್ಟಿಭತ್ಯೆಯನ್ನು VPF (ಅಂದರೆ EPF ಖಾತೆಗೆ) ಜಮಾ ಮಾಡಬಹುದು. VPF ಯೋಜನೆಯಲ್ಲಿ ಕೇವಲ ಉದ್ಯೋಗಿ ಮಾತ್ರವೇ ತನಗಿಷ್ಟ ಬಂದಷ್ಟು ತೊಡಗಿಸುತ್ತಾನೆಯೇ ವಿನಃ ಉದ್ಯೋಗದಾರ ಏನನ್ನೂ ತೊಡಗಿಸುವುದಿಲ್ಲ.
ಈ ಯೋಜನೆಯಲ್ಲಿ ತೊಡಗಿಸಬಹುದಾದ ಗರಿಷ್ಟ ಮೊತ್ತವನ್ನು ಪರಿಗಣಿಸುವುದಾದರೆ PPFಯಲ್ಲಿ ವಾರ್ಷಿಕ ಗರಿಷ್ಟ ಒಂದು ಲಕ್ಷ ರೂಪಾಯಿಗಳನ್ನು ಮಾತ್ರವೇ ತೊಡಗಿಸಬಹುದು. ಆದರೆ VPFನಲ್ಲಿ ಗರಿಷ್ಟ ಮೊತ್ತದ ಯಾವುದೇ ಮಿತಿ ಇಲ್ಲ. PPF ಖಾತೆಗೆ ಪ್ರತಿ ತಿಂಗಳೂ ಇಷ್ಟು ಎಂದು ಕಟ್ಟಬಹುದು ಅಥವಾ ವರ್ಷಕ್ಕೊಂದು ಬಾರಿ ಒಮ್ಮೆಲೇ ದೊಡ್ಡ ಮೊತ್ತವನ್ನೂ ಕಟ್ಟಬಹುದು.

ಆದಾಯ (ರಿಟರ್ನ್ಸ್)

ಪ್ರಸ್ತುತ PPF ಖಾತೆಯಲ್ಲಿರಿಸಿದ ಮೊತ್ತಕ್ಕೆ 7.6% ಬಡ್ಡಿ ದರ ಇದೆ. ಈ ಯೋಜನೆಯಲ್ಲಿ ತೊಡಗಿಸಿದ ಮೊತ್ತವನ್ನು ಸರ್ಕಾರದ ಬಾಂಡ್ ಗಳಲ್ಲಿ ತೊಡಗಿಸಿರುವ ಕಾರಣ ಈ ಬಡ್ಡಿದರವೂ ಮಾರುಕಟ್ಟೆಯನ್ನು ಅವಲಂಬಿಸಿ ಕೊಂಚ ಏರಿಳಿತವನ್ನು ಕಾಣಬಹುದು. ಆದರೂ, ಈ ಯೋಜನೆ ಸರ್ಕಾರಿ ಬಾಂಡ್ ಆಧರಿಸಿರುವ ಕಾರಣ ಮಾರುಕಟ್ಟೆಯಲ್ಲಿ ಸದಾ ಆಕರ್ಷಕ ಬಡ್ಡಿದರವನ್ನು ಉಳಿಸಿಕೊಳ್ಳುತ್ತದೆ. ಈ ಮೂಲಕ ಇದು ಅತಿ ಕಡಿಮೆ ರಿಸ್ಕ್ ನ ಯೋಜನೆಯಾಗಿದೆ. ಆದರೆ VPF ಯೋಜನೆಯಲ್ಲಿ ನಿಧಿ ಸರ್ಕಾರಿ ಬಾಂಡ್ ಗಳನ್ನು ಅನುಸರಿಸದೇ EPF ಖಾತೆಯನ್ನೇ ಅವಲಂಬಿಸಿರುತ್ತದೆ. 2014-2015 ಹಣಕಾಸು ವರ್ಷದಲ್ಲಿ EPF ಖಾತೆಯಲ್ಲಿರಿಸಿದ ನಿಧಿ 8.75%ರ ಸ್ಥಿರ ಬಡ್ಡಿದರವನ್ನು ಪಡೆದಿತ್ತು. ಅಂದರೆ ಇದು PPF ಖಾತೆಯ ಬಡ್ಡಿದರಕ್ಕಿಂತ ಕೊಂಚವೇ ಹೆಚ್ಚು ಎನ್ನಬಹುದು.

