Bank Holidays in September 2022: ಸೆಪ್ಟೆಂಬರ್‌ನಲ್ಲಿ 13 ದಿನ ಬ್ಯಾಂಕ್ ರಜೆ, ಇಲ್ಲಿದೆ ಪಟ್ಟಿ
ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೆಪ್ಟೆಂಬರ್‌ನ ಬ್ಯಾಂಕ್ ರಜಾ ದಿನಗಳ ಕ್ಯಾಲೆಂಡರ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್‌ಬಿಐನ ಈ ಪಟ್ಟಿ ಪ್ರಕಾರ, ಸೆಪ್ಟೆಂಬರ್ 2022 ರಲ್ಲಿ ಒಟ್ಟು 13 ದಿನಗಳವರೆಗೆ ಬ್ಯಾಂಕುಗಳು ಬಂದ್ ಆಗಲಿದೆ. ನೀವು ಬ್ಯಾಂಕ್‌ನ ಯಾವುದೇ ಕಾರ್ಯ ಮಾಡುವುದಕ್ಕೂ ಮುನ್ನ ಯಾವೆಲ್ಲಾ ದಿನ ರಜೆ ಇರಲಿದೆ ಎಂದು ತಿಳಿಯುವುದು ಉತ್ತಮ.
ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ.
ನೀವು ಬ್ಯಾಂಕ್‌ಗೆ ಹೋದ ಬಳಿಕ ಬ್ಯಾಂಕ್ ರಜೆ ಎಂದು ತಿಳಿದು ಹಿಂದೆ ಬರುವುದನ್ನು ತಪ್ಪಿಸಲು ಮುಂದಿನ ತಿಂಗಳಿನಲ್ಲಿ ಬ್ಯಾಂಕ್‌ಗಳು ಎಷ್ಟು ದಿನ ಬಂದ್ ಆಗಿರಲಿದೆ ಎಂದು ಈಗಲೇ ತಿಳಿಯುವುದು ಉತ್ತಮ. ಯಾಕೆಂದರೆ ಸೆಪ್ಟೆಂಬರ್‌ನಲ್ಲಿ ಸರಿ ಸುಮಾರು ಅರ್ಧ ತಿಂಗಳು ಬ್ಯಾಂಕ್ ರಜೆ ಇರಲಿದೆ. ಆದರೆ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳು ಬಂದ್ ಆಗಲಾರದು. ಈ ಪೈಕಿ ಕೆಲವು ರಜೆಗಳು ಕೆಲವು ರಾಜ್ಯಗಳಲ್ಲಿ ಮಾತ್ರ ಇರಲಿದೆ. ಒಟ್ಟಾಗಿ 13 ದಿನಗಳ ಕಾಲ ಬ್ಯಾಂಕ್ ರಜೆ ಇರಲಿದೆ. ಯಾವೆಲ್ಲಾ ದಿನಗಳು ಬ್ಯಾಂಕ್ ರಜೆ ಇದೆ ಎಂದು ಈ ಕೆಳಗೆ ಪಟ್ಟಿಯಲ್ಲಿ ನೀಡಲಾಗಿದೆ. ಮುಂದೆ ಓದಿ.....

ರಜಾದಿನಗಳ ಮೂರು ವರ್ಗೀಕರಣ
ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ.

ಒಟ್ಟು ರಜಾದಿನಗಳು ಎಷ್ಟು?
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಪ್ರಕಾರ ಸೆಪ್ಟೆಂಬರ್‌ನಲ್ಲಿ ಎಂಟು ದಿನಗಳ ಕಾಲ ರಜೆ ಎಂದು ಗೊತ್ತು ಮಾಡಲಾಗಿದೆ. ಇದರಲ್ಲಿ ಕೊಚ್ಚಿ ಹಾಗೂ ತಿರುವನಂತಪುರದಲ್ಲಿ ಆಚರಣೆ ಮಾಡಲಾಗುವ ನಾರಾಯಣ ಗುರು ಜಯಂತಿ ದಿನವಾದ ಸೆಪ್ಟೆಂಬರ್ 10 ಕೂಡಾ ಸೇರಿದೆ. ಇನ್ನು ಈ ದಿನ ಎರಡನೇ ಶನಿವಾರವಾದ ಕಾರಣ ದೇಶದಾದ್ಯಂತವು ಬ್ಯಾಂಕ್‌ಗಳು ಬಂದ್ ಆಗಿರಲಿದೆ. ಇನ್ನು ಉಳಿದಂತೆ ವಾರದ ರಜೆ, ಎರಡನೇ ಶನಿವಾರದ ರಜೆ ಎಲ್ಲವೂ ಸೇರಿ ಸೆಪ್ಟೆಂಬರ್‌ನಲ್ಲಿ ಒಟ್ಟಾಗಿ 13 ದಿನಗಳ ಕಾಲ ಬ್ಯಾಂಕ್ ಬಂದ್ ಆಗಲಿದೆ.

ಸೆಪ್ಟೆಂಬರ್‌ನಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ
ಸೆಪ್ಟೆಂಬರ್ 1: ಗಣೇಶ ಚತುರ್ಥಿ (ಎರಡನೇ ದಿನ) ಹಿನ್ನೆಲೆ ಪಣಜಿಯಲ್ಲಿ ಬಂದ್ ಆಗಲಿದೆ
ಸೆಪ್ಟೆಂಬರ್ 4: ತಿಂಗಳ ಮೊದಲ ಭಾನುವಾರ (ವಾರದ ರಜೆ)
ಸೆಪ್ಟೆಂಬರ್ 6: ಕರ್ಮ ಪೂಜೆಯ ಹಿನ್ನೆಲೆ ರಾಂಚಿಯಲ್ಲಿ ಬ್ಯಾಂಕ್‌ಗಳು ಮುಚ್ಚಲಿದೆ
ಸೆಪ್ಟೆಂಬರ್ 7: ಓಣಮ್‌ನ ಮೊದಲ ದಿನ ಕೊಚ್ಚಿ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ
ಸೆಪ್ಟೆಂಬರ್ 8: ತಿರುವನಮ್ ದಿನ ಕೊಚ್ಚಿ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕ್‌ಗಳು ಬಂದ್ ಆಗಲಿದೆ
ಸೆಪ್ಟೆಂಬರ್ 9: ಇಂಧ್ರಜಾತ್ರೆ ಕಾರಣ ಗ್ಯಾಂಗ್ಟಾಕ್‌ನಲ್ಲಿ ಬ್ಯಾಂಕ್‌ಗಳು ಮುಚ್ಚಲಿದೆ.
ಸೆಪ್ಟೆಂಬರ್ 10: ಆರ್‌ಬಿಐ ಪ್ರಕಾರ ನಾರಾಯಣ ಗುರು ಜಯಂತಿ ಕಾರಣ ಕೊಚ್ಚಿ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ದಿನವೇ ಎರಡನೇ ಶನಿವಾರವಾದ ಕಾರಣ ದೇಶದಾದ್ಯಂತ ಬ್ಯಾಂಕ್‌ಗಳು ಬಂದ್ ಇರಲಿದೆ.
ಸೆಪ್ಟೆಂಬರ್ 11: ತಿಂಗಳ ಎರಡನೇ ಭಾನುವಾರ (ವಾರದ ರಜೆ)
ಸೆಪ್ಟೆಂಬರ್ 18: ತಿಂಗಳ ಮೂರನೇ ಭಾನುವಾರ (ವಾರದ ರಜೆ)
ಸೆಪ್ಟೆಂಬರ್ 21: ನಾರಾಯಣ ಗುರು ಸಮಾಧಿ ದಿನ ಹಿನ್ನೆಲೆ ಕೊಚ್ಚಿ ಹಾಗೂ ತಿರುವನಂತಪುರಂನಲ್ಲಿ ಬ್ಯಾಂಕ್‌ಗಳು ಬಂದ್ ಆಗಲಿದೆ.
ಸೆಪ್ಟೆಂಬರ್ 24: ತಿಂಗಳ ನಾಲ್ಕನೇ ಶನಿವಾರ ದೇಶದಾದ್ಯಂತ ಬ್ಯಾಂಕ್ ಬಂದ್ ಆಗಲಿದೆ.
ಸೆಪ್ಟೆಂಬರ್ 25: ತಿಂಗಳ ನಾಲ್ಕನೇ ಭಾನುವಾರ (ವಾರದ ರಜೆ)
ಸೆಪ್ಟೆಂಬರ್ 26: ನವರಾತ್ರಿ ಸ್ಥಾಪನೆ ಕಾರಣ ಇಂಫಾಲ್, ಜೈಪುರದಲ್ಲಿ ಬ್ಯಾಂಕ್ ಬಂದ್ ಇರಲಿದೆ.