ತೆರಿಗೆ ವಿನಾಯಿತಿಯ ಲಾಭ

EPF/VPFನಲ್ಲಿ ಹೂಡಿದ ನಿಧಿ ಪಕ್ವಗೊಂಡ ಸಮಯದಲ್ಲಿ ತೆರಿಗೆಯಿಂದ ವಿನಾಯಿತಿ ಹೊಂದಿರುತ್ತವೆ. ಆದರೆ ಇದಕ್ಕೆ ಉದ್ಯೋಗಿ ಆ ಸಂಸ್ಥೆಯಲ್ಲಿ ಕನಿಷ್ಟ ಐದು ವರ್ಷಗಳ ಕಾಲ ಸತತವಾಗಿ ಸೇವೆ ಸಲ್ಲಿಸಿರುವುದು ಕಡ್ಡಾಯವಾಗಿದೆ. ಒಂದು ವೇಳೆ ಐದು ವರ್ಷ ಕಳೆಯುವ ಮುನ್ನವೇ ಕೆಲಸ ತ್ಯಜಿಸಿದರೆ ಈ ಮೊತ್ತ ಆದಾಯ ತೆರಿಗೆಗೆ ಒಳಪಡುತ್ತದೆ. PPF ನಲ್ಲಿ ಅವಧಿಯ ಮಿತಿ ಇಲ್ಲದೇ ಇದರ ಮೊತ್ತ ಆದಾಯ ತೆರಿಗೆಯಿಂದ ಮುಕ್ತವಾಗಿದೆ.

ಹೂಡಿಕೆಯ ಅವಧಿ

VPF: ಈ ಯೋಜನೆಯಲ್ಲಿ ಉದ್ಯೋಗಿಗೆ ಅಂತಿಮ ಮೊತ್ತ ನಿವೃತ್ತಿಯ ಸಮಯದಲ್ಲಿ ಮಾತ್ರವೇ ಸಿಗುತ್ತದೆ. ಸೇವಾವಧಿಯಲ್ಲಿ ಕೆಲಸವನ್ನು ಬದಲಿಸಿಕೊಂಡರೆ ಈ ಖಾತೆ ಕೊನೆಗೊಳ್ಳದೇ ಮುಂದಿನ ಉದ್ಯೋಗಕ್ಕೂ ಅದೇ ಖಾತೆ ಮುಂದುವರೆಯುತ್ತದೆ. ಒಂದು ವೇಳೆ ಉದ್ಯೋಗಿ ನಿವೃತ್ತಿಗೂ ಮುನ್ನವೇ ಇಹಲೋಕ ತ್ಯಜಿಸಿದರೆ ಇದರ ಫಲ ಕಾನೂನುಬದ್ದ ಉತ್ತರಾಧಿಕಾರಿಗೆ ದೊರಕುತ್ತದೆ.

PPF: ಈ ಯೋಜನೆಯಲ್ಲಿ ತೊಡಗಿಸಿದ ಹಣವನ್ನು ಯೋಜನೆಯಲ್ಲಿ ತೊಡಗಿಸಿಕೊಂಡ ಹದಿನೈದು ವರ್ಷಗಳ ಬಳಿಕವಷ್ಟೇ ಪಡೆಯಲು ಸಾಧ್ಯ. ಅಂದರೆ ಯೋಜನೆಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಿದರೂ ಆ ವರ್ಷದಿಂದ ಹಿಡಿದು ಹದಿನೈದನೇ ಆರ್ಥಿಕ ವರ್ಷದಲ್ಲಿಯೇ ಅಂತಿಮ ಮೊತ್ತವನ್ನು ಪಡೆಯಬಹುದು.

ವಿತ್ ಡ್ರಾ ಸೌಲಭ್ಯ

PPF ಖಾತೆಯಲ್ಲಿ ಕನಿಷ್ಟ ಹದಿನೈದು ವರ್ಷ ನಿಧಿಯನ್ನು ಹಾಗೇ ಉಳಿಸಿಕೊಳ್ಳಬೇಕಾಗುತ್ತದೆ. ಆದರೆ ಕೆಲವೊಂದು ಷರತ್ತುಗಳನ್ನು ಆಧರಿಸಿ ಈ ಒಟ್ಟು ಮೊತ್ತದಲ್ಲಿ ಕೊಂಚ ಹಣವನ್ನು ಅವಧಿಗೂ ಮುಂಚಿತವಾಗಿ ಪಡೆಯಬಹುದು. ಬಳಿಕ ಈ ಖಾತೆಯನ್ನು ಮುಂದಿನ ಐದು ವರ್ಷಗಳಿಗೆ ಮುಂದುವರೆಸಬಹುದು. ಆದರೆ VPFನಲ್ಲಿ ಜಮೆಯಾದ ಮೊತ್ತವನ್ನು ಉದ್ಯೋಗಿ ತನಗೆ ಅಗತ್ಯವೆಂದು ಕಂಡುಬಂದ ಯಾವುದೇ ಸಮಯದಲ್ಲಿ ಸುಲಭವಾಗಿ ಹಿಂಪಡೆಯಬಹುದು. ಆದರೆ ಒಂದೇ ಉದ್ಯೋಗದಾರದ ಬಳಿ ಸೇವೆ ಸಲ್ಲಿಸುತ್ತಿರುವ ಅವಧಿಯಲ್ಲಿ ಐದು ವರ್ಷಕ್ಕೂ ಮುಂಚಿತವಾಗಿ ಈ ಮೊತ್ತವನ್ನು ಪಡೆದರೆ ಈ ಮೊತ್ತ ಆದಾಯ ತೆರಿಗೆಗೆ ಒಳಪಡುತ್ತದೆ.

ಸಾಲ ಸೌಲಭ್ಯ

EPF/VPF ಯೋಜನೆಗಳಲ್ಲಿ ಈ ಮೊತ್ತವನ್ನು ಆಧರಿಸಿ ಸಾಲವನ್ನು ಪಡೆಯಬಹುದು ಹಾಗೂ ಇದುವರೆಗೆ ತೊಡಗಿಸಿದ ಪೂರ್ಣ ಮೊತ್ತವನ್ನು ಹಿಂಪಡೆಯಬಹುದು. ಆದರೆ PPF ಯೋಜನೆಯಲ್ಲಿ ನಾಲ್ಕು ವರ್ಷ ಕಳೆದ ಬಳಿಕ ಒಟ್ಟು ಮೊತ್ತದ 50% ರಷ್ಟು ಮೊತ್ತವನ್ನು ಸಾಲ ರೂಪದಲ್ಲಿ ಪಡೆಯಬಹುದು. ಆದರೆ ಐದು ವರ್ಷ ಕಳೆದು ಆರನೆಯ ವರ್ಷಕ್ಕೆ ತೊಡಗಿದ ಬಳಿಕ ಪೂರ್ಣ ಪ್ರಮಾಣದ ಮೊತ್ತವನ್ನು ಹಿಂಪಡೆಯಬಹುದು.

ಕೊನೆ ಮಾತು

EPF, VPF ಅಥವಾ PPF, ಈ ಮೂರೂ ಯೋಜನೆಗಳು ತಮ್ಮದೇ ಆದ ಸಾಧಕ ಬಾಧಕ ಅಂಶಗಳನ್ನು ಹೊಂದಿವೆ. ಮೇಲಿನ ಹೋಲಿಕೆಗಳಿಂದ ಗಮನಿಸಬೇಕಾದ ಅಂಶವೆಂದರೆ ಹೂಡಿಕೆಯ ಮೇಲೆ ಪಡೆಯಬಹುದಾದ ಲಾಭ, ಉದ್ಯೋಗದಾರನ ದೇಣಿಗೆ ಹಾಗೂ ದ್ರವ್ಯತೆಗಳನ್ನು ಪರಿಗಣಿಸಿದರೆ EPF ಹಾಗೂ VPF ಯೋಜನೆಗಳು PPF ಯೋಜನೆಗಿಂತಲೂ ಚೆನ್ನಾಗಿವೆ. ಆದರೆ EPF ಮತ್ತು VPF ಯೋಜನೆಗಳಲ್ಲಿ ಸ್ವ ಉದ್ಯೋಗಿಗಳು, ಅಸಂಘಟಿತ ವಲಯದ ಉದ್ಯೋಗಿಗಳು ಪಾಲ್ಗೊಳ್ಳಲು ಸಾಧ್ಯವಿಲ್ಲ. ಇವರು ಅನಿವಾರ್ಯವಾಗಿ PPF ಯೋಜನೆಯನ್ನೇ ಆಯ್ದುಕೊಳ್ಳಬೇಕಾಗುತ್ತದೆ.

English summary

PPF v/s EPF v/s VPF: Which One is Better?

Retirement planning has become the most talked about topic among people as young as 25. With so many investment options (Mutual Funds, Equity, ULIPs, NPS, Post office schemes, PPF, EPF Pension Plans etc.) coming up, it is becoming more difficult for youngsters to zero in on the most suitable retirement option.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns